ಮಕ್ಕಳನ್ನು ಒಳ್ಳೆಯ ನಡತೆ, ವಿಶ್ವಾಸ ತುಂಬಿ ಬೆಳೆಸುವುದು ಈಗಿನ ಬ್ಯುಸಿ ಪೋಷಕರಿಗೆ ದೊಡ್ಡ ಸವಾಲೇ ಸರಿ. ಚಾಕೋಲೆಟ್ (Chocolate) ಕೊಟ್ಟರೆ, ಐಸ್ ಕ್ರೀಮ್ ಕೊಡಿಸಿದರೆ, ಇಲ್ಲಾ ಯಾವುದೋ ಆಟಿಕೆ ನೀಡಿದರೆ ಖುಷಿ ಪಡುತ್ತಾರೆ ಎಂದುಕೊಳ್ಳುವವರೇ ಹೆಚ್ಚು. ಇದು ಮಕ್ಕಳ ವಿಚಾರದಲ್ಲಿ ನಿಜ ಕೂಡ ಹೌದು. ಆದರೆ ಸಂತೋಷವಾಗಿರುವುದು (Happiness) ಎಂದರೆ ಕೇವಲ ಬಾಹ್ಯ ಖುಷಿ ಅಲ್ಲ. ಸಂತೋಷದಿಂದ ಮಕ್ಕಳನ್ನು ಬೆಳೆಸುವುದು ಎಂದರೆ ದೈಹಿಕ ಮತ್ತು ಮಾನಸಿಕವಾಗಿ ಅವರನ್ನು ಸದೃಢ ಮಾಡುವುದು ಎಂದರ್ಥ. ಹಾಗಾದರೆ ಮಕ್ಕಳನ್ನು ಸಂತೋಷವಾಗಿ ಬೆಳೆಸುವಲ್ಲಿ ಪೋಷಕರು (Parents) ಏನು ಮಾಡಬೇಕು ಎಂಬುದನ್ನು ಈ ಐದು ಸಲಹೆಗಳ ಮೂಲಕ ತಿಳಿಯೋಣ.
ಮಕ್ಕಳನ್ನು ಆರೋಗ್ಯಕರವಾಗಿ ಸಂತೋಷವಾಗಿರಿಸಿಕೊಳ್ಳುವುದು ಹೇಗೆ?
ಮಕ್ಕಳ ಜೊತೆ ಸಮಯ ಕಳೆಯಿರಿ:
ಈಗಿನ ಅಪ್ಪ-ಅಮ್ಮಂದಿರುವ ಮೊದಲು ತಿಳಿದುಕೊಳ್ಳಬೇಕಾದ ಮುಖ್ಯ ವಿಷಯವಿದು. ಸುಮಾರು ಜನ ಪಾಲಕರು ಮಕ್ಕಳಿಗೆ ಫೋನ್ ಕೊಟ್ಟು, ಇನ್ಯಾವುದೋ ಆಟಿಕೆ ವಸ್ತು ನೀಡಿ ಅವರ ಪಾಡಿಗೆ ಅವರನ್ನು ಬಿಟ್ಟು ಬಿಡುತ್ತಾರೆ.
ಹೌದು ಮಕ್ಕಳ ಸೃಜನಾತ್ಮಕತೆ ಅಭಿವೃದ್ಧಿಯಾಗಲು ಅವರನ್ನು ಅವರ ಪಾಡಿಗೆ ಬಿಟ್ಟು ಬಿಡಬೇಕು ಎಂದು ಹಲವು ತಜ್ಞರು ಹೇಳುತ್ತಾರೆ. ಇದು ಒಪ್ಪುವಂತದ್ದಾದರೂ ಮಕ್ಕಳಿಗೆ ಪೋಷಕರ ಸಮಯ ಅವರನ್ನು ಮತ್ತಷ್ಟು ಉತ್ಕೃಷ್ಟರನ್ನಾಗಿಸುತ್ತದೆ. ಮಗು ಆಡುತ್ತಿದ್ದರೆ, ಓದುತ್ತಿದ್ದರೆ, ಅವರು ನಿಮ್ಮನ್ನು ಮಾತನಾಡಿಸುತ್ತಿದ್ದರೆ ಅವರ ಜೊತೆ ನೀವು ಮಕ್ಕಳಾಗಿ ಅವರಿಗೆ ಉತ್ತರಿಸಿ, ಆಟ ಆಡಿ ಮತ್ತು ಅವರ ಜೊತೆ ಬೆರೆಯಿರಿ.
ಪೋಷಕರಾದವರು ಅವರ ಫೋನ್, ಟಿವಿಯಿಂದ ದೂರವಾಗಿ, ಸ್ವಲ್ಪವಾದರೂ ಮಕ್ಕಳ ಕಡೆ ಗಮನಹರಿಸಬೇಕು. ಇದು ಮಕ್ಕಳ ಖುಷಿಯ ಹಿಂದಿನ ಮೂಲಮಂತ್ರ.
ಸ್ಥಿರತೆ
ಮಕ್ಕಳು ಪ್ರತಿನಿತ್ಯ ದಿನಚರಿಯನ್ನು ಕಾಪಾಡಿಕೊಳ್ಳುವಂತೆ ನೋಡಿಕೊಳ್ಳಿ. ಸ್ಥಿರತೆ ಎಂಬುವುದು ಎಲ್ಲಾ ಕೆಲಸಗಳ ಕೀಲಿ ಕೈ, ಹೀಗಾಗಿ ಅವರು ದಿನಚರಿಯನ್ನು ಪಾಲಿಸುವ ಹಾಗೆ ಪಾಲಕರು ನೋಡಿಕೊಳ್ಳಬೇಕು.
ಇದನ್ನೂ ಓದಿ: ಕರಿಬೇವಿನಲ್ಲಿ ಎಷ್ಟೆಲ್ಲಾ ಆರೋಗ್ಯ ಪ್ರಯೋಜನಗಳಿಗೆ ಗೊತ್ತೇ? ತೂಕ ಇಳಿಕೆಗೂ ಈ ಎಲೆಗಳು ಸಹಕಾರಿಯಂತೆ!
ಇದು ಅವರಿಗೆ ಸುರಕ್ಷಿತ ಭಾವನೆ ನೀಡುತ್ತದೆ. ಮಕ್ಕಳಿಗೆ ಕಿರಿಕಿರಿ ಇಲ್ಲದ ಸುರಕ್ಷಿತ ಭಾವನೆ ಅವರನ್ನು ಖುಷಿಯಾಗಿಡಲು ಸಹಕರಿಸುತ್ತದೆ. ಅದೇ ರೀತಿ ಉತ್ತಮ ನಡವಳಿಕೆ, ಸಂವಹನ ಕಲಿಸುವಲ್ಲಿಯೂ ಸಹ ಪೋಷಕರು ಸ್ಥಿರತೆ ಕಾಪಾಡಿಕೊಳ್ಳಬೇಕು.
ಬಹುಮಾನ ಬೇಡ ಹೊಗಳಿಕೆ ನೀಡಿ
ಅನೇಕ ಪೋಷಕರು ತಮ್ಮ ಮಕ್ಕಳು ಚಟುವಟಿಕೆ ಇಂದಿರಲೂ ಅಥವಾ ಉತ್ತಮ ನಡವಳಿಕೆಯನ್ನು ಪ್ರೋತ್ಸಾಹಿಸಲು ಚಾಕೋಲೆಟ್, ಗಿಫ್ಟ್‌ನಂತಹ ಆಮಿಷಗಳನ್ನು ಒಡ್ಡುತ್ತಾರೆ. ನೀನ್ ಇವತ್ತು ಇದನ್ನು ಮಾಡಿದ್ರೆ, ಹೀಗಿದ್ರೆ ನಿನಗೆ ಐಸ್‌ಕ್ರೀಮ್ ಕೊಡಿಸ್ತೀನಿ ಅಂತಾ ಆಸೆ ತೋರಿಸುತ್ತಾರೆ.
ಆದರೆ ಇದು ಪೋಷಕರು ತೆಗೆದುಕೊಳ್ಳುವ ತಪ್ಪು ಕ್ರಮ. ವಾಸ್ತವವಾಗಿ ಮಗುವಿನ ಪ್ರೇರಣೆ ಮತ್ತು ಸ್ವಾಭಿಮಾನದ ಮೇಲೆ ಇದು ನಕಾರಾತ್ಮಕ ಪರಿಣಾಮ ಬೀರುತ್ತವೆ. ಬಹುಮಾನಗಳನ್ನು ಕೊಡುವ ಬದಲು ಪೋಷಕರು ಮಗುವಿನ ಪ್ರಯತ್ನಗಳು ಮತ್ತು ಸಾಧನೆಗಳನ್ನು ಹೊಗಳುವುದರ ಮೇಲೆ ಕೇಂದ್ರೀಕರಿಸಬೇಕು.
ಮಕ್ಕಳು ಏನೇ ಮೆಚ್ಚುವ ಕೆಲಸ ಮಾಡಿದರೂ ಅವರನ್ನು ಹೊಗಳಬೇಕು, ಚಪ್ಪಾಳೆ ಹೊಡೆದು ಅಭಿನಂದಿಸಬೇಕು ಇದು ಅವರನ್ನು ಪ್ರೋತ್ಸಾಹಿಸುತ್ತದೆ ಮತ್ತು ಅವರ ಸಂತೋಷಕ್ಕೂ ಕಾರಣವಾಗುತ್ತದೆ.
ಮಕ್ಕಳ ಜೊತೆ ಮುಕ್ತ ಮಾತುಕತೆ ಇರಲಿ
ಪುಟ್ಟ ಮಕ್ಕಳ ತೊದಲು ಮಾತಿನಿಂದ ಹಿಡಿದು ಎಲ್ಲವನ್ನೂ ಸ್ಪಷ್ಟವಾಗಿ ಹೇಳುವ ಮಕ್ಕಳವರೆಗೂ ಮಕ್ಕಳ ಮಾತು ಚೆಂದ. ಈ ಎಲ್ಲಾ ಹಂತಗಳು ಪೋಷಕರಿಗೆ ತುಂಬಾ ಅಮೂಲ್ಯ.
ಅಷ್ಟೇ ಅಲ್ಲ ಮಕ್ಕಳಿಗೂ ಇದು ಅವರ ಆರೋಗ್ಯಕರ ಬೆಳವಣಿಗೆ, ಖುಷಿಗೆ ಕಾರಣವಾಗುತ್ತದೆ. ಹೀಗಾಗಿ ಪೋಷಕರು ಮಕ್ಕಳ ಜೊತೆ ನಿರಂತರವಾಗಿ ಮಾತನಾಡಿ ಮತ್ತು ಅವರ ಆಲೋಚನೆಗಳು ಮತ್ತು ಭಾವನೆಗಳನ್ನು ವ್ಯಕ್ತಪಡಿಸಲು ಅವರನ್ನು ಪ್ರೋತ್ಸಾಹಿಸಿ.
ಇದನ್ನೂ ಓದಿ: ನುಗ್ಗೆಕಾಯಿಯಿಂದ ಈ ರೀತಿ ಖಾರವಾದ ಗೊಜ್ಜು ಮಾಡಿ, ಅನ್ನದ ಜೊತೆ ಚಪ್ಪರಿಸಿ ತಿನ್ನಿ
ಯಾವುದೇ ರೀತಿ ತೀರ್ಪು ನೀಡದೇ ಅವರು ಹೇಳುವದನ್ನು ಆಲಿಸಿ ಮತ್ತು ಅವರ ಭಾವನೆಗಳನ್ನು ಮೌಲ್ಯೀಕರಿಸಿ. ನಿಯಮಿತ ಮುಕ್ತ ಸಂವಹನವು ನಿಮ್ಮ ಮಗುವಿಗೆ ಕೇಳಲು ಮತ್ತು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ ಮತ್ತು ಅವರೊಂದಿಗೆ ನಿಮ್ಮ ಬಂಧವನ್ನು ಮತ್ತಷ್ಟು ಗಟ್ಟಿಗೊಳಿಸುತ್ತದೆ.
ಮಕ್ಕಳ ಭಾವನೆಗಳಿಗೆ ಸ್ಪಂದಿಸಿ
ಚಿಕ್ಕ ಮಕ್ಕಳು ಅತ್ತು ತಮಗಾಗುತ್ತಿರುವ ಕಿರಿಕಿರಿ, ಕಷ್ಟ ಹೇಳಿಕೊಂಡರೆ, ಸ್ವಲ್ಪ ದೊಡ್ಡ ಮಕ್ಕಳು ರಗಳೆ ಮಾಡುವ ಮೂಲಕ ವ್ಯಕ್ತಪಡಿಸುತ್ತಾರೆ. ಇನ್ನೂ ದೊಡ್ಡ ಮಕ್ಕಳು ಎಲ್ಲವನ್ನೂ ಬಾಯ್ಬಿಟ್ಟು ಹೇಳುವ ಮೂಲಕ ವ್ಯಕ್ತಪಡಿಸುತ್ತವೆ.
ಹೀಗೆ ಪ್ರತಿ ಮಕ್ಕಳ ಭಾವನೆಗಳಿಗೆ ಪೋಷಕರು ಸ್ಪಂದಿಸಬೇಕು. ಏನು ಹೇಳುತ್ತಿದ್ದಾರೆ ಎಂದು ಗಮನವಿಟ್ಟು ಕೇಳಬೇಕು. ಇದು ಮಕ್ಕಳಿಗೆ ಆತ್ಮಸ್ಥೈರ್ಯ ನೀಡುತ್ತದೆ, ನೀವು ಅವರೊಟ್ಟಿಗೆ ಇದ್ದೀರಿ ಎಂಬ ದೃಢ ಬಾವನೆ ಬೆಳೆಸುತ್ತದೆ.
ನಿಮ್ಮ ಮಗುವಿನ ಭಾವನೆಗಳನ್ನು ಅಂಗೀಕರಿಸುವ ಮೂಲಕ, ಅವುಗಳನ್ನು ಮೌಲ್ಯೀಕರಿಸುವ ಮೂಲಕ ಮತ್ತು ಅವರಿಗೆ ಅಗತ್ಯವಿರುವಾಗ ಬೆಂಬಲ ಮತ್ತು ಸೌಕರ್ಯವನ್ನು ನೀಡುವ ಮೂಲಕ ಸಹಾನುಭೂತಿ ತೋರಿಸಿ. ಇದು ಅವರು ಬೆಳೆಯಲು ಮತ್ತು ಅಭಿವೃದ್ಧಿ ಹೊಂದಲು ಪ್ರೀತಿಯ ವಾತಾವರಣವನ್ನು ಸೃಷ್ಟಿಸುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ