• Home
 • »
 • News
 • »
 • koppala
 • »
 • ಹಗಲುವೇಷಧಾರಿಗಳೇ, ನೀವೆಲ್ಲಿ ಹೋದಿರಿ? 71 ವರ್ಷದ ಕಲಾವಿದರ ಕಥೆ ಕೇಳಿ

ಹಗಲುವೇಷಧಾರಿಗಳೇ, ನೀವೆಲ್ಲಿ ಹೋದಿರಿ? 71 ವರ್ಷದ ಕಲಾವಿದರ ಕಥೆ ಕೇಳಿ

ಹಗಲುವೇಷಧಾರಿಗಳು

ಹಗಲುವೇಷಧಾರಿಗಳು

ಏನಿದು ಹಗಲುವೇಷ? ಈ ಕಲೆಯ ವಿಶೇಷತೆಯೇನು? ಹಗಲುವೇಷ ಕಲಾವಿದರ ಜೀವನ ಈಗ ಹೇಗಿದೆ? ಕನ್ನಡದ ಈ ಕಲೆಯ ಆಗುಹೋಗುಗಳನ್ನು ನೀವು ತಿಳಿದುಕೊಳ್ಳಲೇಬೇಕು!

 • Share this:

  ಕೊಪ್ಪಳ:  ಕಲೆ, ಸಂಸ್ಕೃತಿಗೆ ಕನ್ನಡದ ನೆಲ ಸದಾ ಹೆಸರುವಾಸಿ. ಆದರೆ ಮುಖಕ್ಕೆ ಬಣ್ಣ, ವೇಷಭೂಷಣದೊಂದಿಗೆ ರಾಮಾಯಣ ನಾಟಕದ ಮೂಲಕ ಮಕ್ಕಳು ಮತ್ತು ಜನರನ್ನು ರಂಜಿಸಿ ತಮ್ಮ ಕಲೆ, ಸಂಸ್ಕೃತಿಯನ್ನು (Karnataka Culture) ಬಿಂಬಿಸುತ್ತಿದ್ದವರೇ ಹಗಲುವೇಷಗಾರರು. ಆದರೆ ದುರಾದೃಷ್ಟವೆಂದರೆ ಇಂತಹ ಹಗಲುವೇಷಧಾರಿಗಳು ಇತ್ತೀಚಿನ ದಿನಗಳಲ್ಲಿ ಮರೆಯಾಗುತ್ತಿದ್ದಾರೆ. ಕೊಪ್ಪಳ ಜಿಲ್ಲೆಯ (Koppal District) ಸಿದ್ದಾಪುರ, ತಾವರಗೇರಾ ಕುದರಿಮೋತಿ, ನೂಲ್ವಿ, ಮಾನವಿಯಲ್ಲಿ ಹಗಲುವೇಷಗಾರರು ಅಲ್ಲಲ್ಲಿ ಕಂಡು ಬರುತ್ತಾರೆ. ಶತಶತಮಾನಗಳ ಬಣ್ಣದ ಬದುಕು ಬಿಟ್ಟು ತಮ್ಮ ಮೂಲಕಲೆಯನ್ನು ಮರೆಯುತ್ತಿದ್ದಾರೆ. ಕೆಲ ವರ್ಷಗಳ ಹಿಂದೆ 2 ವರ್ಷಕ್ಕೊಮ್ಮೆ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ರಾಮಾಯಣ, ಕುರುಕ್ಷೇತ್ರಗಳ ಬಗ್ಗೆ ಕಥೆಯ ನಾಟಕವಾಡಿ ಜನರನ್ನು ರಂಜಿಸುತ್ತಿದ್ದರು.  15 ದಿನಗಳ ನಂತರ ಆ ಗ್ರಾಮದಲ್ಲಿ ಸಂಭಾವನೆ ಪಡೆಯುತ್ತಿದ್ದರು. 


  ಕಲೆಯ ಕೀರ್ತಿ ಹೆಚ್ಚಿಸಿದ ಸಿದ್ದಾಪುರಿನ ಶಿವಲಿಂಗಪ್ಪ
  ಕರ್ನಾಟಕ ಸರ್ಕಾರವು ಕಳೆದ ಹಲವು ವರ್ಷಗಳಿಂದ ಕನ್ನಡ ನಾಡು-ನುಡಿಗಾಗಿ ಸೇವೆ ಸಲ್ಲಿಸಿರುವವರನ್ನು ಕರ್ನಾಟಕ ಜಾನಪದ ಅಕಾಡೆಮಿ ಮೂಲಕ ಜಾನಪದ ಕಲಾವಿದರನ್ನು ಗುರುತಿಸಿ ವಾರ್ಷಿಕ ಗೌರವ ಪ್ರಶಸ್ತಿ ನೀಡಿ ಗೌರವಿಸುತ್ತಿದೆ. 2021ನೇ ಸಾಲಿನಲ್ಲಿ ಈ ಗೌರವಕ್ಕೆ ಕಲ್ಯಾಣ ಕರ್ನಾಟಕದ ಕೊಪ್ಪಳ ಜಿಲ್ಲೆಯ ಕಾರಟಗಿ ತಾಲ್ಲೂಕಿನ ಸಿದ್ದಾಪುರ ಗ್ರಾಮದ 71 ವರ್ಷದ ಮೀರಾಲಿ ಶಿವಲಿಂಗಪ್ಪ  ಅವರು ಪಾತ್ರರಾಗಿದ್ದಾರೆ.


  ಬಾಲ್ಯ ಬಲು ಕಷ್ಟವಿತ್ತು
  ಹೌದು, ಇವರೊಬ್ಬ ಅದ್ವಿತೀಯ ಜಾನಪದ ಕಲಾ ಪ್ರಕಾರವಾದ ಹಗಲುವೇಷ ಕಲಾವಿದರು. ಅಲೆಮಾರಿ ಬೇಡ ಬುಡ್ಗ ಜಂಗಮ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಬಾಲ್ಯದಲ್ಲಿಯೇ ತಂದೆ ರಾಮಣ್ಣನವರನ್ನು ಕಳೆದುಕೊಂಡ ಶಿವಲಿಂಗಪ್ಪನವರು ತಾಯಿ ಈರಮ್ಮ, ಸೋದರ ಮಾವ ಯಡವಲಿ ಶಂಕ್ರಪ್ಪನವರ ಸಹಕಾರದೊಂದಿಗೆ ಈ ಹಗಲುವೇಷ ಕಲೆಯನ್ನು ಅರಿತವರು. ಅವರ ಮಾರ್ಗದರ್ಶನದಿಂದ ಅನೇಕ ನಾಟಕಗಳು, ಜಾನಪದ ಸಂಗೀತ, ಸುಗಮ ಸಂಗೀತ ಇನ್ನೂ ಮುಂತಾದ ಕಲೆಗಳನ್ನು ಈ ನಾಡಿನಾದ್ಯಂತ ಪ್ರದರ್ಶನ ನೀಡುತ್ತಾ ಬಂದಿದ್ದಾರೆ.


  ಕಲಾವಿದ ಶಿವಲಿಂಗಪ್ಪನವರು


  ಶಿವಲಿಂಗಪ್ಪ ಅವರು ಪ್ರದರ್ಶಿಸಿದ ನಾಟಕಗಳಿವು
  ಇವರು ಪ್ರದರ್ಶಿಸಿದ ನಾಟಕಗಳೆಂದರೆ, ಶೂರ್ಪನಖಿಯ ಗರ್ವಭಂಗ, ಭೀಮಾಂಜನೇಯ ಯುದ್ಧ, ಮೋಹಿನಿ ಭಸ್ಮಾಸುರ, ಜಟಾಸುರನ ವಧಾ, ಭಸ್ಮಾಸುರ, ಸುಂದ ಪಸುಂಧರ ವಧೆ , ಸಿಂಧೂರ ಲಕ್ಷ್ಮಣ, ಬ್ರಾಹ್ಮಣರ ವೇಷ , ಅಗಸರ ನಂದವ್ವನ ವೇಷ , ಜಂಗಮರ ವೇಷ, ಲಂಬಾಣಿ ವೇಷ ಇನ್ನೂ ಹಲವಾರು ಸಾಮಾಜಿಕ ನಾಟಕಗಳನ್ನು ಪ್ರದರ್ಶಿಸಿ ಜನರನ್ನು ಮನರಂಜಿಸುವುದರ ಜೊತೆಗೆ ಸಾಮಾಜಿಕ ಕಳಕಳಿಯನ್ನು ಮೂಡಿಸುತ್ತ ಬಂದಿದ್ದಾರೆ.


  ಕಲೆಯಲ್ಲಿಯೇ ಬಂದ ಕುಟುಂಬ
  ಇವರ ಪತ್ನಿ ಶಿವಮ್ಮ ಕೂಡ ಗಂಗಿಗೌರಿ ಗಾಯನ ಮೇಳ ಕಲಾವಿದರಾಗಿದ್ದು, ಇವರಿಗೆ ನಾಲ್ಕು ಜನ ಮಕ್ಕಳು. ಇವರಲ್ಲಿ ಇಬ್ಬರು ಲಿಂಗರಾಜ  ಮತ್ತು ರಾಮೇಶ್  ತಂದೆಗೆ ಸಾಥ್ ನೀಡುತ್ತಾ ಅದ್ಭುತ ಕಲಾವಿದರಾಗಿದ್ದಾರೆ. ಮತೊಬ್ಬ ಮಗ ನಾರಾಯಣಿ ವ್ಯಾಪಾರಿಯಾಗಿದ್ದಾರೆ. ನಾಲ್ಕನೇ ಮಗ ಮಂಜುನಾಥ ಪಿಯುಸಿ ಓದುತ್ತಿದ್ದಾರೆ. ಇವರ ಇಡೀ ಕುಟುಂಬ ಮತ್ತು ಸಮುದಾಯ ಕಲೆಯನ್ನು ನಂಬಿ, ಕಲೆಯನ್ನೇ ಉಸಿರಾಗಿಸಿಕೊಂಡು ಜೀವನ ಮಾಡುತ್ತಿದ್ದಾರೆ.


  ಹಗಲುವೇಷಧಾರಿಗಳ ತಂಡ


  ಪ್ರದರ್ಶನ ಎಲ್ಲಿ?
  ಕನ್ನಡ ಸಾಹಿತ್ಯ ಸಮ್ಮೇಳನ , ಮೈಸೂರು ದಸರಾ ಉತ್ಸವ, ಗಡಿನಾಡು ಉತ್ಸವ, ಹಂಪಿ ಉತ್ಸವ , ಆನೆಗೊಂದಿ ಉತ್ಸವ, ಜಾನಪದ ಜಾತ್ರೆ ಮಹಾರಾಷ್ಟ್ರದ ಪುಣೆ, ಮುಂಬಯಿ, ಕೊಲ್ಲಾಪುರ ನಗರಗಳಲ್ಲಿ ತಮ್ಮ ಕಲೆ ಪ್ರದರ್ಶಿಸಿ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಉತ್ಸವ, ರಾಜ್ಯೋತ್ಸವ, ಪ್ರತಿಭಟನೆ ಸೇರಿದಂತೆ ನಾನಾ ಕಾರ್ಯಕ್ರಮಗಳಲ್ಲಿ ಹಾಗೂ ಇನ್ನಿತರ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಭಾರತದಾದ್ಯಂತ ಪ್ರದರ್ಶನ ನೀಡಿದ್ದಾರೆ. ಇನ್ನೂ ಹಲವಾರು ಸಂಘ ಸಂಸ್ಥೆಗಳಿಗೆ ಆಹ್ವಾನಿತರಾಗಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ್ದಾರೆ.


  ಇದನ್ನೂ ಓದಿ: Koppal: ಈ ಸ್ಮಶಾನ ನೋಡಲೆಂದೇ ಜನ ಪ್ರವಾಸಕ್ಕೆ ಬರ್ತಾರೆ! ಎಲ್ಲಿದೆ ಈ ರುದ್ರಭೂಮಿ?


  ಹಗಲು ವೇಷಗಾರರು ಅಂದರೆ ಯಾರು?
  ಹಗಲುವೇಷಗಾರರು ಅವರ ಕುಟುಂಬದಿಂದ 10 ರಿಂದ 12 ಜನರ ತಂಡ ಸೇರಿಕೊಂಡು ರಾಮಾಯಣದ ಪಾತ್ರಗಳಾದ  ರಾಮ, ಲಕ್ಷ್ಮಣ, ಸೀತೆ, ಹನುಮಂತ, ನಕುಲ, ಸಹದೇವ, ದುರ್ಯೋಧನ, ಪಾಂಚಾಲಿ, ರಾಕ್ಷಸ ಸೇರಿದಂತೆ ನಾನಾ ವೇಷ ಧರಿಸಿ ರಾಮಾಯಣದ ಗೀತೆ, ಭಾವಗೀತೆ, ಭಕ್ತಿಗೀತೆಗಳ ಮೂಲಕ ರಾಮಾಯಣವನ್ನು ಮೆಲುಕು ಹಾಕುತ್ತಾ ಮತ್ತೆ ಜನರನ್ನು ರಂಜಿಸುತ್ತಾ ಊರೂರು ಅಲೆದಾಡುತ್ತಾರೆ.


  ಹಗಲುವೇಷಧಾರಿ ತಂಡದ ಪ್ರದರ್ಶನ


  ಇದನ್ನೂ ಓದಿ: Anjanadri Hill: ಹನುಮ ಜನ್ಮಭೂಮಿ ಅಂಜನಾದ್ರಿ ಪರ್ವತದ ದರ್ಶನ ಮಾಡಿಬನ್ನಿ! ಬಸ್, ರೈಲು, ವಸತಿ ವ್ಯವಸ್ಥೆಯ ಮಾಹಿತಿ ಇಲ್ಲಿದೆ


  ಪರ್ಯಾಯ ಕೆಲಸವೇನು?
  ಹಗಲುವೇಷ ಧರಿಸಿ ರಾಮ, ರಾವಣರ ಕಥೆ ಹೇಳುವ ಮೂಲಕ ಹಣ ಸಂಪಾದಿಸಿ ಕೆಲ ವೇಷಗಾರರು ಸ್ವಂತ ಮನೆ ನಿರ್ಮಿಸಿಕೊಂಡು ಗದ್ದೆ ಮಾಡಿಕೊಂಡು ಜೀವನ ನಿರ್ವಹಣೆ ಮಾಡುತ್ತಿದ್ದಾರೆ. ಕೆಲ ವೇಷಗಾರರು ಗೋಡೆ ಭಾವಚಿತ್ರ, ಪ್ಲಾಸ್ಟಿಕ್ ತಂಬಿಗೆ, ದಿನದರ್ಶಿನಿ ಸೇರಿದಂತೆ ನಾನಾ ವ್ಯಾಪಾರ ವಹಿವಾಟು ನಡೆಸುತ್ತಿದ್ದಾರೆ. ಈಗ ಬೆರಳಣಿಕೆಯಷ್ಟು ವೇಷಗಾರರು ನೆನಪಾದಾಗ ಇಲ್ಲವೇ, ಕಾಟಾಚಾರಕ್ಕೆ ಎನ್ನುವಂತೆ ಭಕ್ತಿಗೀತೆ, ಸಂಸ್ಕೃತಿ ಮೂಲಕ ಸಂಭಾವನೆ ಪಡೆಯುತ್ತಿರುವುದು ಅಲ್ಲಲ್ಲಿ ಕಂಡುಬರುತ್ತಿದೆ.


  ವರದಿ: ರಾಘವೇಂದ್ರ ಜಂಗ್ಲಿ, ಕೊಪ್ಪಳ

  Published by:guruganesh bhat
  First published: