ಚಳಿಗಾಲ (Winter Season) ಬಂತೆಂದರೆ ಸಾಕು ಅನೇಕ ಚಿಕ್ಕ-ಪುಟ್ಟ ಕಾಯಿಲೆಗಳು ನಮ್ಮನ್ನು ಬೆಂಬಿಡದೇ ಕಾಡಲು ಶುರು ಮಾಡುತ್ತವೆ ಅಂತ ಹೇಳಬಹುದು. ಸಾಮಾನ್ಯವಾಗಿ ನಮಗೆ ಮೂಗು (Nose) ಕಟ್ಟುವುದು, ಶೀತ (Cold) ಆಗುವುದು, ಅತಿಯಾಗಿ ಕೆಮ್ಮುವುದು (Cough) ಹೀಗೆ ಚಳಿಗಾಲದಲ್ಲಿ ನಮ್ಮನ್ನು ಕಾಡುವ ಸಮಸ್ಯೆಗಳು ಒಂದೇ, ಎರಡೇ ಅನೇಕ ಸಮಸ್ಯೆಗಳು ಅಂತ ಹೇಳಬಹುದು. ಚಿಕ್ಕ ಮಕ್ಕಳಿಂದ ಹಿಡಿದು ವಯೋ ವೃದ್ದರವರೆಗೆ ಈ ಆರೋಗ್ಯ ತೊಡಕುಗಳು (Health Problem) ಸರ್ವೇ ಸಾಮಾನ್ಯವಾಗಿರುತ್ತವೆ ಅಂತ ಹೇಳಬಹುದು. ಈ ನೆಗಡಿ ಮತ್ತು ಕೆಮ್ಮು ಜನರನ್ನು ತುಂಬಾನೇ ಕಿರಿಕಿರಿ ಗೊಳಿಸುತ್ತವೆ ಅಂತ ಹೇಳಬಹುದು.
ಅದರಲ್ಲೂ ಈ ಮೂಗಿನ ದಟ್ಟಣೆ ಅಥವಾ ಮೂಗು ಕಟ್ಟುವುದು ಶೀತ, ಜ್ವರ ಮತ್ತು ಇತರ ಋತುಮಾನದ ಅಲರ್ಜಿಗಳ ಸಾಮಾನ್ಯ ಲಕ್ಷಣಗಳಲ್ಲಿ ಒಂದಾಗಿದೆ. ಚಳಿಗಾಲದಲ್ಲಿ ಮಾಲಿನ್ಯ, ಪರಾಗ ಮತ್ತು ತಂಪಾದ ಹವಾಮಾನದೊಂದಿಗೆ ಈ ಸಮಸ್ಯೆ ತುಂಬಾ ಸಾಮಾನ್ಯವಾಗಿದೆ. ಮೂಗಿನ ದಟ್ಟಣೆಯು ತನ್ನಷ್ಟಕ್ಕೆ ತಾನೇ ತೊಂದರೆಗೀಡಾಗಬಹುದು, ಆದರೆ ಇದು ತಲೆನೋವು, ಜ್ವರ ಮತ್ತು ಇತರ ಸಮಸ್ಯೆಗಳಿಗೆ ಕಾರಣವಾಗಬಹುದು.
ರೋಗಲಕ್ಷಣಗಳನ್ನು ನಿವಾರಿಸಲು ಔಷಧಿಗಳು ಮತ್ತು ಕೆಮ್ಮಿನ ಸಿರಪ್ ಗಳು ಲಭ್ಯವಿದ್ದರೂ, ತಡೆಗಟ್ಟುವ ಕ್ರಮಗಳನ್ನು ತೆಗೆದುಕೊಳ್ಳುವುದಕ್ಕಿಂತ ಉತ್ತಮವಾದುದು ಇನ್ನೊಂದಿಲ್ಲ. ಹೀಗೆ ನಿಮಗೆ ನೆಗಡಿ ಮತ್ತು ಕೆಮ್ಮು ಇದ್ದಾಗ ಕೆಲವು ಆಹಾರ ಪದಾರ್ಥಗಳಿಂದ ನೀವು ಸ್ವಲ್ಪ ದೂರವಿರುವುದು ಒಳ್ಳೆಯದು ಎಂದು ತಜ್ಞರು ಹೇಳುತ್ತಾರೆ.
ಶೀತ ಮತ್ತು ಕೆಮ್ಮಿನಿಂದ ಬಳಲುತ್ತಿರುವಾಗ ಈ ಆಹಾರಗಳಿಂದ ದೂರವಿರಿ:
ದುರ್ಬಲ ರೋಗನಿರೋಧಕ ವ್ಯವಸ್ಥೆ ಮತ್ತು ವೈರಸ್ ಗಳು ಶೀತ ಹವಾಮಾನದಲ್ಲಿ ನಿಮ್ಮ ಆರೋಗ್ಯವನ್ನು ಇನ್ನಷ್ಟು ಹದಗೆಡಿಸಬಹುದು. ಶೀತ ಮತ್ತು ಕೆಮ್ಮನ್ನು ಉಲ್ಬಣಗೊಳಿಸುತ್ತವೆ ಈ ಆಹಾರ ಪದಾರ್ಥಗಳು. ಅವು ಯಾವುವು ಅಂತ ಇಲ್ಲಿ ನೋಡಿಕೊಳ್ಳಿ.
1. ಡೈರಿ ಉತ್ಪನ್ನಗಳು
ಡೈರಿ ಉತ್ಪನ್ನಗಳ ಬಗ್ಗೆ ನಾವು ಇದುವರೆಗೂ ಎಲ್ಲಾ ಒಳ್ಳೆಯ ವಿಷಯಗಳನ್ನು ಕೇಳಿರುತ್ತೇವೆ. ಆದರೆ ನಿಮಗೆ ನೆಗಡಿ ಮತ್ತು ಕೆಮ್ಮು ಬಂದಾಗ ಮಾತ್ರ ನೀವು ಈ ಡೈರಿ ಉತ್ಪನ್ನಗಳ ಹತ್ತಿರಕ್ಕೂ ಸುಳಿದಾಡಬೇಡಿ ಅಂತ ಹೇಳುತ್ತಾರೆ ತಜ್ಞರು. ಡೈರಿ ಉತ್ಪನ್ನಗಳು ನಿಮ್ಮ ಶೀತವನ್ನು ಕಡಿಮೆ ಮಾಡುವ ಬದಲಿಗೆ ಅದನ್ನು ಇನ್ನಷ್ಟು ಹೆಚ್ಚಿಸುವ ಸಾಧ್ಯತೆಯಿರುತ್ತದೆ. ಇದು ನಿಮ್ಮ ದೇಹದಲ್ಲಿ ಹೆಚ್ಚು ಕಫ ಸಂಗ್ರಹವಾಗುವಂತೆ ಮಾಡುತ್ತದೆ.
2. ಕಾಫಿ ಮತ್ತು ಚಹಾ
ಕಾಫಿ, ಚಹಾ ಮತ್ತು ತಂಪು ಪಾನೀಯಗಳು ಎಲ್ಲಾ ಡ್ಯೂರೆಟಿಕ್ ಗಳಾಗಿವೆ ಮತ್ತು ನಿರ್ಜಲೀಕರಣಗೊಳ್ಳುತ್ತವೆ. ಇದು ಮೂಗಿನಲ್ಲಿ ಹೆಚ್ಚು ತೆಳ್ಳಗಿನ ಸಿಂಬಳ ಬರುವುದಕ್ಕೆ ಕಾರಣವಾಗಬಹುದು. ಶೀತ ಮತ್ತು ಕೆಮ್ಮು ಎರಡೂ ದುರ್ಬಲ ರೋಗನಿರೋಧಕ ಶಕ್ತಿಯನ್ನು ಉತ್ತೇಜಿಸುತ್ತದೆ.
3. ಎಣ್ಣೆಯಲ್ಲಿ ಕರಿದ ಜಂಕ್ ಫುಡ್
ಎಣ್ಣೆಯಲ್ಲಿ ಕರಿದ ಜಂಕ್ ಫುಡ್ ನಿಮ್ಮ ಸೊಂಟದ ಸುತ್ತಳತೆಯನ್ನು ಹೆಚ್ಚು ಮಾಡುವುದಲ್ಲದೆ, ನಿಮ್ಮ ಆರೋಗ್ಯ ವ್ಯವಸ್ಥೆಯಲ್ಲಿ ಶೀತ ಮತ್ತು ಕೆಮ್ಮಿಗೆ ಗಂಭೀರ ಕಾರಣವಾಗಬಹುದು. ಆದ್ದರಿಂದ ಶೀತ ಮತ್ತು ಕೆಮ್ಮಿನಿಂದ ಬಳಲುತ್ತಿರುವಾಗ ಈ ಜಂಕ್ ಫುಡ್ ಗಳಿಂದ ದೂರವಿರುವುದು ಒಳ್ಳೆಯದು.
4. ಹಿಸ್ಟಮೈನ್ ಸಾಂದ್ರ ಆಹಾರ
ಹಿಸ್ಟಮೈನ್ ಅಲರ್ಜಿಕಾರಕಗಳನ್ನು ತೆಗೆದುಹಾಕಲು ದೇಹಕ್ಕೆ ಸಹಾಯ ಮಾಡುತ್ತದೆ. ಅವಕಾಡೊ, ಅಣಬೆಗಳು, ಸ್ಟ್ರಾಬೆರಿಗಳು, ಡ್ರೈಫ್ರೂಟ್ಸ್, ವಿನೆಗರ್ ಮತ್ತು ಹುದುಗಿಸಿದ ಆಹಾರಗಳಿಂದ ಶೀತ ಮತ್ತು ಕೆಮ್ಮಿನಿಂದ ಬಳಲುತ್ತಿರುವಾಗ ಆದಷ್ಟು ದೂರವಿರುವುದು ಒಳ್ಳೆಯದು.
5. ಆಲ್ಕೋಹಾಲ್
ಆಲ್ಕೋಹಾಲ್ ಉರಿಯೂತಕ್ಕೆ ಕಾರಣವಾಗುತ್ತದೆ. ನಿಮ್ಮ ಬಿಳಿ ರಕ್ತ ಕಣಗಳನ್ನು ಮತ್ತಷ್ಟು ದುರ್ಬಲಗೊಳಿಸುತ್ತದೆ. ಇದರಿಂದ ನಿಮ್ಮ ದೇಹದ ಅನಾರೋಗ್ಯ ಬೇಗನೆ ವಾಸಿಯಾಗಲು ಕಷ್ಟವಾಗುತ್ತದೆ. ನೀವು ಅನಾರೋಗ್ಯದಿಂದ ಬಳಲುತ್ತಿರುವಾಗ ಆಲ್ಕೋಹಾಲ್ ಸೇವಿಸುವುದನ್ನು ತಪ್ಪಿಸುವುದು ಉತ್ತಮ.
ಇದನ್ನೂ ಓದಿ:Orange: ಹೆಣ್ಣಿನ ಸುಂದರ ಮುಖಕ್ಕೆ ಕಿತ್ತಳೆ ಸಿಪ್ಪೆ ಕಾರಣನಾ? ಚೆಂದದ ಹಣ್ಣಿನಲ್ಲಿದೆ ಅಂದದ ಗುಟ್ಟು!
6. ಸಕ್ಕರೆ ಪದಾರ್ಥಗಳು
ಸಕ್ಕರೆ ಪದಾರ್ಥಗಳು ಸಹ ಆಲ್ಕೋಹಾಲ್ ನಂತೆಯೇ ಉರಿಯೂತಕ್ಕೆ ಕಾರಣವಾಗುತ್ತದೆ ಮತ್ತು ದೇಹವನ್ನು ಇನ್ನಷ್ಟು ದುರ್ಬಲಗೊಳಿಸುತ್ತದೆ.
ಒಟ್ಟಿನಲ್ಲಿ ಹೇಳುವುದಾದರೆ, ನಿಮಗೆ ಆರೋಗ್ಯ ಸರಿಯಿರದೆ ಇದ್ದಾಗ ಕೂಡಲೇ ವೈದ್ಯರನ್ನು ಕಾಣುವುದು ಉತ್ತಮ ಎಂದು ಹೇಳಲಾಗುತ್ತದೆ. ಸ್ವಲ್ಪ ನಿಮ್ಮ ಡಯಟ್ ಅನ್ನು ಬದಲಾಯಿಸಿಕೊಳ್ಳುವುದರ ಮೂಲಕ ಈ ಚಳಿಗಾಲದ ಅಸ್ವಸ್ಥತೆಗಳ ವಿರುದ್ದ ಸಮರ್ಥವಾಗಿ ಹೋರಾಡಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ