• Home
 • »
 • News
 • »
 • lifestyle
 • »
 • Meghalaya: ಮೇಘಾಲಯದ ಅರಣ್ಯಗಳಲ್ಲಿ ಮರದ ಬೇರುಗಳೇ ನಿರ್ಮಿಸಿವೆ ಸೇತುವೆ!

Meghalaya: ಮೇಘಾಲಯದ ಅರಣ್ಯಗಳಲ್ಲಿ ಮರದ ಬೇರುಗಳೇ ನಿರ್ಮಿಸಿವೆ ಸೇತುವೆ!

ಮೇಘಾಲಯದ ಅರಣ್ಯದಲ್ಲಿರುವ ಬೇರಿನ ಸೇತುವೆ

ಮೇಘಾಲಯದ ಅರಣ್ಯದಲ್ಲಿರುವ ಬೇರಿನ ಸೇತುವೆ

ಮೇಘಾಲಯ ದಟ್ಟಾರಣ್ಯದಲ್ಲಿ ಬೃಹತ್ ಮರಗಳಿದ್ದು ಅವುಗಳ ಬೇರುಗಳು ಪರಸ್ಪರ ಹೆಣೆದುಕೊಂಡು ನದಿಗೆ ಅಡ್ಡಲಾಗಿ ಸೇತುವೆ ನಿರ್ಮಿಸಿವೆ.

 • News18 Kannada
 • 4-MIN READ
 • Last Updated :
 • Meghalaya, India
 • Share this:

  ದಟ್ಟಾರಣ್ಯದಲ್ಲಿ ಬೃಹತ್ ಮರಗಳಿದ್ದು ಅವುಗಳ ಬೇರುಗಳು ಪರಸ್ಪರ ಹೆಣೆದುಕೊಂಡು ನದಿಗೆ ಅಡ್ಡಲಾಗಿ ಸೇತುವೆ ನಿರ್ಮಿಸುತ್ತವೆ ಎಂಬುದರ ಕುರಿತು ಯೋಚಿಸಿ...


  ಮೇಘಾಲಯದಲ್ಲಿರುವ ಲಿವಿಂಗ್ ರೂಟ್ ಬ್ರಿಡ್!


  ಇಲ್ಲಿನ ಸ್ಥಳೀಯ ಖಾಸಿ ಮತ್ತು ಜೈಂತಿಯಾ ಸಮುದಾಯಗಳು ಮಳೆಗಾಲದಲ್ಲಿ ತುಂಬಿ ಹರಿಯುವ ನದಿಗಳನ್ನು ದಾಟಲು  ಈ ಸೇತುವೆಗಳು ಸಹಾಯ ಮಾಡಿವೆ.


  ನೀವು ಮಾಂತ್ರಿಕತೆಯ ಬಗ್ಗೆ ಯೋಚಿಸಿದಿರಾ? ಪ್ರಕೃತಿಯ ಶಕ್ತಿಗಳು ಮತ್ತು ತತ್ವಗಳು ಮರಗಳ ಬಳಿ ಹಾಡುತ್ತಾ ಅವುಗಳಿಗೆ ಆಕಾರ ನೀಡಬಹುದೇ? ಅಥವಾ JRR ಟೋಲ್ಕಿನ್ ಅವರ ಎಂಟ್ಸ್ – ಚಲಿಸುವ ಮತ್ತು ಮಾತನಾಡುವ (ಮತ್ತು ಸರುಮನ್ ಅವರ ಟವರ್ ಅನ್ನು ಧ್ವಂಸಗೊಳಿಸುವ!) ಬೃಹತ್ ಮರಗಳು ಎಂದು ತಿಳಿದುಕೊಂಡಿರಾ? JK ರೋವ್ಲಿಂಗ್ ಅವರ ಹೋಗ್ವರ್ಟ್ಸ್ ಕ್ಯಾಂಪಸ್‌ನಲ್ಲಿರುವ ವ್ಹೋಂಪಿಂಗ್ ವಿಲ್ಲೊ – ತೀರಾ ಹತ್ತಿರವಾದವರಿಗೆ “ಯಾರದು” ಎಂದು ಕೇಳುವ ಸ್ವಭಾವ ವೈಚಿತ್ರ್ಯದ ಮರ ಎಂದು ನೀವು ಭಾವಿಸಿರಬಹುದು! ನೀವು ಯಾರ ಬಗ್ಗೆಯೇ ಯೋಚಿಸಿ, ಅವರು ಪ್ರಕೃತಿಯ ಅದ್ಭುತ ಶಕ್ತಿ ಮತ್ತು ರಕ್ಷಿಸುವ ಹಾಗೂ ಸಂತೈಸುವ ಅದರ ಸಾಮರ್ಥ್ಯವನ್ನು ಪ್ರತಿನಿಧಿಸುವ ಸೃಷ್ಟಿಕರ್ತರಾಗಿರುವ ಸಾಧ್ಯತೆ ಇದೆ.  


  ಜೀವಂತ ಬೇರಿನ ಸೇತುವೆಗಳು (ಲಿವಿಂಗ್ ರೂಟ್ ಬ್ರಿಡ್ಜ್‌ಗಳು) ಹೆಣೆದುಕೊಂಡ ಬೇರುಗಳಿಂದ ಮಾಡಲಾಗಿರುವ ಒಂದು ರೀತಿಯ ಮಾಂತ್ರಿಕ ಕ್ರಿಯೆ, ಆದರೆ ಅವು ಕಾಲ್ಪನಿಕವಲ್ಲ.


  ಮೇಘಾಲಯದ ಜೀವಂತ ಬೇರಿನ ಸೇತುವೆಗಳ ಬಗ್ಗೆ ತಿಳಿಯಿರಿ.


  ಇಲ್ಲಿನ ಸ್ಥಳೀಯ ಖಾಸಿ ಮತ್ತು ಜೈಂತಿಯಾ ಸಮುದಾಯಗಳು ಮಳೆಗಾಲದಲ್ಲಿ ತುಂಬಿ ಹರಿಯುವ ನದಿಗಳನ್ನು ದಾಟಲು  ಈ ಸೇತುವೆಗಳು ಸಹಾಯ ಮಾಡಿವೆ. ಮೊದಲ ಬಾರಿಗೆ ಬೇರಿನ ಸೇತುವೆಗಳನ್ನು ಹೇಗೆ ಮತ್ತು ಯಾವಾಗ ನಿರ್ಮಿಸಲಾಯಿತು ಎಂಬುದರ ಬಗ್ಗೆ ಯಾವುದೇ ಲಿಖಿತ ದಾಖಲೆಗಳಿಲ್ಲ, ಆದರೆ ಕೆಲವು ಸೇತುವೆಗಳು ಶತಮಾನಗಳವರೆಗೆ ಸದೃಢವಾಗಿ ನಿಂತಿವೆ ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ. ನಿಮ್ಮ ಮೊದಲ ಲಿವಿಂಗ್ ರೂಟ್ ಬ್ರಿಡ್ಜ್ ಅನ್ನು ನೀವು ಎಂದಿಗೂ ಮರೆಯಲಾರಿರಿ. ಇಂತಹುದು ಇಲ್ಲಿ ಮತ್ಯಾವುದೂ ಇಲ್ಲ. ಪ್ರತಿಯೊಂದು ರಚನೆಯು – ಜೀವ ಮತ್ತು ಜೀವಂತಿಕೆಯನ್ನು ಒಳಗೊಂಡಿರುವ ಒಂದು ಪುಟ್ಟ ಪರಿಸರ ವ್ಯವಸ್ಥೆ (ಇಕೊಸಿಸ್ಟಂ) ಆಗಿದೆ. ಮನುಷ್ಯ ಮತ್ತು ಪ್ರಕೃತಿಯ ನಡುವಿನ ಸಾಮರಸ್ಯದ ಭೇಟಿಯು ಎಷ್ಟು ಸುಂದರವಾಗಿರಬಹುದು ಎಂಬುದನ್ನು ಪ್ರತಿಯೊಂದು ರಚನೆಯು ಪ್ರತಿನಿಧಿಸುತ್ತದೆ.


  ಅವುಗಳನ್ನು ಹೇಗೆ ಬೆಳೆಸಲಾಗಿದೆ?


  ಈ ಸೇತುವೆಗಳನ್ನು ನಿರ್ಮಿಸುವುದು ಎಂದರೆ ದಶಕಗಳ ಕಾಲ ಪ್ರೀತಿಪೂರ್ವಕವಾಗಿ ಶ್ರಮಪಡುವುದಾಗಿದೆ. ಮೊದಲು, ನದಿ ದಂಡೆಯಲ್ಲಿ ಒಂದು ಸುಸ್ಥಿರ ಸ್ಥಳವನ್ನು ಗುರುತಿಸಲಾಗುವುದು ಮತ್ತು ರಬ್ಬರ್ ಅಂಜೂರ ಮರ, ಫೈಕಸ್ ಎಲಾಸ್ಟಿಕ (Ficus Elastica) ಸಸಿಯನ್ನು ನಡೆಲಾಗುತ್ತದೆ. ಇದರ ಬೇರುಗಳು ಹೆಣೆಯಲು ಅವಕಾಶ ನೀಡುವಷ್ಟು ಹಿಗ್ಗುವ (ಎಲಾಸ್ಟಿಕ್) ಗುಣ ಹೊಂದಿರುವುದರಿಂದ ಈ ಮರವು ವಿಶೇಷವಾದದ್ದು. ಈ ಮರ ಬೆಳೆದು ಅತಿ ದೊಡ್ಡ ಸದೃಢ ಬೇರುಗಳು ಬೆಳೆಯಲು ಹತ್ತು ವರ್ಷ ತೆಗೆದುಕೊಳ್ಳುತ್ತದೆ ಹಾಗೂ ಸ್ಥಿರವಾದ ರಚನೆಗಳನ್ನು ರೂಪಿಸಲು ಬೇಕಾದ ದ್ವಿತೀಯ ವಾಯುವೀಯ ಬೇರುಗಳು ಬೆಳೆಯಲು ಪ್ರೌಢಾವಸ್ಥೆಯ ಮರಗಳಿಗೆ ಮತ್ತೆ ಹತ್ತು ವರ್ಷ ಬೇಕಾಗುತ್ತದೆ. 


  ಶತಮಾನಗಳ ಕಾಲ ಅನುಸರಿಸುತ್ತಿರುವ ಈ ಪರಿಪೂರ್ಣವಾದ ವಿಧಾನದಲ್ಲಿ ಖಾಸಿ ಸೇತುವೆ ನಿರ್ಮಾತೃಗಳು ವಾಯುವೀಯ ಬೇರುಗಳನ್ನು ಬಿದಿರಿನ ರಚನೆಗೆ ಹೆಣೆಯುತ್ತಾರೆ ಮತ್ತು ಆನಂತರ ಈ ಬೇರುಗಳನ್ನು ನಯವಾಗಿ ನದಿಗೆ ಅಡ್ಡಲಾಗಿ ತಂದು ಬಿಡುತ್ತಾರೆ ಹಾಗೂ ಅಂತಿಮವಾಗಿ ಅವುಗಳನ್ನು ನದಿಯ ಆಚೆ ದಡದಲ್ಲಿ ನೆಡುತ್ತಾರೆ. ಪ್ರತಿ ಎರಡು ವರ್ಷಕ್ಕೊಮ್ಮೆ ಅವರು ಬಿದಿರಿನ ರಚನೆಯನ್ನು ಬದಲಾಯಿಸುತ್ತಾರೆ, ಏಕೆಂದರೆ ಹಸಿಯಾದ ಮತ್ತು ತೇವವಾದ ಹವಾಮಾನ ಪರಿಸ್ಥಿತಿಗಳು ಬಿದಿರು ಕೊಳೆಯುವಂತೆ ಮಾಡಬಹುದು. ಸಮಯ ಕಳೆದಂತೆ, ಬೇರುಗಳು ದಪ್ಪವಾಗುತ್ತವೆ ಮತ್ತು ನದಿಯ ಇನ್ನೊಂದು ದಡದಲ್ಲಿರುವ ರಬ್ಬರ್ ಮರದೊಂದಿಗೆ ಹೆಣೆದುಕೊಳ್ಳುತ್ತವೆ. ಅವುಗಳು ಅನಾಸ್ಟೊಮೊಸಿಸ್ (anastomosis) ಎಂಬ ಪ್ರಕ್ರಿಯೆಯ ಮೂಲಕ ವಿಲೀನಗೊಳ್ಳುತ್ತವೆ – ಅದರಲ್ಲಿ ಎಲೆಯ ನಾಳಗಳು, ಎಳೆಗಳಂತಹ ವ್ಯವಸ್ಥೆಗಳು ಮತ್ತು ವಾಯುವೀಯ ಬೇರುಗಳು ಸಹಜವಾಗಿ ಜತೆಯಾಗಿ ಸೇರಿಕೊಳ್ಳುತ್ತವೆ – ಹಾಗೂ ದಟ್ಟವಾದ ಚೌಕಟ್ಟಿನಂತಹ ರಚನೆಯಾಗಿ ಹೆಣೆದುಕೊಳ್ಳುತ್ತವೆ. ಬೇರುಗಳ ಈ ಜಾಲವು ಸಮಯ ಕಳೆದಂತೆ ಬಲಿತು ನೈಸರ್ಗಿಕ ಬಯೊಎಂಜಿನಿಯರಿಂಗ್‌ನ ಈ ಅದ್ಭುತಗಳನ್ನು ರಚಿಸುತ್ತವೆ: ಕೆಲವು ಸೇತುವೆಗಳು ಒಮ್ಮೆಲೆ 50 ಜನರವರೆಗೂ ಹಿಡಿದಿಟ್ಟುಕೊಳ್ಳುತ್ತವೆ!


  ಈ ಸೇತುವೆಗಳು ಸಾಮಾನ್ಯವಾಗಿ ಸರಾಸರಿ 50 - 100 ಅಡಿ ಬೆಳೆಯುತ್ತವೆ. ಈಸ್ಟ್ ಖಾಸಿ ಹಿಲ್ಸ್ ಜಿಲ್ಲೆಯ ಮಾವ್‌ಕಿರ್‌ನೊಟ್ ಸಮೀಪದಲ್ಲಿರುವ ಸೇತುವೆಯು 175 ಅಡಿ ಇದ್ದು, ಅತ್ಯಂತ ಉದ್ದವಾದ ಜೀವಂತ ಬೇರಿನ ಸೇತುವೆ ಎನಿಸಿದೆ.  


  ತಲೆಮಾರುಗಳ ಬೆಸುಗೆ
  ಮಕ್ಕಳನ್ನು ಬೆಳೆಸಿದಂತೆ, ಈ ಸೇತುವೆಗಳನ್ನು ಬೆಳೆಸುವುದಕ್ಕೆ ಇಡೀ ಗ್ರಾಮವೇ ಬೇಕಾಗುತ್ತದೆ. ಪ್ರತಿ ಸೇತುವೆಯ ಮೇಲೆ ನಿಗಾವಹಿಸಲು, ಬೆಳೆಸಲು ಮತ್ತು ಅವುಗಳನ್ನು ನಿರ್ವಹಿಸಲು ಇಡೀ ಸಮುದಾಯದ ಸಾಂಘಿಕ ಪರಿಶ್ರಮ ಬೇಕಾಗುತ್ತದೆ. ಅವುಗಳಿಗೆ ಸಂಬಂಧಿಸಿದ ಕಾರ್ಯನಿರ್ವಹಣೆಗೆ ಒಂದಕ್ಕಿಂತ ಹೆಚ್ಚು ತಲೆಮಾರು ಬೇಕಾಗುತ್ತದೆ. ಇಂದು ಪಾಲನೆ ಪೋಷಣೆ ಮಾಡಿ ಬೆಳೆಸಿದ ಬಾಲ್ಯಾವಸ್ಥೆಯ ಸೇತುವೆಗಳು ಹಾಗೆ ಅಕ್ಕರೆಯಿಂದ ಪೋಷಿಸಿದ ಜನರ ವಂಶಸ್ಥರನ್ನು ಹೊತ್ತು ನಿಲ್ಲುತ್ತವೆ. ಈ ರೀತಿಯಲ್ಲಿ, ಪ್ರತಿ ಸೇತುವೆಯು ಸಮುದಾಯದ ಭವಿಷ್ಯಕ್ಕೊಂದು ಉಡುಗೊರೆಯಾಗಿದೆ. ಕಾಳಜಿ ವಹಿಸುವುದು ಮತ್ತು ಸಂರಕ್ಷಿಸುವುದನ್ನು ಒಳಗೊಂಡಿರುವ ಮೇಘಾಲಯನ್ ಸಂಸ್ಕೃತಿಯನ್ನು ನೀವಿಲ್ಲಿ ನೋಡುತ್ತಿರುವಿರಿ: ಪ್ರತಿಯೊಂದು ಪೀಳಿಗೆಯು ಸಹ ಮುಂದಿನ ಪೀಳಿಗೆಯು ಬಳಸಲು, ಆನಂದಿಸಲು ಹಾಗೂ ಪ್ರೀತಿಸಲು ಏನಾದರೂ ಸುಂದರವಾದದ್ದನ್ನು ರಚಿಸುತ್ತದೆ.  ಅಲ್ಲದೆ, ಈ ಸೇತುವೆಗಳನ್ನು ಪ್ರೀತಿಸುವುದು ಮನುಷ್ಯ ಕುಟುಂಬಗಳಷ್ಟೇ ಅಲ್ಲ ಎಂಬುದೂ ಸತ್ಯ.


  ಪ್ರತಿ ಸೇತುವೆಯು ಪ್ರಾಣಿ ಅನುಮೋದಿತ!


  ಅಂಜೂರದ ಮರಗಳು ಜೀವವೈವಿಧ್ಯತೆಗೆ ಪೂರಕವಾಗಿ ಹೊಂದಿಕೆಯಾಗುತ್ತವೆ: ಅವುಗಳ ಮೇಲೆ ಪಾಚಿ ಬೆಳೆಯುತ್ತದೆ, ಅವುಗಳ ರೆಂಬೆಕೊಂಬೆಗಳಲ್ಲಿ ಅಳಿಲುಗಳು ವಾಸಿಸುತ್ತವೆ, ಮರದ ಮೇಲ್ಭಾಗದಲ್ಲಿ ಪಕ್ಷಿಗಳು ಗೂಡು ಕಟ್ಟುತ್ತವೆ ಹಾಗೂ ಪರಾಗಸ್ಪರ್ಶಕ್ಕೆ ಸಹಾಯ ಮಾಡುವ ಹುಳಗಳನ್ನು ಬೆಂಬಲಿಸುತ್ತವೆ. ಈ ಮರಗಳನ್ನು ಸೇತುವೆಗಳನ್ನಾಗಿ ಮಾಡುವ ಕೌಶಲಯುತ ಕಾರ್ಯದ ಮೂಲಕ – ಪ್ರಾಣಿಗಳು ಸುರಕ್ಷಿತವಾಗಿ ನದಿಯನ್ನು ದಾಟಬಹುದಾದ ಸ್ಥಳಗಳಾದ ಹಲವಾರು ಹಸಿರು ವಲಯಗಳನ್ನು (ಗ್ರೀನ್ ಕಾರಿಡಾರ್‌ಗಳು) ನಿರ್ಮಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕಾಡಿನ ಒಂದು ಭಾಗದಿಂದ ಮತ್ತೊಂದು ಭಾಗಕ್ಕೆ ಚಲಿಸಲು ಬೊಗಳುವ ಜಿಂಕೆ (ಬಾರ್ಕ್ ಡೀರ್) ಹಾಗೂ ಮೋಡದ ಚಿರತೆಗಳು (ಕ್ಲೌಡೆಡ್ ಲೆಪರ್ಡ್ಸ್) ಬೇರಿನ ಸೇತುವೆಗಳನ್ನು ಬಳಸುತ್ತವೆ ಎಂದು ತಿಳಿದುಬಂದಿದೆ. ಈ ಸೇತುವೆಗಳು ಭೂಪ್ರದೇಶದ ಭಾಗವಷ್ಟೇ ಅಲ್ಲ, ಅವುಗಳ ಸುತ್ತಲೂ ಇರುವ ಪರಿಸರ ವ್ಯವಸ್ಥೆಯನ್ನು ಬೆಂಬಲಿಸುವ ಮತ್ತು ಬೆಳೆಸುವ ಕಾರ್ಯದಲ್ಲಿ ಮಹತ್ವದ ಪಾತ್ರವಹಿಸುತ್ತಿವೆ.     


  ಜೀವಂತ ಬೇರಿನ ಸೇತುವೆಗಳ ಭವಿಷ್ಯ


  ತಮ್ಮ ಪರಿಸರದಿಂದ ರಚನೆಯಾಗಿ ನಿಲ್ಲುವ ಸಾಂಪ್ರದಾಯಿಕ ಸೇತುವೆಗಳಂತೆಯೇ ಈ ಬೇರಿನ ಸೇತುವೆಗಳು ಸಹ ಇವೆ. ತಮ್ಮದೇ ಆದ ನಿರ್ಮಾಣ ಸಾಮಗ್ರಿಯನ್ನು ಉತ್ಪಾದಿಸುವುದಲ್ಲದೆ, ಈ ಮರಗಳು ತಮ್ಮ ಜೀವಿತಾವಧಿಯ ಉದ್ದಕ್ಕೂ ಹಸಿರುಮನೆ ಅನಿಲ ಕಾರ್ಬನ್ ಡೈಆಕ್ಸೈಡ್ ಅನ್ನು ಹೀರಿಕೊಳ್ಳುತ್ತವೆ. ಮಣ್ಣು ಸ್ಥಿರಗೊಳ್ಳಲು ಮತ್ತು ಮಣ್ಣಿನ ಸವಕಳಿ ಹಾಗೂ ಮೇಘಾಲಯದ ಮಾನ್ಸೂನ್‌ನಿಂದ ಉಕ್ಕಿಹರಿಯುವ ನದಿಗಳಿಗೆ ನಿರ್ಣಾಯಕವಾಗಿರುವ ಭೂಕುಸಿತವನ್ನು ತಡೆಯಲು ಅವು ಸಹಕರಿಸುತ್ತವೆ! ವಾಸ್ತುಶಿಲ್ಪದ ಪುನರುತ್ಪಾದಕ ಸ್ವರೂಪವಾಗಿರುವ ಜೀವಂತ ಬೇರಿನ ಸೇತುವೆಗಳು ಸಮಯ ಕಳೆದಂತೆ ಸದೃಢವಾಗುತ್ತವೆ, ಸ್ವಯಂ-ದುರಸ್ತಿ ಮಾಡಿಕೊಳ್ಳುತ್ತವೆ ಹಾಗೂ ವಯಸ್ಸಾದಂತೆ ಇನ್ನಷ್ಟು ದೃಢವಾಗುತ್ತವೆ. ಒಂದೆಡೆಯಿಂದ ಮತ್ತೊಂದು ಕಡೆಗೆ ಸಂಪರ್ಕ ಕಲ್ಪಿಸುವುದು ಮತ್ತು ಸ್ಥಳೀಯರು ಆದಾಯ ಗಳಿಸಲು ಸಹಾಯವಾಗುವಂತೆ ಪ್ರವಾಸಿಗರನ್ನು ಆಕರ್ಷಿಸುವುದಷ್ಟೇ ಈ ಸೇತುವೆಗಳ ಕೆಲಸವಲ್ಲ, ಇದೆಲ್ಲದರ ಜತೆಗೆ ತಮ್ಮ ಸುತ್ತಲಿನ ಪರಿಸರದ ಪುನರುತ್ಪಾದಕ ಪರಿಣಾಮಗಳನ್ನು ಸಹ ಬೀರುತ್ತವೆ. ಹವಾಮಾನ ವೈಪರೀತ್ಯದ ಸಮಸ್ಯೆಯು ಒಡ್ಡಿರುವ ಸಮಸ್ಯೆಗಳಿಗೆ ಇವುಗಳು ಉತ್ತರವಾಗಬಹುದೇ?


  ಬೇರಿನ ಸೇತುವೆಗಳಲ್ಲಿನ ಆಸಕ್ತಿಯ ಪುನರುತ್ಥಾನವನ್ನು ಕೊನೆ ಪಕ್ಷ ಅಲ್ಪ ಪ್ರಮಾಣದಲ್ಲಾದರೂ ಸರಿ, ಲಿವಿಂಗ್ ಬ್ರಿಡ್ಜ್ ಫೌಂಡೇಶನ್ ಸ್ಥಾಪಿಸಿರುವ ಮಾರ್ನಿಂಗ್‌ಸ್ಟಾರ್ ಖೊಂಗ್‌ಥಾವ್ ಮತ್ತು ಅವರ ತಂಡಕ್ಕೆ ಸಲ್ಲಿಸಬೇಕಾಗುತ್ತದೆ. ಮಾರ್ನಿಂಗ್‌ಸ್ಟಾರ್ ಮತ್ತು ಅವರ ತಂಡವು ಹಳೆಯ ಲಿವಿಂಗ್ ಬ್ರಿಡ್ಜ್‌ಗಳನ್ನು ದುರಸ್ತಿ ಮಾಡಿದೆ ಮತ್ತು ನಿರ್ವಹಿಸಿದೆ ಹಾಗೂ ಹೊಸ ಸೇತುವೆಗಳನ್ನು ನಿರ್ಮಿಸಲು ಸಹಾಯ ಮಾಡಿದೆ. ಸ್ಥಳೀಯರನ್ನು ಶಿಕ್ಷಿತರನ್ನಾಗಿ ಮಾಡಲು ಅವರು ಕ್ಲಾಸ್‌ರೂಮ್‌ಗಳನ್ನು ಸಹ ನಿರ್ಮಿಸುತ್ತಿದ್ದಾರೆ ಮತ್ತು ಈ ಸೇತುವೆಗಳನ್ನು ನಿರ್ಮಿಸುವುದು ಹೇಗೆ ಎಂಬುದರ ಕುರಿತು ಕಾರ್ಯಾಗಾರಗಳನ್ನು ನಡೆಸುತ್ತಾರೆ. ಅಲ್ಲದೆ, ಈ ಕ್ಲಾಸ್‌ರೂಮ್‌ಗಳನ್ನು ಮರದ ಮೇಲ್ಭಾಗದಲ್ಲಿ ನಿರ್ಮಿಸಲಾಗಿದೆ! (ಬೇರೆಡೆ ಇನ್ನೆಲ್ಲಿ?) ಸೇತುವೆಗಳಲ್ಲದೆ, ಈ ತಂಡವು ಏಣಿಗಳು, ಉಯ್ಯಾಲೆಗಳು, ಕುಳತುಕೊಳ್ಳುವ ಆಸನಗಳು ಮತ್ತು – ನಮ್ಮ ರಚನೆಗಳನ್ನು ಮಾಡುವುದಕ್ಕಿಂತ ಬೆಳೆಸುವ ಸಾಧ್ಯತೆಗಳನ್ನು ತೋರಿಸುವ ಅದ್ಭುತ ಜೀವಂತ ವಾಸ್ತುಶಿಲ್ಪವಾಗಿರುವ ಸುರಂಗಗಳನ್ನು ಸಹ ಈ ತಂಡವು ನಿರ್ಮಿಸುತ್ತಿದೆ. 


  ಜೀವಂತ ವಾಸ್ತುಶಿಲ್ಪವು ನಗರಗಳಲ್ಲಿ ಹಸಿರು ವಲಯವನ್ನು ಬೆಳೆಸಲು ಕೊಡುಗೆ ನೀಡುತ್ತವೆ ಎಂದು ಪಾಶ್ಚಿಮಾತ್ಯ ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ: ಅಂದರೆ ಕಟ್ಟಡಗಳು, ಸೇತುವೆಗಳು ಮತ್ತು ಉದ್ಯಾನಗಳಲ್ಲಿ ಮರಗಳನ್ನು ಅಂತರ್ಗತಗೊಳಿಸುವುದರಿಂದ ಬೆಂಗಾಡಿನಂತೆ ಮತ್ತು ಬರಡಾದಂತೆ ತೋರುವ ಪ್ರದೇಶಗಳಲ್ಲಿ ನಿಸರ್ಗವನ್ನು ಒಳಗೊಳ್ಳಲು ಸಹಾಯವಾಗುತ್ತದೆ. ಈ ಸೇತುವೆಗಳ ಅಂಶಗಳನ್ನು ನಗರ ಪರಿಸರಕ್ಕೆ ಅಳವಡಿಸಿಕೊಳ್ಳುವ ದೃಷ್ಟಿಕೋನದಿಂದ ಇವುಗಳ ಅಂಶಗಳನ್ನು ಎರವಲು ಪಡೆಯಲು ವಾಸ್ತುಶಿಲ್ಪಿಗಳು ಮತ್ತು ಸಂಶೋಧಕರು ಎದುರು ನೋಡುತ್ತಿದ್ದಾರೆ. ವಾಸ್ತವವಾಗಿ, ಲಂಡನ್ ಪ್ಲೇನ್ ಟ್ರೀಯಲ್ಲಿ ಹಸಿರು ಮೇಲ್ಪದರವನ್ನು ಸೃಷ್ಟಿಸಲು ಪ್ರಯೋಗವು ಪ್ರಗತಿಯಲ್ಲಿದೆ. ಮರದ ಬೇರುಗಳು ಬೆಳೆದಂತೆಲ್ಲಾ ಅವುಗಳನ್ನು ಕುರ್ಚಿಗಳ ಆಕಾರಕ್ಕೆ ತರುವುದು. ಅಚ್ಚರಿಯ ಕಾಲಮಾನ ಅಲ್ಲವೇ? ನಿಮ್ಮ ನಗರದಲ್ಲಿ ಇಂತಹ ಪ್ರಯೋಗಗಳು ನಡೆಯಲಿ ಎಂದು ನಿರೀಕ್ಷಿಸಿದರೂ, ಅವು ಪ್ರೌಢಾವಸ್ಥೆಗೆ ಬರುವುದನ್ನು ನೋಡಲು ನಾವು ಇರುತ್ತೇವಾ ಎಂಬುದು ಮುಖ್ಯ. 


  ಪರ್ಯಾಯ: ಮೇಘಾಲಯಕ್ಕೆ ಬಂದು ಅಲ್ಲಿ ನೈಜವಾಗಿ ಇರುವುದನ್ನು ನೋಡಿ!


  ಅಲ್ಲಿಗೆ ಹೋಗುವುದು ಹೇಗೆ ಮತ್ತು ಗಮನದಲ್ಲಿಡಬೇಕಾದ ಅಂಶ


  ನೀವು ಇದುವರೆಗೂ ಮೇಘಾಲಯಕ್ಕೆ ಹೋಗಿಲ್ಲವಾದರೆ, ಭೇಟಿ ನೀಡಲು ಇದಕ್ಕಿಂತ ಪ್ರಶಸ್ತವಾದ ಸಮಯ ಇನ್ನೊಂದಿಲ್ಲ. ಆ ರಾಜ್ಯವು ತನಗೆ ರಾಜ್ಯ ಸ್ಥಾನಮಾನ ದೊರೆತ 50 ನೇ ವರ್ಷದ ಸಂಭ್ರಮಾಚರಣೆಯನ್ನು ಆಚರಿಸುತ್ತಿದೆ ಮತ್ತು ಪ್ರತಿಯೊಂದು ವಿಧದ ಪ್ರವಾಸಿಗರನ್ನು ಆಕರ್ಷಿಸಲು ಸಾಕಷ್ಟು ಅನುಭವಗಳನ್ನು ಒದಗಿಸುವ ವರ್ಷಪೂರ್ತಿ ನಡೆಯುವ ಸಂಭ್ರಮಾಚರಣೆಯಾಗಿದೆ. ಯೋಜನೆಯೊಂದನ್ನು ರೂಪಿಸಿ. ಲಿವಿಂಗ್ ರೂಟ್ ಬ್ರಿಡ್ಜ್‌ಗಳನ್ನು ನೋಡಿ, ಪವಿತ್ರ ತೋಪಿನಲ್ಲಿ ನಡೆದಾಡಿ, ಸ್ಥಳೀಯ ಆಹಾರವನ್ನು ಸವಿಯಿರಿ, ರಾಕ್ ಕನ್ಸರ್ಟ್‌ನಲ್ಲಿ ಭಾಗವಹಿಸಿ, ಪರಿಶುದ್ಧವಾದ ನೀರಿನಲ್ಲಿ ಈಜಾಡಿ ಅಥವಾ ವಿಜ್ಞಾನಿಗಳು ಮತ್ತು ಸಾಹಸಪ್ರಿಯನ್ನು ಸಮಾನವಾಗಿ ರೋಮಾಂಚನಗೊಳಿಸುವ ಗುಹೆಗಳ ರೋಚಕತೆಯನ್ನು ಅನ್ವೇಷಿಸಿ. ಯೋಜನೆಯನ್ನು ರೂಪಿಸಿ. ನಿಮಗಾಗಿ ಇಲ್ಲಿ ಏನೋ ಇದೆ. ಅದೂ ಅಲ್ಲದೆ, ಇದು ಮೇಘಾಲಯನ್ ಯುಗವಲ್ಲವೇ...

  Published by:Bhavana Kumari
  First published: