Health Tips: ಸಣ್ಣ ಆಗ್ಬೇಕು ಅಂತ ಕಡಿಮೆ ಕಾರ್ಬ್‌ ತಿಂತಾ ಇದ್ರೆ ಈ ಎಲ್ಲಾ ಆರೋಗ್ಯ ಸಮಸ್ಯೆ ಕಾಡಬಹುದು!

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ತೂಕ ಇಳಿಕೆ ವಿಚಾರಕ್ಕೆ ಬಂದರೆ ಅನ್ನ ಹಾಗೂ ಕಾರ್ಬೋಹೈಡ್ರೇಟ್‌ ನಿಲ್ಲಿಸಬೇಕು ಎಂಬಂಥ ಮಾತುಗಳನ್ನು ಕೇಳುತ್ತೇವೆ. ಕಾರ್ಬ್ಸ್‌ ತಿಂದರೆ ತೂಕ ಹೆಚ್ಚುತ್ತದೆ ಎಂಬಂಥ ನಕಾರಾತ್ಮಕ ವಿಷಯಗಳನ್ನು ಕೇಳುತ್ತೇವೆ. ಆದರೆ ಈ ಕಾರ್ಬೋಹೈಡ್ರೇಟ್​ಗಳನ್ನು ತಿನ್ನದೇ ಇದ್ರೆ ಹಲವಾರು ಆರೋಗ್ಯದ ಸಮಸ್ಯೆಗಳು ಬರಬಹುದು.

ಮುಂದೆ ಓದಿ ...
  • Share this:

    ಇಂದಿನ ಕಾಲದಲ್ಲಿ ಬಹಳಷ್ಟು ಜನರು ತೂಕ ಇಳಿಸಿಕೊಳ್ಳೋಕೆ (Weight Loss) ಕಷ್ಟ ಪಡುತ್ತಾರೆ. ಏನೇನೋ ಕಸರತ್ತು ಮಾಡ್ತಾರೆ. ಊಟ, ತಿಂಡಿ ಬಿಡ್ತಾರೆ. ಒಮ್ಮೆಲೇ ಬಹಳಷ್ಟು ವ್ಯಾಯಾಮ ಮಾಡ್ತಾರೆ. ಏನೇನೋ ಡಯೆಟ್‌ ಪ್ಲಾನ್‌ ಮಾಡ್ತಾರೆ. ಅನ್ನವನ್ನಂತೂ ಬಿಟ್ಟೇ ಬಿಡ್ತಾರೆ. ಆದ್ರೆ ಈ ಸರಿಯಾದ ತಿಳುವಳಿಕೆ ಇಲ್ಲದೇ ಮಾಡುವಂಥ ಡಯೆಟ್‌ (Diet) ಪ್ಲಾನ್‌ ಇದೆಯಲ್ಲ. ಅದು ಆರೋಗ್ಯಕ್ಕೆ (Health) ಹಾನಿಕರವಾಗಿ ಪರಿಣಮಿಸಬಹುದು. ಅದರಲ್ಲೂ ಕಡಿಮೆ ಕಾರ್ಬ್ ಆಹಾರವು ತೂಕವನ್ನು ಕಳೆದುಕೊಳ್ಳಲು ಸಹಾಯ ಮಾಡುತ್ತದೆ ಎಂದು ನೀವು ಯೋಚಿಸುತ್ತಿದ್ದರೆ, ಎಚ್ಚರ! ಇದು ನಿಜವಾಗಿಯೂ ನಿಮ್ಮ ಆರೋಗ್ಯದ ಮೇಲೆ ಅಡ್ಡ ಪರಿಣಾಮ ಬೀರಬಹುದು.


    ಹೌದು ತೂಕ ಇಳಿಕೆ ವಿಚಾರಕ್ಕೆ ಬಂದರೆ ಅನ್ನ ಹಾಗೂ ಕಾರ್ಬೋಹೈಡ್ರೇಟ್‌ ನಿಲ್ಲಿಸಬೇಕು ಎಂಬಂಥ ಮಾತುಗಳನ್ನು ಕೇಳುತ್ತೇವೆ. ಕಾರ್ಬ್ಸ್‌ ತಿಂದರೆ ತೂಕ ಹೆಚ್ಚುತ್ತದೆ ಎಂಬಂಥ ನಕಾರಾತ್ಮಕ ವಿಷಯಗಳನ್ನು ಕೇಳುತ್ತೇವೆ.


    ಅವು ಹಸಿವನ್ನು ಹೆಚ್ಚಿಸುತ್ತವೆ, ತಿಂದರೆ ತೂಕ ಇಳಿಯೋದೇ ಇಲ್ಲ ಮುಂತಾದ ಅಭಿಪ್ರಾಯಗಳನ್ನು ಕೇಳುತ್ತೇವೆ. ಆದರೆ ನೆನಪಿರಲಿ ಇವುಗಳಲ್ಲಿ ಎಲ್ಲವೂ ನಿಜವಲ್ಲ.


    ಕಾರ್ಬೋಹೈಡ್ರೇಟ್‌ಗಳು ದೇಹಕ್ಕೆ ಶಕ್ತಿಯ ಮೂಲ


    ಕಾರ್ಬ್‌ ನಮ್ಮ ದೇಹಕ್ಕೆ ಕೆಲಸ ಮಾಡಲು ಅಥವಾ ಚಟುವಟಿಕೆಯಿಂದ ಇರಲು ಅಗತ್ಯವಾದ ಶಕ್ತಿಯನ್ನು ನೀಡುತ್ತವೆ. ಕಾರ್ಬೋಹೈಡ್ರೇಟ್‌ಗಳು ನಿಮ್ಮ ದೇಹದ ಶಕ್ತಿಯ ಮುಖ್ಯ ಮೂಲವಾಗಿ ಕಾರ್ಯನಿರ್ವಹಿಸುತ್ತವೆ. ಜೊತೆಗೆ ಹಲವಾರು ಜೀವಸತ್ವಗಳು ಮತ್ತು ಖನಿಜಗಳ ವಿತರಣೆಯಲ್ಲಿ ಸಹಾಯ ಮಾಡುತ್ತವೆ. ನೀವು ಕಾರ್ಬೋಹೈಡ್ರೇಟ್‌ಗಳ ಸೇವನೆ ಬಿಟ್ಟು ಬಿಟ್ಟರೆ ಅಥವಾ ತೂಕ ನಷ್ಟಕ್ಕೆ ಕಡಿಮೆ ಕಾರ್ಬ್ ಆಹಾರವನ್ನು ಅನುಸರಿಸಿದರೆ, ದೀರ್ಘಾವಧಿಯಲ್ಲಿ ಕೆಲವು ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು ಎಂಬುದಾಗಿ ತಜ್ಞರು ಹೇಳುತ್ತಾರೆ.


    ಇದನ್ನೂ ಓದಿ: ಸುಂದರವಾಗಿ ಬೆಳೆಸಿದ ಉಗುರು ಪದೇ ಪದೇ ಕಟ್​ ಆಗ್ತಿದ್ರೆ ಬೇಜಾರ್ ಆಗ್ಬೇಡಿ, ಈ ಟ್ರಿಕ್ಸ್ ನಿಮಗಾಗಿ


    ಹಾಗಿದ್ರೆ ಕಾರ್ಬೋಹೈಡ್ರೇಟ್‌ಗಳನ್ನು ನಾವು ಯಾಕೆ ಸೇವಿಸಬೇಕು..? ಅವು ದೇಹಕ್ಕೆ ಏಕೆ ಅತ್ಯಗತ್ಯ? ಅಲ್ಲದೇ ಅದನ್ನು ಸೇವಿಸಿದರೆ ಏನಾಗುತ್ತದೆ? ಜೊತೆಗೆ ಅವುಗಳನ್ನು ಸಂಪೂರ್ಣವಾಗಿ ತ್ಯಜಿಸಿದರೆ ಏನಾಗಬಹುದು ಎಂಬುದರ ಬಗ್ಗೆ ಚೆನ್ನೈನ ಮದರ್‌ಹುಡ್‌ ಆಸ್ಪತ್ರೆಯ ಡಯೆಟಿಷಿಯನ್‌ ಹಾಗೂ ನ್ಯೂಟ್ರಿಷನಿಸ್ಟ್‌ ಹರಿ ಲಕ್ಷ್ಮಿ ಅವರು ವಿವರಿಸುತ್ತಾರೆ.


    ನಮಗೆ ಕಾರ್ಬೋಹೈಡ್ರೇಟ್‌ಗಳು ಏಕೆ ಬೇಕು?


    ನಮ್ಮ ದೇಹವು ಸರಿಯಾಗಿ ಕಾರ್ಯನಿರ್ವಹಿಸಲು ಅಗತ್ಯವಿರುವ ಮೂರು ಪ್ರಮುಖ ಮ್ಯಾಕ್ರೋನ್ಯೂಟ್ರಿಯೆಂಟ್‌ಗಳಲ್ಲಿ ಕಾರ್ಬೋಹೈಡ್ರೇಟ್‌ ಕೂಡ ಒಂದು. ಕಾರ್ಬೋಹೈಡ್ರೇಟ್‌ ದೇಹಕ್ಕೆ ಗ್ಲೂಕೋಸ್ ಅನ್ನು ನೀಡುತ್ತದೆ. ನಂತರ ಅದು ದೈಹಿಕ ಕಾರ್ಯಗಳನ್ನು ಮತ್ತು ದೈಹಿಕ ಚಟುವಟಿಕೆಯನ್ನು ನಿರ್ವಹಿಸಲು ಬೇಕಾಗುವಂಥ ಶಕ್ತಿಯಾಗಿ ರೂಪಾಂತರಗೊಳ್ಳುತ್ತದೆ.


    ಇನ್ನು, ಅನೇಕ ಡಯೆಟಿಶಿಯನ್‌ಗಳು ನೀಡುವ ಡಯೆಟ್‌ ಪ್ಲಾನ್‌ಗಳು ಕಾರ್ಬ್‌ ಸೇವನೆಗೆ ವಿರೋಧವಾಗಿವೆ. ಅವುಗಳು ತೂಕವನ್ನು ಕಳೆದುಕೊಳ್ಳಲು ಕಾರ್ಬೋಹೈಡ್ರೇಟ್‌ಗಳನ್ನು ಕಡಿಮೆ ತಿನ್ನಬೇಕು ಅಥವಾ ಸಂಪೂರ್ಣವಾಗಿ ಅದರ ಸೇವನೆಯನ್ನು ನಿಲ್ಲಿಸಬೇಕು ಎಂಬುದಾಗಿ ಹೇಳುತ್ತವೆ. ಆದರೆ ಕಾರ್ಬೋಹೈಡ್ರೇಟ್‌ಗಳನ್ನು ಕಡಿಮೆ ತಿನ್ನೋದ್ರಿಂದ ಕೆಲವು ಪ್ರಯೋಜನಗಳು ಇವೆಯಾದರೂ ಅವುಗಳನ್ನು ಸಂಪೂರ್ಣವಾಗಿ ತಪ್ಪಿಸುವುದು ನಮ್ಮ ದೇಹಕ್ಕೆ ಹಾನಿಕಾರಕ ಎಂದು ತಜ್ಞರು ಎಚ್ಚರಿಸಿದ್ದಾರೆ.


    ನ್ಯೂ ಇಂಗ್ಲೆಂಡ್ ಜರ್ನಲ್ ಆಫ್ ಮೆಡಿಸಿನ್‌ನಲ್ಲಿನ ಅಧ್ಯಯನದ ಪ್ರಕಾರ, ಕಡಿಮೆ ಕಾರ್ಬೋಹೈಡ್ರೇಟ್ ಡಯೆಟ್‌ ಅನುಸರಿಸುವುದರಿಂದ ಹೃದಯಾಘಾತ ಮತ್ತು ಪಾರ್ಶ್ವವಾಯುಗಳಂಥಹ ಅಪಾಯಗಳನ್ನು ಎದುರಿಸಬೇಕಾಗಬಹುದು. ಅಲ್ಲದೆ, ಕಾರ್ಬೋಹೈಡ್ರೇಟ್‌ಗಳನ್ನು ನಿರ್ಬಂಧಿಸುವುದು ದೀರ್ಘಾಯುಷ್ಯವನ್ನು ಕಡಿಮೆ ಮಾಡುತ್ತದೆ. ಆದರೆ ಹಣ್ಣುಗಳು, ತರಕಾರಿಗಳು ಮತ್ತು ಕಾಳುಗಳು ಸೇರಿದಂತೆ ಆರೋಗ್ಯಕರ ಕಾರ್ಬೋಹೈಡ್ರೇಟ್‌ಗಳಲ್ಲಿ ಹೆಚ್ಚಿನ ಆಹಾರಗಳು ನಿಮ್ಮ ಆರೋಗ್ಯಕ್ಕೆ ಒಳ್ಳೆಯದು ಎಂಬುದಾಗಿ ಹೇಳಲಾಗುತ್ತದೆ.


    ಕಡಿಮೆ ಕಾರ್ಬ್ ಡಯೆಟ್‌ನ ಅಡ್ಡಪರಿಣಾಮಗಳು


    ನಾವು ಆರೋಗ್ಯವಾಗಿರಬೇಕು ಎಂದಾದಲ್ಲಿ ಪ್ರತಿಯೊಂದು ಪೋಷಕಾಂಶವು ತನ್ನದೇ ಆದ ಕೊಡುಗೆ ನೀಡುತ್ತದೆ. ಆದ್ದರಿಂದ ಅವೆಲ್ಲವೂ ಮುಖ್ಯವಾಗಿದೆ ಎಂದು ಪೌಷ್ಟಿಕ ತಜ್ಞೆ ಲಕ್ಷ್ಮಿ ಹೇಳುತ್ತಾರೆ.


    ನಿಮ್ಮ ಆಹಾರದಲ್ಲಿ ಕಾರ್ಬೋಹೈಡ್ರೇಟ್‌ಗಳ ಕೊರತೆಯು ನಿಮ್ಮ ದೇಹದ ಮೇಲೆ ಯಾವ ರೀತಿ ಪರಿಣಾಮ ಬೀರಬಹುದು ಎಂಬುದನ್ನು ವಿವರಿಸಿದ್ದಾರೆ.


    1. ಆಯಾಸ: ಕಾರ್ಬ್‌ಗಳನ್ನು ಕಡಿಮೆ ಮಾಡಿದಂತೆ ದೇಹದಲ್ಲಿ ಶಕ್ತಿಯ ಕೊರತೆ ಕಾಣಿಸಿಕೊಳ್ಳುತ್ತದೆ. ಹೌದು, ಶಕ್ತಿಯ ಕೊರತೆಯು ಕಾರ್ಬೋಹೈಡ್ರೇಟ್ಗಳನ್ನು ಕಡಿಮೆ ಮಾಡುವ ಅಡ್ಡ ಪರಿಣಾಮಗಳಲ್ಲಿ ಪ್ರಮುಖವಾದದ್ದಾಗಿದೆ.


    ದೇಹಕ್ಕೆ ಅದರ ಮುಖ್ಯ ಶಕ್ತಿಯ ಮೂಲವಾಗಿ ಕಾರ್ಬೋಹೈಡ್ರೇಟ್‌ಗಳು ಬೇಕಾಗುತ್ತವೆ. ಇಲ್ಲದಿದ್ದರೆ, ಅದು ಕೊಬ್ಬು ಮತ್ತು ಪ್ರೋಟೀನ್‌ನಂತಹ ಇತರ ಮೂಲಗಳನ್ನು ಆಶ್ರಯಿಸಬೇಕಾಗುತ್ತದೆ.


    ಕೆಟೋಸಿಸ್ ಎಂದು ಕರೆಯಲ್ಪಡುವ ಈ ಪ್ರಕ್ರಿಯೆಯು ತೂಕವನ್ನು ಕಳೆದುಕೊಳ್ಳಲು ಸಹಾಯ ಮಾಡುತ್ತದೆ. ಆದರೆ ಇದು ದೇಹದಲ್ಲಿ ಆಯಾಸ ಮತ್ತು ಅರೆನಿದ್ರಾವಸ್ಥೆಯಂಥ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಇದರಿಂದ ನಾವು ಮಾಡುವಂಥ ವ್ಯಾಯಾಮ ಅಥವಾ ಕೆಲಸಗಳನ್ನು ಮಾಡಲು ಇದು ಅಡ್ಡಿಯಾಗಬಹುದು.


    ಸಾಂಕೇತಿಕ ಚಿತ್ರ


    2. ಹಸಿವು ಹೆಚ್ಚಾಗುವುದು: ಕಾರ್ಬೋಹೈಡ್ರೇಟ್‌ಗಳ ಸೇವನೆ ಕಡಿಮೆಯಾದಂತೆ ಹಸಿವು ಹೆಚ್ಚಾಗುತ್ತದೆ. ಇದರ ಜೊತೆಗೆ ಆಹಾರ ಸೇವನೆಯ ಕಡುಬಯಕೆಗಳು ಕೂಡ ಹೆಚ್ಚಾಗಬಹುದು.


    ಏಕೆಂದರೆ ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ನಿಯಂತ್ರಿಸಲು ಕಾರ್ಬೋಹೈಡ್ರೇಟ್‌ಗಳು ಅತ್ಯಗತ್ಯ. ಅವುಗಳಿಲ್ಲದೆ ರಕ್ತದಲ್ಲಿನ ಸಕ್ಕರೆಯ ಮಟ್ಟವು ಕಡಿಮೆಯಾಗಬಹುದು.


    ಇದು ಸಕ್ಕರೆ ಹಾಗೂ ಇತರ ಗ್ಲೂಕೋಸ್ ಮೂಲಗಳನ್ನು ಹೊಂದಿರುವ ಆಹಾರ ತಿಂಡಿಗಳನ್ನು ತಿನ್ನುವಂಥ ಕಡುಬಯಕೆಗಳನ್ನು ಉಂಟುಮಾಡುತ್ತದೆ.


    ಹೀಗೆ ಅತಿಯಾಗಿ ತಿನ್ನುವುದರಿಂದ ತೂಕ ಹೆಚ್ಚಾಗಬಹುದು. ಇದರಿಂದ ಕಡಿಮೆ ಕಾರ್ಬ್‌ ತಿಂದು ತೂಕ ಇಳಿಸಿಕೊಳ್ಳಬೇಕು ಎಂಬಂಥ ನಿಮ್ಮ ಉದ್ದೇಶಕ್ಕೆ ಅಡ್ಡಿಯಾಗಬಹುದು.


    3. ಮಲಬದ್ಧತೆ ಉಂಟಾಗುವುದು: ಕಾರ್ಬೋಹೈಡ್ರೇಟ್‌ಗಳನ್ನು ತಪ್ಪಿಸುವ ಇನ್ನೊಂದು ಅಡ್ಡ ಪರಿಣಾಮವೆಂದರೆ ಮಲಬದ್ಧತೆ ಸಮಸ್ಯೆ. ಕಾರ್ಬೋಹೈಡ್ರೇಟ್‌ಗಳು ಫೈಬರ್ ಅನ್ನು ಒದಗಿಸುತ್ತವೆ.


    ಇದು ಜೀರ್ಣಕ್ರಿಯೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಸಾಕಷ್ಟು ಫೈಬರ್ ಇಲ್ಲದೆ ಹೋದಾಗ ಮಲಬದ್ಧತೆ ಸಮಸ್ಯೆ, ಹೊಟ್ಟೆ ಉಬ್ಬುರಿಸುವುದು ಜೊತೆಗೆ ಇತರ ಜೀರ್ಣಕಾರಿ ಸಮಸ್ಯೆಗಳನ್ನು ಅನುಭವಿಸುವಂತಾಗಬಹುದು.


    4. ಮೂಡ್‌ ಸ್ವಿಂಗ್‌ : ನೀವು ಸಾಕಷ್ಟು ಕಾರ್ಬೋಹೈಡ್ರೇಟ್‌ಗಳನ್ನು ಸೇವಿಸದಿದ್ದರೆ, ಮನಸ್ಥಿತಿ ಮತ್ತು ಮಾನಸಿಕ ಸ್ವಾಸ್ಥ್ಯವನ್ನು ಕಾಪಾಡಿಕೊಳ್ಳಲು ನಿಮ್ಮ ಮೆದುಳಿಗೆ ಕಷ್ಟವಾಗಬಹುದು.


    ಏಕೆಂದರೆ ಕಾರ್ಬ್‌ ಕಡಿಮೆ ಮಾಡುವುದರಿಂದ ಮೆದುಳಿಗೆ ಅಗತ್ಯವಾದ ಪ್ರಮಾಣದ ಗ್ಲೂಕೋಸ್ ಸಿಗುವುದಿಲ್ಲ. ಆದ್ದರಿಂದ, ನಿಮ್ಮ ದೇಹವು ಸಾಮಾನ್ಯ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಾಪಾಡಿಕೊಳ್ಳಲು ಹೆಣಗಾಡುತ್ತಿರುವಾಗ ನೀವು ಮೂಡ್ ಸ್ವಿಂಗ್‌ಗಳು, ನಿದ್ರೆಯ ತೊಂದರೆಗಳು ಮತ್ತು ದೌರ್ಬಲ್ಯವನ್ನು ಅನುಭವಿಸಬಹುದು.


    5. ಪೌಷ್ಟಿಕಾಂಶದ ಕೊರತೆ: ಕಾರ್ಬೋಹೈಡ್ರೇಟ್‌ಗಳನ್ನು ತಪ್ಪಿಸುವುದು ಪೋಷಕಾಂಶಗಳ ಕೊರತೆಗೆ ಕಾರಣವಾಗಬಹುದು. ಜೀವಸತ್ವಗಳು ಮತ್ತು ಖನಿಜಗಳಂತಹ ಇತರ ಅಗತ್ಯ ಪೋಷಕಾಂಶಗಳನ್ನು ಒಳಗೊಂಡಿರುವ ಅನೇಕ ಆಹಾರಗಳಲ್ಲಿ ಕಾರ್ಬೋಹೈಡ್ರೇಟ್‌ಗಳು ಕಂಡುಬರುತ್ತವೆ.


    ಯಾವ ವಿಧದ ಕಾರ್ಬೋಹೈಡ್ರೇಟ್‌ ಆರೋಗ್ಯಕ್ಕೆ ಉತ್ತಮ ?


    ಕಾರ್ಬೋಹೈಡ್ರೇಟ್‌ಗಳ ಸೇವನೆಯ ಬಗ್ಗೆ ಸರಿಯಾದ ಮಾಹಿತಿ ಹೊಂದಿರುವುದು ಅತ್ಯಗತ್ಯ. ಮೊದಲನೆಯದು, ನೀವು ಯಾವ ರೀತಿಯ ಕಾರ್ಬೋಹೈಡ್ರೇಟ್‌ಗಳನ್ನು ಸೇವಿಸಬೇಕು ಎಂಬುದನ್ನು ತಿಳಿದುಕೊಂಡಿರಬೇಕು. ಹಾಗೆಯೇ ಎರಡನೆಯದಾಗಿ, ನೀವು ಪ್ರತಿದಿನ ಎಷ್ಟು ಪ್ರಮಾಣದಲ್ಲಿ ಕಾರ್ಬ್ಸ್‌ ತೆಗೆದುಕೊಳ್ಳಬೇಕು ಎಂಬುದನ್ನು ಅರಿತಿರಬೇಕು. ಅಲ್ಲದೆ, ಕಡಿಮೆ ಕಾರ್ಬ್ ಆಹಾರವು ಅನಾರೋಗ್ಯಕರವಾಗಿದೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕು.


    ಇನ್ನು ನಿಮ್ಮ ಆಹಾರದಲ್ಲಿ ಕಾರ್ಬೋಹೈಡ್ರೇಟ್‌ಗಳನ್ನು ಸೇರಿಸುವ ಮೊದಲು ಕಾರ್ಬ್‌ ವಿಧಗಳ ಬಗ್ಗೆ ತಿಳಿದಿರಬೇಕು. ಅಂದಹಾಗೆ ಕಾರ್ಬೋಹೈಡ್ರೇಟ್‌ಗಳಲ್ಲಿ ಎರಡು ವಿಧ. ಒಂದು ಸರಳ ಕಾರ್ಬ್‌ ಮತ್ತೊಂದು ಸಂಕೀರ್ಣ ಕಾರ್ಬ್.‌ ಸರಳ ಕಾರ್ಬೋಹೈಡ್ರೇಟ್‌ಗಳು ಸಕ್ಕರೆಯಾಗಿದ್ದರೆ, ಸಂಕೀರ್ಣ ಕಾರ್ಬೋಹೈಡ್ರೇಟ್‌ಗಳು ಪಿಷ್ಟ ಮತ್ತು ಫೈಬರ್ ಆಗಿರುತ್ತವೆ.


    ಆದ್ದರಿಂದ ನಿಮ್ಮ ನಿಯಮಿತ ಆಹಾರದಲ್ಲಿ ಸಂಕೀರ್ಣ ಕಾರ್ಬೋಹೈಡ್ರೇಟ್‌ಗಳು ಬೇಕಾಗುತ್ತವೆ. ತೂಕ ಹೆಚ್ಚಾಗುವಂತಹ ಸಮಸ್ಯೆಗಳಿಗೆ ಕಾರಣವಾಗುವ ಸರಳ ಕಾರ್ಬೋಹೈಡ್ರೇಟ್‌ಗಳನ್ನು ನೀವು ಕಡಿಮೆ ಮಾಡಬೇಕು. ಆರೋಗ್ಯಕರ ಕಾರ್ಬೋಹೈಡ್ರೇಟ್‌ಗಳ ನಿಮ್ಮ ದೈನಂದಿನ ಅಗತ್ಯಗಳನ್ನು ಪೂರೈಸಲು, ಕಪ್ಪು ಬೀನ್ಸ್ ಅಥವಾ ಕಿಡ್ನಿ ಬೀನ್ಸ್, ತಾಜಾ ಹಣ್ಣುಗಳು, ಮೊಸರು, ಬೀಜಗಳು, ಬಾದಾಮಿ ಮತ್ತು ಕ್ವಿನೋವಾಗಳಂತಹ ಬೀನ್ಸ್ ಅನ್ನು ತಿನ್ನಬಹುದು.




    ಕಡಿಮೆ ಕಾರ್ಬ್ ಡಯೆಟ್‌ ತೂಕ ನಷ್ಟಕ್ಕೆ ಸಹಾಯಕವಾಗಬಹುದು. ಆದರೆ ಎಲ್ಲಾ ಕಾರ್ಬೋಹೈಡ್ರೇಟ್ಗಳನ್ನು ಕಡಿತಗೊಳಿಸುವುದರಿಂದ ನಮ್ಮ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು. ನಮ್ಮ ದೇಹವು ಅತ್ಯುತ್ತಮವಾಗಿ ಕಾರ್ಯನಿರ್ವಹಿಸಬೇಕು ಎಂದರೆ ನಾವು ಸಾಕಷ್ಟು ಪೌಷ್ಠಿಕಾಂಶ ಸೇವಿಸುತ್ತಿದ್ದೇವೆ ಎಂಬುದನ್ನು ಖಚಿತಪಡಿಸಿಕೊಳ್ಳುವುದು ಬಹಳ ಮುಖ್ಯ.


    ಒಟ್ಟಾರೆ, ಆರೋಗ್ಯಯುತ ಜೀವನ ನಡೆಸಬೇಕೆಂದರೆ ಸರಿಯಾದ ಡಯೆಟ್‌ ಪ್ಲಾನ್‌ ಅನುಸರಿಸುವುದು ಬಹಳ ಮುಖ್ಯ. ಸರಿಯಾದ ತಜ್ಞರಿಂದ ಸರಿಯಾದ ಮಾಹಿತಿ ಪಡೆದು ಆರೋಗ್ಯಕ್ಕೆ ಯಾವುದೇ ತೊಂದರೆಯಾಗದಂತೆ ಆಹಾರ ಸೇವಿಸಬೇಕು.


    ಜೊತೆಗೆ ಏನನ್ನೇ ತಿನ್ನುವುದಾದರೂ ಹಿತ ಮಿತವಾಗಿ ತಿನ್ನಿ. ತುಂಬಾ ಹೆಚ್ಚಾದರೂ… ಜೊತೆಗೆ ತುಂಬಾ ಕಡಿಮೆಯಾದರೂ ಒಂದಲ್ಲ ಒಂದು ಆರೋಗ್ಯ ಸಮಸ್ಯೆ ಕಾಡಬಹುದು. ಅಲ್ಲದೇ ತೂಕ ನಿಯಂತ್ರಣಕ್ಕೆ ನಿಯಮಿತ ವ್ಯಾಯಾಮ ಕೂಡ ಸಹಕಾರಿ. ಆದ್ದರಿಂದ, ಕಾರ್ಬ್ ಸೇವನೆಯನ್ನು ಕಡಿಮೆ ಮಾಡುವುದು ಸೇರಿದಂತೆ ಆಹಾರದಲ್ಲಿ ಯಾವುದೇ ಬದಲಾವಣೆಗಳನ್ನು ಪ್ರಾರಂಭಿಸುವ ಮೊದಲು ವೈದ್ಯರ ಸಲಹೆ ಪಡೆಯಿರಿ.

    Published by:Prajwal B
    First published: