ಕಾರ್ಗಿಲ್ ವಿಜಯ ದಿವಸ್: ಇದು ಮರೆಯಲ್ಲೇ ಉಳಿದು ಹೋದ ವೀರ ಯೋಧರ ಕಥೆ..!

Kargil Vijay Diwas 2019: ಇವರ ಹೋರಾಟಕ್ಕೆ ಗೌರವಾರ್ಥಕವಾಗಿ ಮಹಾವೀರ ಚಕ್ರ ನೀಡಲಾಯಿತು. ಹುತಾತ್ಮರಿಗೆ ನೀಡುವ ಮಹಾವೀರ ಚಕ್ರ ಪ್ರಶಸ್ತಿಯನ್ನು ಮರಣಕ್ಕಿಂತ ಮುಂಚಿತವಾಗಿ ಪಡೆದ ಏಕೈಕ ಸೈನಿಕ ಎಂಬ ಕೀರ್ತಿ ದಿಜೇಂದ್ರ ಕುಮಾರ್​ ಅವರ ಪಾಲಾಯಿತು.

zahir | news18
Updated:July 26, 2019, 3:00 PM IST
ಕಾರ್ಗಿಲ್ ವಿಜಯ ದಿವಸ್: ಇದು ಮರೆಯಲ್ಲೇ ಉಳಿದು ಹೋದ ವೀರ ಯೋಧರ ಕಥೆ..!
Kargil Vijay Diwas
  • News18
  • Last Updated: July 26, 2019, 3:00 PM IST
  • Share this:
1999ರ ಮೇ 9ರಂದು ಭಾರತದ ಗಡಿಯೊಳಗೆ ಪಾಕಿಸ್ತಾನದ ಸೈನಿಕರು ನುಗ್ಗಿದ್ದರು. ಜಮ್ಮು ಕಾಶ್ಮೀರವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುವ ಪ್ರತಿಜ್ಞೆಯೊಂದಿಗೆ ಪಾಕ್ ​ ಸೈನಿಕರು ದಾಳಿ ಪ್ರಾರಂಭಿಸಿದ್ದರು. ಆದರೆ ಕದನ ವಿರಾಮದಲ್ಲಿದ್ದ ಇಂಡಿಯನ್ ಆರ್ಮಿ ಸರ್ಕಾರದ ಆದೇಶಕ್ಕೆ ಕಾಯುತ್ತಿದ್ದರು. ಅಷ್ಟರಲ್ಲಿ ನುಸುಳುಕೋರರು ಕೂಡ ಕಾರ್ಗಿಲ್ ಮತ್ತು ಲಡಾಖ್ ಭಾಗಕ್ಕೆ ತಲುಪಿಯಾಗಿತ್ತು.

ಶಾಂತಿ ಪ್ರಿಯ ದೇಶವೆಂದು ಖ್ಯಾತಿ ಪಡೆದಿರುವ ಭಾರತಕ್ಕೆ ಯುದ್ದ ಅನಿವಾರ್ಯವಾಗಿತ್ತು. ಅಂದು ಭಾರತದ ಪ್ರಧಾನಿಯಾಗಿದ್ದ ಅಟಲ್ ಬಿಹಾರಿ ವಾಜಪೇಯಿ ಸೇನಾಧಿಕಾರಿಗೆ ಯುದ್ಧ ಘೋಷಿಸಲು ಸೂಚಿಸಿತ್ತು. ಹಿರಿಯ ಅಧಿಕಾರಿಗಳ ಆದೇಶದಂತೆ ಕಾರ್ಗಿಲ್ ಬೆಟ್ಟ ಪ್ರದೇಶಕ್ಕೆ ಭಾರತೀಯ ಸೈನಿಕರು ತೆರಳಿದರು. ಇಡೀ ದೇಶವೇ ಸೈನಿಕರ ಬೆಂಬಲಕ್ಕೆ ನಿಂತಿತ್ತು. ಬೆಟ್ಟ ಗುಡ್ಡ ಪ್ರದೇಶದಲ್ಲಿ ಜೀವದ ಹಂಗು ತೊರೆದು ನಮ್ಮ ಯೋಧರು ರಣರಂಗದಲ್ಲಿ ಹೋರಾಡಿದರು.

ಮೇ ತಿಂಗಳಿಂದ ಪ್ರಾರಂಭವಾದ ಯುದ್ಧ ಜುಲೈ ತಿಂಗಳವರೆಗೆ ನಡೆಯಿತು. ಯುದ್ದದಲ್ಲಿ ಭಾರತೀಯ 530 ಯೋಧರು ಹುತಾತ್ಮರಾದರು. ತಮ್ಮ ಜೀವವನ್ನೆ ಪಣಕಿಟ್ಟು ಕೊನೆಗೂ ಇಂಡಿಯನ್ ಆರ್ಮಿ ಜುಲೈ 14ರಂದು ವಿಜಯದ ಪಾತಕೆ ಹಾರಿಸಿದರು. ಜಲೈ26 ರಂದು ಉಗ್ರರನ್ನು ಮತ್ತು ಪಾಕ್​ ಸೈನಿಕರನ್ನು ಭಾರತಾಂಬೆಯ ಮಡಿಲಿಂದ ಹಿಮ್ಮೆಟ್ಟಿಸಿದ ಇಂಡಿಯನ್ ಆರ್ಮಿ ಅಧಿಕೃತವಾಗಿ ಜಯವನ್ನು ಘೋಷಿಸಿದರು.

ಈ ದಿನವು ಭಾರತೀಯ ಇತಿಹಾಸದಲ್ಲಿ 'ಕಾರ್ಗಿಲ್ ವಿಜಯ ದಿವಸ'ವಾಗಿ ಹಚ್ಚಾಗಿ ಉಳಿಯಿತು. ಭಾರತೀಯ ಸೈನಿಕರ ಧೈರ್ಯ ಸಾಹಸಕ್ಕೆ ದೇಶದಾದ್ಯಂತ ಮೆಚ್ಚುಗೆಯ ಮಹಾಪೂರವೇ ಹರಿದು ಬಂತು. ಕಾರ್ಗಿಲ್ ಯುದ್ಧದಲ್ಲಿ ಮಡಿದವರನ್ನು ವೀರ ಚಕ್ರ ನೀಡಿ ಗೌರವಿಸಲಾಯಿತು. ದೇಶಕ್ಕಾಗಿ ವೀರಮರಣವಪ್ಪಿದ ಸೈನಿಕರ ಸ್ಮರಣಾರ್ಥ ಜುಲೈ 26ರಂದು ಕಾರ್ಗಿಲ್ ವಿಜಯ ದಿವಸ್ ಆಚರಿಸಲಾಗುತ್ತಿದೆ. ಆದರೆ ದೇಶಕ್ಕಾಗಿ ಸಾವು ಬದುಕಿನ ನಡುವೆ ಹೋರಾಡಿ ತೆರೆಯಲ್ಲೇ ಉಳಿದು ಹೋದ  5 ಅಸಲಿ ಹೀರೋಗಳ ಕಥೆ ಯಾರಿಗೂ ತಿಳಿದಿಲ್ಲ ಅವರ ಪರಿಚಯ ಇಲ್ಲಿದೆ.1.ಕ್ಯಾಪ್ಟನ್ ಸಾತೆಂದರ್ ಸಂಗ್ವಾನ್-ರೆಜಿಮೆಂಟ್- 16 ಗ್ರೆನೆಡಿಯರ್ಸ್​ : ಯುದ್ಧಭೂಮಿಯ ಕರಾಳ ದಿನಗಳನ್ನು ಮೆಲುಕು ಹಾಕುವಾಗ ಕ್ಯಾಪ್ಟನ್ ಸಾತೆಂದರ್ ಸಂಗ್ವಾನ್ ಅವರು ಎದೆಯುಬ್ಬಿಸಿ ಮಾತಿಗೆ ಇಳಿಯುತ್ತಾರೆ. ಎರಡು ತಿಂಗಳ ಕಾಲ ನಿರಂತರ ಡ್ರಾಸ್ ಮತ್ತು ಬಟಾಲಿಕ್ ಪ್ರದೇಶದಲ್ಲಿ ನಾವು ಜೀವ ಪಣಕ್ಕಿಟ್ಟು ಹೋರಾಟ ಮಾಡಿದ್ದೆವು. ಶತ್ರು ಸೈನ್ಯದ ಬಂಕರ್​ಗಳನ್ನು ಮತ್ತು ಕ್ಯಾಂಪ್​ಗಳನ್ನು ನೆಲಸಮಗೊಳಿಸಿ ನಾವು ಹಿಂತಿರುಗುತ್ತಿದ್ದೆವು. ಕಾರ್ಯಾಚರಣೆ ಮುಗಿಯಿತೆಂದು ಹೊರಟಾಗ ನಾನು ನೆಲ ಬಾಂಬ್ ಒಂದನ್ನು ಮೆಟ್ಟಿ ನಿಂತಿರುವುದು ಗೊತ್ತಾಯಿತು. ಬಾಂಬ್ ಸ್ಪೋಟದಿಂದ ಬಲ ಕಾಲು ಕಳೆದುಕೊಂಡೆ. ಆದರೆ ಕೊನೆಗೂ ನಾವು ವಿಜಯ ಸಾಧಿಸಿದ್ದೇವೆ ಎಂದು ಗೊತ್ತಾದಾಗ ಹೆಮ್ಮೆ ಅನಿಸಿತು ಎನ್ನುತ್ತಾರೆ  ಕ್ಯಾಪ್ಟನ್ ಸಾತೆಂದರ್ ಸಂಗ್ವಾನ್.

ಆದರೆ ನಾನು ಮತ್ತೆ ಸೈನ್ಯಕ್ಕೆ ಮರಳುವ ಪರಿಸ್ಥಿತಿಯಲ್ಲಿರಲಿಲ್ಲ. ಹೀಗಾಗಿ ಸರ್ಕಾರದಿಂದ ಆಯಿಲ್ ಅಂಡ್ ನ್ಯಾಚುರಲ್ ಗ್ಯಾಸ್ ಕಾರ್ಪೋರೇಷನ್​​ನಲ್ಲಿ ಕೆಲಸ ನೀಡಲಾಯಿತು. ಸೈನಿಕನೊಬ್ಬನ ಬದುಕು ಎಂಬುದು ಸದಾ ಹೋರಾಟ ಎಂದು ನಾನು ತಿಳಿದಿದ್ದೆ. ಹೀಗಾಗಿ ಮತ್ತೆ ಏನಾದರೂ ಸಾಧನೆ ಮಾಡಬೇಕೆಂದು ಹಾತೊರೆಯುತ್ತಿದ್ದೆ. ಬ್ಯಾಡ್ಮಿಂಟನ್​ ಕ್ರೀಡೆಯಲ್ಲಿ ಆಸಕ್ತಿಯಿತ್ತು. ನಿರಂತರ ಅಭ್ಯಾಸದಿಂದ ಅತ್ಯುತ್ತಮ ಬ್ಯಾಡ್ಮಿಂಟನ್ ಆಟಗಾರನಾದೆ. ವಿಕಲಚೇತನರ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್​ನಲ್ಲಿ ಭಾಗವಹಿಸಿ ಸತತ ಮೂರು ವರ್ಷ ಚಾಂಪಿಯನ್ ಪಟ್ಟವನ್ನು ಪಡೆದೆ. ಅಲ್ಲದೆ ವಿಕಲಚೇತನರ ವಿಶ್ವ
ಬ್ಯಾಡ್ಮಿಂಟನ್ ಚಾಂಪಿಯನ್​ಶಿಪ್​ನಲ್ಲಿ ಭಾರತವನ್ನು ಪ್ರತಿನಿಧಿಸಿದೆ. ಇವೆಲ್ಲದಕ್ಕೂ ಆತ್ಮವಿಶ್ವಾಸವನ್ನು ಒದಗಿಸಿದ್ದು ಕಾರ್ಗಿಲ್ ವಿಜಯ ಎಂಬುದಾಗಿ ಕ್ಯಾಪ್ಟನ್ ಸಾತೆಂದರ್ ಸಂಗ್ವಾನ್ ಸ್ಮರಿಸಿಕೊಳ್ಳುತ್ತಾರೆ.2. ರೋಶನ್ ಲಾಲ್ ವಾಜಿರ್- ಸುಬೇದಾರ್ : ಸುಬೇದಾರ್ ವಾಜಿರ್ ಮತ್ತು ನಾಲ್ಕು ಮಂದಿಯ ತಂಡ ಶತ್ರು ಸೈನಿಕರನ್ನು ಗುರುತಿಸಿದ್ದರು. ಅವರ ಮೇಲೆ ದಾಳಿ ಮಾಡುವುದಕ್ಕಿಂತ ಮುಂಚಿತವಾಗಿ ಭಾರತೀಯ ಸೈನಿಕರು ಪ್ರತಿದಾಳಿಗೆ ಒಳಗಾಗಿತ್ತು. ವಾಜಿರ್​ ಅವರ ದೇಹದ ಶೇ.80ರಷ್ಟು ಭಾಗ ಛಿದ್ರವಾಗಿತ್ತು.  ತನ್ನ ಸೈನಿಕರಿಂದ ನೆರವು  ಪಡೆಯಬೇಕೆಂದು ನಿರ್ಧರಿಸಿದಾಗ ಜೊತೆಗಿದ್ದ ನಾಲ್ಕು ಯೋಧರು ಶಹೀದ್ ಆಗಿ ಮಲಗಿದ್ದರು. ಆದರೂ ಧೃತಿಗೆಡದ ವಾಜಿರ್ ತನ್ನೆಲ್ಲಾ ಶಕ್ತಿ ಸಾಮರ್ಥ್ಯ ಬಳಸಿ ಹೋರಾಡಿದರು.

ಏಕಾಂಗಿ ಹೋರಾಟದಿಂದ ಪಾಯಿಂಟ್​ 4812 ಸೆಕ್ಟರ್​ಗೆ ಶತ್ರು ಸೈನಿಕರು ನುಗ್ಗದಂತೆ ರಾತ್ರಿಯೆಲ್ಲಾ ನೋಡಿಕೊಂಡರು. ಮರಣ ಮತ್ತು ಪಾಕ್​ ಸೈನಿಕರೊಂದಿಗೆ ಹೋರಾಡುತ್ತಿದ್ದ ವಾಜಿರ್​ ಅವರನ್ನು ಆಸ್ಪತ್ರೆಗೆ ಸೇರಿಸಲಾಯಿತು. ಸತತ ಆರು ತಿಂಗಳುಗಳ ಕಾಲ ಆಸ್ಪತ್ರೆಯಲ್ಲೂ ಸಾವು-ಬದುಕಿನ ನಡುವೆ ಹೋರಾಟ ನಡೆಸಿದ ವಾಜಿರ್ ಸಾವನ್ನು ಗೆದ್ದರು. ಆದರೆ ತನ್ನ ಎಡೆಗಾಲಿನ ಸಾಮರ್ಥ್ಯವನ್ನು ಅವರು ಕಳೆದುಕೊಂಡಿದ್ದರು. ಹೀಗಾಗಿ ಕಾಲಿಗೆ ರಾಡ್​ ಅನ್ನು ಅಳವಡಿಸಲಾಗಿತ್ತು. ಅಂದು ಕೆಚ್ಚದೆಯ ಹೋರಾಟ ನಡೆಸಿದ್ದ ವೀರಯೋಧ ವಾಜಿರ್ ಇಂದು ಕೋಲಿನ ಸಹಾಯದಿಂದ ನಡೆದಾಡುತ್ತಿದ್ದಾರೆ. 13 ಸಾವಿರ ರೂ. ಪಿಂಚಣಿಯೊಂದಿಗೆ ಜಮ್ಮುವಿನಲ್ಲಿ ತಮ್ಮ ಕುಟುಂಬದೊಂದಿಗೆ ಕಾಲ ಕಳೆಯುತ್ತಿದ್ದಾರೆ. ಸರ್ಕಾರದಿಂದ ಉತ್ತಮ ಸಹಾಯ ನಿರೀಕ್ಷಿಸಿದ್ದ ವಾಜಿರ್​ಗೆ ಹುತಾತ್ಮರಾಗಿಲ್ಲ ಎಂಬ ಕಾರಣ ನೀಡಿ ಸೌಲಭ್ಯವನ್ನು ಕಡಿತಗೊಳಿಸಲಾಯಿತು.3. ದನ್ ಸಿಂಗ್ ಮೆಹ್ತಾ-ರೆಜಿಮೆಂಟ್- 12ನೇ ಜಟ್ ರೆಜಿಮೆಂಟ್ : ಜುಲೈ 25ರಂದು ಹುಟ್ಟುಹಬ್ಬವನ್ನು ಆಚರಿಸಬೇಕಿದ್ದ ದನ್ ಸಿಂಗ್ ಮೆಹ್ತಾ ಶತ್ರು ಸೈನಿಕರನ್ನು ನರಕಕ್ಕೆ ಕಳುಹಿಸುವುದರಲ್ಲಿ ನಿರತರಾಗಿದ್ದರು. ಪ್ಯಾಸಿ ಮಸೀದಿಯಲ್ಲಿ ಉಗ್ರರು ಅಡಗಿಕೊಂಡಿದ್ದಾರೆಂಬ ಮಾಹಿತಿ ಪಡೆದ ಮೆಹ್ತಾ ಮತ್ತು ಇತರೆ ಸೈನಿಕರು ಭಯೋತ್ಪಾದಕರನ್ನು ಸೆರೆ ಹಿಡಿಯುವ ಪ್ರಯತ್ನದಲ್ಲಿದ್ದರು. ಉಗ್ರರು ಮತ್ತು ಸೈನಿಕರ ನಡುವೆ ತೀವ್ರ ಗುಂಡಿನ ಕಾಳಗ ನಡೆಯಿತು. ಒಂದು ಗಂಟೆಯ ಕಾಲ ನಡೆದ ಚಕಮಕಿಯಲ್ಲಿ ಮೂವರು ಉಗ್ರರನ್ನು ಹೊಡೆದುರುಳಿಸಲಾಗಿತ್ತು. ಆದರೆ ಇತ್ತ ಕಡೆ ಮೆಹ್ತಾ ರಕ್ತದ ಮಡುವಿನಲ್ಲಿ ಹೋರಾಟ ನಡೆಸುತ್ತಿದ್ದರು.ಈ ಕದನದಲ್ಲಿ ದನ್ ಸಿಂಗ್ ಮೆಹ್ತಾ ಅವರ ದೇಹದ ಶೇ.70ರಷ್ಟು ಭಾಗ ಅಂಗವೈಕಲ್ಯಕ್ಕೆ ಒಳಗಾಗಿತ್ತು. ಉತ್ತಮ ಚಿಕಿತ್ಸೆಯ ಫಲವಾಗಿ ಮೆಹ್ತಾ ಅವರು ಬದುಕುಳಿದರು. 2001ರಲ್ಲಿ ಚಿಕಿತ್ಸಾ ವೇಳೆಯಲ್ಲೇ ಸೈನ್ಯದಿಂದ ನಿವೃತ್ತಿ ಘೋಷಿಸಿಕೊಂಡರು. ಸರ್ಕಾರದಿಂದ ಕಡಿಮೆ ಪಿಂಚಣಿಯಿಂದ ಬದುಕುವುದು ಕಷ್ಟ ಎಂದರಿತ ಮೆಹ್ತಾ ಅವರು ತಮ್ಮದೆಯಾದ ಕಾಸ್ಮೆಟಿಕ್ ಅಂಗಡಿ ಪ್ರಾರಂಭಿಸಿದ್ದಾರೆ. ಇಲ್ಲಿ ನೀವು ಯಾವುದೇ ವಸ್ತು ಖರೀದಿಸಿದರೂ ಉಚಿತವಾಗಿ ಕಾರ್ಗಿಲ್ ಯುದ್ದದ ಬಗೆಗಿನ ಕಥೆ ಕೇಳಬಹುದು ಎಂಬ ಸ್ಲೋಗನ್ ಹಾಕಲಾಗಿದೆ. ಈ ಮೂಲಕ ರಣರಂಗದ ತಮ್ಮ ಹಳೆಯ ನೆನಪುಗಳನ್ನು ದನ್ ಸಿಂಗ್ ಮೆಹ್ತಾ ಗ್ರಾಹಕರೊಂದಿಗೆ ಹಂಚಿಕೊಳ್ಳುತ್ತಿದ್ದಾರೆ.4. ದಿಜೆಂದ್ರ ಕುಮಾರ್-ರೆಜಿಮೆಂಟ್- 2 ರಜಪುತಾನ ರೈಫಲ್ಸ್ : ಮೇಜರ್ ವಿವೇಕ್ ಗುಪ್ತಾ ಅವರ ತಂಡವು ಪಾಯಿಂಟ್ 4590 ಪ್ರದೇಶವನ್ನು ಶತ್ರು ಸೈನಿಕರಿಂದ ಮರಳಿ ಪಡೆಯುವ ಪ್ರಯತ್ನದಲ್ಲಿತ್ತು. ತಂಡವನ್ನು ಮುನ್ನೆಡೆಸುತ್ತಿದ್ದ ಗುಪ್ತಾ ಶತ್ರುಗಳ ಬಂಕರ್​ಗಳನ್ನು ನೆಲಸಮಗೊಳಿಸುವ ಕಾರ್ಯವನ್ನು ದಿಜೇಂದ್ರ ಕುಮಾರ್ ಅವರಿಗೆ ಒಪ್ಪಿಸಿದ್ದರು. ಕಾರ್ಯಾಚರಣೆ ಮುಂದುವರೆಯಿತು, ಆದರೆ ಒಂದು ಹಂತದಿಂದ ಮತ್ತೊಂದು ಹಂತಕ್ಕೆ ತಲುಪುವಷ್ಟರಲ್ಲಿ ಭಾರತೀಯ ಸೈನಿಕರ ಸಂಖ್ಯೆ ಕಡಿಮೆಯಾಗುತ್ತಾ ಬಂತು. ಎದುರಾಳಿಗಳ ದಾಳಿ ಮೇಜರ್ ಗುಪ್ತಾ ಸೇರಿದಂತೆ ಸಹೋದ್ಯೋಗಿಗಳ ವೀರ ಮರಣವನ್ನು ದಿಜೇಂದ್ರ ಅವರು ಕಣ್ಣಾರೆ ಕಂಡರು.

ಆದರೂ ಧೃತಿಗೆಡದೆ ಹೋರಾಟವನ್ನು ಮುಂದುವರಿಸಿದ್ದರು. ಪ್ರತಿಯೊಬ್ಬರು ಕೊನೆಯುಸಿರೆಳೆಯುವ ವೇಳೆ ಶಸ್ತ್ರಾಸ್ತ್ರಗಳನ್ನು ದಿಜೇಂದ್ರ ಅರಿಗೆ ವರ್ಗಾಹಿಸುತ್ತಿದ್ದರು. 11 ಬಂಕರ್​ಗಳ ಮೇಲೆ 18 ಗ್ರೆನೇಡ್​ಗಳನ್ನು ಎಸೆಯುವಲ್ಲಿ ದಿಜೇಂದ್ರ ಕುಮಾರ್ ಯಶಸ್ವಿಯಾಗಿದ್ದರು. ಶತ್ರು ಸೈನಿಕರೇ ನಡುಗುವಂತೆ ಹೋರಾಡಿದ ದಿಜೇಂದ್ರ ಅವರ ವೀರತೆಗೆ ಪಾಕ್ ಸೈನಿಕರು ಮೂಕವಿಸ್ಮಿತರಾದರು. ಅಂತಿಮವಾಗಿ ಪಾಯಿಂಟ್ 4590ರಲ್ಲಿ ಭಾರತದ ಪತಾಕೆಯನ್ನು ಹಾರಿಸುವಲ್ಲಿ ಯೋಧ ದಿಜೇಂದ್ರ ಕುಮಾರ್ ಯಶಸ್ವಿಯಾಗಿದ್ದರು.

ಇವರ ಹೋರಾಟಕ್ಕೆ ಗೌರವಾರ್ಥಕವಾಗಿ 'ಮಹಾವೀರ ಚಕ್ರ' ನೀಡಲಾಯಿತು. ಹುತಾತ್ಮರಿಗೆ ನೀಡುವ ಮಹಾವೀರ ಚಕ್ರ ಪ್ರಶಸ್ತಿಯನ್ನು ಮರಣಕ್ಕಿಂತ ಮುಂಚಿತವಾಗಿ ಪಡೆದ ಏಕೈಕ ಸೈನಿಕ ಎಂಬ ಕೀರ್ತಿ ದಿಜೇಂದ್ರ ಕುಮಾರ್​ ಅವರ ಪಾಲಾಯಿತು. ಇಂದು ಭಾರತದ ಈ ವೀರ ಯೋಧ ನಿವೃತ್ತರಾಗಿದ್ದಾರೆ. ಆದರೆ ಸರ್ಕಾರದಿಂದ ಯಾವುದೇ ಉತ್ತಮ ಸೌಲಭ್ಯ ಸಿಕ್ಕಿರಲಿಲ್ಲ. ಈಗಲೂ ಸಹ ತಂದೆಯಿಂದ ಪಡೆದ ಭೂಮಿಯಲ್ಲಿ ಕೃಷಿ ಮಾಡಿ ಜೀವನ ಸಾಗಿಸುತ್ತಿದ್ದಾರೆ. ಬಾಲಿವುಡ್​ನಲ್ಲಿ ತೆರೆಕಂಡ 'ಎಲ್​ಒಸಿ' ಚಿತ್ರದಲ್ಲಿ ನಟ ಅವತಾರ್ ಗಿಲ್ ಅಭಿನಯಿಸಿದ್ದ ಪಾತ್ರವು ದಿಜೇಂದ್ರ ಕುಮಾರ್ ಅವರ ರಣರಂಗ ಹೋರಾಟದ ಕಥೆಯನ್ನು ತಿಳಿಸುತ್ತದೆ.5. ಬಹದ್ದೂರ್ ಸಿಂಗ್-ರೆಜಿಮೆಂಟ್- 19 ಗ್ರೆನೇಡಿಯರ್ಸ್ : 1999 ಮೇ. 24ರ ಬೆಳಿಗ್ಗೆ 10:30ಕ್ಕೆ  ಬಹದ್ದೂರ್ ಸಿಂಗ್ ಮತ್ತು ತಂಡ ಶತ್ರು ನೆಲೆಗಳ ಮೇಲೆ ದಾಳಿ ಮಾಡಿದ್ದರು. ಅಲ್ಲಿ ನಡೆದ ತೀವ್ರ ಗುಂಡಿನ ಚಕಮಕಿಯಲ್ಲಿ ಒಂದು ಗುಂಡು ಬಹದ್ದೂರ್ ಅವರ ಕಾಲುಗಳನ್ನು ಸೀಳಿ ನುಗ್ಗಿತ್ತು. ಆ ನೋವನ್ನು ತಡೆದು ಮುನ್ನುಗ್ಗುವಷ್ಟರಲ್ಲಿ ಮತ್ತೊಂದು ಗುಂಡು ಅವರ ಕಣ್ಣನ್ನು ಹೊಕ್ಕಾಗಿತ್ತು. ನಿರಂತರ ಹೋರಾಟದ ನಡುವೆ ಆ ಎರಡು ಗುಂಡುಗಳು ಬಹದ್ದೂರ್ ಸಿಂಗ್ ಅವರನ್ನು ಕತ್ತಲೆಗೆ ದೂಡಿತ್ತು.

ಕಣ್ಣಿನ ದೃಷ್ಟಿಯನ್ನು ಕಳೆದುಕೊಂಡಿದ್ದ ಬಹದ್ದೂರ್ ಮತ್ತು ಪತ್ನಿಇಂದು ಸಂಬಂಧಿಕರ ಮನೆಯಲ್ಲಿ ನೆಲೆ ಕಂಡುಕೊಂಡಿದ್ದಾರೆ. 2009ರ ದಾಖಲೆ ಪ್ರಕಾರ ಬಹದ್ದೂರ್ ಸಾಬ್​ಗೆ ಸಂಬಂಧಿಕರೊಬ್ಬರು ಮನೆಯಲ್ಲಿ ಒಂದು ಕೋಣೆ ನೀಡಿದ್ದಾರೆ. ಒಂದು ಬಾರಿ ನಾವು ಸೈನ್ಯಕ್ಕೆ ನಿಷ್ಪ್ರಯೋಜಕವಾದರೆ ಯಾರೂ ಕೂಡ ನಮ್ಮನ್ನು ತಿರುಗಿ ಕೂಡ ನೋಡಲ್ಲ ಎಂಬ ಬಹದ್ದೂರ್ ಸಿಂಗ್ ಅವರ ಮಾತು ದೇಶದ ಸೈನಿಕರನ್ನು ನಮ್ಮ ಸರ್ಕಾರಗಳು ಯಾವ ರೀತಿ ನಡೆಸಿಕೊಳ್ಳುತ್ತಿದೆ ಎಂಬುದನ್ನು ತಿಳಿಸುತ್ತದೆ.
First published:July 26, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ