Health Tips| ಋತುಸ್ರಾವದ ದಿನಗಳಲ್ಲಿ ಮಹಿಳೆಯರು ಮಾಡಬಾರದ 7 ಯೋಗಾಸನಗಳು ಯಾವುವು..?

ಆಯುರ್ವೇದದಲ್ಲಿ ಕ್ಲಿಷ್ಟ ಆಸನಗಳನ್ನು ಅನುಸರಿಸಬಾರದು ಎಂಬ ಸಲಹೆಯನ್ನು ನೀಡಿದ್ದು ಈ ಸಮಯದಲ್ಲಿ ಶಕ್ತಿಯ ಹರಿವು ಕೆಳಮುಖವಾಗಿ ಹೋಗುವುದರಿಂದ ನಿಮ್ಮ ಕ್ಲಿಷ್ಟ ವ್ಯಾಯಾಮಗಳು ತೊಡಕನ್ನುಂಟು ಮಾಡಬಹುದು ಎಂದು ತಿಳಿಸಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ನಿಮ್ಮ ಋತುಚಕ್ರದ (Period) ಸಮಯದಲ್ಲಿ ಆದಷ್ಟು ವಿಶ್ರಾಂತಿ ತೆಗೆದುಕೊಳ್ಳು ವಂತೆ ಸಲಹೆ ನೀಡಲಾಗುತ್ತದೆ. ಈ ಸಮಯದಲ್ಲಿ ಕಿಬ್ಬೊಟ್ಟೆಯಲ್ಲಿ ನೋವು, ಸೊಂಟ ಹಾಗೂ ಹೊಟ್ಟೆಯಲ್ಲಿ ಸೆಳೆತವುಂಟಾಗುವುದು, ಬೆನ್ನು ನೋವು, ಅಧಿಕ ರಕ್ತಸ್ರಾವ ಹೀಗೆ ಮುಟ್ಟಿನ ದಿನಗಳಲ್ಲಿ ವಿಶ್ರಾಂತಿ ಅತ್ಯವಶ್ಯಕವಾಗಿರುತ್ತದೆ. ಆದರೆ ಯೋಗದಲ್ಲಿ (Yogasana) ಮುಟ್ಟಿನ ಸಮಯಗಳಲ್ಲಿ ಉಂಟಾಗುವ ನೋವು ಪರಿಹರಿಸಲು ಕೆಲವೊಂದು ಆಸನಗಳನ್ನು ಶಿಫಾರಸು ಮಾಡಲಾಗುತ್ತದೆ. ಇನ್ನು ಕೆಲವರು ಮುಟ್ಟಿನ ಸಮಯದಲ್ಲಿ ವ್ಯಾಯಾಮ ಹಾಗೂ ಇನ್ನಿತರ ದೈಹಿಕ ಕಸರತ್ತುಗಳನ್ನು ನಡೆಸಬಹುದು ಎಂದು ಹೇಳುತ್ತಾರೆ.

ಆದರೆ ಎಲ್ಲಾ ಬಗೆಯ ಆಸನಗಳನ್ನು ನೀವು ಋತುಸ್ರಾವದ ಸಮಯದಲ್ಲಿ ಅಭ್ಯಸಿಸಬಾರದು ಎಂಬುದನ್ನೇ ಇಂದಿನ ಲೇಖನದಲ್ಲಿ ತಿಳಿಸುತ್ತಿದ್ದೇವೆ. ಆಯುರ್ವೇದದಲ್ಲಿ ಕ್ಲಿಷ್ಟ ಆಸನಗಳನ್ನು ಅನುಸರಿಸಬಾರದು ಎಂಬ ಸಲಹೆಯನ್ನು ನೀಡಿದ್ದು ಈ ಸಮಯದಲ್ಲಿ ಶಕ್ತಿಯ ಹರಿವು ಕೆಳಮುಖವಾಗಿ ಹೋಗುವುದರಿಂದ ನಿಮ್ಮ ಕ್ಲಿಷ್ಟ ವ್ಯಾಯಾಮಗಳು ತೊಡಕನ್ನುಂಟು ಮಾಡಬಹುದು ಎಂದು ತಿಳಿಸಿದೆ. ಹಾಗಾಗಿ ಆದಷ್ಟು ದೇಹವನ್ನು ಉಲ್ಲಸಿತಗೊಳಿಸುವ ವ್ಯಾಯಾಮಗಳಿಗೆ ಆದ್ಯತೆ ನೀಡಬೇಕಾಗುತ್ತದೆ.

ಇಂದಿನ ಲೇಖನದಲ್ಲಿ ಯಾವೆಲ್ಲಾ ಆಸನಗಳನ್ನು ಋತುಸ್ರಾವದ ದಿನಗಳಲ್ಲಿ ಮಾಡಬಾರದು ಎಂಬುದನ್ನು ತಿಳಿದುಕೊಳ್ಳೋಣ.

1. ಅಧೋಮುಖ ವೃಕ್ಷಾಸನ:

ಅತ್ಯಂತ ಶಕ್ತಿಯುತವಾದ ಯೋಗಭಂಗಿ ಇದಾಗಿದ್ದು ನಿಮ್ಮ ಋತುಸ್ರಾವದ ದಿನಗಳಲ್ಲಿ ನೀವು ಮಾಡಬಾರದ ಕ್ಲಿಷ್ಟ ಆಸನವಾಗಿದೆ.

2. ಶೀರ್ಷಾಸನ:

ನಿಮ್ಮ ಯೋಗ ತರಗತಿಯಲ್ಲಿ ಈ ಆಸನವನ್ನು ಬೇರೆಯವರು ಅನುಸರಿಸುತ್ತಿದ್ದರೆ ನೀವು ಸುಪ್ತಬದ್ಧ ಕೋನಾಸನವನ್ನು ಪ್ರಯತ್ನಿಸಬಹುದು. ನಿಮ್ಮ ಕಾಲುಗಳನ್ನು ಜೊತೆಯಾಗಿಸಿ ಬೆನ್ನಿನ ಮೇಲೆ ಮಲಗುವ ಸುಪ್ತಬದ್ಧ ಕೋನಾಸನ ಹೆಚ್ಚು ಆರಾಮ ನೀಡುತ್ತದೆ.

3. ಸರ್ವಾಂಗಾಸನ:

ಋತುಸ್ರಾವದ ದಿನಗಳಲ್ಲಿ ಸರ್ವಾಂಗಾಸನದ ಬದಲಿಗೆ ಕಾಲುಗಳನ್ನು ಗೋಡೆಗೆ ಆಧಾರವಾಗಿಟ್ಟುಕೊಂಡು ಈ ಆಸನದ ಸರಳ ವಿಧಾನ ಪ್ರಯತ್ನಿಸಬಹುದು. ಸೊಂಟವನ್ನು ಮೇಲಕ್ಕೆತ್ತದೆ ಗರ್ಭಾಶಯಕ್ಕೆ ಒತ್ತಡ ನೀಡದೆ ಆಸನವನ್ನು ಅನುಸರಿಸಬಹುದು.

4. ಹಾಲಾಸನ:

ಈ ಆಸನದಲ್ಲಿ ತಲೆಕೆಳಗಾಗುವ ಭಂಗಿಯಲ್ಲಿರುವುದರಿಂದ ಗರ್ಭಾಶಯದಲ್ಲಿನ ರಕ್ತನಾಳಗಳು ಉಬ್ಬುತ್ತವೆ. ಹೀಗಾಗಿ ಹೆಚ್ಚಿನ ರಕ್ತಸ್ರಾವ ಉಂಟಾಗುತ್ತದೆ.

5. ವೃಶ್ಚಿಕಾಸನ:

ನಿಮ್ಮ ರಕ್ತದ ಹರಿಯುವಿಕೆಯನ್ನು ತಪ್ಪಾದ ವಿಧಾನದಲ್ಲಿ ಕಳುಹಿಸುವುದರ ಜೊತೆಗೆ ನಿಮ್ಮ ಬೆನ್ನಿಗೆ ಈ ಆಸನ ತೀವ್ರ ಒತ್ತಡವನ್ನುಂಟು ಮಾಡಬಹುದು. ಇದು ಋತುಸ್ರಾವದ ಸಮಯದಲ್ಲಿ ಸೂಕ್ತವಾದ ಚಟುವಟಿಕೆಯಲ್ಲ.

6. ಬಕಾಸನ:

ಬಕಾಸನದಲ್ಲಿ ನಿಮ್ಮ ಹೊಟ್ಟೆ ಲಾಕ್ ಮಾಡುವ ಅಗತ್ಯವಿರುತ್ತದೆ. ಇದು ದೇಹದಲ್ಲಿ ಶಾಖ ಉತ್ಪಾದನೆ ಹೆಚ್ಚಿಸುತ್ತದೆ ಹಾಗೂ ತೀವ್ರ ರಕ್ತಸ್ರಾವಕ್ಕೆ ಕಾರಣವಾಗುತ್ತದೆ.

7. ಧನುರಾಸನ:

ಈ ಸಮಯದಲ್ಲಿ ಕಾಡುವ ನೋವನ್ನು ಶಮನ ಮಾಡಲು ಬಿಲ್ಲಿನಾಕಾರ ಉಪಯುಕ್ತವಾಗಿದ್ದರೂ ಋತುಸ್ರಾವದಲ್ಲಿ ಈ ಆಸನವು ಬೆನ್ನಿನ ಮೇಲೆ ತೀವ್ರ ಒತ್ತಡ ಹಾಕಬಹುದು. ಹಾಗಾಗಿ ಈ ಆಸನವನ್ನು ಋತುಸ್ರಾವದ ದಿನಗಳಲ್ಲಿ ಮಾಡದೇ ಇರುವುದು ಉತ್ತಮವಾಗಿದೆ.

ಯೋಗದ ಪ್ರಧಾನ ಅಂಶವು ನಿಮ್ಮ ದೇಹಕ್ಕೆ ಧ್ವನಿಯಾಗುವುದಾಗಿದೆ. ಅಂದರೆ ನಿಮ್ಮ ದೇಹವು ನೋವಿನಿಂದ ಬಳಲುತ್ತಿದ್ದರೆ ಯೋಗಾಭ್ಯಾಸಗಳನ್ನು ಮಾಡಬಾರದು ಎಂದು ತಿಳಿಸಲಾಗಿದೆ. ಅದೇ ರೀತಿ ಯೋಗದ ಯಾವುದೇ ಆಸನ ನಿಮಗೆ ನೋವುಂಟು ಮಾಡಬಾರದು ಎಂಬ ಸಲಹೆಯನ್ನೂ ತಿಳಿಸಲಾಗಿದೆ.

ಇದನ್ನೂ ಓದಿ: Ayurvedic Remedies: ಕೀಲು ನೋವಿನಿಂದ ಬಳಲುತ್ತಿದ್ದೀರಾ..? ಆಯುರ್ವೇದದಲ್ಲಿದೆ ಇದಕ್ಕೆ ಸೂಕ್ತ ಪರಿಹಾರ

ಈ ಸಮಯದಲ್ಲಿ ಯಾವ ಆಸನಗಳನ್ನು ಮಾಡಿದರೆ ಉತ್ತಮ ಎಂಬುದರ ಕುರಿತು ನಿಮ್ಮ ಯೋಗ ಶಿಕ್ಷಕರೊಂದಿಗೆ ಚರ್ಚಿಸಿ. ಋತುಸ್ರಾವದ ನೋವುಗಳನ್ನು ನಿವಾರಿಸುವ ಕೆಲವೊಂದು ಆಸನಗಳನ್ನು ಯೋಗದಲ್ಲಿ ಶಿಫಾರಸು ಮಾಡಲಾಗಿದ್ದು ಅವುಗಳನ್ನು ಪ್ರಯತ್ನಿಸಬಹುದಾಗಿದೆ.
First published: