ಕೊಪ್ಪಳ: ಭಾರತ ಕೃಷಿ ಪ್ರಧಾನ ರಾಷ್ಟ್ರ, ಕೃಷಿಯನ್ನು ನಂಬಿರುವ ರೈತರು ಭೂಮಿಯಲ್ಲಿ ಬೆಳೆಯನ್ನು ಬಿತ್ತನೆ ಮಾಡುವ ಮುನ್ನ ಹಲವಾರು ಸಂಪ್ರಾದಾಯಿಕ ಪದ್ದತಿಗಳನ್ನು ಅಳವಡಿಸಿಕೊಂಡಿರುತ್ತಾರೆ. ಅದರಲ್ಲಿಯೂ ಮುಂಗಾರು ಹಂಗಾಮಿನ ಮುನ್ನ ರೈತರು ದೇವರಿಗೆ ಮೊರೆ (Farmers Tradition) ಹೋಗುವುದು ವಾಡಿಕೆ. ಪ್ರತಿ ಗ್ರಾಮದಲ್ಲಿಯೂ ಗ್ರಾಮ ದೇವತೆಯ ಪೂಜೆ ಸಲ್ಲಿಸುವುದು ವಾಡಿಕೆ. ಆ ನಂತರ ಕೃಷಿ ಭೂಮಿಯಲ್ಲಿ (Agriculture Land) ಭೂಮಿಗೆ ಹಾಲೆರೆಯುವ (Milk To Mother Earth) ಪದ್ದತಿ ಇದೆ.
ಕೊಪ್ಪಳ ತಾಲೂಕಿನ ಮುದ್ದಾಬಳ್ಳಿಯಲ್ಲಿ ಮುಂಗಾರು ಬಿತ್ತನೆಯ ಮುನ್ನ ವಿಶಿಷ್ಠ ಆಚರಣೆಯಿದೆ. ಈ ಗ್ರಾಮದಲ್ಲಿ ತಮ್ಮ ಗ್ರಾಮದ ಸೀಮೆಯ ಸುತ್ತಲೂ ಹಾಲೆರೆಯುವ ಪದ್ದತಿಯಿದೆ.
ಸಂಪ್ರದಾಯ ಬದ್ದವಾಗಿ ಇಡೀ ಗ್ರಾಮಸ್ಥರು ಮುದ್ದಾಬಳ್ಳಿಯ ಸೀಮೆಯ ಸುತ್ತಲು ಭಾಜಾ ಭಜಂತ್ರಿಯೊಂದಿಗೆ ಗಡಗಿಯಲ್ಲಿ ತುಂಬಿಕೊಂಡಿರುವ ಹಾಲನ್ನು ಭೂಮಿಗೆ ಎರೆಯುತ್ತಾರೆ. ಈ ದಿನದಂದು ಮುದ್ದಾಬಳ್ಳಿ ಗ್ರಾಮದಲ್ಲಿ ಸಂಭ್ರಮ ಮನೆ ಮಾಡಿರುತ್ತದೆ.
ಬಿತ್ತನೆ ಕೆಲಸಕ್ಕೆ ಸಂಭ್ರಮದ ಜೊತೆ!
ಉತ್ತರ ಕರ್ನಾಟಕ ಭಾಗದಲ್ಲಿ ಜೂನ್ ತಿಂಗಳ ಆರಂಭದಲ್ಲಿ ಮುಂಗಾರು ಬೆಳೆಗಳ ಬಿತ್ತನೆ ಮಾಡಲಾಗುತ್ತದೆ. ಮುಂಗಾರು ಮಳೆ ಸುರಿಯುವ ಮುನ್ನ ಕೃಷಿ ಭೂಮಿಯನ್ನು ಹದ ಮಾಡಿಕೊಂಡಿರುವ ರೈತರು ವರ್ಷಪೂರ್ತಿ ಅನ್ನ, ಆರ್ಥಿಕತೆ ನೀಡುವ ಬೆಳೆಯನ್ನು ಬೆಳೆಯಲು ಸಂಭ್ರಮದಿಂದ ಬಿತ್ತನೆ ಮಾಡುತ್ತಾರೆ.
ದ್ಯಾಮವ್ವ ಅಥವಾ ದುರ್ಗಮ್ಮ ದೇವತೆಯರ ಆರಾಧನೆ
ಭೂಮಿಗೆ ಬೀಜಗಳನ್ನು ಹಾಕಿ, ಈ ಬೀಜವು ಕಾಳು ನೀಡಿ ತಮ್ಮ ವರ್ಷ ಬದುಕು ಹಸನವಾಗಲಿ ಎಂಬ ಕಾರಣಕ್ಕೆ ರೈತರು ಬಿತ್ತನೆಯ ಮುನ್ನ ದೇವರಿಗೆ ಮೊರೆ ಹೋಗುತ್ತಾರೆ. ಪ್ರತಿ ಗ್ರಾಮದಲ್ಲಿ ದ್ಯಾಮವ್ವ ಅಥವಾ ದುರ್ಗಮ್ಮ ದೇವತೆಯನ್ನು ಗ್ರಾಮ ದೇವತೆ ಎಂದು ಪೂಜೆ ಮಾಡುತ್ತಾರೆ. ದೇವಿಯನ್ನು ಸಂತೃಪ್ತಿಗೊಳಿಸಿದರೆ ಮುಂದಿನ ನಮ್ಮ ಬದುಕು ಉತ್ತಮವಾಗಿರುತ್ತದೆ ಎಂಬ ನಂಬಿಕೆ ಇದೆ. ಇದೇ ಕಾರಣಕ್ಕೆ ಮುಂಗಾರು ಹಂಗಾಮಿನ ಮುನ್ನ ಪ್ರತಿ ಗ್ರಾಮದಲ್ಲಿ ಗ್ರಾಮ ದೇವಿಯನ್ನು ಆರಾಧಿಸುವ ಹಿನ್ನೆಲೆಯಲ್ಲಿ ಮಂಗಳವಾರ, ಶುಕ್ರವಾರ ಪೂಜೆ ಸಲ್ಲಿಸುತ್ತಾರೆ.
ಕೃಷಿ ಕೆಲಸಕ್ಕೆ ರಜೆ!
ಈ ಸಂದರ್ಭದಲ್ಲಿ ಗ್ರಾಮಸ್ಥರು ಕೃಷಿ ಕಾರ್ಯಕ್ಕೆ ರಜೆ ನೀಡಿ ಅಂದು ದೇವಿಗೆ ಪೂಜೆ ಸಲ್ಲಿಸುತ್ತಾರೆ. ಐದನೆಯ ವಾರದಂದು ಗ್ರಾಮಸ್ಥರೆಲ್ಲರೂ ದೇವಿಗೆ ಉಡಿ ತುಂಬುವ ಕಾರ್ಯ ಮಾಡುತ್ತಾರೆ. ದೇವಿಗೆ ಉಡಿ ತುಂಬುವವರಿಗೂ ಯಾರೂ ಭೂಮಿಯಲ್ಲಿ ಬಿತ್ತನೆ ಕಾರ್ಯ ಆರಂಭಿಸುವುದಿಲ್ಲ. ದೇವಿಯ ಉಡಿ ತುಂಬಿದ ನಂತರ ಉತ್ತಮ ಮಳೆಯಾದ ತಕ್ಷಣ ಬಿತ್ತನೆ ಕಾರ್ಯ ಆರಂಭಿಸುತ್ತಾರೆ. ಇದು ತಲೆ ತಲಾಂತರದಿಂದಲೂ ನಡೆದುಕೊಂಡು ಬಂದಿರುವ ಪದ್ದತಿಯಾಗಿದೆ.
ಇದನ್ನೂ ಓದಿ: Viral Video: 105 ಕೆಜಿ ತೂಕದ ಚೀಲ ಹೊತ್ತು 570 ಮೆಟ್ಟಿಲು ಏರಿದ ಹನುಮ ಭಕ್ತ!
ಹಾಲಿನ ಗಡಗಿಗೆ ಪೂಜೆ
ಇನ್ನೂ ಮುದ್ದಾಬಳ್ಳಿಯಲ್ಲಿ ಗ್ರಾಮ ದೇವಿಯ ಉಡಿ ತುಂಬಿದ ನಂತರದ ಮಂಗಳವಾರ ಗ್ರಾಮದಲ್ಲಿ ಹಾಲೆರೆಯುವ ಪದ್ದತಿ ಇದೆ. ಗ್ರಾಮ ದೇವತೆಯ ಮುಂದೆ ಮಣ್ಣಿನ ಗಡಗಿಯನ್ನು ತಂದು ಅದರಲ್ಲಿ ಧಾನ್ಯಗಳನ್ನು ಹಾಕಿ ಗಡಗಿಯಲ್ಲಿ ಹಾಲು ಹಾಕುತ್ತಾರೆ. ಗ್ರಾಮದ ದಾಸಯ್ಯರನ್ನು ಕರೆದು ದೇವಿಯ ಮುಂದೆ ಇರುವ ಹಾಲಿನ ಗಡಗಿಗೆ ಪೂಜೆ ಸಲ್ಲಿಸಿ ನಂತರ ದಾಸಯ್ಯ ಈ ಗಡಗಿಯನ್ನು ಹೊತ್ತುಕೊಂಡು ಗ್ರಾಮದ ಸೀಮಾಂತರದ ಸುತ್ತಲು ಹೋಗಿ ನಾಲ್ಕು ದಿಕ್ಕಿನಲ್ಲಿ ಪೂಜೆ ಸಲ್ಲಿಸಿ ಬರುತ್ತಾರೆ.
ಈ ಸಂದರ್ಭದಲ್ಲಿ ಡೊಳ್ಳು, ಭಾಜಾ ಭಜಂತ್ರಿಯೊಂದಿಗೆ ಜನರು ಪಾಲ್ಗೊಂಡು ತಮ್ಮ ಗ್ರಾಮದ ಸುತ್ತಲು ಹಾಲಿನ ಅಭಿಷೇಕ ಮಾಡಿ ಭೂಮಿಗೆ ಪೂಜೆ ಸಲ್ಲಿಸಿ ತಮ್ಮ ಗ್ರಾಮಕ್ಕೆ ಮಳೆ, ಬೆಳೆ ‘ಚೆನ್ನಾಗಿ ಆಗಲಿ ಎಂದು ಪ್ರಾರ್ಥಿಸುತ್ತಾರೆ, ಬೆಳೆಗೆ ಕೀಟ ಭಾದೆ ಬಾರದಂತೆ ಪ್ರಾರ್ಥಿಸುತ್ತಾರೆ.
ಇದನ್ನೂ ಓದಿ: Koppal: ವಿಶೇಷ ಚೇತನರಿಗೆ ಉಚಿತ ಹೇರ್ ಕಟಿಂಗ್! ಅಂಧರನ್ನು ಇನ್ನಷ್ಟು 'ಅಂದ' ಮಾಡುವ ಸಲೂನ್ ಮಾಲೀಕ!
ಈ ಸಂದರ್ಭದಲ್ಲಿ ಹಿಂದೂ, ಮುಸ್ಲಿಂ. ದಲಿತ, ಸವರ್ಣಿಯ ಎಂಬ ಬೇಧ ಭಾವವಿಲ್ಲದೆ ಇಡೀ ಗ್ರಾಮಸ್ಥರು ಒಗ್ಗಟ್ಟಿನಿಂದ ಹಾಲೆರೆಯುವ ಪದ್ದತಿಯಲ್ಲಿ ಪಾಲ್ಗೊಳ್ಳುತ್ತಾರೆ. ಹಿಂದಿನ ಸಂಪ್ರದಾಯಗಳು ಮರೆಯಾಗಿವೆ ಎನ್ನುತ್ತಿರುವಾಗಲೇ ಗ್ರಾಮೀಣ ಜನರು ತಮ್ಮ ಹಿಂದಿನ ಸಂಪ್ರದಾಯ ಮರೆತಿಲ್ಲ ಎನ್ನುವುದಕ್ಕೆ ಈ ಘಟನೆ ಸಾಕ್ಷಿಯಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ