Food Recipe: ಕಡಿಮೆ ಸಮಯದಲ್ಲಿ ತಯಾರಿಸಬಹುದಾದ 5 ಪಲ್ಯಗಳಿವು; ನೀವೂ ಟ್ರೈ ಮಾಡಿ ನೋಡಿ

ರುಚಿಕರ ಊಟ ಎಂದ ಕೂಡಲೇ ಬಿರಿಯಾನಿ, ಕಡಾಯ್ ಪನೀರ್ ಅಥವಾ ಬಟರ್ ಚಿಕನ್ ಮುಂತಾದ ಖಾದ್ಯಗಳೇ ಆಗಿರಬೇಕೆಂದಿಲ್ಲವಲ್ಲ. ದಿಢೀರಾಗಿ ತಯಾರಿಸಿದರೂ, ಅತ್ಯುತ್ತಮ ರುಚಿಯನ್ನು ನೀಡಬಲ್ಲ ಸಾಕಷ್ಟು ಖಾದ್ಯಗಳಿವೆ. ಸುಮ್ಮನೆ ಗಂಟೆಗಟ್ಟಲೆ ಅಡುಗೆ ಮನೆಯಲ್ಲಿ ನಿಂತು ಕಾಲು ನೋಯಿಸಿಕೊಳ್ಳುವ ಬದಲು, ಸುಲಭವಾಗಿ ಮತ್ತು ಬಹಳ ಬೇಗನೆ ಮಾಡುವ ಅಡುಗೆಯ ರೆಸಿಪಿಗಳನ್ನು ತಿಳಿದುಕೊಂಡಿದ್ದರೆ, ನಾಲಗೆಗೂ ಹಿತ, ದೇಹಕ್ಕೂ ಖುಷಿ. ಅಂತಹ ಕೆಲವು ದಿಢೀರ್ ಆಗಿ ಮಾಡಬಹುದಾದ ಪಲ್ಯಗಳ ರೆಸಿಪಿಗಳು ಇಲ್ಲಿವೆ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಕೆಲಸ ಮುಗಿಸಿಕೊಂಡು ಮನೆಗೆ (Home) ಬಂದಾಗ, ನಿತ್ಯವೂ ರಾತ್ರಿ ರುಚಿಕರವಾದ ಊಟ (Dinner) ಸೇವಿಸಲು ಸಿಕ್ಕರೆ ಎಷ್ಟು ಸಂತೋಷವಾಗುತ್ತದೆ ಅಲ್ಲವೇ? ಆದರೆ ದಿನವಿಡೀ ಹೊರಗೆ ದುಡಿದು ಬಂದು, ರಾತ್ರಿಯ ಊಟಕ್ಕೆ ಅಷ್ಟೆಲ್ಲಾ ತಯಾರಿ ಮಾಡುವುದು ತುಂಬಾ ಕಷ್ಟ. ಹಸಿದ ಹೊಟ್ಟೆಗೆ ದಿಢೀರ್ ಎಂದು ಊಟ ಬಿದ್ದರೆ ಸಾಕು ಎನ್ನುತ್ತದೆ ಹೆಚ್ಚಿನವರ ಮನಸ್ಸು. ರುಚಿಕರ ಊಟ ಎಂದ ಕೂಡಲೇ ಬಿರಿಯಾನಿ, ಕಡಾಯ್ ಪನೀರ್ ಅಥವಾ ಬಟರ್ ಚಿಕನ್ ಮುಂತಾದ ಖಾದ್ಯಗಳೇ ಆಗಿರಬೇಕೆಂದಿಲ್ಲವಲ್ಲ. ದಿಢೀರಾಗಿ ತಯಾರಿಸಿದರೂ, ಅತ್ಯುತ್ತಮ ರುಚಿಯನ್ನು (Taste) ನೀಡಬಲ್ಲ ಸಾಕಷ್ಟು ಖಾದ್ಯಗಳಿವೆ. ಸುಮ್ಮನೆ ಗಂಟೆಗಟ್ಟಲೆ ಅಡುಗೆ ಮನೆಯಲ್ಲಿ ನಿಂತು ಕಾಲು ನೋಯಿಸಿಕೊಳ್ಳುವ ಬದಲು, ಸುಲಭವಾಗಿ ಮತ್ತು ಬಹಳ ಬೇಗನೆ ಮಾಡುವ ಅಡುಗೆಯ ರೆಸಿಪಿಗಳನ್ನು (Recipe) ತಿಳಿದುಕೊಂಡಿದ್ದರೆ, ನಾಲಗೆಗೂ ಹಿತ, ದೇಹಕ್ಕೂ ಖುಷಿ. ಅಂತಹ ಕೆಲವು ದಿಢೀರ್ ಆಗಿ ಮಾಡಬಹುದಾದ ಪಲ್ಯಗಳ ರೆಸಿಪಿಗಳು ಇಲ್ಲಿವೆ.

ಕೇವಲ 30 ನಿಮಿಷಗಳಲ್ಲಿ ದಿಢೀರಾಗಿ ತಯಾರಿಸಬಹುದಾದ 5 ಪಲ್ಯಗಳು
1. ಪನೀರ್ ಬುರ್ಜಿ
ಎಲ್ಲಾ ವಯೋಮಾನದವರಿಗೆ ಇಷ್ಟವಾಗುವ ಖಾದ್ಯವಿದು. ಸಸ್ಯಹಾರಿಗಳಿಗಂತೂ ಪನೀರ್ ಬುರ್ಜಿ ತುಂಬಾ ಅಚ್ಚುಮೆಚ್ಚು. ಬಾಯಲ್ಲಿ ನೀರೂರಿಸುವ ಮಸಾಲೆಗಳೊಡನೆ, ಶುಂಠಿ, ಹಸಿ ಮೆಣಸಿನಕಾಯಿ, ಟೊಮ್ಯಾಟೋ, ಈರುಳ್ಳಿ, ಅರಶಿನ ಪುಡಿ, ಜೀರಿಗೆ, ಕೊತ್ತಂಬರಿ ಸೊಪ್ಪು, ಬೆಣ್ಣೆ ಮತ್ತು ಹಿಚುಕಿದ ಪನೀರ್ ತುಂಡುಗಳನ್ನು ಸೇರಿಸಿ ಮಾಡುವ ಈ ಪಲ್ಯವನ್ನು ಅನ್ನ, ಚಪಾತಿ, ದೋಸೆ ಇತ್ಯಾದಿಗಳ ಜೊತೆ ಸವಿಯಬಹುದು. ಪನೀರಿನಲ್ಲಿ ಅತ್ಯಧಿಕ ಪ್ರೊಟೀನ್ ಇರುತ್ತದೆ, ಆದ್ದರಿಂದ ಪನೀರ್ ಬುರ್ಜಿ ಅತ್ಯಂತ ಅರೋಗ್ಯಕರವೂ ಹೌದು.

2. ಲಸುಣಿ ಭಿಂಡಿ (ಬೆಳ್ಳುಳ್ಳಿ ಬೆಂಡೆಕಾಯಿ ಪಲ್ಯ)
ಬೇಸಿಗೆ ಕಾಲದಲ್ಲಿ ಬೆಂಡೆಕಾಯಿ ಯಥೇಚ್ಚವಾಗಿ ದೊರೆಯುವುದರಿಂದ ಬೆಂಡೆ ಕಾಯಿಗಳನ್ನು ಇಷ್ಟಪಡುವವರಿಗೆ ಸುಗ್ಗಿ. ಒಂದೇ ರೀತಿಯ ಬೆಂಡೆಕಾಯಿ ಪಲ್ಯಗಳನ್ನು ಮಾಡಿ ತಿಂದು ಬೋರಾಗಿದ್ದರೆ ಲಸುಣಿ ಭಿಂಡಿ ಮಾಡಿ ನೋಡಿ. ಬೆಂಡಕಾಯಿಗೆ ಬೆಳ್ಳುಳ್ಳಿಯ ಟ್ವಿಸ್ಟ್ ನೀಡಿ ತಯಾರಿಸುವ ಈ ಪಲ್ಯ ನಾಲಗೆಗೆ ಇಷ್ಟವಾಗುತ್ತದೆ. ಕತ್ತರಿಸಿದ ಬೆಂಡೆ ಕಾಯಿಗಳು, ಹಸಿರು ಮೆಣಸಿನಕಾಯಿ, ಅರಸಿನ ಪುಡಿ, ಚೆನ್ನಾಗಿ ಕತ್ತರಿಸಿದ ಬೆಳ್ಳುಳ್ಳಿ ತುಂಡುಗಳು, ಅಮಚೂರ್ ಪುಡಿ ಮತ್ತು ಗರಂ ಮಸಾಲವನ್ನು ಸೇರಿಸಿ ಮಾಡುವ ಪಲ್ಯ ರೋಟಿಯ ಜೊತೆ ತಿನ್ನಲು ಚೆನ್ನಾಗಿರುತ್ತದೆ.

3. ಮಾವಿನ ಹಣ್ಣಿನ ಪಲ್ಯ
ಕೇವಲ ಐದೇ ನಿಮಿಷಗಳಲ್ಲಿ ತಯಾರಿಸಬಹುದಾದ ಪಲ್ಯವಿದು. ಈ ಪಲ್ಯವನ್ನು ತಯಾರಿಸುವುದು ಎಷ್ಟು ಸುಲಭವೆಂದರೆ, ಅಡುಗೆ ಮಾಡಿ ಅಭ್ಯಾಸ ಇಲ್ಲದವರು ಕೂಡ ಯಾವುದೇ ಎಡವಟ್ಟಿಲ್ಲದೆ ಇದನ್ನು ತಯಾರಿಸಬಹುದು. ನೀವು ಮಾಡಬೇಕಾದದ್ದು ಇಷ್ಟೆ, ಮಾವಿನ ಹಣ್ಣಿನ ಸಣ್ಣ ಸಣ್ಣ ಹೋಳುಗಳಿಗೆ, ಚಾಟ್ ಮಸಾಲಾ, ಅಚ್ಚ ಖಾರದ ಪುಡಿ, ಅರಶಿನ , ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ, ಕಲೋಂಜಿ, ಮೆಂತೆ ಕಾಳು ಮತ್ತು ಜೀರಿಗೆಯ ಒಗ್ಗರಣೆ ಕೊಟ್ಟರಾಯಿತು. ಮಾವಿನ ಹಣ್ಣಿನ ಪಲ್ಯ ಸಿದ್ಧವಾಗುತ್ತದೆ.

4. ಬೂಂದಿಯ ಪಲ್ಯ
ಪ್ರತಿಯೊಬ್ಬರಿಗೂ ರಾಯಿತದಲ್ಲಿ ಬೂಂದಿ ಹಾಕಿಕೊಂಡು ಅಥವಾ ಹಾಗೆಯೇ ತಿಂದು ಅಭ್ಯಾಸವಿರುತ್ತದೆ. ಆದರೆ ಅದರಿಂದ ಪಲ್ಯವನ್ನು ಕೂಡ ಮಾಡಬಹುದು ಮತ್ತು ಅದು ಅತ್ಯಂತ ಸುಲಭ ಕೂಡ. ಬೂಂದಿಯ ಜೊತೆ, ಈರುಳ್ಳಿ, ಟೊಮ್ಯಾಟೋ, ಶುಂಠಿ ಬೆಳ್ಳುಳ್ಳಿ ಮಸಾಲಾ. ಅಚ್ಚಖಾರದ ಪುಡಿ, ಗರಂ ಮಸಾಲಾ, ಹಿಂಗ್, ಕೊತ್ತಂಬರಿ ಸೊಪ್ಪು ಮತ್ತು ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿ ಕೇವಲ 20 ನಿಮಿಷಗಳಲ್ಲಿ ತಯಾರಿಸಬಹುದಾದ ಪಲ್ಯವಿದು.

5. ಈರುಳ್ಳಿ ಪಲ್ಯ
ಮನೆಯಲ್ಲಿ ಈರುಳ್ಳಿಯನ್ನು ಹೊರತು ಪಡಿಸಿ ಬೇರೆಲ್ಲಾ ತರಕಾರಿಗಳು ಖಾಲಿಯಾಗಿವೆಯೇ? ಚಿಂತಿಸಬೇಡಿ, ಕೇವಲ ಈರುಳ್ಳಿಯಿಂದಲೇ ರುಚಿಕರ ಪಲ್ಯ ತಯಾರಿಸಬಹುದು. ಕೊತ್ತಂಬರಿ ಪುಡಿ, ಅಚ್ಚ ಖಾರದ ಪುಡಿ, ತುಪ್ಪ, ಶುಂಠಿ ಬೆಳ್ಳುಳ್ಳಿ , ಅರಶಿನ ಇತ್ಯಾದಿಗಳಿಗೆ ಮೊಸರನ್ನು ಸೇರಿಸಿ ತಯಾರಿಸುವ ಮಸಾಲೆಗೆ ಈರುಳ್ಳಿಗಳನ್ನು ಹಾಕಿ ಮಾಡುವ ಪಲ್ಯವಿದು.
Published by:Ashwini Prabhu
First published: