ಫಿಟ್ನೆಸ್ (Fitness) ಈಗಿನ ಯುವಪೀಳಿಗೆಯ(Generation) ಮಂತ್ರವಾಗಿ ಬಿಟ್ಟಿದೆ. ಅತಿ ವೇಗವಾಗಿ ತೂಕ ಇಳಿಸಿಕೊಳ್ಳಬೇಕು, ಕಟ್ಟು ಮಸ್ತಾದ ದೇಹ ಪಡೆಯಲು, ಸಿಕ್ಸ್ ಪ್ಯಾಕ್ (Six packs) ಅಂತೆಲ್ಲಾ ಹೆಚ್ಚಿನವರು ಜಿಮ್ ಹಾಗೂ ಮನೆಯಲ್ಲಿಯೇ ಬೆವರು ಸುರಿಸುತ್ತಾರೆ.ತಮ್ಮ ಫಿಟ್ನೆಸ್ ಗುರಿ ತಲುಪಲು ದೇಹವನ್ನು ಅಗತ್ಯಕ್ಕಿಂತ ಹೆಚ್ಚು ದಂಡಿಸುತ್ತಾರೆ. ಈ ಪರಿಣಾಮ ಆ ಸಮಯಕ್ಕೆ ಫಲಿತಾಂಶ ಕೊಟ್ಟರೂ ಸಹ ಮುಂದಿನ ದಿನಗಳಲ್ಲಿ ಇವೇ ಕೆಲವು ವ್ಯಾಯಾಮಗಳು (Exercises) ಇನ್ನಿಲ್ಲದ ಸಮಸ್ಯೆ ತಂದು ಒಡ್ಡುತ್ತವೆ ಎಂದು ಅಧ್ಯಯನವೊಂದು ತಿಳಿಸಿದೆ.
ಫಿಟ್ನೆಸ್ ತಜ್ಞರ ಪ್ರಕಾರ
ವ್ಯಾಯಾಮ, ದೇಹದ ದೃಢತೆಗಾಗಿ ಮತ್ತು ಆರೋಗ್ಯ ಸೌಭಾಗ್ಯಕ್ಕಾಗಿ ಅಗತ್ಯವಾಗಿ ಬೇಕಾಗಿರುವ ಒಂದು ದೈಹಿಕ ಕಸರತ್ತಿನ ಚಟುವಟಿಕೆ. ವ್ಯಾಯಾಮದಿಂದ ದೇಹದ ನರ ನಾಡಿಗಳಿಗೆಲ್ಲಾ ರಕ್ತ ಸಂಚಾರ ಹೆಚ್ಚಾಗುತ್ತದೆ, ಜೊತೆಗೆ ಮೂಳೆಗಳು ಬಲಿಷ್ಠವಾಗುತ್ತವೆ. ಆದರೆ ಇವೇ ವ್ಯಾಯಾಮಗಳು ನಮಗೆ ಮುಂದೆ ತೊಂದರೆ ಮಾಡಬಹುದು. ಇಂಥ ವ್ಯಾಯಾಮಗಳನ್ನು ಆದಷ್ಟು ಕಡಿಮೆ ಮಾಡುವುದು ಉತ್ತಮ.
ಫಿಟ್ನೆಸ್ ತಜ್ಞರ ಪ್ರಕಾರ ಎಲ್ಲಾ ವ್ಯಾಯಾಮಗಳು ಒಂದೊಂದು ರೀತಿ ಇರುತ್ತವೆ. ಕೆಲವು ಕಾಲಿಗೆ ಸಂಬಂಧಿಸಿದರೆ, ಇನ್ನು ಕೆಲವು ಹೊಟ್ಟೆ ಬೊಜ್ಜು ಕಡಿಮೆ ಮಾಡಲು, ಕೆಲವು ತೋಳಗಳ ಬೈಸೆಪ್ಸ್ ಹೀಗೆ ದೇಹದ ಭಾಗಗಳಿಗೆ ಅನುಗುಣವಾಗಿ ಬೇರೆ ಬೇರೆ ರೀತಿಯ ವ್ಯಾಯಾಮಗಳಿರುತ್ತವೆ. ಹೀಗೆ ಪ್ರತಿಯೊಂದು ವ್ಯಾಯಾಮವು ದೇಹದ ವಿಭಿನ್ನ ಭಾಗ ಮತ್ತು ಸ್ನಾಯುಗಳ ಮೇಲೆ ಕಾರ್ಯನಿರ್ವಹಿಸುತ್ತದೆ ಮತ್ತು ವಿಭಿನ್ನ ಫಲಿತಾಂಶಗಳನ್ನು ನೀಡುತ್ತದೆ.
ಇದನ್ನೂ ಓದಿ: ಸದಾ ಹೆಡ್ಫೋನ್ ಬಳಸುವವರು ಎಚ್ಚರದಿಂದಿರಿ, ಹೊಸಾ ಹೊಸಾ ಸಮಸ್ಯೆಗಳಿಗೆ ಅದೇ ಕಾರಣವಂತೆ!
ಯಾವೆಲ್ಲಾ ವ್ಯಾಯಾಮ ದೇಹಕ್ಕೆ ಹಾನಿ ಮಾಡುತ್ತವೆ?
1) ತಲೆಯ ಹಿಂದೆ ಬಾರ್ ಎಳೆಯುವುದು
ಅರ್ನಾಲ್ಡ್ ಶ್ವಾರ್ಜಿನೆಗ್ಗರ್ ಅವರಂತಹ ಬಾಡಿಬಿಲ್ಡಿಂಗ್ ದಂತಕಥೆಗಳಿಂದ ಜನಪ್ರಿಯವಾಗಿರುವ ಅತ್ಯಂತ ಪ್ರಸಿದ್ಧ ವ್ಯಾಯಾಮಗಳಲ್ಲಿ ಇದು ಒಂದು. ಕೈಗಳಿಂದ ಜಿಮ್ನಲ್ಲಿರುವ ಬಾರ್ಗಳನ್ನು ಎಳೆದು ಕುತ್ತಿಗೆ ಹತ್ತಿರ ತರುವ ಈ ವ್ಯಾಯಾಮದಿಂದ ಭುಜಗಳು ಮತ್ತು ಬೆನ್ನುಮೂಳೆಗೆ ಹಾನಿಯಾಗಬಹುದು. ಕುತ್ತಿಗೆಯ ಹಿಂದೆ ತೂಕವನ್ನು ಎಳೆಯುವುದರಿಂದ ಬಹುತೇಕ ನಮ್ಮ ಸ್ಪೈನಲ್ ಕಾರ್ಡ್ಗೆ ತೊಂದರೆಯಾಗುತ್ತದೆ. ತಲೆಯ ಹಿಂಬದಿಯ ಬದಲಿಗೆ ನೀವು ಭಾರವನ್ನು ಎದೆಯ ಕಡೆಗೆ ಎಳೆಯಬಹುದು ಎಂದು ತಜ್ಞರು ಹೇಳಿದ್ದಾರೆ.
2) ಸ್ಮಿತ್ ಮೆಷಿನ್ ಸ್ಕ್ವಾಟ್ಗಳು
ಇದು ಒಂದು ರೀತಿ ವೇಟ್ ಲಿಫ್ಟಿಂಗ್ ವ್ಯಾಯಾಮ ಇದ್ದಂತೆ. ಹೆಚ್ಚಾಗಿ ಜಿಮ್ನಲ್ಲಿರುವ ಹೊಸಬರು ಸ್ಕ್ವಾಟ್ಗಳನ್ನು ನಿರ್ವಹಿಸಲು ಸ್ಮಿತ್ ಯಂತ್ರ ಉಪಯೋಗಿಸುತ್ತಾರೆ ಮತ್ತು ಇದು ಸುರಕ್ಷಿತವಾಗಿದೆ ಎಂದು ಭಾವಿಸುತ್ತಾರೆ. ಆದರೆ ಸ್ಮಿತ್ ಮೆಷಿನ್ ಸ್ಕ್ವಾಟ್ಗಳನ್ನು ಮಾಡುವುದರಿಂದ ಮೊಣಕಾಲುಗಳ ಮೇಲೆ ಅತಿಯಾದ ಒತ್ತಡವನ್ನು ಹೇರುತ್ತದೆ. ಹೀಗಾಗಿ ಕಾಲುಗಳ ಸ್ನಾಯುಗಳಲ್ಲಿ ಮುಂದೆ ನೋವು ಕಂಡುಬರುತ್ತದೆ.
3) ಕ್ರಂಚಸ್
ಕ್ರಂಚಸ್ ಹೊಟ್ಟೆ ಬೊಜ್ಜು ಕಡಿಮೆ ಮಾಡಲು ಅಗತ್ಯವಾಗಿರುವ ವ್ಯಾಯಾಮವಾಗಿದೆ. ತಲೆಯ ಹಿಂದೆ ಕೈ ಹಿಡಿದುಕೊಂಡು ಹೊಟ್ಟೆ ಮೇಲೆ ಭಾರ ಹಾಕಿ ಎದ್ದೇಳುವ ವ್ಯಾಯಾಮವಾಗಿದೆ. ಈ ವ್ಯಾಯಾಮ ಬೆನ್ನಿನ ಮತ್ತು ಹೊಟ್ಟೆಯ ಮೇಲೆ ಅನಗತ್ಯ ಒತ್ತಡವನ್ನು ಉಂಟುಮಾಡುತ್ತದೆ. ಬೆನ್ನು ಮೂಳೆ ಹಾನಿಗೊಳಗಾಗುವ ಸಾಧ್ಯತೆಗಳು ಹೆಚ್ಚು.
ಇದನ್ನೂ ಓದಿ: ಗರ್ಭಾವಸ್ಥೆಯಲ್ಲಿ ಸಂಗೀತ ಆಲಿಸುವುದರಿಂದ ಉಂಟಾಗುವ ಅದ್ಭುತ ಪರಿಣಾಮಗಳೇನು?
4) ಕ್ರಾಸ್ಫಿಟ್ ಪುಲ್-ಅಪ್ಗಳು
ಈ ವ್ಯಾಯಾಮ ತುಂಬಾನೇ ಅಪಾಯಕಾರಿಯಾಗಿದೆ. ಕ್ರಾಸ್ಫಿಟ್ ಪುಲ್-ಅಪ್ಗಳು ಅಥವಾ ಕಿಪ್ಪಿಂಗ್ ಪುಲ್-ಅಪ್ಗಳು ಇರುವ ರೀತಿಯಲ್ಲಿ ಸಾಕಷ್ಟು ವಿವಾದಾತ್ಮಕವಾಗಿವೆ. ದೇಹವನ್ನು ಬಾರ್ ಮೇಲೆ ತರುವ ಶಕ್ತಿಯಿಂದ ನಿಮಗೆ ಯಾವುದೇ ಲಾಭವಿಲ್ಲ ಎಂದು ಫಿಟ್ನೆಸ್ ತಜ್ಞರು ಹೇಳುತ್ತಾರೆ.
5) ಲೆಗ್ ಎಕ್ಸ್ಟೆನ್ಷನ್ ಮಷಿನ್
ಈ ವ್ಯಾಯಾಮ ಮಾಡುವುದರಿಂದ ಕ್ವಾಡ್ ಸ್ನಾಯುಗಳನ್ನು ಬಲಪಡಿಸುತ್ತದೆ. ಆದರೆ ಅದರಿಂದ ನಿಮ್ಮ ಮೊಣಕಾಲುಗಳನ್ನು ಅಸ್ವಾಭಾವಿಕ ಸ್ಥಾನದಲ್ಲಿ ಇರಿಸುತ್ತದೆ ಮತ್ತು ದೀರ್ಘಾವಧಿಯಲ್ಲಿ ಮೊಣಕಾಲಿನ ನೋವು ಕಾಣಿಸಿಕೊಳ್ಳುತ್ತದೆ. ವಿಶೇಷವಾಗಿ ನೀವು ತೂಕವನ್ನು ಎತ್ತಲು ನಿಮ್ಮ ಕಾಲುಗಳನ್ನು ಬಳಸಿದಾಗ, ಅದು ನಿಮ್ಮ ಮೊಣಕಾಲುಗಳನ್ನು ಅಪಾರ ಒತ್ತಡಕ್ಕೆ ಒಳಪಡಿಸುತ್ತದೆ. ಇದರ ಬದಲಿಗೆ ಲುಂಜ್ಗಳು, ಸ್ಟೆಪ್-ಅಪ್ಗಳು ಮತ್ತು ಸ್ಕ್ವಾಟ್ಗಳಂತಹ ವ್ಯಾಯಾಮಗಳನ್ನು ಪರ್ಯಾಯವಾಗಿ ಆಯ್ಕೆ ಮಾಡಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ