Height ಹೆಚ್ಚಾಗಬೇಕು ಅಂದರೆ ಈ ವ್ಯಾಯಾಮಗಳು, ಆಹಾರ ಕ್ರಮಗಳನ್ನು ಅನುಸರಿಸಿ..

ವ್ಯಾಯಾಮಗಳನ್ನು ನಿಯಮಿತವಾಗಿ ಅಭ್ಯಾಸ ನಡೆಸುವುದು ನಿಮ್ಮನ್ನು ಫಿಟ್ ಆಗಿ ಇರಿಸುವುದರ ಜೊತೆಗೆ ದೇಹದಾಕಾರವನ್ನು ಸುಂದರವಾಗಿ ಇರಿಸುವಲ್ಲಿ ಸಹಕಾರಿಯಾಗಿದೆ. ಒಂದೊಂದು ವ್ಯಾಯಾಮವನ್ನು 15 ರಿಂದ 20 ಸೆಕೆಂಡ್‌ಗಳ ಕಾಲ ಮೂರರಿಂದ ನಾಲ್ಕು ಸೆಟ್‌ಗಳಲ್ಲಿ ಪುನರಾವರ್ತಿಸಿ ಮಾಡಬೇಕು.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

 • Share this:
  ಮನುಷ್ಯನ ದೇಹಾಕಾರದಲ್ಲಿ ಎತ್ತರ, ತೂಕ ಬಹುಮುಖ್ಯ ಪಾತ್ರ ವಹಿಸುತ್ತವೆ. ನಿಮ್ಮ ಎತ್ತರಕ್ಕೆ ತಕ್ಕಂತೆ ತೂಕವನ್ನು ಹೊಂದಿದ್ದರೆ ನಿಮ್ಮ ಮೈಕಟ್ಟು ಕೂಡ ಕಣ್ಸೆಳೆಯುವಂತಿರುತ್ತದೆ. ಇನ್ನು ಕುಳ್ಳಗಿದ್ದು ದೇಹ ದಪ್ಪಗಿದ್ದರೆ ಅದೊಂದು ರೀತಿಯ ವಿಕಾರತೆಯನ್ನುಂಟು ಮಾಡುತ್ತದೆ. ಇನ್ನು ಉದ್ದವಿದ್ದು ಕೃಶ ಶರೀರವನ್ನು ಹೊಂದಿದರೆ ಅದು ಕೂಡ ಸುಂದರ ಮೈಕಟ್ಟು ಎಂದೆನಿಸುವುದಿಲ್ಲ. ತಾವು ನೋಡಲು ಸುಂದರವಾಗಿರಬೇಕು ಕುಳ್ಳಗಿರಬಾರದು ಉದ್ದನೆಯ ದೇಹಾಕೃತಿಯನ್ನು ಪಡೆಯಬೇಕೆಂಬುದು ಹಲವರ ಹಂಬಲವಾಗಿರುತ್ತದೆ.

  ಉದ್ದವಿದ್ದರೆ ನೋಡಲು ಸುಂದರ ಎಂಬುದು ಇನ್ನೂ ಹಲವರ ಭಾವನೆಯಾಗಿದೆ. ನಿಮ್ಮ ಶರೀರ ಕುಳ್ಳಗಿದ್ದರೆ ವ್ಯಾಯಾಮದ ಕೊರತೆಯಿಂದಲೂ ಇದು ಉಂಟಾಗಿರುತ್ತದೆ ಎಂಬುದು ಇತ್ತೀಚಿನ ಅಧ್ಯಯನಗಳಿಂದ ತಿಳಿದುಬಂದಿರುವ ಮಾಹಿತಿಯಾಗಿದೆ. ಹಾಗಾದರೆ ಸಣ್ಣ ಮಕ್ಕಳಿಗೆ ಹದಿಹರೆಯದವರಿಗೆ ಉದ್ದವಾಗಿ ಕಾಣಬೇಕೆಂಬ ಹಂಬಲವಿದ್ದಲ್ಲಿ ಉದ್ದನೆಯ ಆಕಾರವನ್ನು ಪಡೆಯಲು ಸಹಕಾರಿಯಾಗಿರುವ ಕೆಲವೊಂದು ವ್ಯಾಯಾಮ ಸಲಹೆಗಳನ್ನು ನಾವು ನೀಡುತ್ತಿದ್ದೇವೆ.

  ಮುಂದಕ್ಕೆ ಬಾಗುವ ವ್ಯಾಯಾಮ
  ಎತ್ತರವನ್ನು ಹೆಚ್ಚಿಸುವ ಪರಿಣಾಮಕಾರಿ ಆಸನ ಇದಾಗಿದೆ. ಕಾಲುಗಳನ್ನು ಕೈಗಳನ್ನು ನೇರವಾಗಿ ಇರಿಸಿಕೊಳ್ಳಿ. ನಂತರ ನಿಧಾನವಾಗಿ ಕೈಗಳನ್ನು ಮುಂದಕ್ಕೆ ಚಾಚುತ್ತಾ ಹಿಮ್ಮಡಿಗೆ ತನ್ನಿ. ಈ ಭಂಗಿಯಲ್ಲಿ ಆದಷ್ಟು ಶಿರ ಹಿಮ್ಮಡಿಯನ್ನು ಸ್ಪರ್ಶಿಸುತ್ತಿರಲಿ.

  ಬಾರ್ ಹ್ಯಾಂಗಿಂಗ್
  ಶೀಘ್ರವಾಗಿ ಎತ್ತರವಾಗಲು ಬಯಸುವವರು ಬಾರ್ ಹ್ಯಾಂಗಿಂಗ್ ವ್ಯಾಯಾಮವನ್ನು ಮಾಡಬಹುದು. ನೆಲದಿಂದ ಏಳು ಫೀಟ್ ಎತ್ತರದಲ್ಲಿ ಭದ್ರಪಡಿಸಿರುವ ಗಟ್ಟಿಯಾದ ಬಾರ್‌ ನೀವು ಹೊಂದಿರಬೇಕು. ನಿಮ್ಮ ಕೈಗಳ ಸಹಾಯದಿಂದ ಈ ಬಾರ್‌ನಲ್ಲಿ ನೇತಾಡಿ. 20 ಸೆಕೆಂಡ್‌ಗಳ ಕಾಲ ಈ ಭಂಗಿಯಲ್ಲಿರಿ.

  ಕೋಬ್ರಾ ಸ್ಟ್ರೆಚ್
  ಭುಜಂಗಾಸನ ಎಂದೂ ಕೂಡ ಕರೆಯಲಾದ ಈ ಯೋಗ ಭಂಗಿ ಉದ್ದನೆಯ ಆಕಾರ ಪಡೆಯಲು ಸಹಕಾರಿಯಾಗಿದೆ. ಅಂಗಾತವಾಗಿ ಮಲಗಿ ಈ ಸಮಯದಲ್ಲಿ ಕಾಲು ಹಾಗೂ ಕೈಗಳನ್ನು ಚಾಚಿ. ನಿಧಾನವಾಗಿ ಕೈಗಳನ್ನು ಮುಂದಕ್ಕೆ ಬಗ್ಗಿಸಿ ತಲೆ ಹಾಗೂ ಎದೆಯನ್ನು ಸೊಂಟದಿಂದ ಮುಂದಕ್ಕೆ ತನ್ನಿ ಈ ಸಮಯದಲ್ಲಿ ನಿಮ್ಮ ಹಸ್ತವು ದೇಹದ ಸಂಪೂರ್ಣ ಭಾರವನ್ನು ಹೊರುತ್ತದೆ. ದಿನಕ್ಕೆ ಐದು ಬಾರಿ ಈ ವ್ಯಾಯಾಮ ಮಾಡಿ.

  ವಾಲ್ ಸ್ಟ್ರೆಚ್
  ಇದು ನೋಡುವಷ್ಟು ಸುಲಭವಾದ ವ್ಯಾಯಾಮವಲ್ಲ. ಗೋಡೆಗೆ ಮುಖಮಾಡಿ ನಿಮ್ಮ ಕೈಗಳನ್ನು ಚಪ್ಪಟೆಯಾಗಿ ಗೋಡೆಯ ಮೇಲಿರಿಸಿ. ಮಂಡಿಯನ್ನು ಬಗ್ಗಿಸಿ. ಈ ರೀತಿಯಲ್ಲಿ 15 ರಿಂದ 30 ಸೆಕೆಂಡ್ ಇರಿ.

  ಡ್ರೈ ಲ್ಯಾಂಡ್ ಸ್ವಿಮ್ಮಿಂಗ್
  ಲಾಕ್‌ಡೌನ್ ನಂತರ ಪ್ರತಿಯೊಬ್ಬರೂ ಸ್ವಿಮ್ಮಿಂಗ್ ಮಾಡುತ್ತಿಲ್ಲ ಎಂಬುದಂತೂ ನಿಜ. ಏಕೆಂದರೆ ಕೆಲವೊಂದಿಷ್ಟು ಈಜುಕೊಳಗಳಿಗೆ ಬೀಗ ಜಡಿಯಲಾಗಿದೆ ಹಾಗಾಗಿ ಸ್ವಿಮ್ಮಿಂಗ್ ಮಜ ಯಾರಿಗೂ ದೊರೆಯುತ್ತಿಲ್ಲ. ಆದರೆ ಡ್ರೈ ಸ್ವಿಮ್ಮಿಂಗ್ ವ್ಯಾಯಾಮ ಮಾಡುವುದರಿಂದ ಈಜಿನ ಖುಷಿಯನ್ನು ಆನಂದಿಸಬಹುದು ಹಾಗೂ ಎತ್ತರವನ್ನು ಹೆಚ್ಚಿಸಿಕೊಳ್ಳಬಹುದು.

  ಸೇತುಬಂಧಾಸನ
  ಸೇತುಬಂಧಾಸನ ನಿಮ್ಮ ಬೆನ್ನಿನ ಜೀವಕೋಶಗಳನ್ನು ಬಲಪಡಿಸಲು ಸಹಕಾರಿಯಾಗಿದೆ. ನೇರವಾಗಿ ಮಲಗಿ ಮೊಣಕಾಲುಗಳನ್ನು ಬಗ್ಗಿಸಿ ಪಾದದ ಮೇಲೆ ಒತ್ತಡ ಹಾಕಿ ಸೊಂಟವನ್ನು ಮೇಲಕ್ಕೆತ್ತಿ.

  ಕುಳಿತುಕೊಂಡು ಮುಂದಕ್ಕೆ ಬಾಗುವುದು
  ಬೆನ್ನುಮೂಳೆ ಸರಿಯಾಗಿ ಬಾಗಲು ಈ ವ್ಯಾಯಾಮ ಸಹಕಾರಿಯಾಗಿದೆ. ಪಾದಗಳನ್ನು ನೇರವಾಗಿ ಇಡಿ ಭುಜವನ್ನು ಬಾಗಿಸಿ ಕಾಲುಗಳ ಬಳಿ ತನ್ನಿ. ನಿಮ್ಮ ಕಾಲ್ಬೆರಳ ತುದಿಗಳನ್ನು ಸ್ಪರ್ಶಿಸಲು ಪ್ರಯತ್ನಿಸಿ, ಇಲ್ಲದಿದ್ದರೆ, ನಿಮ್ಮ ಬೆನ್ನುಮೂಳೆಯನ್ನು ಗರಿಷ್ಠ ಮಟ್ಟಕ್ಕೆ ಬಾಗಿಸಿ.

  ಪೈಲೇಟ್ಸ್ ರೋಲ್ ಓವರ್
  ಪೈಲೇಟ್ಸ್, ಸಾಮಾನ್ಯವಾಗಿ, ನಿಮ್ಮ ಬೆನ್ನುಮೂಳೆಯನ್ನು ಹಿಗ್ಗಿಸಲು ಉತ್ತಮ ವಿಧಾನವಾಗಿದೆ. ಬೆನ್ನಿನ ಮೇಲೆ ಮಲಗಿ ಹಾಗೂ ಪಾದಗಳನ್ನು ಹಿಂದಕ್ಕೆ ಚಾಚಿ. ನೆಲ ತಲುಪುವವರೆಗೆ ಕಾಲ್ಬೆರಳುಗಳನ್ನು ಹಿಂದಕ್ಕೆ ತಳ್ಳಿ. ಇದು ಕಷ್ಟಕರವಾದ ವ್ಯಾಯಾಮ ಎಂದೆನ್ನಿಸಿದರೂ ಮೂಳೆಗಳಿಗೆ ಅತ್ಯಂತ ಉತ್ತಮವಾಗಿದೆ.

  ಇದನ್ನೂ ಓದಿ: Oily Skin Problem: ನಿಮ್ಮದು ಆಯ್ಲಿ ಸ್ಕಿನ್ ಆಗಿದ್ದರೆ ಯಾವುದೇ ಕಾರಣಕ್ಕೂ ಈ 4 ಆಹಾರಗಳನ್ನು ತಿನ್ನಬೇಡಿ..

  ಲೊ ಲಾಂಜ್ ಆರ್ಚ್
  ಮೇಲ್ಭಾಗದ ದೇಹವನ್ನು ಬಲಪಡಿಸುವುದು ದೃಢಪಡಿಸುತ್ತದೆ ಹಾಗೂ ಇದಕ್ಕೆ ಸ್ವಲ್ಪ ಕಠಿಣ ಪರಿಶ್ರಮ ಮತ್ತು ಬಿಲ್ಲಿನಂತೆ ಹಿಂದಕ್ಕೆ ಬಾಗುವ  ಅಗತ್ಯವಿರುತ್ತದೆ. ಮಂಡಿಯೂರಿ, ನಿಮ್ಮ ಬಲ ಪಾದವನ್ನು ಮುಂದಕ್ಕೆ ಇರಿಸಿ ಮತ್ತು ಮೊಣಕಾಲು ಬಾಗಿ. ನಿಮ್ಮ ಮೊಣಕಾಲು ನೆಲಕ್ಕೆ ತಾಗುವಂತೆ ನಿಮ್ಮ ಎಡಗಾಲನ್ನು ಹಿಂದಕ್ಕೆ ಇರಿಸಿ. ನಿಮ್ಮ ಕೈಯನ್ನು ಮೇಲಕ್ಕೆತ್ತಿ, ಅಂಗೈಗಳನ್ನು ನಮಸ್ಕಾರ ಸ್ಥಾನದಲ್ಲಿ ಜೋಡಿಸಿ. ನಿಮಗೆ ಸಾಧ್ಯವಾದಷ್ಟು ಸಮಯ ಈ ಭಂಗಿಯಲ್ಲಿರಿ. ಎಡಕಾಲಿನಲ್ಲೂ ಈ ವ್ಯಾಯಾಮ ಮಾಡಿ.

  ಸೈಡ್ ಸ್ಟ್ರೆಚ್
  ಸೈಡ್ ಸ್ಟ್ರೆಚ್ ಸ್ನಾಯುಗಳನ್ನು ಉದ್ದವಾಗಿಸುತ್ತದೆ, ಇಂಟರ್ಕೊಸ್ಟಲ್ ಸ್ನಾಯುಗಳನ್ನು ಬಲಪಡಿಸುವ ಮೂಲಕ ಎತ್ತರವನ್ನು ಹೆಚ್ಚಿಸುತ್ತದೆ. ನಿಮ್ಮ ಪಾದಗಳನ್ನು ಒಟ್ಟಿಗೆ ಜೋಡಿಸಿ. ನಿಮ್ಮ ಕೈಗಳನ್ನು ಎರಡೂ ಬದಿಗಳಲ್ಲಿ ಇಟ್ಟುಕೊಳ್ಳಿ ನಂತರ ನಿಮ್ಮ ಮೇಲಿನ ದೇಹವನ್ನು ನಿಧಾನವಾಗಿ ಬಲಕ್ಕೆ, ನಂತರ ಎಡಕ್ಕೆ ಬಾಗಿಸಿ. ಪ್ರತಿ ಬಾಗುವಿಕೆಯನ್ನು 10 ಸೆಕೆಂಡುಗಳ ಕಾಲ ಹಿಡಿದುಕೊಳ್ಳಿ ಮತ್ತು ಮೊದಲಿನ ಸ್ಥಿತಿಗೆ ಬನ್ನಿ. ಎರಡು ಬಾರಿ ಬಾಗುವುದನ್ನು ಪುನರಾವರ್ತಿಸಿ ಮತ್ತು 10 ಸೆಟ್‌ಗಳನ್ನು ಮಾಡಿ.

  ಆಹಾರ
  ದೇಹದ ಎತ್ತರ ಹೆಚ್ಚಿಸಲು ಸಮತೋಲಿತ ಆಹಾರ ಕ್ರಮವು ಅತೀ ಅಗತ್ಯವಾಗಿದೆ. ಕ್ಯಾರೆಟ್, ಮೊಟ್ಟೆ ತಿರುಳು, ಮೀನು(ಟ್ಯುನಾ, ಸಾಲ್ಮನ್ ಮತ್ತು ಬಂಗುಡೆ), ಆಲೂಗಡ್ಡೆ, ಹಸಿರೆಲೆ ತರಕಾರಿಗಳು, ಕೋಳಿ ಮಾಂಸ, ಧಾನ್ಯಗಳು, ಬೀಜಗಳು, ಹಣ್ಣುಗಳು, ಹಾಲಿನ ಉತ್ಪನ್ನಗಳು ಇತ್ಯಾದಿಗಳನ್ನು ಸೇವಿಸಬೇಕು ಮತ್ತು ಇದನ್ನು ನಿಮ್ಮ ಆಹಾರ ಕ್ರಮದಲ್ಲಿ ಅಳವಡಿಸಿಕೊಳ್ಳಬೇಕು.

  ಸರಿಯಾದ ನಿದ್ರೆ
  ಸರಿಯಾದ ನಿದ್ರೆಯು ದೇಹಕ್ಕೆ ಅತೀ ಅಗತ್ಯವಾಗಿ ಇರುವುದು. ಯಾಕೆಂದರೆ ಈ ವೇಳೆ ಬೆಳವಣಿಗೆ ಹಾರ್ಮೋನುಗಳು ಮೂಳೆಗಳನ್ನು ದಪ್ಪ ಹಾಗೂ ತೆಳುಗೊಳಿಸುವ ಕಾರ್ಯ ಮಾಡುವುದು. ನೀವು ಮಲಗುವ ಭಂಗಿ ಕೂಡ ನಿದ್ರೆ ಎತ್ತರ ಹೆಚ್ಚಿಸಲು ನೆರವಾಗುವುದು. ಮಲಗುವ ವೇಳೆ ತುಂಬಾ ಮೆತ್ತಗೆ ಮತ್ತು ಆರಾಮದಾಯಕವಾದ ಬಟ್ಟೆಗಳನ್ನು ಧರಿಸಿ ಮತ್ತು ಆರಾಮದಾಯಕ ಹಾಸಿಗೆ ಬಳಸಿ. ಆರೋಗ್ಯವಂತ ವ್ಯಕ್ತಿಯು ಎಂಟು ಗಂಟೆಗಳ ಕಾಲ ನಿದ್ರಿಸುವುದು ಅತ್ಯವಶ್ಯಕವಾಗಿದೆ. ಹಾಗಾಗಿ ನಿಯಮಿತ ಸಮತೋಲಿತ ಆಹಾರ, ಆರೋಗ್ಯಯುತ ನಿದ್ದೆ, ನಿಯಮಿತ ವ್ಯಾಯಾಮವನ್ನು ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳುವುದರಿಂದ ನಿಮ್ಮ ದೇಹಾಕಾರ ಉದ್ದವಾಗುತ್ತದೆ.

  ಮೇಲೆ ತಿಳಿಸಿದ ವ್ಯಾಯಾಮಗಳನ್ನು ನಿಯಮಿತವಾಗಿ ಅಭ್ಯಾಸ ನಡೆಸುವುದು ನಿಮ್ಮನ್ನು ಫಿಟ್ ಆಗಿ ಇರಿಸುವುದರ ಜೊತೆಗೆ ದೇಹದಾಕಾರವನ್ನು ಸುಂದರವಾಗಿ ಇರಿಸುವಲ್ಲಿ ಸಹಕಾರಿಯಾಗಿದೆ. ಒಂದೊಂದು ವ್ಯಾಯಾಮವನ್ನು 15 ರಿಂದ 20 ಸೆಕೆಂಡ್‌ಗಳ ಕಾಲ ಮೂರರಿಂದ ನಾಲ್ಕು ಸೆಟ್‌ಗಳಲ್ಲಿ ಪುನರಾವರ್ತಿಸಿ ಮಾಡಬೇಕು.
  Published by:Kavya V
  First published: