ಈ ಮಧುಮೇಹ (Diabetes) ಅಥವಾ ರಕ್ತದಲ್ಲಿನ ಅಧಿಕ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಿಕೊಳ್ಳದೆ ಅಥವಾ ನಿಯಂತ್ರಿಸಿಕೊಳ್ಳದೆ ಹೋದಲ್ಲಿ ಇದು ಮುಂದೆ ಅನೇಕ ಗಂಭೀರ ಆರೋಗ್ಯ ಸಮಸ್ಯೆಗಳಿಗೆ (Health Problems) ದಾರಿ ಮಾಡಿಕೊಡುತ್ತದೆ ಅಂತ ವೈದ್ಯರು ಹೇಳುವುದನ್ನು ನಾವೆಲ್ಲಾ ಕೇಳಿರುತ್ತೇವೆ. ಅದರಲ್ಲೂ ಈ ಟೈಪ್ 2 ಮಧುಮೇಹ ಅನ್ನೋದು ಸಾಮಾನ್ಯವಾಗಿ ಕಳಪೆ ಜೀವನಶೈಲಿಯಿಂದ (Lifestyle) ಉಂಟಾಗುತ್ತದೆ. ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡಲು ನೀವು ಬಯಸಿದರೆ, ನಿಮ್ಮ ಆಹಾರದ ಬಗ್ಗೆ ವಿಶೇಷ ಗಮನ ಹರಿಸುವುದು ಅತ್ಯಗತ್ಯವಾಗುತ್ತದೆ. ಆರೋಗ್ಯ ಅಂತ ಬಂದರೆ ಅಲ್ಲಿ ಹಸಿರು ತರಕಾರಿಗಳ ಸೇವನೆಯು ಆರೋಗ್ಯಕ್ಕೆ ತುಂಬಾನೇ ಮುಖ್ಯವಾಗಿರುತ್ತವೆ.
ಆದರೆ ನೀವು ಮಧುಮೇಹವನ್ನು ಹೊಂದಿರುವಾಗ, ಎಲ್ಲಾ ತರಕಾರಿಗಳು ನಿಮಗೆ ತುಂಬಾನೇ ಉತ್ತಮವಾಗಿರುತ್ತವೆ ಅಂತ ಹೇಳುವುದಕ್ಕೆ ಆಗುವುದಿಲ್ಲ. ಕಡಿಮೆ ಕಾರ್ಬೋಹೈಡ್ರೇಟ್ ಗಳನ್ನು ಹೊಂದಿರುವ ತರಕಾರಿಗಳು ಸೂಕ್ತ ಅಂತ ಹೇಳ್ತಾರೆ ತಜ್ಞರು.
ಏಕೆಂದರೆ ತರಕಾರಿಗಳಲ್ಲಿ ಕಡಿಮೆ ಗ್ಲೈಸೆಮಿಕ್ ಸೂಚ್ಯಂಕ (ಕಡಿಮೆ ಗ್ಲೈಸೆಮಿಕ್ ಇಂಡೆಕ್ಸ್, ಅವರ ರಕ್ತದ ಸಕ್ಕರೆಯು ನಿಧಾನವಾಗುತ್ತದೆ) ಮತ್ತು ಕಡಿಮೆ ಗ್ಲೈಸೆಮಿಕ್ ಲೋಡ್ (ಆಹಾರವು ಅದನ್ನು ಸೇವಿಸಿದ ನಂತರ ವ್ಯಕ್ತಿಯ ರಕ್ತದ ಗ್ಲುಕೋಸ್ ಮಟ್ಟವನ್ನು ಎಷ್ಟು ಹೆಚ್ಚಿಸುತ್ತದೆ ಎಂದು ಅಂದಾಜು ಮಾಡುವ ಸಂಖ್ಯೆ) ಅನ್ನು ನೋಡಬೇಕಾಗುತ್ತದೆ. ಈ ರೀತಿಯ 7 ತರಕಾರಿಗಳ ಬಗ್ಗೆ ತಿಳಿದುಕೊಳ್ಳೋಣ ಬನ್ನಿ.
1. ಕ್ಯಾರೆಟ್
ಕ್ಯಾರೆಟ್ ಗಳು ಪಿಷ್ಟವಲ್ಲದ ತರಕಾರಿಗಳ ಗುಂಪಿಗೆ ಸೇರಿವೆ ಮತ್ತು ಹೆಚ್ಚಿನ ರಕ್ತದ ಸಕ್ಕರೆಯನ್ನು ಹೊಂದಿರುವ ಜನರು ಇದನ್ನು ಸುರಕ್ಷಿತವಾಗಿ ಸೇವಿಸಬಹುದು. ಇವುಗಳಲ್ಲಿ ನಾರಿನಂಶ ಮತ್ತು ವಿಟಮಿನ್ ಎ ಸಮೃದ್ಧವಾಗಿದೆ ಮತ್ತು ಕಣ್ಣಿನ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಕ್ಯಾರೆಟ್ ಕಡಿಮೆ ಗ್ಲೈಸೆಮಿಕ್ ಸೂಚ್ಯಂಕವನ್ನು ಸಹ ಹೊಂದಿದೆ, ಇದು ಮಧುಮೇಹಿ ರೋಗಿಗಳಿಗೆ ಉತ್ತಮ ಆಯ್ಕೆಯಾಗಿದೆ.
2. ಅಣಬೆಗಳು
ಅಣಬೆಗಳು ಕಡಿಮೆ ಗ್ಲೈಸೆಮಿಕ್ ಇಂಡೆಕ್ಸ್ ಮತ್ತು ಗ್ಲೈಸೆಮಿಕ್ ಲೋಡ್ ಅಂಶದೊಂದಿಗೆ, ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸುವುದಿಲ್ಲ ಮತ್ತು ಇದು ಮಧುಮೇಹಿಗಳಿಗೆ ತುಂಬಾ ಒಳ್ಳೆಯದು. ಅಣಬೆಯು ಕಡಿಮೆ ಕ್ಯಾಲೋರಿ, ಕಡಿಮೆ ಕಾರ್ಬೋಹೈಡ್ರೇಟ್ ಆಹಾರವಾಗಿದ್ದು, ಮಧುಮೇಹ ಸ್ನೇಹಿ ಆಹಾರದ ಪಟ್ಟಿಯಲ್ಲಿ ಇದನ್ನು ಸೇರಿಸಲಾಗಿದೆ.
3. ಬ್ರೊಕೋಲಿ
ಇದು ಮಧುಮೇಹಿಗಳಿಗೆ ಮತ್ತೊಂದು ಮ್ಯಾಜಿಕ್ ತರಕಾರಿಯಾಗಿದೆ. ಅಗಿಯುವಾಗ ಅಥವಾ ಕತ್ತರಿಸಿದಾಗ, ಬ್ರೊಕೋಲಿ ಸಲ್ಫೊರಾಫೇನ್ ಎಂಬ ಸಸ್ಯ ಸಂಯುಕ್ತವನ್ನು ಉತ್ಪಾದಿಸುತ್ತದೆ, ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುತ್ತದೆ.
ಬ್ರೊಕೋಲಿ ಇನ್ಸುಲಿನ್ ಸಂವೇದನೆಯನ್ನು ಹೆಚ್ಚಿಸುತ್ತದೆ ಮತ್ತು ಗಮನಾರ್ಹವಾದ ಮಧುಮೇಹ ವಿರೋಧಿ ಗುಣಲಕ್ಷಣಗಳನ್ನು ಹೊಂದಿದೆ. ಆದ್ದರಿಂದ ನಿಮಗೆ ಮಧುಮೇಹವಿದ್ದರೆ, ನೀವು ಈ ತರಕಾರಿಯನ್ನು ಸೇವಿಸಬಹುದು.
4. ಎಲೆಕೋಸು
ಹೃದಯದ ಆರೋಗ್ಯದ ಮೇಲೆ ಧನಾತ್ಮಕ ಪರಿಣಾಮ ಬೀರುವ ವಿಟಮಿನ್ ಸಿ ಅಧಿಕವಾಗಿದ್ದು, ಮಧುಮೇಹ ಹೊಂದಿರುವ ಜನರಿಗೆ ಎಲೆಕೋಸು ಉತ್ತಮ ಆಯ್ಕೆಯಾಗಿದೆ. ನಾರಿನಂಶದಿಂದ ತುಂಬಿರುವ ಎಲೆಕೋಸುಗಳು ಆಹಾರದ ಜೀರ್ಣಕ್ರಿಯೆಯನ್ನು ನಿಧಾನಗೊಳಿಸುತ್ತವೆ ಮತ್ತು ಇದರಿಂದ ನಿಮ್ಮ ಸಕ್ಕರೆ ಮಟ್ಟವು ಏರುವುದನ್ನು ತಡೆಯುತ್ತದೆ.
ಇದನ್ನೂ ಓದಿ: ಹಾಲಿನ ಕೆನೆಯಲ್ಲಿ ಅಡಗಿದೆ ನಿಮ್ಮ ಸೌಂದರ್ಯದ ಗುಟ್ಟು
ಯುಎಸ್ ಡಿಪಾರ್ಟ್ಮೆಂಟ್ ಆಫ್ ಅಗ್ರಿಕಲ್ಚರ್ ಪ್ರಕಾರ, ಒಂದು ಕಪ್ ಕಚ್ಚಾ, ಕತ್ತರಿಸಿದ ಎಲೆಕೋಸು ಸುಮಾರು 5 ಗ್ರಾಂ ಕಾರ್ಬೋಹೈಡ್ರೇಟ್ ಅನ್ನು ಹೊಂದಿರುತ್ತದೆ, ಇದು ಕಡಿಮೆ ಕಾರ್ಬೋಹೈಡ್ರೇಟ್ ತರಕಾರಿಯಾಗಿದೆ.
5. ಹೂಕೋಸು
ಎಲೆಕೋಸಿನಂತೆಯೇ, ಹೂಕೋಸು ಸಹ ಕಡಿಮೆ ಕಾರ್ಬೋಹೈಡ್ರೇಟ್ ತರಕಾರಿಯಾಗಿದೆ, ಇದನ್ನು ಮಧುಮೇಹಿಗಳು ತಮ್ಮ ಆಹಾರದಲ್ಲಿ ಸುರಕ್ಷಿತವಾಗಿ ಸೇರಿಸಿಕೊಳ್ಳಬಹುದು.
ಯುಎಸ್ಡಿಎ ಪೋಷಕಾಂಶ ದತ್ತಾಂಶ ಪ್ರಯೋಗಾಲಯದ ಪ್ರಕಾರ, 1 ಕಪ್ ಕಚ್ಚಾ ಅಥವಾ ಬೇಯಿಸಿದ ಹೂಕೋಸು ಸುಮಾರು 5 ಗ್ರಾಂ ಕಾರ್ಬೋಹೈಡ್ರೇಟ್ ಗಳನ್ನು ಹೊಂದಿರುತ್ತದೆ.
ಹೂಕೋಸುಗಳು ಕಡಿಮೆ ಜಿಐ ಮತ್ತು ಕಡಿಮೆ ಗ್ಲೈಸೆಮಿಕ್ ಲೋಡ್ ಅನ್ನು ಹೊಂದಿರುತ್ತವೆ, ಅಂದರೆ ಅದು ಕ್ರಮೇಣ ಜೀರ್ಣವಾಗುತ್ತದೆ, ಇದರಿಂದಾಗಿ ರಕ್ತದಲ್ಲಿನ ಸಕ್ಕರೆಯ ನಿರ್ವಹಣೆಯನ್ನು ಉತ್ತೇಜಿಸುತ್ತದೆ.
6. ಪಾಲಕ್ ಸೊಪ್ಪು
ಪಾಲಕ್ ಸೊಪ್ಪು ನಾರಿನಂಶ ಮತ್ತು ವಿಟಮಿನ್ ಎ, ಬಿ, ಸಿ, ಇ ಮತ್ತು ಕೆ ಗಳ ಉತ್ತಮ ಮೂಲವಾಗಿದೆ, ಇದರಿಂದಾಗಿ ಮಧುಮೇಹ ರೋಗಿಗಳಿಗೆ ಇದು ಸುರಕ್ಷಿತ ಮತ್ತು ಆರೋಗ್ಯಕರ ಆಯ್ಕೆಯಾಗಿದೆ.
ಇದು ಸಕ್ಕರೆಯು ನಿಧಾನವಾಗಿ ಚಯಾಪಚಯಗೊಳ್ಳುತ್ತದೆ ಎಂದು ಖಚಿತಪಡಿಸುತ್ತದೆ ಮತ್ತು ಆದ್ದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟಗಳಲ್ಲಿನ ಏರಿಕೆಯನ್ನು ಸಹ ತಡೆಯುತ್ತದೆ.
7. ಟೊಮೆಟೊ
ಕ್ಯಾರೆಟ್ ಗಳಂತೆ, ಟೊಮೆಟೊಗಳು ಪಿಷ್ಟವಿಲ್ಲದ ತರಕಾರಿಗಳಾಗಿದ್ದು, ಇದನ್ನು ಹೆಚ್ಚಿನ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೊಂದಿರುವ ರೋಗಿಗಳಿಗೆ ಒಳ್ಳೆಯದು ಎಂದು ಪರಿಗಣಿಸಲಾಗುತ್ತದೆ.
ಇದನ್ನೂ ಓದಿ: ನಂಬಿ ಕೆಟ್ಟವರಿಲ್ಲವೋ ಈ ಮಣ್ಣನ್ನು, ಇದೇ ಭೂಮಿಯ ಉಸಿರು
ಯುಎಸ್ಡಿಎ ಪ್ರಕಾರ, ಒಂದು ಮಧ್ಯಮ ಸಂಪೂರ್ಣ ಟೊಮೆಟೊ ಸುಮಾರು 5 ಗ್ರಾಂ ಕಾರ್ಬೋಹೈಡ್ರೇಟ್ ಗಳನ್ನು ಹೊಂದಿರುತ್ತದೆ ಮತ್ತು ಕಡಿಮೆ ಜಿಐ ಮೌಲ್ಯವನ್ನು ಹೊಂದಿದೆ. ಆದ್ದರಿಂದ ಮಧುಮೇಹಿಗಳು ಇದನ್ನು ಸುಲಭವಾಗಿ ತಮ್ಮ ಆಹಾರದಲ್ಲಿ ಸೇರಿಸಿಕೊಳ್ಳಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ