• Home
  • »
  • News
  • »
  • lifestyle
  • »
  • 30ರ ಅಸುಪಾಸಿನಲ್ಲಿ ಮದುವೆಯಾಗುವ ಮಹಿಳೆಯರು ಎಷ್ಟು ವರ್ಷದೊಳಗೆ ಮಕ್ಕಳು ಮಾಡಿಕೊಂಡರೆ ಉತ್ತಮ?

30ರ ಅಸುಪಾಸಿನಲ್ಲಿ ಮದುವೆಯಾಗುವ ಮಹಿಳೆಯರು ಎಷ್ಟು ವರ್ಷದೊಳಗೆ ಮಕ್ಕಳು ಮಾಡಿಕೊಂಡರೆ ಉತ್ತಮ?

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

ಸಿನಿಮಾ ತಾರೆಯರು 40 ಸಮೀಪವೂ ಮುದ್ದಾದ ಮಕ್ಕಳಿಗೆ ಜನ್ಮ ಕೊಡುತ್ತಾರಲ್ಲ ಎನ್ನಬಹುದು ನೀವು. ಅವರ ಜೀವನಶೈಲಿ, ಆಹಾರ ಕ್ರಮ, ವ್ಯಾಯಾಮ, ವೈದ್ಯಕೀಯ ನೆರವು ಎಲ್ಲಾ ಹೆಣ್ಣು ಮಕ್ಕಳಿಗೂ ಸಾಮಾನ್ಯ ಸಿಗುತ್ತದೆ ಎಂದು ಹೇಳಲಾಗದು.

  • Share this:

10 ವರ್ಷಗಳ ಹಿಂದಿಗಿಂತ ಈಗ ಯುವತಿಯರು ಮದುವೆಯಾಗುವ ವಯಸ್ಸು ಹೆಚ್ಚಾಗುತ್ತಿದೆ. ಬದಲಾದ ಸಾಮಾಜಿಕ ಪರಿಸ್ಥಿತಿಯಲ್ಲಿ ಯುವತಿಯರ ಮದುವೆ ಆಯ್ಕೆ ಮುಂದೆ ಹೋಗುತ್ತಲೇ ಇದೆ. 20 ವರ್ಷ ಕಳೆಯುತ್ತಲೇ ವಿವಾಹದ ಬಂಧನಕ್ಕೆ ಒಳಗಾಗಬೇಕು ಎಂಬ ಅಭಿಪ್ರಾಯ ಈಗ ಇಲ್ಲ. ಮುಖ್ಯವಾಗಿ ಯುವತಿಯರು ಶಿಕ್ಷಣಕ್ಕೆ ಹೆಚ್ಚು ಹೊತ್ತು ನೀಡುತ್ತಿದ್ದು ಪದವಿ, ಸ್ನಾತಕೋತ್ತರ ಪದವಿ ಪಡೆಯುವಲ್ಲಿಗೆ ವಯಸ್ಸು ಸಾಮಾನ್ಯವಾಗಿ 25 ಆಗಿರುತ್ತದೆ. ಇನ್ನು ಓದಿಗೆ ತಕ್ಕಂತ ಕೆಲಸ, ವೃತ್ತಿಪರತೆ, ಕೆಲಸದ ಒತ್ತಡ ಎಲ್ಲವೂ ಸೇರಿಕೊಂಡು ಮದುವೆಗೆ ರೆಡಿ ಎನ್ನುವಷ್ಟರಲ್ಲಿ ವಯಸ್ಸು 30 ಸಮೀಪದಲ್ಲಿರುತ್ತದೆ.


ಕಾನೂನಾತ್ಮಕವಾಗಿ ಮದುವೆ ವಯಸ್ಸು 18 ವರ್ಷ ಮೇಲ್ಪಟ್ಟಿರಬೇಕು ಆದರೆ 18ರ ನಂತರ ಯಾವ ವಯಸ್ಸಿನಲ್ಲಿ ಮದುವೆ ಆಗಬೇಕು ಎಂಬುವುದು ವೈಯಕ್ತಿಕ ಆಯ್ಕೆ. ಇನ್ನು ಪ್ರೇಮ ವಿವಾಹಗಳಿಂದಲೂ ಮದುವೆಗಳು ತಡವಾಗುತ್ತಿದೆ. ಇಬ್ಬರು ಮೆಚ್ಚಿ, ಮನೆಯವರನ್ನು ಒಪ್ಪಿಸಿ, ಮದುವೆಗೆ ಹಣ ಹೊಂದಿಸಿ, ಮುಂದಿನ ಜೀವನಕ್ಕೆ ಭದ್ರತೆ ಒದಗಿಸವ ಕೆಲಸ ಗಟ್ಟಿ ಮಾಡಿಕೊಳ್ಳುವಲ್ಲಿಯೂ ವರ್ಷಗಳು ಉರುಳಿ ಹೋಗುತ್ತೆ. ಇನ್ನು 30ರ ಅಸುಪಾಸಿನಲ್ಲಿ ಮದುವೆಯಾದರೂ ವರ್ಷದೊಳಗೆ ಮಗುವನ್ನು ಹೆರಲು ಹೆಚ್ಚಾಗಿ ದಂಪತಿಗಳು ಇಷ್ಟಪಡುತ್ತಿಲ್ಲ ಎನ್ನುತ್ತೆ ಹೊಸ ಸಂಶೋಧನೆ.


ಮದುವೆಯಾದ ನಂತರ 3-4 ವರ್ಷ ಇಬ್ಬರೇ ಜೀವಿಸೋಣ ಅನ್ನುವುದರಿಂದ ಹಿಡಿದು ಪ್ಲಾನ್​​ ಮಾಡಿಕೊಂಡು ಮಗು ಮಾಡಿಕೊಳ್ಳುವವರೆಗೆ ಕಪಲ್ಸ್​ ಮುಂಜಾಗ್ರತೆ ವಹಿಸುತ್ತಾರೆ. ಗಂಡ-ಹೆಂಡತಿಯ ಉದ್ಯೋಗಗಳು, ಬರುವ ಮಗುವಿನ ಖರ್ಚಿನ ಲೆಕ್ಕಾಚಾರ ಎಲ್ಲವೂ ಪ್ರೆಗ್ನೆಂಟ್​ ಆಗುವುದನ್ನು ಮುಂದಕ್ಕೆ ಹಾಕುತ್ತವೆ. ಯುವ ದಂಪತಿಗಳು ಪ್ರವಾಸ, ಪಾರ್ಟಿ, ಮೋಜು ಮಸ್ತಿಯಿಂದ ಒಂದಷ್ಟು ವರ್ಷ ದೂರವಿರಬೇಕಾಗಬಹುದು ಎಂದು ಅಂದಾಜಿ ಮಗು ಸದ್ಯಕ್ಕೆ ಬೇಡ ಅಂತಲೂ ಅಂತಿದ್ದಾರೆ.


ಇದೆಲ್ಲವುಗಳ ಮಧ್ಯೆ ಮಹಿಳೆ ತನ್ನ ದೇಹದ ಮಾತನ್ನೂ ಕೇಳಬೇಕಾಗುತ್ತದೆ. ಯಾವ ವಯಸ್ಸಿನಲ್ಲಿ ಗರ್ಭವತಿಯಾಗುವುದು ಆಕೆಗೂ ಹಾಗೂ ಮಗುವಿಗೆ ಒಳ್ಳೆಯದು ಎಂಬುದು ಮುಖ್ಯವಾಗುತ್ತದೆ. ಕೇವಲ ಸಾಮಾಜಿಕ, ಆರ್ಥಿಕ ಭದ್ರತೆ ಮಾತ್ರವಲ್ಲ ವಯಸ್ಸು-ಆರೋಗ್ಯವನ್ನು ಗಣನೆಗೆ ತೆಗೆದುಕೊಳ್ಳಬೇಕು. ಸಾಮಾನ್ಯವಾಗಿ ಭಾರತೀಯ ಸ್ತ್ರೀಯರು 35 ವರ್ಷದೊಳಗೆ ಮಕ್ಕಳನ್ನು ಪಡೆಯುವುದು ಸೂಕ್ತ ಎನ್ನುತ್ತಾರೆ ಸ್ತ್ರೀ ರೋಗ ತಜ್ಞರು. ಇನ್ನೂ ತಡ ಮಾಡುವುದು ಅಷ್ಟೇನು ಒಳ್ಳೆಯದಲ್ಲ ಎನ್ನುತ್ತಾರೆ.


ಇದನ್ನೂ ಓದಿ: ತಂದೆಯಾಗಲು ಸರಿಯಾದ ವಯಸ್ಸು ಯಾವುದು? ಸಂಶೋಧನೆ ಏನು ಹೇಳುತ್ತೆ?


ಆದರೆ ಸಿನಿಮಾ ತಾರೆಯರು 40 ಸಮೀಪವೂ ಮುದ್ದಾದ ಮಕ್ಕಳಿಗೆ ಜನ್ಮ ಕೊಡುತ್ತಾರಲ್ಲ ಎನ್ನಬಹುದು ನೀವು. ಅವರ ಜೀವನಶೈಲಿ, ಆಹಾರ ಕ್ರಮ, ವ್ಯಾಯಾಮ, ವೈದ್ಯಕೀಯ ನೆರವು ಸಾಮಾನ್ಯವಾಗಿ ಎಲ್ಲಾ ಹೆಣ್ಣು ಮಕ್ಕಳಿಗೂ ಸಿಗುತ್ತದೆ ಎಂದು ಹೇಳಲಾಗದು. ವಿಶೇಷ ಪ್ರಕರಣಗಳಲ್ಲಿ, ಇತರೆ ಕಾರಣಗಳಿಂದ ಗರ್ಭ ಧರಿಸುವುದು ತಡವಾಗಬಹುದು, ಅದಕ್ಕೆ ವೈದ್ಯರ ನಿಗಾ ಬೇಕಾಗುತ್ತದೆ. ಆದರೆ ಕ್ಷುಲ್ಲಕ ಕಾರಣಗಳಿಗೆ ಗರ್ಭಿಣಿಯಾಗುವುದನ್ನು ಮುಂದಕ್ಕೆ ಹಾಕುವುದು ಸೂಕ್ತವಲ್ಲ.


ಹೆಣ್ಣಿನ ಅಂಡಾಣುವಿನ ಫಲವತ್ತೆಯೂ ಗರ್ಭ ಧರಿಸುವಲ್ಲಿ ದೊಡ್ಡ ಪಾತ್ರವಹಿಸುತ್ತದೆ. 30ರ ನಂತರ ಗರ್ಭ ಧರಿಸುವ ಸಾಮರ್ಥ್ಯ ಹಾಗೂ ಅವಕಾಶಗಳು ಕ್ಷೀಣಿಸುತ್ತಾ ಹೋಗುತ್ತದೆ. ಇನ್ನು ಇಂದಿನ ಆಹಾರ ಕ್ರಮ, ದಿನಬಳಕೆಯಲ್ಲಿನ ಕೆಮಿಕಲ್​ನಿಂದ ಬಹುತೇಕರ ಮೊದಲ ಗರ್ಭ ನಷ್ಟವಾಗುತ್ತಿದೆ. ಅಬಾರ್ಷನ್​ ನಂತರ ದೇಹ ಸ್ಥಿತಿ ಸುಧಾರಿಸಿ ಮತ್ತೆ ಗರ್ಭಿಣಿಯಾಗಲು ಸಮಯ ಹಿಡಿಯುತ್ತದೆ. ಹೀಗಾಗಿ ತಡ ಮಾಡಿದಷ್ಟು ತಡವಾಗುವ ಸಾಧ್ಯತೆಗಳನ್ನು ತಳ್ಳಿ ಹಾಕುವಂತಿಲ್ಲ.


ಎಲ್ಲಕ್ಕಿಂತ ಮುಖ್ಯವಾಗಿ ಸಂತಾನ ಸಂಬಂಧ ಉತ್ತಮ ವೈದ್ಯರ ಸಂಪರ್ಕದಲ್ಲಿರುವುದು, ಸೂಕ್ತ ಸಲಹೆಗಳನ್ನು ಪಡೆಯುವುದು ಮುಖ್ಯ. ಮದುವೆ, ಮಗು ಯಾವುದೇ ಕಾರಣಕ್ಕೆ ತಡವಾಗಿರಲಿ ಸದಾ ಹೆಣ್ಣು ತನ್ನ ಆರೋಗ್ಯದ ಬಗ್ಗೆ ಗಮನ ಹರಿಸುವುದು ಜಾಣತನ. ಮದುವೆಯಾಗಲು, ಮಗು ಮಾಡಿಕೊಳ್ಳಲು ನಿರ್ದಿಷ್ಟವಾಗಿ ಇಂತ ವಯಸ್ಸು ಎಂದು ಹೇಳುವುದಕ್ಕಿಂತ ಎಲ್ಲವೂ ನಿಮ್ಮ ಮಾನಸಿಕ, ದೈಹಿಕ ಆರೋಗ್ಯದ ಮೇಲೆ ಅವಲಂಭಿತವಾಗಿರುತ್ತದೆ ಎನ್ನಬಹುದು.

Published by:Kavya V
First published: