• ಹೋಂ
 • »
 • ನ್ಯೂಸ್
 • »
 • ಕೊಪ್ಪಳ
 • »
 • Trekking In Koppal: ಪ್ರತಿ ತಿಂಗಳ 2ನೇ ಭಾನುವಾರ ಎಲ್ಲೂ ಹೋಗ್ಬೇಡಿ, ಇವರ ಜೊತೆ ಬರೋಕೆ ಮರೀಬೇಡಿ!

Trekking In Koppal: ಪ್ರತಿ ತಿಂಗಳ 2ನೇ ಭಾನುವಾರ ಎಲ್ಲೂ ಹೋಗ್ಬೇಡಿ, ಇವರ ಜೊತೆ ಬರೋಕೆ ಮರೀಬೇಡಿ!

ಚಾರಣ ಬಳಗ

ಚಾರಣ ಬಳಗ

ಆನೆಗೊಂದಿ, ಕನಕಗಿರಿ, ಕುಮಾರರಾಮನ ಕುಮ್ಮಟದುರ್ಗ, ಕೊಪ್ಪಳ, ಅಶೋಕ ಶಾಸನ, ಕುಕನೂರು, ಪುರ, ಚಂದಾಲಿಂಗೇಶ್ವರ, ಹಿರೇಬೆಣಕಲ್‌, ಹೇಮಗುಡ್ಡ, ಹುಲಿಗಿ, ಇಟಗಿ, ಸೇರಿದಂತೆ ನಾನಾ ಪ್ರಮುಖ ಐತಿಹಾಸಿಕ ಸ್ಥಳಗಳಿಗೆ ಚಾರಣ ಹೋಗುವ ಅವಕಾಶ ನಿಮ್ಮದಾಗಬೇಕೇ?

 • Share this:

  ಕೊಪ್ಪಳ: ಐತಿಹಾಸಿಕ ತಾಣಗಳಿಗೆ ಕೊಪ್ಪಳ ಜಿಲ್ಲೆ ತುಂಬಾನೇ ಹೆಸರುವಾಸಿ. ಅದರಲ್ಲೂ ಗಂಗಾವತಿ ತಾಲೂಕಿನಲ್ಲಿ (Gangavathi) ಐತಿಹಾಸಿಕ ಸ್ಮಾರಕಗಳು ಸಾಕಷ್ಟಿವೆ. ಆದರೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ನಶಿಸಿ ಹೋಗುತ್ತಿವೆ. ಇವುಗಳನ್ನು ರಕ್ಷಣೆ ಮಾಡಿ ಮುಂದಿನ ತಲೆಮಾರಿಗೆ ನೀಡಲು ಚಾರಣ ಬಳಗ ಮುಂದಾಗಿದೆ. ಕೊಪ್ಪಳ ನಗರದಿಂದ (Koppal) ಸುಮಾರು 10ರಿಂದ 15 ಕಿ.ಮೀಯಷ್ಟು ದೂರದಲ್ಲಿರುವ ಎಷ್ಟೋ ಸ್ಮಾರಕಗಳು ಕಳೆದುಹೋದ ಸ್ಥಿತಿಯಲ್ಲಿದ್ದವು. ಅಂದರೆ ಈ ಸ್ಮಾರಕಗಳು ಯಾರ ಕಣ್ಣಿಗೂ ಕಾಣದಂತೆ ಸಂದುಗೊಂದುಗಳಲ್ಲಿ ಮುಚ್ಚಿಹೋಗಿದ್ದವು. ಅಂತಹ ಸ್ಥಳಗಳನ್ನು (Trekking Places In Koppal) ಪತ್ತೆಹಚ್ಚಿ ಅವುಗಳನ್ನು ಸ್ವಚ್ಛಗೊಳಿಸುವುದಲ್ಲದೇ ಅವುಗಳನ್ನು ಸಾಮಾಜಿಕ ಜಾಲತಾಣಗಳ ಮೂಲಕ ಜನರಿಗೆ ಪರಿಚಯಿಸುವ ಕೆಲಸವನ್ನು ಸಹ ಮಾಡುತ್ತಿದೆ ಈ ತಂಡ.


  ಸಾಹಿತಿ ಹಾಗೂ ಹಾಸ್ಯ ಕಲಾವಿದರಾದ ಗಂಗಾವತಿ ಪ್ರಾಣೇಶ್, ದಂತ ವೈದ್ಯ ಹಾಗೂ ಸಾಹಿತಿಗಳಾದ ಡಾ. ಶಿವಕುಮಾರ ಮಾಲೀಪಾಟೀಲ್, ಇತಿಹಾಸ ಪ್ರಾಧ್ಯಾಪಕ ಡಾ. ಶರಣಬಸಪ್ಪ.ಕೆ,  ಮಂಜುನಾಥ ಗುಡ್ಲಾನೂರ, ಸೇರಿದಂತೆ ನಗರದ ಶಿಕ್ಷಕರು ವೈದ್ಯರು, ಸಾಹಿತಿಗಳು, ಉದ್ಯಮಿಗಳು,  ಸೇರಿದಂತೆ ಹಲವು ವೃತ್ತಿಪರರು ಕೈ ಜೋಡಿಸಿ, ಚಾರಣ ಟ್ರಸ್ಟ್ ಆರಂಭಿಸಿದ್ದಾರೆ. ಅಂತಹ ಸ್ಥಳಗಳನ್ನು ಪ್ರವಾಸಿ ಸ್ಥಳವನ್ನಾಗಿಸಿ ಪ್ರವಾಸಿಗರಿಗೆ ಬೇಕಾಗುವ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಬಗ್ಗೆ ಸಂಬಂಧಪಟ್ಟ ಇಲಾಖೆಗಳ ಗಮನಕ್ಕೆ ತರುವ ಕೆಲಸ ಮಾಡುತ್ತಿದೆ ಈ ತಂಡ.


  ಚಾರಣ ಬಳಗ ಇದುವರೆಗೆ ಈ ಸ್ಥಳಗಳಿಗೆಲ್ಲ ಭೇಟಿ ನೀಡಿದೆ!
  ಈಗಾಗಲೇ ಹಿರೇಬೆಣಕಲ್​​ನ ಐತಿಹಾಸಿಕ ಸ್ಥಳಗಳು, ಮಲ್ಲಾಪುರ ಹತ್ತಿರದ ವಾಣಿ ವೀರಭದ್ರೇಶ್ವರ, ಮಲ್ಲಪೂರದ ಖಾನ್ ಸಾಬ್ ಗವಿ, ಹನುಮನಳ್ಳಿಯ ಖುಷಿಮುಖ ಪರ್ವತ, ಜಬ್ಬಲಗುಡ್ಡದ ಕುಮ್ಮಟ ದುರ್ಗ ಬೆಟ್ಟ, ಹೇಮಗುಡ್ಡ, ಆನೆಗೊಂದಿಯ ಚಿಂತಾಮಣಿ ಹೀಗೆ ಹಲವು ಸ್ಮಾರಕಗಳನ್ನು ಗುರುತಿಸಿ ಅವುಗಳ ಸ್ವಚ್ಛತಾ ಕಾರ್ಯ ನಡೆಸಿದ್ದಾರೆ. ಅಲ್ಲದೇ ಈ ಅಭಿಯಾನಕ್ಕೆ ಸ್ಥಳೀಯವಾಗಿ ಪದವಿ ಹಾಗೂ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಉಪನ್ಯಾಸಕರು ಹಾಗೂ ಸರ್ಕಾರಿ ನೌಕರರು ಕೈಜೋಡಿಸಿರುವುದು ಚಾರಣಬಳಗಕ್ಕೆ ಮತ್ತಷ್ಟು ಹುರುಪನ್ನು ಹೆಚ್ಚಿಸಿದೆ.


  ಚಾರಣ ಬಳಗವನ್ನು ನೀವೂ ಸೇರಬೇಕೆ?
  ಇನ್ನು ಸ್ಮಾರಕ ಸ್ಥಳಗಳಿಗೆ ಭೇಟಿ‌ ನೀಡುವ ಸಮಯವನ್ನು ನಿಗದಿಪಡಿಸಿ, ಸಾಮಾಜಿಕ ಜಾಲ ತಾಣಗಳಲ್ಲಿ ಮೊದಲಿಗೆ ತಿಳಿಸಲಾಗುತ್ತದೆ. ಅಲ್ಲದೇ ಕುಡಿಯಲು ನೀರು, ಅಲ್ಪ ಉಪಹಾರದಂತಹ ವ್ಯವಸ್ಥೆ ಮಾಡಿಕೊಳ್ಳಲು ಸಹ ತಿಳಿಸಲಾಗುತ್ತದೆ. ಇವರುಗಳು ಸ್ವಯಂ ಪ್ರೇರಣೆಯಿಂದ ಚಾರಣಿಗರೆಲ್ಲರೂ ಸಭೆ ನಡೆಸಿ ಬರುವವರನ್ನು ಒಗ್ಗೂಡಿಸಿ, ಪುಟ್ಟಿ, ಸಲಾಕೆ, ಕುಡುಗೋಲು ಇನ್ನಿತರ ಸ್ವಚ್ಛತಾ ಸಲಕರಣೆಗಳನ್ನು ತೆಗೆದುಕೊಂಡು ಚಾರಣ ಬಳಗ ತೆರಳುತ್ತದೆ.


  ಕಾಲೇಜು ವಿದ್ಯಾರ್ಥಿಗಳ ಸಾಥ್
  ಈ ಚಾರಣ ಬಳಗಕ್ಕೆ ಮತ್ತಷ್ಟು ಬಲ ಹೆಚ್ಚಿಸುವುದಕ್ಕೆ ಕುಮ್ಮಟ ದುರ್ಗದ ಸ್ವಚ್ಛತಾ ಕಾರ್ಯದಲ್ಲಿ ಗಂಗಾವತಿ ಹಾಗೂ ಕೆಸರಟ್ಟಿ ಸರಕಾರಿ ಪದವಿ ಪೂರ್ವ ಕಾಲೇಜು ಮತ್ತು ಸರೋಜಮ್ಮ ಬಾಲಕಿಯರ ಕಾಲೇಜಿನ 150ಕ್ಕೂ ಹೆಚ್ಚು ವಿದ್ಯಾರ್ಥಿ/ ವಿದ್ಯಾರ್ಥಿನಿಯರು ಭಾಗವಹಿಸಿ ಶ್ರಮದಾನ ಮಾಡಿದ್ದಾರೆ. ಜೊತೆಗೆ ಅಲ್ಲಿರುವ ದೇವಾಲಯವನ್ನು ಸ್ವಚ್ಛ ಮಾಡಿದ್ದಾರೆ. ಒಟ್ಟಾರೆ ಐತಿಹಾಸಿಕ ಸ್ಥಳಗಳನ್ನು ಉಳಿಸುವ ತಂಡ ಈ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.


  ಜಿಲ್ಲೆಯಲ್ಲಿರುವ ಐತಿಹಾಸಿಕ ಸ್ಥಳಗಳು ಲಿಸ್ಟ್ ಇಲ್ಲಿದೆ
  ಜಿಲ್ಲೆಯಲ್ಲಿ ಹಲವು ಐತಿಹಾಸಿಕ ಸ್ಥಳಗಳಿವೆ. ಆನೆಗೊಂದಿ, ಕನಕಗಿರಿ, ಕುಮಾರರಾಮನ ಕುಮ್ಮಟದುರ್ಗ, ಕೊಪ್ಪಳ, ಅಶೋಕ ಶಾಸನ, ಕುಕನೂರು, ಪುರ, ಚಂದಾಲಿಂಗೇಶ್ವರ, ಹಿರೇಬೆಣಕಲ್‌, ಹೇಮಗುಡ್ಡ, ಹುಲಿಗಿ, ಇಟಗಿ, ಸೇರಿದಂತೆ ನಾನಾ ಪ್ರಮುಖ ಐತಿಹಾಸಿಕ ಸ್ಥಳಗಳು ಕಂಡುಬರುತ್ತದೆ.


  ಸಾಮಾಜಿಕ ಜಾಲತಾಣ ಬಳಕೆ
  ಚಾರಣ ಹೋಗುವ ಸ್ಥಳ ಸೇರಿದಂತೆ ಇತರೆ ಮಾಹಿತಿಯನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್‌ ಮಾಡುತ್ತಿದೆ ಈ ತಂಡ. ಜಿಲ್ಲೆಯ ಐತಿಹಾಸಿಕ ಸ್ಥಳಗಳ ಉಳಿವಿಗಾಗಿ ಚಾರಣ ಬಳಗ ಮುಂದಾಗಿದೆ. ಫೇಸ್‌ಬುಕ್‌, ವಾಟ್ಸ್‌ ಆ್ಯಪ್‌ನಲ್ಲಿ ಐತಿಹಾಸಿಕ ಸ್ಥಳಗಳ ಸದ್ಯದ ಸ್ಥಿತಿಯನ್ನು ಸಾರ್ವಜನಿಕರಿಗೆ ತಿಳಿಸುತ್ತಿದೆ.


  ಇದನ್ನೂ ಓದಿ: Social Service: ಸಮಾಜ ಸೇವೆ ಮಾಡದಿದ್ರೆ ಇವರಿಗೆ ನಿದ್ರೆಯೇ ಬರಲ್ವಂತೆ! ಉಚಿತ ಮದುವೆ, ನೀರಿನ ಅರವಟ್ಟಿಗೆಗೆ ಇವರು ಫೇಮಸ್ಸಂತೆ!


  ಈ ಚಾರಣ ಬಳಗವು ಹಿರೇಬೆಣಕಲ್‌ನ ಮೋರೇರ ಸ್ಥಳ, ಕುಮಾರರಾಮನ ಕುಮ್ಮಟ ದುರ್ಗ, ಹಂಪಸದುರ್ಗ ಕೋಟೆ, ಗವಿ ಸ್ಥಳಗಳಿಗೆ ಭೇಟಿ ನೀಡಿದೆ. ಆದರೆ ಇಲ್ಲಿರುವ ಎಲ್ಲ ಐತಿಹಾಸಿಕ ಸ್ಮಾರಕಗಳ ಮೇಲೆ ಗಿಡ ಹಾಗೂ ಗಂಟಿ ಬೆಳೆದಿವೆ. ಆದರೆ ಸಂಬಂಧಿಸಿದ ಇಲಾಖೆಗಳು ಕ್ರಮಕ್ಕೆ ಮುಂದಾಗಿಲ್ಲ. ಆದರೆ ಈ ತಂಡ ಸ್ವಚ್ಛತೆಗೆ ಮುಂದಾಗಿದೆ.


  ಪ್ರತಿ ತಿಂಗಳ 2ನೇ ಭಾನುವಾರ
  ಫೇಸ್‌ಬುಕ್‌ನಲ್ಲಿ ಚಾರಣಕ್ಕೆ ಆಗಮಿಸುವವರಿಗೆ ದಿನಾಂಕ, ಸಮಯ ಶೇರ್‌ ಮಾಡುತ್ತಾರೆ. ಎಲ್ಲರೂ ಬೆಳಗ್ಗೆ 6 ಗಂಟೆಗೆ ಚಾರಣಕ್ಕೆ ತೆರಳುತ್ತಾರೆ. ಇನ್ನು ಸ್ಮಾರಕಗಳು ಹಾಳಾಗುತ್ತಿವೆ. ಬನ್ನಿ ಕೈ ಜೋಡಿಸಿ, ಎಂದು ಸಂದೇಶವನ್ನು ರವಾನಿಸಲಾಗುತ್ತದೆ. ಹೀಗೆ ಚಾರಣಿಗರು ಸೇರಿಕೊಂಡು ಒಂದೊಳ್ಳೆ ಕೆಲಸಕ್ಕೆ ಮುಂದಾಗಿದ್ದಾರೆ. ಅಲ್ಲದೇ ಪ್ರತಿ ತಿಂಗಳ 2ನೇ ಭಾನುವಾರದಂದು ಚಾರಣ ನಡೆಸುತ್ತಾರೆ. ಐತಿಹಾಸಿ ಸ್ಥಳಗಳನ್ನು ಉಳಿಸಿ ಬೆಳೆಸಿ ಮುಂದಿನ ಪೀಳಿಗೆಗೆ ಕೊಡುಗೆಯಾಗಿ ನೀಡಬೇಕು ಎಂದುಕೊಂಡಿರುವ ಚಾರಣಿಗರ ಇಂತಹ ನಿಸ್ವಾರ್ಥ ಸೇವೆಗೆ ಸಮಾಜದಲ್ಲಿ ಮೆಚ್ಚುಗೆ ಮಹಾಪೂರವೇ ಹರಿದುಬರುತ್ತಿದೆ.


  ಇದನ್ನೂ ಓದಿ: ಹಗಲುವೇಷಧಾರಿಗಳೇ, ನೀವೆಲ್ಲಿ ಹೋದಿರಿ? 71 ವರ್ಷದ ಕಲಾವಿದರ ಕಥೆ ಕೇಳಿ


  21 ಚಾರಣ ಯಶಸ್ವಿ!
  "ಗಂಗಾವತಿ ಚಾರಣ ಬಳಗ 21 ಚಾರಣ ಯಶಸ್ವಿಯಾಗಿ ಮಾಡಿದೆ. ನಮ್ಮ ಸುತ್ತಮುತ್ತಲಿನ ಐತಿಹಾಸಿಕ ಸ್ಥಳಗಳನ್ನು ಹಾಗೂ ಸ್ಮಾರಕಗಳನ್ನು ಸಂರಕ್ಷಣೆ ಮಾಡಿ ಜಗತ್ತಿಗೆ ತೋರಿಸುವ ಉದ್ದೇಶವನ್ನು ಹೊಂದಿದ್ದೇವೆ" ಎನ್ನುತ್ತಾರೆ ದಂತವೈದ್ಯ, ಚಾರಣ ಬಳಗದ ಸದಸ್ಯ ಶಿವುಕುಮಾರ್ ಮಾಲಿ ಪಾಟಿಲ್


  ವರದಿ: ರಾಘವೇಂದ್ರ ಜಂಗ್ಲಿ,ಕೊಪ್ಪಳ

  Published by:guruganesh bhat
  First published: