• ಹೋಂ
  • »
  • ನ್ಯೂಸ್
  • »
  • ಕೊಪ್ಪಳ
  • »
  • Koppal: 48 ಲಕ್ಷ ವಿದ್ಯಾರ್ಥಿಗಳಿಗಾಗಿ ಕೊಪ್ಪಳದ 6ನೇ ಕ್ಲಾಸ್ ಬಾಲಕನಿಂದ ಹೈಕೋರ್ಟ್ ಹೋರಾಟ!

Koppal: 48 ಲಕ್ಷ ವಿದ್ಯಾರ್ಥಿಗಳಿಗಾಗಿ ಕೊಪ್ಪಳದ 6ನೇ ಕ್ಲಾಸ್ ಬಾಲಕನಿಂದ ಹೈಕೋರ್ಟ್ ಹೋರಾಟ!

X
ಇಲ್ಲಿ ವಿಡಿಯೋ ನೋಡಿ

"ಇಲ್ಲಿ ವಿಡಿಯೋ ನೋಡಿ"

"ಸರ್ಕಾರ ಸಿದ್ದ ಸಮವಸ್ತ್ರ ನೀಡುವವರೆಗೂ ಶಾಲೆಯಲ್ಲಿ ನೀಡುವ ಸಮವಸ್ತ್ರ ನನಗೆ ಬೇಡ" ಎಂದು ಸಮವಸ್ತ್ರವಿಲ್ಲದೇ ಶಾಲೆಗೆ ಬರುತ್ತಿದ್ದಾನೆ ಕೊಪ್ಪಳದ ಈ ವಿದ್ಯಾರ್ಥಿ!

  • News18 Kannada
  • 3-MIN READ
  • Last Updated :
  • Koppal, India
  • Share this:

    ಕೊಪ್ಪಳ: ಗ್ರೌಂಡ್​ನಲ್ಲಿ ಆಟಾಡ್ತಿರೋ ಮುದ್ದು ಮಕ್ಕಳು, ನಗುತ್ತಾ ದೋಸ್ತಿಗಳ ಭುಜದ ಮೇಲೆ ಕೈ ಹಾಕ್ಕೊಂಡು ಓಡಾಡ್ತಿರೋ ಪುಟ್ಟ ವಿದ್ಯಾರ್ಥಿಗಳು. ಶಾಲೆ ಕಲಿತು (Government School)  ಉತ್ತಮ ಭವಿಷ್ಯ ರೂಪಿಸಿಕೊಳ್ಳುವ ಕನಸು ಹೊತ್ತಿರೋ ಮನಸುಗಳು. ಈ ಸರ್ಕಾರಿ ಶಾಲೆಯ (Government School Student) ವಿದ್ಯಾರ್ಥಿಯೋರ್ವ ಇಡೀ ರಾಜ್ಯದ 48 ಲಕ್ಷ ಶಾಲಾ ವಿದ್ಯಾರ್ಥಿಗಳ ಪರವಾಗಿ ಹೋರಾಟಕ್ಕಿಳಿದಿದ್ದಾನೆ!


    ಶಾಲೆಯ ಮುಂದೆ ಹೀಗೆ ಸಮವಸ್ತ್ರವಿಲ್ಲದೆ ನಿಂತಿರುವ ವಿದ್ಯಾರ್ಥಿ ಹೆಸರು ಮಂಜುನಾಥ ಅಂತ. ಕೊಪ್ಪಳ ತಾಲೂಕಿನ ಕಿನ್ನಾಳದ ಕುವೆಂಪು ಶತಮಾನೋತ್ಸವ ಮಾದರಿ ಶಾಲೆಯಲ್ಲಿ 6 ನೇ ತರಗತಿ ವಿದ್ಯಾರ್ಥಿ. ಮಂಜುನಾಥನಿಗೆ 2018 ರಲ್ಲಿ ಸರಕಾರದಿಂದ ಸಮವಸ್ತ್ರ ಬಟ್ಟೆ ನೀಡಿದ್ದರು. ಆದರೆ ಸರಕಾರದಿಂದ ಶಾಲಾ ಮಕ್ಕಳಿಗೆ ಸಿದ್ದವಾಗಿರುವ ಸಮವಸ್ತ್ರ ನೀಡಬೇಕು. ಕೇವಲ ಬಟ್ಟೆ ನೀಡಿದರೆ ಹೊಲಿಸಿಕೊಳ್ಳಲು ಆಗಲ್ಲ, ಪಾಲಕರಿಗೆ ಹೊರೆಯಾಗುತ್ತೆ ಎಂದು ಮಂಜುನಾಥ್ ಸಮವಸ್ತ್ರದ ಬಟ್ಟೆಯನ್ನು ತಿರಸ್ಕರಿಸಿದ್ದ.


    ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದ ಬಾಲಕ
    ಇದೇ ವೇಳೆ ಶಾಲಾ ಮಕ್ಕಳಿಗೆ ವರ್ಷಕ್ಕೆ 2 ಜೊತೆ ಸಮವಸ್ತ್ರವನ್ನು ಸಿದ್ದಪಡಿಸಿ ನೀಡಬೇಕು. ಇಲ್ಲದಿದ್ದರೆ ಬಟ್ಟೆ ಹೊಲಿಸಿಕೊಳ್ಳಲು ಪಾಲಕರಿಗೆ ಹೊರೆಯಾಗುತ್ತದೆ ಎಂದು ವಿದ್ಯಾರ್ಥಿ ಮಂಜುನಾಥ್ ಕರ್ನಾಟಕ ಹೈಕೋರ್ಟ್​ಗೆ 2018 ರಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದ.


    Koppal School Boy
    ವಿದ್ಯಾರ್ಥಿ ಮಂಜುನಾಥ್


    ಸರ್ಕಾರಕ್ಕೆ ಛೀಮಾರಿ ಹಾಕಿದ ಕೋರ್ಟ್
    ವಿದ್ಯಾರ್ಥಿ ಮಂಜುನಾಥ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಶಾಲಾ ಮಕ್ಕಳಿಗೆ ಸಮವಸ್ತ್ರ ನೀಡದ್ದಕ್ಕೆ ಸರ್ಕಾರಕ್ಕೆ ಛೀಮಾರಿ ಹಾಕಿದೆ. ಉತ್ಸವಗಳಿಗೆ ಖರ್ಚು ಮಾಡುವ ಮೊದಲು ಶಾಲಾ ಮಕ್ಕಳಿಗೆ ಸಮವಸ್ತ್ರ ಹಾಗು ಶೂಗಳನ್ನು ನೀಡಬೇಕೆಂದು ಮದ್ಯಂತರ ತೀರ್ಪು ನೀಡಿದೆ.


    ನನಗೆ ಸಮವಸ್ತ್ರದ ಬಟ್ಟೆ ಬೇಡವೇ ಬೇಡ!
    ಈ ಕುರಿತು ಮಾತನಾಡಿದ ಮಂಜುನಾಥ್, "ಸರ್ಕಾರ ನನ್ನ ಅರ್ಜಿಯನ್ನು ಪುರಸ್ಕರಿಸಿದೆ. ಎಲ್ಲರಿಗೂ ಸಿದ್ದ ಸಮವಸ್ತ್ರ ನೀಡಬೇಕೆಂದು ಹೇಳಿದ್ದಾನೆ. ಅಲ್ಲದೇ, ಸಿದ್ದ ಸಮವಸ್ತ್ರ ನೀಡುವವರೆಗೂ ಶಾಲೆಯಲ್ಲಿ ನೀಡುವ ಸಮವಸ್ತ್ರ ನನಗೆ ಬೇಡ" ಎಂದು ತಿರಸ್ಕರಿಸಿ ಸಮವಸ್ತ್ರವಿಲ್ಲದೇ ಶಾಲೆಗೆ ಬರುತ್ತಿದ್ದಾನೆ.




    ಸಮವಸ್ತ್ರ ನೀಡುವ ಜವಾಬ್ದಾರಿ ಯಾರದ್ದು?
    "ರಾಜ್ಯ ಸರ್ಕಾರ ಒಂದು ಜೊತೆ, ಕೇಂದ್ರ ಸರ್ಕಾರ ಸರ್ವಶಿಕ್ಷಾ ಅಭಿಯಾನದಡಿ ಇನ್ನೊಂದು ಜೊತೆ, ಒಟ್ಟು ಎರಡು ಜೊತೆ ಬಟ್ಟೆಯನ್ನು 1 ರಿಂದ 10 ನೇ ತರಗತಿಯವರೆಗೂ ಓದುವ ವಿದ್ಯಾರ್ಥಿಗಳಿಗೆ ಸಮವಸ್ತ್ರ ಸಿದ್ದಪಡಿಸಿ ನೀಡಬೇಕು. ಆದ್ರೆ ಮೊದಲ ಜೊತೆ ಸಮವಸ್ತ್ರದಲ್ಲಿ ಕೇವಲ ಬಟ್ಟೆ ನೀಡುತ್ತಿದ್ದಾರೆ. ಎರಡನೆಯ ಜೊತೆಯನ್ನು ಶಾಲಾ ಹಂತದಲ್ಲಿ ಖರೀದಿಸಿ ನೀಡಲು ಸೂಚನೆಯಿದೆ. ಆದರೆ 2019-20, 20-21 ಹಾಗು 21-22 ರಲ್ಲಿ ಶಾಲಾ ಮಕ್ಕಳಿಗೆ ಸಮವಸ್ತ್ರ ನೀಡಿಲ್ಲ. ಈ ಮಧ್ಯೆ ಈ ವರ್ಷ 2 ಜೊತೆ ಸಮವಸ್ತ್ರ ಬಟ್ಟೆಗಳನ್ನು ನೀಡಿದ್ದಾರೆ. ಆದ್ರೆ ಸರ್ಕಾರ ಒಂದು ಜೊತೆಯ ಬಟ್ಟೆಯನ್ನು ಟೆಂಡರಿನಲ್ಲಿ ಖರೀದಿಸಿದ್ದನ್ನು ಹೇಳುತ್ತಿದೆ. 2ನೇ ಜೊತೆ ಬಟ್ಟೆಯನ್ನು ಯಾವ ಇಲಾಖೆಯಿಂದ ನೀಡಲಾಗಿದೆ ಎಂಬ ಮಾಹಿತಿ ತಿಳಿಸಿಲ್ಲ. ಈ ಕುರಿತು ಆಡಳಿತ ಹಾಗು ಪ್ರತಿಪಕ್ಷಗಳ ನಾಯಕರು ಸಹ ಮಾತನಾಡುತ್ತಿಲ್ಲ" ಎಂದು ಅರ್ಜಿದಾರ ಬಾಲಕನ ತಂದೆ ದೇವರಾಜ್ ಹೇಳುತ್ತಾರೆ.


    48 ಲಕ್ಷ ಶಾಲಾ ಮಕ್ಕಳ ಪರವಾಗಿ ಹೋರಾಟ
    ರಾಜ್ಯದ 48 ಲಕ್ಷ ಶಾಲಾ ಮಕ್ಕಳಿಗೆ ಸಿದ್ದಪಡಿಸಿದ ಸಮವಸ್ತ್ರ ನೀಡುವವರೆಗೂ ನನ್ನ ಮಗ ಕಾನೂನು ಹೋರಾಟ ಮಾಡುತ್ತಾನೆ ಎಂದು ದೇವರಾಜ್ ತಿಳಿಸಿದ್ದಾರೆ. ಸದ್ಯ ಇಡೀ ಸರ್ಕಾರಿ ಶಾಲೆ ವಿದ್ಯಾರ್ಥಿಗಳ ಪರ ಹೋರಾಟಕ್ಕಿಳಿದ 6ನೇ ಕ್ಲಾಸ್ ವಿದ್ಯಾರ್ಥಿ ಮಂಜುನಾಥ್ ಮಾತ್ರ ರಾಜ್ಯದ ಗಮನಸೆಳೆಯುತ್ತಿದ್ದಾನೆ.


    ವರದಿ: ಶರಣಪ್ಪ ಬಾಚಲಾಪುರ, ನ್ಯೂಸ್ 18 ಕನ್ನಡ ಕೊಪ್ಪಳ

    Published by:ಗುರುಗಣೇಶ ಡಬ್ಗುಳಿ
    First published: