ಎಷ್ಟೋ ಬಾರಿ ನಮಗೆ ನಾವೇನು ತಪ್ಪು ಮಾಡದೇ ಇದ್ದರೂ ಸಹ ಆಫೀಸಿನಲ್ಲಿ (Office) ಮ್ಯಾನೇಜರ್ (Manager) ಮತ್ತು ಬಾಸ್ ಗಳಿಂದ (Boss) ತುಂಬಾನೇ ಕಿರಿಕಿರಿ ಅಂತ ಅನ್ನಿಸುವುದಕ್ಕೆ ಶುರುವಾಗುತ್ತದೆ. ಕೆಲವೊಬ್ಬರು ಮಾಡಿದ ತಪ್ಪನ್ನು ಸರಿಯಾಗಿ ಅರ್ಥ ಮಾಡಿಸಿ, ಉದ್ಯೋಗಿಗಳಿಂದ (Employees) ಕೆಲಸ ತೆಗೆದುಕೊಂಡರೆ, ಇನ್ನೂ ಕೆಲವರು ಉದ್ಯೋಗಿಗಳು ಮಾಡಿದ ಚಿಕ್ಕ-ಪುಟ್ಟ ತಪ್ಪುಗಳನ್ನು ತುಂಬಾನೇ ದೊಡ್ಡದಾಗಿ ಹೈಲೈಟ್ ಮಾಡಿ ಹೇಳುವುದು, ನಾಲ್ಕು ಜನರ ಮುಂದೆ ಅವಮಾನ ಮಾಡುವುದೆಲ್ಲವನ್ನು ಮಾಡುತ್ತಿರುತ್ತಾರೆ ಅಂತ ಹೇಳಬಹುದು. ಇನ್ನೂ ಕೆಲವರಂತೂ ಯಾವುದೇ ಕಾರಣವಿಲ್ಲದೇ ತಮ್ಮ ಕೈ ಕೆಳಗೆ ಕೆಲಸ ಮಾಡುತ್ತಿರುವ ಉದ್ಯೋಗಿಗಳಿಗೆ ಕೋಪ ಬರಲಿ ಅಂತ ಮನಸ್ಸಿಗೆ ಬೇಸರ ತರಿಸುವ ಕಾಮೆಂಟ್ಗಳನ್ನು ಮಾಡುತ್ತಾರೆ ಅಂತ ಹೇಳಬಹುದು. ಹೀಗೆ ಒಟ್ಟಿನಲ್ಲಿ ಕೆಲವೊಮ್ಮೆ ಆಫೀಸಿನಲ್ಲಿ ಕೂತು ಕೆಲಸ ಮಾಡುವುದು ಎಂದರೆ ಬೆಂಕಿ ಕೆಂಡದ ಮೇಲೆ ಬರಿಗಾಲಿನಿಂದ ನಡೆದಷ್ಟೇ ಹಿಂಸೆ ಆಗುತ್ತಿರುತ್ತದೆ.
ಅಂತಹ ಪೀಡಕ ಬಾಸ್ ಗಳ ಕೈ ಕೆಳಗೆ ಕೆಲಸ ಮಾಡುವುದು ಒಂದು ದೊಡ್ಡ ಸವಾಲಿನ ಕೆಲಸವೇ ಆಗಿರುತ್ತದೆ ಅಂತ ಹೇಳಿದರೆ ತಪ್ಪಾಗುವುದಿಲ್ಲ. ಯಾರಾದರೂ ನಮ್ಮ ತಪ್ಪು ಇರದೇ ಇದ್ದಾಗ ಕಾಮೆಂಟ್ ಮಾಡಿದರೆ ಕೆಟ್ಟ ಕೋಪ ಬರುತ್ತದೆ. ಹಾಗಂತ ನಾವು ಅವರ ಮೇಲೆ ಕೂಗಾಡುವ ಹಾಗಿಲ್ಲ ಅಂತ ತಿಳಿದು ನಾವು ಎಷ್ಟೋ ಬಾರಿ ಅವರು ಏನೇ ಕಾಮೆಂಟ್ ಮಾಡಿದರೂ, ಸುಮ್ಮನೆ ಕೆಲಸ ಮಾಡಿಕೊಂಡು ಹೋಗುತ್ತಿರುತ್ತೇವೆ. ಆದರೆ ಕೆಲವೊಮ್ಮೆ ನಮಗೂ ಆ ಕೋಪ ಹೇಗೆ ನಿಯಂತ್ರಿಸುವುದು ಅಂತ ತಿಳಿಯದೆ ಬಾಸ್ ಮೇಲೆ ಕೂಗಾಡುತ್ತೇವೆ ಮತ್ತು ಆ ಕೆಲಸವನ್ನು ಬಿಟ್ಟು ಬೇರೆ ಕೆಲಸವನ್ನು ಹುಡುಕಲು ಶುರು ಮಾಡುತ್ತೇವೆ.
ಕೆಲಸ ಮಾಡುವ ಸ್ಥಳದಲ್ಲಿ ಕೋಪವನ್ನು ನಿಯಂತ್ರಿಸಿಕೊಳ್ಳಲು ಹೀಗೆ ಮಾಡಿ
1. ಕೋಪ ತರಿಸುವ ಸಂಗತಿಗಳನ್ನು ಅರ್ಥಮಾಡಿಕೊಳ್ಳಬೇಕು ಮತ್ತು ಒಪ್ಪಿಕೊಳ್ಳಬೇಕು
ತಪ್ಪಿತಸ್ಥ ಬಾಸ್ ನೊಂದಿಗೆ ವ್ಯವಹರಿಸುವುದರಿಂದ ಹಿಡಿದು ಕಚೇರಿ ರಾಜಕೀಯದವರೆಗೆ, ನಿಮಗೆ ಯಾವ ಸಂಗತಿಗಳು ಹೆಚ್ಚು ಕೋಪ ತರಿಸುತ್ತವೆ ಅಂತ ಮೊದಲು ಅರ್ಥ ಮಾಡಿಕೊಳ್ಳಬೇಕು. ನಂತರ ಆ ಸಂಗತಿಗಳನ್ನು ಒಪ್ಪಿಕೊಳ್ಳುವುದನ್ನು ಕಲಿಯಬೇಕು. ಹೀಗೆ ಅರ್ಥ ಮಾಡಿಕೊಂಡು ಅವುಗಳನ್ನು ಒಪ್ಪಿಕೊಂಡಾಗ, ನಿಮಗೆ ಕೋಪ ಅಥವಾ ಸಿಟ್ಟು ಬರುವುದು ಕಡಿಮೆಯಾಗುತ್ತದೆ ಅಂತ ಹೇಳಬಹುದು.
2. ಕೋಪ ಬಂದಾಗ ಪದಗಳ ಮೇಲೆ ಹಿಡಿತವಿರಲಿ
ನಿಮಗೆ ಕೋಪ ಬಂದಾಗ, ತರ್ಕಬದ್ಧವಾಗಿ ಯೋಚಿಸುವುದು ಒಂದು ಸವಾಲಿನ ಕೆಲಸವಾಗಿದ್ದರೂ ಸಹ ನಿಮ್ಮ ಆಲೋಚನೆಗಳ ಮೇಲೆ ಸ್ವಲ್ಪ ಹಿಡಿತ ನಿಮಗಿರಲಿ. ವಾದ ವಿವಾದಗಳು ದೊಡ್ಡ ಜಗಳಗಳಾಗಿ ಪರಿವರ್ತನೆಗೊಳ್ಳುವುದಕ್ಕೂ ಮುಂಚಿತವಾಗಿಯೇ ಕೋಪವನ್ನು ನಿಯಂತ್ರಿಸಲು ನೋಡಿ. ಕೋಪ ಬಂದಾಗ ನೀವು ಎಚ್ಚರಿಕೆಯಿಂದ ಪದಗಳನ್ನು ಬಳಸಿರಿ. ಸ್ವಲ್ಪ ಸ್ವಯಂ ನಿಯಂತ್ರಣವು ದೊಡ್ಡ ಜಗಳಗಳಿಂದ ನಿಮ್ಮನ್ನು ಪಾರು ಮಾಡಬಹುದು ಎಂಬುದು ನೆನಪಿನಲ್ಲಿಡಿ.
3. ಮೊದಲು ನಿಮಗೆ ಬಂದ ಕೋಪವನ್ನು ನಿಯಂತ್ರಿಸಿಕೊಳ್ಳಿ
ನಿಮಗೆ ತುಂಬಾನೇ ಕೋಪ ಬಂದಿದ್ರೆ, ಮೊದಲು ಅದನ್ನು ಕಡಿಮೆ ಮಾಡಿಕೊಳ್ಳುವುದಕ್ಕೆ ಪ್ರಯತ್ನಿಸಿ. ತುಂಬಾ ಕೋಪ ಬಂದಾಗ, ಆಲೋಚನೆ ಮಾಡುವ ಶಕ್ತಿ ಕಡಿಮೆ ಆಗುತ್ತದೆ ಮತ್ತು ಬಾಯಿಗೆ ಬಂದದ್ದನ್ನ ಮಾತಾಡಲು ಶುರು ಮಾಡುತ್ತೇವೆ. ಹಾಗಾಗಿ ಮೊದಲು ಕೋಪವನ್ನು ನಿಯಂತ್ರಿಸಿಕೊಳ್ಳುವುದು ತುಂಬಾನೇ ಮುಖ್ಯವಾಗುತ್ತದೆ. ನಿಮಗೆ ತುಂಬಾ ಕೋಪ ಬಂದರೆ, ಅಲ್ಲಿಂದ ಮೊದಲು ಎದ್ದು ಬೇರೆ ಕಡೆಗೆ ಹೋಗುವುದು ಒಳ್ಳೆಯದು.
4. ಕೋಪದ ಭಾವನೆ ನಿಮ್ಮನ್ನು ಕಿರಿಕಿರಿಗೊಳಿಸಲು ಬಿಡಬೇಡಿ
ನಿಮಗೆ ಕೋಪ ಬಂದಾಗ ಆ ಅಹಿತಕರ ಭಾವನೆಯ ಜೊತೆಗೆ ನೀವು ಇರಬೇಡಿ, ಅದನ್ನು ಮೊದಲು ಶಾಂತಗೊಳಿಸಿಕೊಳ್ಳಲು ಪ್ರಯತ್ನಿಸಿ. ಯಾವುದೇ ಪ್ರಮುಖವಾದ ನಿರ್ಧಾರ ತೆಗೆದುಕೊಳ್ಳುವ ಮುಂಚೆ ಸ್ವಲ್ಪ ಸಮಯವನ್ನು ತೆಗೆದುಕೊಳ್ಳಿ ಮತ್ತು ಕೂಡಲೇ ಪ್ರತಿಕ್ರಿಯಿಸಬೇಡಿ. ಕೋಪ ನಿಮ್ಮ ದೇಹದ ಆರೋಗ್ಯವನ್ನು ಹದಗೆಡಿಸುತ್ತದೆ, ಹಾಗಾಗಿ ಆ ಅಹಿತಕರ ಭಾವನೆಗಳಿಂದ ಮೊದಲು ಹೊರಗೆ ಬರಲು ಪ್ರಯತ್ನಿಸಿ.
ಇದನ್ನೂ ಓದಿ: Work Pressure: ನಿಮಗೆ ನೀವು ಮಾಡುವ ಕೆಲಸ ಇಷ್ಟ ಆಗ್ತಾ ಇಲ್ವಾ? ಹಾಗಾದ್ರೆ ಈ ರೀತಿ ಮಾಡಿ
5. ನಿಮಗೆ ಕೋಪ ತರಿಸಿದ ಸಂಗತಿಗಳನ್ನು ಒಂದು ಕಡೆ ಬರೆಯಿರಿ
ನಕಾರಾತ್ಮಕ ಭಾವನೆಗಳನ್ನು ಹೊರಹಾಕುವ ಪ್ರಚೋದನೆಯನ್ನು ತಡೆಯಲು ನಿಮಗೆ ಸಾಧ್ಯವಾಗದಿದ್ದರೆ, ಅದನ್ನು ಲಿಖಿತವಾಗಿ ಬರೆಯಲು ಶುರು ಮಾಡಿ. ನಿಮ್ಮ ತಲೆಯಿಂದ ಆ ಕೋಪ ಕಾಗದ ಅಥವಾ ಇತರ ಯಾವುದೇ ಲಿಖಿತ ರೂಪಕ್ಕೆ ವರ್ಗಾಯಿಸುವುದು ಒಳ್ಳೆಯದು. ಹೀಗೆ ಮಾಡುವುದರಿಂದ ನಿಮ್ಮ ಆ ಕೋಪ ಮನಸ್ಸಿನಿಂದ ಹೊರಗೆ ಹೋಗುತ್ತದೆ. ಅಷ್ಟೇ ಅಲ್ಲದೆ ನಡೆದಿರುವ ಘಟನೆಯನ್ನು ಇನ್ನೂ ಚೆನ್ನಾಗಿ ಅರ್ಥ ಮಾಡಿಕೊಳ್ಳಲು ಮತ್ತು ಉತ್ತಮ ರೀತಿಯಲ್ಲಿ ವ್ಯವಹರಿಸಲು ಸಹಾಯ ಮಾಡುತ್ತದೆ. ಆದರೆ ಹಾಗೆ ಬರೆದಿದ್ದನ್ನು ಯಾವುದೇ ಸಂದರ್ಭದಲ್ಲೂ ನೀವು ಅದನ್ನು ನಿಮ್ಮ ಕೋಪಕ್ಕೆ ಕಾರಣವಾದ ವ್ಯಕ್ತಿಗೆ ಕಳುಹಿಸಬೇಡಿ ಅಷ್ಟೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ