ಕೊಪ್ಪಳ: ಕೇಂದ್ರ ಸರ್ಕಾರ ಹೆದ್ದಾರಿಗಳಲ್ಲಿ 60 ಕಿ.ಮೀ ದೂರದಲ್ಲಿ ಎರಡು ಟೋಲ್ ಪ್ಲಾಜಾಗಳಿರಬಾರದು ಎಂದು ನಿಯಮ ರೂಪಿಸಿದೆ. ಈ ಮಧ್ಯೆ ಮಂಗಳೂರಿನ (Mangaluru News) ಸುರತ್ಕಲ್ನಲ್ಲಿಯ ಟೋಲ್ ಪ್ಲಾಜಾವನ್ನು (Suratkal Toll Plaza) ಅಲ್ಲಿಯ ಜನರ ಒತ್ತಾಯದ ಮೇರೆಗೆ ಬಂದ್ ಮಾಡಲಾಗಿದೆ. ಆದರೆ ಮೊದಲೇ ಹಿಂದುಳಿದ ಪ್ರದೇಶವಾಗಿರುವ ಕೊಪ್ಪಳ ಜಿಲ್ಲೆಯಿಂದ (Koppal News) ಹೆದ್ದಾರಿಗಳಲ್ಲಿ ಪ್ರಯಾಣಿಸಬೇಕಾದರೆ ಅವಶ್ಯಕತೆಗಿಂತ ಅಧಿಕ ಟೋಲ್ ಹಣ ನೀಡಬೇಕು. ಒಂದೇ ರಾಷ್ಟ್ರೀಯ ಹೆದ್ದಾರಿಯಲ್ಲಿ (Koppal Toll Gates) ಒಂದೇ ಜಿಲ್ಲೆಯಲ್ಲಿ ಮೂರು ಕಡೆ ಟೋಲ್ ಹಣ ಕಟ್ಟಬೇಕು!
ಕೇವಲ 4 ಕಿ.ಮೀ ಅಂತರದಲ್ಲಿ ಎರಡೆರಡು ಬಾರಿ ಟೋಲ್!
ಕೊಪ್ಪಳ ಜಿಲ್ಲೆಯಲ್ಲಿ ಸುಮಾರು 80 ಕಿ.ಮೀ ದೂರ ಹಾಯ್ದು ಹೋಗುವ ರಾಷ್ಟ್ರೀಯ ಹೆದ್ದಾರಿ 50 ಸೊಲ್ಲಾಪುರ-ಬೆಂಗಳೂರು ಮಾರ್ಗದಲ್ಲಿ ಕೊಪ್ಪಳ ಜಿಲ್ಲೆಯಲ್ಲಿ ಮೂರು ಕಡೆ ಟೋಲ್ ಪ್ಲಾಜಾಗಳಿವೆ. ಹಿಟ್ನಾಳ, ಶಹಾಪುರ ಹಾಗೂ ಬೋದುರು ಬಳಿಯಲ್ಲಿ ಮೂರು ಕಡೆ ಟೋಲ್ ಪ್ಲಾಜಾಗಳಿವೆ. ಇನ್ನೂ ಶಹಾಪುರ ಹಾಗು ಹಿಟ್ನಾಳ ಮಧ್ಯೆ ಇರುವುದು ಕೇವಲ 4 ಕಿ.ಮೀ ಅಂತರ. ಇಷ್ಟೇ ಅಂತರದಲ್ಲಿ ಎರಡು ಟೋಲ್ ಪ್ಲಾಜಾಗಳಿವೆ. ಕೇವಲ 4 ಕಿ.ಮೀ ಅಂತರದಲ್ಲಿ ಎರಡೆರಡು ಬಾರಿ ಟೋಲ್ ಕಟ್ಟಬೇಕಾದ ಅನಿವಾರ್ಯತೆ ಇದೆ.
ಬೇಸತ್ತ ಪ್ರಯಾಣಿಕರು
ರಾಷ್ಟ್ರೀಯ ಹೆದ್ದಾರಿ 50 ರಲ್ಲಿ ಕೇವಲ 4 ಕಿ.ಮೀ ವ್ಯಾಪ್ತಿಯಲ್ಲಿ ಎರಡು ಟೋಲ್ ಪ್ಲಾಜಾಗಳಿವೆ. ರಾಷ್ಟ್ರೀಯ ಹೆದ್ದಾರಿಗಳು ವಾಹನ ಸಂಚಾರಕ್ಕೆ ಸುಗಮವಾಗಲಿವೆ. ಹೆದ್ದಾರಿಗಳಿಂದಾಗಿ ಜಿಲ್ಲೆಯಲ್ಲಿ ವ್ಯಾಪಾರ ವಹಿವಾಟು, ಜನರ ಸಂಚಾರ ಸುಗಮವಾಗುತ್ತದೆ ಎಂಬ ಖುಷಿ ಒಂದು ಕಡೆಯಾದರೆ, ಇನ್ನೊಂದು ಕಡೆ ಹೆದ್ದಾರಿಗಳಲ್ಲಿ ಶುಲ್ಕ ನೀಡಿ ನೀಡಿ ಜನರು ಬೇಸರ ವ್ಯಕ್ತಪಡಿಸುವಂತಾಗಿದೆ.
ಹೋರಾಟಕ್ಕೆ ಸ್ಪಂದನೆಯೇ ಇಲ್ಲ!
ಅವೈಜ್ಞಾನಿಕವಾಗಿರುವ ಟೋಲ್ಗಳನ್ನು ತೆಗೆಯಿರಿ ಎಂದು ಈ ಭಾಗದ ಜನರು ಹಲವು ಬಾರಿ ಹೋರಾಟ ಮಾಡಿದ್ದಾರೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಜಿಎಂಐಯವರಿಗೆ ಟೋಲ್ ಸಂಗ್ರಹಕ್ಕೆ ಅವಕಾಶ ನೀಡಿದ್ದು ಈ ಭಾಗದ ಜನರ ಹೋರಾಟಕ್ಕೆ ಜಿಎಂಐ ಇಲ್ಲಿಯವರೆಗೂ ಸ್ಪಂದಿಸಿಲ್ಲ. ಈ ಮಧ್ಯೆ ಹಿಟ್ನಾಳ ಬಳಿಯಲ್ಲಿರುವ ಟೋಲ್ ಪ್ಲಾಜಾವನ್ನು ತೆಗೆಯಲು ಹಿಂದೆಯೇ ಒತ್ತಾಯ ಮಾಡಿದಾಗ ಇಲ್ಲಿರುವ ಟೋಲ್ ಹೊಸಪೇಟೆ ಬಳಿಯಲ್ಲಿರುವ ಟನಲ್ಗಾಗಿ ಸಂಗ್ರಹಿಸಲಾಗುತ್ತಿದೆ ಎನ್ನಲಾಗಿದೆ.
ಟೋಲ್ ಪ್ಲಾಜಾ ಅವಶ್ಯಕತೆ ಇಲ್ಲ ಎಂದ ಸಂಸದ
ಟೋಲ್ ಪ್ಲಾಜಾಕ್ಕೂ ಹಾಗು ಟನಲ್ಗೂ ಸುಮಾರು 15 ಕಿ.ಮೀ ಅಂತರವಿದೆ. ಕೊಪ್ಪಳ ಜಿಲ್ಲೆಯಲ್ಲಿಯ ಅವೈಜ್ಞಾನಿಕ ಟೋಲ್ ಪ್ಲಾಜಾಗಳ ಬಗ್ಗೆ ಸಂಸದ ಸಂಗಣ್ಣ ಕರಡಿ "ಇಲ್ಲಿ ಟೋಲ್ ಪ್ಲಾಜಾ ಅವಶ್ಯಕತೆ ಇಲ್ಲ. ಸರಕಾರ ನಿಯಮದಂತೆ ಇಲ್ಲಿಯ ಟೋಲ್ ಗೇಟ್ ಬಂದ್ ಮಾಡಬೇಕಿದೆ. ಈ ಕುರಿತು ಸಂಸತ್ತಿನಲ್ಲಿಯೂ ಪ್ರಶ್ನಿಸಲಾಗಿದೆ. ಈಗ ಅಧಿವೇಶನ ನಡೆಯುತ್ತಿದೆ. ಇದೇ ಸಂದರ್ಭದಲ್ಲಿ ಕೇಂದ್ರ ಸಚಿವ ನಿತಿನ್ ಗಡ್ಕರಿಯವರನ್ನು ಭೇಟಿ ಮಾಡಿ ಒಂದು ಟೋಲ್ ಗೇಟ್ ಬಂದ್ ಮಾಡಿಸಲು ಯತ್ನಿಸಲಾಗುವುದು" ಎಂದು ಹೇಳಿದ್ದಾರೆ.
ಈ ಮಧ್ಯೆ ಕೊಪ್ಪಳ ಜಿಲ್ಲಾಡಳಿತವು ಸಹಾಯಕ ಆಯುಕ್ತರ ನೇತೃತ್ವದಲ್ಲಿ ಸಮೀಕ್ಷೆ ನಡೆಸಿ ವರದಿ ನೀಡಲು ಸೂಚಿಸಿತ್ತು. ಸೂಚನೆಯಂತೆ ಈಗಾಗಲೇ ವರದಿ ನೀಡಿ ಇದು ಅವೈಜ್ಞಾನಿಕವಾಗಿದೆ ಎಂದು ವರದಿ ನೀಡಿದೆ. ಈ ಮಧ್ಯೆ ಈ ಕುರಿತು ಸಭೆಗಳು ಹೋರಾಟಗಳಾಗಿವೆ. ಆದರೂ ಹಿಟ್ನಾಳ ಟೋಲ್ ಗೇಟ್ ಮಾತ್ರ ಬಂದ್ ಆಗಿಲ್ಲ.ಈಗಾಗಲೇ ಸುಮಾರು 15 ವರ್ಷದಿಂದ ಅವೈಜ್ಞಾನಿಕ ಟೋಲ್ ಕಟ್ಟುತ್ತಿರುವ ಕೊಪ್ಪಳ ಜಿಲ್ಲೆಯ ಜನತೆ ಹಾಗೂ ಈ ಜಿಲ್ಲೆಯ ಮುಖಾಂತರ ಹಾಯ್ದು ಹೋಗುವ ವಾಹನ ಚಾಲಕರು ಎರಡು ಟೋಲ್ಗಳಲ್ಲಿ ಒಂದು ಮಾತ್ರ ಉಳಿಸಿ ಎಂದು ಕೇಳಿಕೊಳ್ಳುತ್ತಿದ್ದಾರೆ.
ಇದನ್ನೂ ಓದಿ: Koppal: 48 ಲಕ್ಷ ವಿದ್ಯಾರ್ಥಿಗಳಿಗಾಗಿ ಕೊಪ್ಪಳದ 6ನೇ ಕ್ಲಾಸ್ ಬಾಲಕನಿಂದ ಹೈಕೋರ್ಟ್ ಹೋರಾಟ!
ಸರ್ಕಾರ ಸುರತ್ಕಲ್ ಬಳಿಯಲ್ಲಿ ಟೋಲ್ ಗೇಟ್ ಬಂದ್ ಮಾಡಿದೆ. ಆದರೆ ಹಿಟ್ನಾಳ ಬಳಿಯಲ್ಲಿ ಟೋಲ್ ಗೇಟ್ ಬಂದ್ ಮಾಡಿಸಬೇಕಾಗಿದೆ. ಇಲ್ಲಿ ಎನ್ಎಚ್ಐಯಿಂದ ಸರ್ವಿಸ್ ರೋಡ್ ಇಲ್ಲ. ಸ್ಥಳೀಯರಿಗೆ ಟೋಲ್ನಿಂದ ವಿನಾಯಿತಿ ನೀಡಬೇಕು. ಆದರೆ ಅದು ಆಗಿಲ್ಲ.ರಾಷ್ಟ್ರೀಯ ಹೆದ್ದಾರಿಯಲ್ಲಿ ಕೇವಲ 1 ಕಿ.ಮೀ ಹೋಗಿ ಪ್ರಸಿದ್ದ ಅಂಜನಾದ್ರಿ ಹಾಗೂ ಹುಲಿಗೆಮ್ಮ ದೇವಸ್ಥಾನಕ್ಕೆ ಹೋಗುವ ಭಕ್ತರು, ಪ್ರವಾಸಿಗಳು ಅನಿವಾರ್ಯವಾಗಿ ಟೋಲ್ ಕಟ್ಟಬೇಕಾಗಿದೆ.
ಇದನ್ನೂ ಓದಿ: Koppal Viral Video: ಬಿಸಿಯೂಟಕ್ಕೆ ದಿಢೀರ್ ಅತಿಥಿಯಾಗಿ ಬಂದ ಕೋತಿ! ವೈರಲ್ ಆಗ್ತಿದೆ ಈ ವಿಡಿಯೋ
ಸುರತ್ಕಲ್ನಲ್ಲಿ ಸ್ಥಳೀಯರ ಹೋರಾಟದಿಂದಾಗಿ ಟೋಲ್ ಬಂದ್ ಮಾಡಲಾಗಿದೆ. ಇಲ್ಲಿಯೂ ಇರುವ ಅವೈಜ್ಞಾನಿಕ ಟೋಲ್ ಬಂದ್ ಮಾಡಿಸಬೇಕೆಂದು ಜನತೆ ಆಗ್ರಹಿಸಿದೆ.
ವರದಿ: ಶರಣಪ್ಪ ಬಾಚಲಾಪುರ, ನ್ಯೂಸ್ 18 ಕನ್ನಡ ಕೊಪ್ಪಳ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ