ಕೊಪ್ಪಳ: ರಾಜ್ಯದ ಕೊಪ್ಪಳ ಜಿಲ್ಲೆ (Koppal News) ಸೇರಿ ಬಾಗಲಕೋಟೆ, ಧಾರವಾಡ, ಗದಗ, ಬೆಳಗಾವಿ, ವಿಜಯಪುರ, ಕಲಬುರಗಿ, ಯಾದಗಿರಿ, ರಾಯಚೂರು, ಬಳ್ಳಾರಿ ಹಾಗೂ ಚಿತ್ರದುರ್ಗದಲ್ಲಿ ಕಡಲೆಕಾಳು ಬೆಂಬಲ ಬೆಲೆ ಖರೀದಿ ಕೇಂದ್ರ (Chickpeas Support Price Buying Center) ಆರಂಭಿಸಲು ರಾಜ್ಯ ಸರ್ಕಾರ (Karnataka Government) ಸೂಚನೆ ನೀಡಿದೆ.
ಆದರೆ ಕಡಲೆಕಾಳು ಕೃಷಿಕರ ಸ್ಥಿತಿಗೆ ಹಲ್ಲಿದ್ದಾಗ ಕಡಲೆ ಇಲ್ಲ, ಕಡಲೆ ಇದ್ದಾಗ ಹಲ್ಲು ಇಲ್ಲ ಎಂಬ ಗಾದೆಮಾತು ಪಕ್ಕಾ ಅನ್ವಯವಾಗುತ್ತೆ ಎಂಬ ಮಾತುಗಳ ಕೃಷಿ ವಲಯದಲ್ಲಿ ಕೇಳಿಬಂದಿವೆ. ರಾಜ್ಯ ಸರ್ಕಾರ ಕಡಲೆ ಖರೀದಿಸಲು ಆದೇಶಿಸಿದೆ. ಕಡಲೆ ಖರೀದಿ ಕೇಂದ್ರ ಆರಂಭಕ್ಕೆ ಸೂಚನೆ ನೀಡಿದೆ.
ಈಗ ಮಾರಾಟ ಮಾಡಿದ್ರೆ ಲಾಸ್ ಆಗುತ್ತೆ!
ಈಗ ರಾಜ್ಯದಲ್ಲಿ ಕಡಲೆ ಬೆಳೆದ ರೈತರು ಕಟಾವು ಮಾಡಿ, ರಾಶಿ ಮಾಡಿ ಮಾರಾಟ ಮಾಡುವ ಹಂತದಲ್ಲಿದ್ದಾರೆ. ಮಾರುಕಟ್ಟೆಯಲ್ಲಿ ಕಡಲೆ ದರ ಅತ್ಯಂತ ಇಳಿಕೆಯಾಗಿದೆ. ಈಗಿನ ಮಾರುಕಟ್ಟೆ ದರಕ್ಕೆ ಮಾರಾಟ ಮಾಡಿದರೆ ರೈತರಿಗೆ ಹಾನಿಯಾಗುವ ಲಕ್ಷಣವಿದೆ. ಈ ಮಧ್ಯೆ ಮಧ್ಯ ಪ್ರವೇಶಿಸಿದ ರಾಜ್ಯ ಸರಕಾರ ಕಡಲೆಯನ್ನು ಬೆಂಬಲ ಬೆಲೆಯಲ್ಲಿ ಖರೀದಿಸಲು ಆದೇಶ ಹೊರಡಿಸಿದೆ.
ಕ್ವಿಂಟಲ್ಗೆ ಎಷ್ಟಿದೆ ರೇಟ್?
ಹಿಂಗಾರಿ ಹಂಗಾಮಿನಲ್ಲಿ ಬಿತ್ತನೆ ಮಾಡಿದ ಕಡಲೆಯು ಈಗ ಕಟಾವು ಮಾಡಿ ರಾಶಿ ಮಾಡಿದ್ದಾರೆ. ಪ್ರತಿ ಎಕರೆ ಸುಮಾರು 30 ಸಾವಿರ ರೂಪಾಯಿ ಖರ್ಚು ಮಾಡಿರುವ ರೈತರಿಗೆ ಪ್ರತಿ ಎಕರೆಗೆ 5 ಕ್ವಿಂಟಾಲ್ ಇಳುವರಿ ಬರಲಿದೆ. ಮಾರುಕಟ್ಟೆಯಲ್ಲಿ ಕಡಲೆ ದರವು ಈಗ ಪ್ರತಿ ಕ್ವಿಂಟಾಲಿಗೆ 4,500 ರೂಪಾಯಿ ಇದೆ. ಈ ದರಕ್ಕೆ ಮಾರಾಟ ಮಾಡಿದರೆ ರೈತರು ನಷ್ಟ ಅನುಭವಿಸುವಂತಾಗುತ್ತದೆ. ಅದಕ್ಕಾಗಿ ಸರ್ಕಾರ ಮಧ್ಯ ಪ್ರವೇಶಿಸಿ ಕಡಲೆಯನ್ನು ಬೆಂಬಲ ಬೆಲೆಯಲ್ಲಿ ಖರೀದಿಸುವಂತೆ ಕೃಷಿಕರು ಆಗ್ರಹಿಸಿದ್ದರು.
45 ದಿನದ ಒಳಗೆ ನೋಂದಣಿ ಮಾಡಿಸಲು ಸೂಚನೆ
ಈಗಾಗಲೇ ರಾಶಿ ಮಾಡಿ ಬಹಳ ದಿನವಾಗಿದ್ದು ಖರೀದಿ ಕೇಂದ್ರ ಬೇಗ ಆರಂಭಿಸುವಂತೆ ಆಗ್ರಹ ವ್ಯಕ್ತವಾಗಿತ್ತು. ರೈತರ ಆಗ್ರಹಕ್ಕೆ ಮಣಿದು ಕೊನೆಗೂ ಬೆಂಬಲ ಬೆಲೆಯಲ್ಲಿ ಕಡಲೆ ಕಾಳು ಖರೀದಿಸಲು ರಾಜ್ಯ ಸರ್ಕಾರದ ಸಹಕಾರ ಇಲಾಖೆ ಆದೇಶ ಹೊರಡಿಸಿದೆ. ಇಂದಿನಿಂದ 45 ದಿವಸದೊಳಗಾಗಿ ರೈತರು ಕಡಲೆ ಮಾರಾಟಕ್ಕೆ ಹೆಸರು ನೋಂದಾಯಿಸಬೇಕು. 90 ದಿನಗಳೊಳಗಾಗಿ ಗುಣಮಟ್ಟದ ಕಡಲೆ ಖರೀದಿಸಲು ಸೂಚನೆ ನೀಡಲಾಗಿದ್ದು, ಪ್ರತಿ ಕ್ವಿಂಟಾಲ್ಗೆ 5335. ರೂಪಾಯಿಯಲ್ಲಿ ಖರೀದಿಸುವುದಾಗಿ ಘೋಷಣೆ ಮಾಡಿದೆ.
1.70 ಲಕ್ಷ ಮೆಟ್ರಿಕ್ ಟನ್ ಕಡಲೆ ಖರೀದಿಸಲು ಸೂಚನೆ
ರಾಜ್ಯದಲ್ಲಿ 7.84 ಲಕ್ಷ ಹೆಕ್ಟರ್ ಪ್ರದೇಶದಲ್ಲಿ ಕಡಲೆ ಬಿತ್ತನೆ ಅಂದಾಜು 4.70 ಲಕ್ಷ ಮೆಟ್ರಿಕ್ ಟನ್ ಕಡಲೆ ಉತ್ಪಾದನೆಯಾಗುವ ಸಾಧ್ಯತೆಯಿದೆ. ಪ್ರತಿ ಎಕರೆ 4 ಕ್ವಿಂಟಾಲಿನಂತೆ ಒಬ್ಬ ರೈತರಿಂದ 15 ಕ್ವಿಂಟಾಲ್ ಕಡಲೆ ಖರೀದಿಸಲು ಸೂಚನೆ ನೀಡಲಾಗಿದೆ. ರಾಜ್ಯದಲ್ಲಿ ಒಟ್ಟು 1.70 ಲಕ್ಷ ಮೆಟ್ರಿಕ್ ಟನ್ ಕಡಲೆ ಖರೀದಿಸಲು ಸೂಚನೆ ನೀಡಲಾಗಿದೆ.
ಇದನ್ನೂ ಓದಿ: Koppal Toll Problem: ಒಂದೇ ರಾಷ್ಟ್ರೀಯ ಹೆದ್ದಾರಿಗೆ ಮೂರು ಕಡೆ ಟೋಲ್ ಹಣ ಪಾವತಿ!
ಕಡಲೆ ಕಟಾವು, ರಾಶಿ ಮಾಡಿದ ರೈತರು ಬೆಂಬಲ ಬೆಲೆ ಕೇಂದ್ರ ಆರಂಭಿಸಲು ಆಗ್ರಹಿಸಿದ್ದರು. ಈ ಕುರಿತು ಅಲ್ಲಲ್ಲಿ ಹೋರಾಟಗಳು ನಡೆದಿದ್ದವು. ರೈತರ ಒತ್ತಾಯದ ಬೆನ್ನಲ್ಲಿಯೇ ಬೆಂಬಲ ಬೆಲೆ ಖರೀದಿ ಕೇಂದ್ರ ಆರಂಭಿಸಲು ಜಿಲ್ಲಾಡಳಿತಕ್ಕೆ ಸೂಚನೆ ನೀಡಲಾಗಿದೆ.
ಇದನ್ನೂ ಓದಿ: Koppal: 48 ಲಕ್ಷ ವಿದ್ಯಾರ್ಥಿಗಳಿಗಾಗಿ ಕೊಪ್ಪಳದ 6ನೇ ಕ್ಲಾಸ್ ಬಾಲಕನಿಂದ ಹೈಕೋರ್ಟ್ ಹೋರಾಟ!
ಆದರೆ ಇನ್ನಷ್ಟು ಬೇಗ ಆರಂಭಿಸಬೇಕಾಗಿತ್ತು. ಅಲ್ಲದೆ ಕಡಲೆ ಖರೀದಿಗೆ ಇರುವ ಮಿತಿಯನ್ನು ಸಡಲಿಸಿ ರೈತರು ಬೆಳೆ ಸಂಪೂರ್ಣ ಕಡಲೆ ಖರೀದಿಸಬೇಕೆಂದು ರೈತರು ಆಗ್ರಹಿಸಿದ್ದಾರೆ. ಈ ಮಧ್ಯೆ ರೈತರ ಧ್ವನಿಯಾಗಿ ಸರ್ಕಾರವನ್ನು ಎಚ್ಚರಿಸಿದ ನ್ಯೂಸ್ 18 ಗೆ ರೈತರು ಧನ್ಯವಾದ ಸಲ್ಲಿಸಿದ್ದಾರೆ.
ವರದಿ: ಶರಣಪ್ಪ ಬಾಚಲಾಪುರ, ನ್ಯೂಸ್ 18 ಕೊಪ್ಪಳ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ