ಒಂದು ಕಾಲದಲ್ಲಿ ಹಾಲು ಮಾರುತ್ತಿದ್ದವ ಇಂದು 54 ಸಾವಿರ ಕೋಟಿ ಒಡೆಯ..!

ಭಾರತದ ಹಳ್ಳಿಗಳಿಗೆ ಹೋದಾಗ, ಇಲ್ಲಿನ ಪರಿಸ್ಥಿತಿ ಕೂಡ ಬಾಂಗ್ಲಾದೇಶದ ಮಹಿಳೆಯರಿಗಿಂತ ಹೆಚ್ಚು ಭಿನ್ನವಾಗಿಲ್ಲ ಎಂಬುದು ತಿಳಿಯಿತು. ಇದನ್ನು ಹೇಗಾದರೂ ಸರಿ ಮಾಡಬೇಕೆಂದು ಅಂದೇ ನಿರ್ಧರಿಸಿದೆ.

zahir | news18-kannada
Updated:August 23, 2019, 4:54 PM IST
ಒಂದು ಕಾಲದಲ್ಲಿ ಹಾಲು ಮಾರುತ್ತಿದ್ದವ ಇಂದು 54 ಸಾವಿರ ಕೋಟಿ ಒಡೆಯ..!
ChandraShekhar Ghosh
  • Share this:
ಜೀವನದಲ್ಲಿ ಒಂದು ಗುರಿ ಇರಬೇಕು. ಆ ಗುರಿಯನ್ನು ಸಾಧಿಸುವ ಮನಸ್ಸಿದ್ದರೆ 'ಯಶಸ್ಸಿನ ಮಾರ್ಗ' ತನ್ನಷ್ಟಕ್ಕೆ ತಾನೇ ತೆರೆದುಕೊಳ್ಳುತ್ತದೆ. ಗುರಿ ಮುಟ್ಟುವಷ್ಟರಲ್ಲಿ ಎದುರಾಗಿದ್ದ ಕಷ್ಟಕಾರ್ಪಣ್ಯಗಳೂ ನಗಣ್ಯವಾಗುತ್ತವೆ. ಮನಸ್ಸಿದ್ದರೆ ಮಾರ್ಗವೆಂಬುದು ಕೇವಲ ಜನಪ್ರಿಯ ನುಡಿಗಟ್ಟು ಮಾತ್ರವಲ್ಲ. ಅದು ಮಾನವನ ಅಂತರಾಳದಲ್ಲಿರುವ ಅಪಾರ ಶಕ್ತಿಯನ್ನು ಕೇಂದ್ರೀಕರಿಸಿ, ಗುರಿ ಮುಟ್ಟಿಸುವ ಒಂದು ಸಕ್ಸಸ್ ಮಂತ್ರ. ಅಂತಹದೊಂದು ನಂಬಿಕೆಯೊಂದಿಗೆ ಚಂದ್ರಶೇಖರ್ ಘೋಷ್ ಇಂದು ಯಶಸ್ವಿ ಬ್ಯಾಂಕರ್ ಆಗಿದ್ದಾರೆ. ಹಲವಾರು ಯುವಕರಿಗೆ ಸ್ಪೂರ್ತಿಯಾಗಿ ನಿಂತಿದ್ದಾರೆ. ಆಗಸ್ಟ್ 23​ 2015 ರಲ್ಲಿ ಅಧಿಕೃತವಾಗಿ 'ಬಂಧನ್' ಬ್ಯಾಂಕ್ ಸ್ಥಾಪಿಸಿದ್ದ ಘೋಷ್ ಅವರ ಹಿಂದಿನ ಬ್ಯಾಂಕಿಂಗ್ ಮಾರುಕಟ್ಟೆ ಮೌಲ್ಯ ಸುಮಾರು 54 ಸಾವಿರ ಕೋಟಿಗಳು. ಆದರೆ ಬ್ಯಾಂಕಿಂಗ್ ಕ್ಷೇತ್ರಕ್ಕೂ ಕಾಲಿಡುವ ಮುನ್ನ ಹಾಲು ಮಾರುತ್ತಾ ಜೀವನ ಸಾಗಿಸುತ್ತಿದ್ದರು ಎಂದರೆ ನಂಬಲೇಬೇಕು.

ಅಂಗಡಿಯಿಂದ ಪ್ರಾರಂಭವಾದ ಪಯಣ:
1960ರಲ್ಲಿ ತ್ರಿಪುರದ ಅಗರ್ತಲಾದಲ್ಲಿ ಜನಿಸಿದ ಘೋಷ್ ತಂದೆ ಸಣ್ಣ ಸಿಹಿತಿಂಡಿ ಅಂಗಡಿಯೊಂದನ್ನು ನಡೆಸುತ್ತಿದ್ದರು. ದೊಡ್ಡ ಕುಟುಂಬ ಸಣ್ಣ ಅಂಗಡಿ. ಕುಟುಂಬದಲ್ಲಿ ಒಟ್ಟು ಒಂಭತ್ತು ಮಂದಿ. ಸಂತೋಷದಿಂದ ಜೀವನ ಸಾಗಿಸುವಂತಹ ಆರ್ಥಿಕ ಪರಿಸ್ಥಿತಿಯಂತು ಕುಟುಂಬದಲ್ಲಿರಲಿಲ್ಲ. ಹೀಗಾಗಿಯೇ ಬಾಲ್ಯದಿಂದಲೇ ಘೋಷ್ ಸಮಸ್ಯೆಗಳ ಸುಳಿಗಳನ್ನು ಹತ್ತಿರದಿಂದಲೇ ನೋಡಿದ್ದರು. ತಂದೆಯ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಘೋಷ್ ಸಮಯ ಸಿಕ್ಕಾಗೆಲ್ಲ ಹಾಲು ಮಾರುತ್ತಿದ್ದರು.

ಆದರೆ ತಮ್ಮ ವಹಿವಾಟಿನ ಬಾಲ್ಯದಲ್ಲಿ ಅವರು ಯಾವತ್ತೂ ಶಿಕ್ಷಣವನ್ನು ಕೈಬಿಡುವ ಯೋಚನೆ ಮಾಡಲಿಲ್ಲ . ಕಷ್ಟಕಾರ್ಪಣ್ಯಗಳಿಂದಲೇ ಶಿಕ್ಷಣ ಮುಂದುವೆರೆಸಿದರು. ಮೂಲತಃ ಬಾಂಗ್ಲಾದೇಶವರಾಗಿದ್ದ ಘೋಷ್ ಕುಟುಂಬ ಸ್ವಾತಂತ್ರ್ಯದ ಸಮಯದಲ್ಲಿ ಭಾರತದ ತ್ರಿಪುರಕ್ಕೆ ನಿರಾಶ್ರಿತರಾಗಿ ಬಂದವರು. ಮುಂದೆ ಉನ್ನತ ಶಿಕ್ಷಣಕ್ಕಾಗಿ ಮತ್ತೆ ಘೋಷ್ ಬಾಂಗ್ಲಾದತ್ತ ಮುಖ ಮಾಡಿದರು. ಢಾಕಾ ವಿಶ್ವವಿದ್ಯಾಲಯದಿಂದ ಸಂಖ್ಯಾಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದರು.

ಘೋಷ್ ಅವರ ತಂದೆ ಬ್ರೋಜೋನಂದ್ ಸರಸ್ವತಿಯ ಮಹಾನ್ ಭಕ್ತರಾಗಿದ್ದರು. ಹೀಗಾಗಿ ಢಾಕಾದ ಬ್ರೋಜೋನಂದ್ ಸರಸ್ವತಿಯ ಆಶ್ರಮದಲ್ಲಿ ಇವರು ವಾಸ್ತವ್ಯ ಹೂಡಿದ್ದರು. ಸರಸ್ವತಿಯ ಆಶ್ರಮವು ವಿಶ್ವವಿದ್ಯಾಲಯದ ಪಕ್ಕದಲ್ಲೇ ಇದ್ದುದರಿಂದ ಚಂದ್ರಶೇಖರ್ ಅವರಿಗೆ ಅನುಕೂಲವಾಗಿತ್ತು. ವಿದ್ಯಾರ್ಥಿಗಳಿಗೆ ಟ್ಯೂಷನ್​ಗಳನ್ನು ನೀಡುತ್ತಾ ಘೋಷ್ ತಮ್ಮ ಶಿಕ್ಷಣದ ಖರ್ಚು ವೆಚ್ಚಗಳನ್ನು ನೋಡಿಕೊಂಡಿದ್ದರು.

ಬಂಧನ್ ಬ್ಯಾಂಕ್ ಸಿಇಒ ಚಂದ್ರಶೇಖರ್ ಘೋಷ್


ತಂದೆಗೆ ಗಿಫ್ಟ್​:ಈ ಹಿಂದೊಮ್ಮೆ ಸಂದರ್ಶನದಲ್ಲಿ ಮಾತನಾಡಿದ ಘೋಷ್, ತಾನು ಮೊದಲ ಬಾರಿಗೆ ತಂದೆಯವರಿಗೆ ನೀಡಿದ ಗಿಫ್ಟ್ ಅಂದರೆ ಶರ್ಟ್​. ಊರಿಗೆ ಮರಳುವಾಗ 50 ರೂಪಾಯಿಯ ಶರ್ಟ್​ನೊಂದಿಗೆ ಬಂದಿದ್ದೆ. ಆದರೆ ಅದನ್ನು ತಂದೆ ಸ್ವೀಕರಿಸಿರಲಿಲ್ಲ. ನಾನು ಕೊಟ್ಟಾಗ ಚಿಕ್ಕಪ್ಪನಿಗೆ ನೀಡು ಎಂದು ತಿಳಿಸಿದ್ದರು. ಏಕೆಂದರೆ ನಮಗಿಂತ ಕಷ್ಟದಲ್ಲಿ ಚಿಕ್ಕಪ್ಪ ಇದ್ದರು. ಹೀಗೆ ಇರುವಾಗ ಇಲ್ಲದಿದ್ದವರಿಗೆ ನೀಡುವಂತೆ ತಂದೆ ನನಗೆ ಒಂದು ಮಾನವೀಯ ಪಾಠ ಕಲಿಸಿದ್ದರು.

ಹೊಸ ತಿರುವು:
1985ರಲ್ಲಿ ಚಂದ್ರಶೇಖರ್ ಘೋಷ್ ಅವರ ಜೀವನ ಮಹತ್ವದ ತಿರುವು ಪಡೆದುಕೊಂಡಿತು. ಸ್ನಾತಕೋತ್ತರ ಶಿಕ್ಷಣ ಮುಗಿಸಿದ ನಂತರ ಢಾಕಾದ ಅಂತರರಾಷ್ಟ್ರೀಯ ಅಭಿವೃದ್ಧಿ ಸಂಸ್ಥೆಯಲ್ಲಿ (ಬಿಆರ್‌ಸಿ) ಕೆಲಸ ಮಾಡುತ್ತಿದ್ದರು. ಈ ಸಂಸ್ಥೆ ಬಾಂಗ್ಲಾದೇಶದ ಸಣ್ಣ ಹಳ್ಳಿಗಳಲ್ಲಿರುವ ಮಹಿಳೆಯರನ್ನು ಸಬಲೀಕರಣಗೊಳಿಸುವ ಕಾರ್ಯ ಮಾಡುತ್ತಿತ್ತು. ಅಲ್ಲಿನ ಮಹಿಳೆಯರ ಪರಿಸ್ಥಿತಿಯನ್ನು ನೋಡಿದಾಗ ನನ್ನ ಕಣ್ಣಲ್ಲಿ ನೀರು ಬರುತ್ತಿತ್ತು ಎಂದು ಘೋಷ್ ಹೇಳುತ್ತಾರೆ. ಅವರ ಆರ್ಥಿಕ ಸ್ಥಿತಿ ತುಂಬಾ ಹೀನಾಯವಾಗಿತ್ತು. ಅನಾರೋಗ್ಯದ ಸಂದರ್ಭದಲ್ಲೂ ಸಹ ಒಂದೊತ್ತಿನ ಊಟಕ್ಕಾಗಿ ಕೆಲಸ ಮಾಡಬೇಕಾಗಿತ್ತು. ಸುಮಾರು ಒಂದೂವರೆ ದಶಕ ಕಾಲ ಬಿಆರ್‌ಎಸಿ ಜೊತೆ ಕೆಲಸ ಮಾಡಿದೆ. 1997 ರಲ್ಲಿ ಕೋಲ್ಕತ್ತಾಗೆ ಮರಳಿದೆ. 1998ರಲ್ಲಿ ಗ್ರಾಮ ಕಲ್ಯಾಣ ಸೊಸೈಟಿಯಲ್ಲಿ ಕೆಲಸ ಸಿಕ್ಕಿತು. ಈ ಸಂಸ್ಥೆಯು ಜನರಿಗೆ ತಮ್ಮ ಹಕ್ಕುಗಳ ಬಗ್ಗೆ ಅರಿವು ಮೂಡಿಸುವಂತಹ ಕೆಲಸ ಮಾಡುತ್ತಿದೆ. ಇದರ ಒಂದು ಭಾಗವಾಗಿ ನಾನು ಕೆಲಸ ಮಾಡಬೇಕಿತ್ತು.

ಬ್ಯಾಂಕ್ ಪರವಾನಗಿ ಸಿಕ್ಕಿದ್ದು ಹೇಗೆ?
ಭಾರತದ ಹಳ್ಳಿಗಳಿಗೆ ಹೋದಾಗ, ಇಲ್ಲಿನ ಪರಿಸ್ಥಿತಿ ಕೂಡ ಬಾಂಗ್ಲಾದೇಶದ ಮಹಿಳೆಯರಿಗಿಂತ ಹೆಚ್ಚು ಭಿನ್ನವಾಗಿಲ್ಲ ಎಂಬುದು ತಿಳಿಯಿತು. ಇದನ್ನು ಹೇಗಾದರೂ ಸರಿ ಮಾಡಬೇಕೆಂದು ಅಂದೇ ನಿರ್ಧರಿಸಿದೆ. ಈ ಬಗ್ಗೆ ಒಂದಷ್ಟು ಅಧ್ಯಯನ ಮಾಡಿದಾಗ ತಿಳಿಯಿತು, ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬಿಗಳಾದರೆ ಮಾತ್ರ ಅವರ ಆರ್ಥಿಕ ಸ್ಥಿತಿ ಬದಲಾಯಿಸಬಹುದೆಂದು. ಆದರೆ ಆ ಸಮಯದಲ್ಲಿ ಹೆಚ್ಚಿನ ಮಹಿಳೆಯರು ಅನಕ್ಷರಸ್ಥರಾಗಿದ್ದರು. ಅವರಿಗೆ ವ್ಯವಹಾರದ ಬಗ್ಗೆ ಕಿಂಚಿತ್ತೂ ಜ್ಞಾನವಿರಲಿಲ್ಲ. ಈ ಅನಕ್ಷರತೆಯನ್ನು ದುರುಪಯೋಗಪಡಿಸಿ ಅನೇಕ ಧನಿಕರು ಇವರನ್ನು ಶೋಷಣೆ ಮಾಡುತ್ತಿದ್ದರು. ಅಂದರೆ ಅವರ ಮೂಲ ಅನಿವಾರ್ಯ ಹಣಕಾಸಿನ ಸಮಸ್ಯೆಯಾಗಿತ್ತು. ಧನ ಸಹಾಯ ಸಿಕ್ಕರೆ ಒಂದಷ್ಟು ಜನರ ಪರಿಸ್ಥಿತಿ ಬದಲಾಗಲಿದೆ ಎಂಬ ನಂಬಿಕೆ ನನ್ನದಾಗಿತ್ತು.

ಹೀಗೆ ಹಳ್ಳಿ ಜನರ ಕಷ್ಟ ಸುಖಗಳನ್ನು ಹತ್ತಿರದಲ್ಲೇ ನೋಡಿದ್ದ ನಾನು 2009 ರಲ್ಲಿ ಕಿರು ಸಾಲ ಸಂಸ್ಥೆ ಪ್ರಾರಂಭಿಸಲು ನಿರ್ಧರಿಸಿದೆ. ಅದರಂತೆ ರಿಸರ್ವ್ ಬ್ಯಾಂಕ್‌ ಮೂಲಕ ಬಂಧನ್ ಹಣಕಾಸು ಸಂಸ್ಥೆಯನ್ನು NBFC ಅಂದರೆ ಬ್ಯಾಂಕೇತರ ಹಣಕಾಸು ಕಂಪನಿ ಎಂದು ನೋಂದಾಯಿಸಿಕೊಂಡೆ.

12 ಮಂದಿಯ ಕಂಪನಿ ಪ್ರಾರಂಭ:
ಸಮಾಜದಲ್ಲಿ ತೀರಾ ಆರ್ಥಿಕ ದುರ್ಬಲರಾಗಿರುವ ಮಹಿಳೆಯರಿಗಾಗಿ ಸಾಲ ನೀಡಲು ಕಿರುಬಂಡವಾಳ ಕಂಪನಿಯನ್ನು ಘೋಷ್ ರಚಿಸಿದೆ. ಆದರೆ ಆ ಸಮಯದಲ್ಲಿ ಕೆಲಸ ಬಿಟ್ಟು ಸ್ವಂತ ಕಂಪನಿಯನ್ನು ತೆರೆಯುವುದು ಸುಲಭದ ಮಾತಾಗಿರಲಿಲ್ಲ. ಇದ್ದ ಕೆಲಸವನ್ನು ಬಿಟ್ಟು ಹೊಸ ಕಂಪೆನಿ ಹುಟ್ಟುಹಾಕುವಾಗ ತಾಯಿ, ಹೆಂಡತಿ ಮತ್ತು ಮಕ್ಕಳು ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಇದನ್ನು ತಿಳಿದ ನನ್ನ ಜೊತೆಗಿದ್ದವರು ನನ್ನ ಆಸೆಗೆ ತಣ್ಣೀರೆರೆಚಿದರು. ಈ ಸಂದರ್ಭದಲ್ಲಿ ಸೋದರ ಮಾವ ಮತ್ತು ಕೆಲವು ಜನರಿಂದ 2 ಲಕ್ಷ ರೂ ಸಾಲವಾಗಿ ಪಡೆದೆ. ಮನಸ್ಸಿದ್ದರೆ ಮಾತ್ರ ಮಾರ್ಗ ಎಂಬ ಅಚಲ ನಂಬಿಕೆಯೊಂದಿಗೆ 'ಬಂಧನ್' ಎಂಬ ಸ್ವಯಂಪ್ರೇರಿತ ಸಂಘಟನೆಯನ್ನು ಪ್ರಾರಂಭಿಸಿದೆ.

ಆ ಸಮಯದಲ್ಲಿ ನಮ್ಮ ಸಂಸ್ಥೆಯಿಂದ ಸಾಲ ಪಡೆದವರು ಮರುಪಾವತಿಸುವುದು ಕಷ್ಟಸಾಧ್ಯ ಎನ್ನುವ ಸ್ಥಿತಿಯಿತ್ತು. ಹೀಗಾಗಿ ನಾನು 2002 ರಲ್ಲಿ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ಬ್ಯಾಂಕ್​ನಿಂದ 20 ಲಕ್ಷ ಸಾಲ ಪಡೆದೆ. ಆ ವರ್ಷ ಬಂಧನ್ ಮೂಲಕ 1,100 ಮಹಿಳೆಯರಿಗೆ ಸುಮಾರು 15 ಲಕ್ಷ ರೂ. ಸಾಲ ನೀಡಲಾಗಿತ್ತು. 12 ಉದ್ಯೋಗಿಗಳನ್ನು ಇರಿಸಿ ಪ್ರಾರಂಭಿಸಿದ ಕಿರು ಸಾಲ ಯೋಜನೆಗೆ ಚಾಲನೆ ನೀಡಲಾಯಿತು.

ನಿಧಾನಕ್ಕೆ ನಮ್ಮ ಕಾರ್ಯ ವೈಖರಿ ಬ್ಯಾಂಕಿಂಗ್ ಕ್ಷೇತ್ರದ ಗಮನ ಸೆಳೆಯಿತು. 2013 ರಲ್ಲಿ ಆರ್‌ಬಿಐ ಖಾಸಗಿ ವಲಯದಿಂದ ಬ್ಯಾಂಕುಗಳನ್ನು ಸ್ಥಾಪಿಸಲು ಅರ್ಜಿಗಳನ್ನು ಆಹ್ವಾನಿಸಿತು. ನಾನು ಕೂಡ ಬ್ಯಾಂಕಿಂಗ್ ಪರವಾನಗಿಗಾಗಿ ಅರ್ಜಿ ಸಲ್ಲಿಸಿದೆ. ಆರ್‌ಬಿಐ ಪರವಾನಗಿ ಘೋಷಿಸಿದಾಗ ಎಲ್ಲರಿಗೂ ಅಚ್ಚರಿ. ಏಕೆಂದರೆ ಈ ಪರವಾನಗಿಗಳಲ್ಲಿ ಕೋಲ್ಕತಾ ಮೂಲದ ಕಿರುಬಂಡವಾಳ ಕಂಪನಿಗೆ ಬ್ಯಾಂಕ್ ತೆರೆಯಲು ಪರವಾನಗಿ ಸಿಕ್ಕಿತು. ಅದುವೇ ಮುಂದೆ 2015ರಲ್ಲಿ ಬಂಧನ್ ಬ್ಯಾಂಕ್ ಆಗಿ ಮಾರ್ಪಟ್ಟಿತು.

ಅಂದು 12 ಮಂದಿಯೊಂದಿಗೆ ಪ್ರಾರಂಭವಾದ ಬಂಧನ್​ ಇಂದು 34 ರಾಜ್ಯಗಳಲ್ಲಿ ಬ್ಯಾಂಕ್ ಸೇವೆ ನೀಡುತ್ತಿದೆ. ದೇಶದಾದ್ಯಂತ 1100ಕ್ಕಿಂತ ಹೆಚ್ಚಿನ ಶಾಖೆಗಳನ್ನು ಹೊಂದಿದೆ. ಹಲವು ನಗರಗಳಲ್ಲಿ 480ಕ್ಕಿಂತ ಹೆಚ್ಚಿನ ಎಟಿಎಂಗಳು ಬಂಧನ್ ಹೆಸರಿನಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಅಂದು ಇಟ್ಟುಕೊಂಡಿದ್ದ ಸ್ಪಷ್ಟವಾದ ಗುರಿ ಇಂದು ಚಂದ್ರಶೇಖರ್ ಘೋಷ್ ಅವರನ್ನು 54 ಸಾವಿರ ಕೋಟಿ ಮೌಲ್ಯದ ಬ್ಯಾಂಕ್​ನ ಒಡೆಯರನ್ನಾಗಿಸಿದೆ. ಇದಕ್ಕೆ ಅಲ್ಲವೇ ಹೇಳುವುದು ಮನಸ್ಸಿದ್ದರೆ ಮಾರ್ಗ ಎಂಬುದು ಒಂದು ಸಕ್ಸಸ್ ಮಂತ್ರ ಎಂದು.

 

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್​ಸ್ಕ್ರೈಬ್​ ಮಾಡಲು ಇಲ್ಲಿ ಕ್ಲಿಕ್​ ಮಾಡಿFirst published:August 23, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading