ನಾಯಿ (Dog) ಸೇರಿ ಕೆಲ ಪ್ರಾಣಿಗಳು ನಂಬಲಾರದಷ್ಟು ವಾಸನೆಯ ಗ್ರಹಿಕಾ ಶಕ್ತಿಯನ್ನು ಹೊಂದಿರುತ್ತವೆ. ಹತ್ತಾರು ವಿಚಾರಗಳಲ್ಲಿ ಈ ಕಾರಣಕ್ಕಾಗಿಯೇ ನಾಯಿಯನ್ನು ಬಳಕೆ ಮಾಡಲಾಗುತ್ತದೆ. ಅಪರಾಧಿ ಕಂಡುಹಿಡಿಯಲು ಅಥವಾ ಇನ್ಯಾವುದಾದರೂ ಕೆಲಸದಲ್ಲಿ ಇವುಗಳನ್ನು ಬಳಸಿಕೊಳ್ಳಲಾಗುತ್ತದೆ. ಎಲ್ಲದಕ್ಕೂ ಮಿಗಿಲಾಗಿ ನಾಯಿಗಳನ್ನು ಈ ಕ್ಯಾನ್ಸರ್ (Cancer) ಪತ್ತೆ ಹಚ್ಚುವ ಪರಿಕಲ್ಪನೆಗೂ ಬಳಲಾಗಿತ್ತು. ಪ್ರಸ್ತುತ ನಾಯಿಯಂತೆ ಇರುವೆಗಳು (Ants) ಸಹ ಕ್ಯಾನ್ಸರ್ ಪತ್ತೆ ಹಚ್ಚುವ ಕೆಲಸದಲ್ಲಿ ಪಾಸ್ ಆಗಿವೆ ಎಂದು ವರದಿಗಳು ಹೇಳಿವೆ. ಅಂದರೆ ಒಬ್ಬ ರೋಗಿಯ ಮೂತ್ರದ ವಾಸನೆಯನ್ನು ಗ್ರಹಿಸುವ ಮೂಲಕ ಇರುವೆಗಳು ಕ್ಯಾನ್ಸರ್ ಅನ್ನು ಪತ್ತೆ ಹಚ್ಚುತ್ತವೆ. ಇರುವೆಗಳು ಮೂತ್ರದಲ್ಲಿ ಕ್ಯಾನ್ಸರ್ ವಾಸನೆಯನ್ನು ಪತ್ತೆ ಮಾಡುತ್ತವೆ ಎಂದು ವಿಜ್ಞಾನಿಗಳು ಈಗ ಕಂಡುಹಿಡಿದಿದ್ದಾರೆ ಎಂದು ವಾಷಿಂಗ್ಟನ್ (Washigton) ಪೋಸ್ಟ್ ವರದಿ ಮಾಡಿದೆ.
ಕ್ಯಾನ್ಸರ್ ಪತ್ತೆ ಹಚ್ಚುತ್ತವೆ ಈ ಇರುವೆಗಳು
ಇರುವೆಗಳಿಗೆ ಎಲ್ರಿಗೂ ತಿಳಿದಿರುವಂತೆ ಮೂಗಿಲ್ಲ. ಆದರೂ ಸಹ ಅವುಗಳ ಆಂಟೆನಾಗಳಲ್ಲಿ ಘ್ರಾಣ ಗ್ರಾಹಕಗಳ ಮೂಲಕ ಇಂತದ್ದೊಂದು ಅಚ್ಚರಿಯ ಕೆಲಸವನ್ನು ಈ ಪುಟ್ಟ ಇರುವೆಗಳು ಮಾಡುತ್ತಿವೆ ಮತ್ತು ವೈದ್ಯ ಲೋಕಕ್ಕೆ ದೊಡ್ಡ ಕೊಡುಗೆ ನೀಡುತ್ತಿವೆ ಎಂದು ಸಂಶೋಧಕರು ಹೇಳಿದ್ದಾರೆ.
ಮೂತ್ರದ ವಾಸನೆ ಹಿಡಿದು ರೋಗ ಪತ್ತೆ
ಕ್ಯಾನ್ಸರ್ ಇರುವ ರೋಗಿಗಳಲ್ಲಿ ಕ್ಯಾನ್ಸರ್ ಆಗಿರುವ ಗೆಡ್ಡೆಗಳು ಬಾಷ್ಪಶೀಲ ಸಾವಯವ ಸಂಯುಕ್ತಗಳು ಎಂದು ಕರೆಯಲ್ಪಡುವ ರಾಸಾಯನಿಕಗಳ ವಿಶಿಷ್ಟ ಆವೃತ್ತಿಗಳನ್ನು ಬಿಡುಗಡೆ ಮಾಡುತ್ತವೆ, ಅದು ಸಾಮಾನ್ಯವಾಗಿ ಬೆವರು ಮತ್ತು ಮೂತ್ರದಂತಹ ದೈಹಿಕ ದ್ರವಗಳಲ್ಲಿ ಕಾಣಿಸಿಕೊಳ್ಳುತ್ತದೆ. ಇರುವೆಗಳು ಮೂತ್ರದಿಂದ ಹೊರ ಬರುವ ಈ ಸಂಯುಕ್ತಗಳಲ್ಲಿ ಕ್ಯಾನ್ಸರ್ ಅನ್ನು ಪತ್ತೆ ಮಾಡುತ್ತವೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.
ಪ್ರೊಸೀಡಿಂಗ್ಸ್ ಆಫ್ ದಿ ರಾಯಲ್ ಸೊಸೈಟಿ ಬಿ: ಬಯೋಲಾಜಿಕಲ್ ಸೈನ್ಸಸ್ ಜರ್ನಲ್‌ನಲ್ಲಿ ಪ್ರಕಟವಾದ ಈ ಸಂಶೋಧನೆಗಳಲ್ಲಿ, ರೋಗಿಗಳಲ್ಲಿ ಕ್ಯಾನ್ಸರ್ ಅನ್ನು ಗುರುತಿಸಲು ಈ ಕೀಟಗಳನ್ನು ಖರ್ಚೇ ಇಲ್ಲದೇ ಬಳಕೆ ಮಾಡಬಹುದು ಎಂದು ಸಂಶೋಧಕರು ಹೇಳಿದ್ದಾರೆ.
ಪ್ರಯೋಗ ಹೇಗೆ ನಡೆಯಿತು?
ಅಧ್ಯಯನಕ್ಕಾಗಿ, ಸಂಶೋಧನಾ ತಂಡವು ಇಲಿಗಳ ಮೇಲೆ ಮಾನವ ಸ್ತನ-ಕ್ಯಾನ್ಸರ್ ಗೆಡ್ಡೆಯ ತುಂಡುಗಳನ್ನು ಕಸಿಮಾಡಿತು ಮತ್ತು ಇನ್ನೂ ಕೆಲ ಇಲಿಗಳನ್ನು ಹಾಗೆಯೇ ಇರಿಸಲಾಯಿತು. ನಂತರ ಅವರು ಫಾರ್ಮಿಕಾ ಫಸ್ಕಾ ಜಾತಿಗೆ ಸೇರಿದ 35 ಇರುವೆಗಳನ್ನು ಬಳಸಿಕೊಂಡು ಅವುಗಳಿಗೆ ತರಬೇತಿ ನೀಡಿದರು. ನಂತರ ಇಲಿಗಳ ಮುಂದೆ ಒಂದು ಹನಿ ಸಕ್ಕರೆ ನೀರನ್ನು ಇಡಲಾಯಿತು. ಈ ಪ್ರಯೋಗದಲ್ಲಿ ಇಲಿಗಳು ಆರೋಗ್ಯಕರ ಇಲಿಗಳಿಗಿಂತ ಕ್ಯಾನ್ಸರ್ ಇಲಿಗಳ ಮೂತ್ರದ ಸುತ್ತ ಗಮನಾರ್ಹವಾಗಿ ಹೆಚ್ಚು ಸಮಯವನ್ನು ಕಳೆಯುತ್ತಿದ್ದವು. ವಿಜ್ಞಾನಿಗಳ ಈ ಪ್ರಯೋಗ ನಾಯಿ ಮಾತ್ರವಲ್ಲದೇ ಇರುವೆಗಳೂ ಸಹ ಕ್ಯಾನ್ಸರ್ ಇರುವಿಕೆಯ ಬಗ್ಗೆ ಸುಳಿವು ನೀಡುತ್ತವೆ ಎಂಬುವುದನ್ನು ತೋರಿಸಿದೆ.
ಮಾನವರ ಕ್ಯಾನ್ಸರ್ ಅನ್ನು ಪತ್ತೆ ಹಚ್ಚುತ್ತವೆಯೇ?
ಈ ಪ್ರಯೋಗವನ್ನು ವಿಜ್ಞಾನಿಗಳು ಹೆಚ್ಚುವರಿಯಾಗಿ ಬಳಸಿಕೊಳ್ಳಲು ಯೋಜಿಸುತ್ತಿದ್ದಾರೆ. ಅಂದರೆ ಮಾನವರಲ್ಲೂ ಈ ಇರುವೆಗಳು ಮೂತ್ರದ ಮೂಲಕ ಕ್ಯಾನ್ಸರ್ ಪತ್ತೆ ಹಚ್ಚುತ್ತವೆಯೇ ಎಂದು ಕಂಡುಕೊಳ್ಳಲು ಹೆಚ್ಚಿನ ಪ್ರಯೋಗವನ್ನು ಎದುರು ನೋಡುತ್ತಿದ್ದಾರೆ.
"ನಾಯಿಗಳಿಗಿಂತ ಇರುವೆಗಳೇ ಉತ್ತಮ"
ವಿಜ್ಞಾನಿಗಳು ಈ ಪ್ರಯೋಗದ ಮೂಲಕ ನಾಯಿಗಳಿಗಿಂತ ಇರುವೆಗಳು ಉತ್ತಮ. ಇಲ್ಲಿ ನಾಯಿಗಳಿಗೆ ತರಬೇತಿ ನೀಡಲು ಸುಮಾರು ಆರು ತಿಂಗಳು ಬೇಕು. ಆದರೆ ಇರುವೆಗಳಿಗೆ ತುಂಬಾ ಕಡಿಮೆ ಅವಧಿಯಲ್ಲಿ ತರಬೇತಿ ನೀಡಬಹುದು ಎಂದು ಕಂಡುಕೊಂಡಿದ್ದಾರೆ. ಕೇವಲ 10 ನಿಮಿಷಗಳು ಮತ್ತು ಮೂರು ತರಬೇತಿ ಸುತ್ತುಗಳಲ್ಲಿ ಇರುವೆಗಳ ವಾಸನೆ ಸಂಬಂಧಿತ ಗ್ರಹಿಕಾ ಶಕ್ತಿಯನ್ನು ಪಡೆದುಕೊಂಡಿದ್ದು, ಇದು ವೆಚ್ಚ ವಿಚಾರದಲ್ಲೂ ತುಂಬಾ ಪರಿಣಾಮಕಾರಿ ಎಂದಿದ್ದಾರೆ.
ಇದನ್ನೂ ಓದಿ: Explained: ಅಮೆರಿಕಾದಲ್ಲಿ ಕ್ಯಾನ್ಸರ್‌ನಿಂದ ಸಾಯುತ್ತಿರುವವರ ಪ್ರಮಾಣ ಇಳಿಕೆ; 1991 ರಿಂದ 33% ಕಡಿಮೆಯಾಗಲು ಕಾರಣವೇನು?
ಫ್ರಾನ್ಸ್‌ನ ಪ್ಯಾರಿಸ್‌ನಲ್ಲಿರುವ ಸೊರ್ಬೊನ್ ಪ್ಯಾರಿಸ್ ನಾರ್ಡ್ ವಿಶ್ವವಿದ್ಯಾಲಯದ ಅಧ್ಯಯನ ಲೇಖಕ ಪ್ರೊಫೆಸರ್ ಪ್ಯಾಟ್ರಿಜಿಯಾ ಡಿ'ಎಟ್ಟೋರ್ ಅವರು ಪಿಎ ಸುದ್ದಿ ಸಂಸ್ಥೆ ಜೊತೆ ಮಾತನಾಡಿ "ಆರೋಗ್ಯವಂತ ವ್ಯಕ್ತಿಗಳನ್ನು ಗೆಡ್ಡೆ ಹೊಂದಿರುವ ವ್ಯಕ್ತಿಗಳಿಂದ ಪ್ರತ್ಯೇಕಿಸಲು ಇರುವೆಗಳನ್ನು ಜೈವಿಕ ಪತ್ತೆಕಾರಕಗಳಾಗಿ ಬಳಸಬಹುದು. ಅವುಗಳಿಗೆ ತರಬೇತಿ ನೀಡುವುದು ಸುಲಭ, ವೇಗವಾಗಿ ಕಲಿಯುತ್ತವೆ, ಬಹಳ ಪರಿಣಾಮಕಾರಿ ಮತ್ತು ಅವುಗಳನ್ನು ಇರಿಸಿಕೊಳ್ಳುವುದು ದುಬಾರಿಯಲ್ಲ." ಎಂದಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ