ಕೊಪ್ಪಳ: ಸಿಎಂ ಬಸವರಾಜ ಬೊಮ್ಮಾಯಿ(CM Basavaraj Bommai Budget 2023) ನೇತೃತ್ವದ ಬಿಜೆಪಿ ಸರ್ಕಾರ ಕೊನೆಯ ಬಜೆಟ್ನ್ನು ಇಂದು ಹಣಕಾಸು ಖಾತೆಯನ್ನು ಹೊಂದಿರುವ ಸಿಎಂ ಬಸವರಾಜ ಬೊಮ್ಮಾಯಿ ಮಂಡಿಸಿದ್ದಾರೆ. ಕಳೆದ ಬಾರಿ ಬೊಮ್ಮಾಯಿ ಮಂಡಿಸಿದ ಬಜೆಟ್ ಕೊಪ್ಪಳ ಜಿಲ್ಲೆಯ ಮಟ್ಟಿಗೆ ಬಂಪರ್ ಎಂಬಂತೆ ಇತ್ತು. ಆದರೆ ಈ ಬಾರಿ ಬಜೆಟ್ನಲ್ಲಿ (Karnataka Budget 2023) ಕೇವಲ ಒಂದು ಯೋಜನೆ ಹೊರತುಪಡಿಸಿ ಉಳಿದವು ಕಳೆದ ವರ್ಷದ ಘೋಷಣೆಗಳ ಮುಂದುವರಿದ ಭಾಗ ಎಂಬಂತಿದೆ ಎಂಬ ಮಾತುಗಳು ಕೇಳಿಬಂದಿವೆ.
ಹಿಂದುಳಿದ ಕೊಪ್ಪಳ ಜಿಲ್ಲೆಗೆ ಸರಕಾರ ಈ ಬಾರಿ ಬಜೆಟ್ನಲ್ಲಿ ನಿರ್ಲಕ್ಷ್ಯ ವಹಿಸಿರುವುದು ಕಂಡುಬರುತ್ತಿದೆ. ಈ ಬಾರಿ ಬಜೆಟ್ನಲ್ಲಿ ಕಳೆದ ಬಾರಿ ಮಂಡಿಸಿದ ಘೋಷಣೆಗಳನ್ನು ಮರು ಘೋಷಣೆ ಮಾಡಿದಂತಿದೆ. ಅದರಲ್ಲಿ ಅಂಜನಾದ್ರಿ ಅಭಿವೃದ್ದಿ. ನವಲಿ ಸಮನಾಂತರ ಜಲಾಶಯ, ಕೊಪ್ಪಳಕ್ಕೆ ಏರ್ಪೋರ್ಟ್ ಯೋಜನೆಗಳು ಹಳೆಯ ಘೋಷಣೆಗಳಾಗಿವೆ.
ಇವುಗಳೊಂದಿಗೆ ಆನೆಗೊಂದಿಯಲ್ಲಿರುವ ವಿಜಯನಗರ ಅರಸ ಕಾಲದ ಗಗನ ಮಹಲ್ನ್ನು ಖಾಸಗಿ ಸಹಭಾಗಿತ್ವದಲ್ಲಿ ಅಭಿವೃದ್ದಿಪಡಿಸುವುದಾಗಿ ಘೋಷಣೆ ಮಾಡಿದ್ದಾರೆ.
ಅಂಜನಾದ್ರಿಯೇ ಮುಖ್ಯ
ರಾಜ್ಯ ಬಿಜೆಪಿ ಸರ್ಕಾರ ಹನುಮನ ಜನ್ಮಸ್ಥಳ ಅಂಜನಾದ್ರಿ ಅಭಿವೃದ್ದಿಗೆ ಒತ್ತು ಕೊಡುವುದಾಗಿ ಘೋಷಣೆ ಮಾಡುತ್ತಲೇ ಇದೆ. ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಚಿಕ್ಕರಾಂಪುರ ಬಳಿಯಲ್ಲಿ ಬೆಟ್ಟದಲ್ಲಿರುವ ಆಂಜನೇಯ ದೇವಸ್ಥಾನವೇ ಪವಿತ್ರ ಅಂಜನಾದ್ರಿ ದೇಗುಲ. ಈ ದೇವಸ್ಥಾನವನ್ನೇ ಆ ಜಲದಿಯನು ಜಿಗಿದ ಹನುಮನುದಿಸಿದ ನಾಡು ಎಂದು ಖ್ಯಾತಿ ಹೊಂದಿರುವ ಹನುಮನ ಜನ್ಮ ಸ್ಥಳ ಎನ್ನಲಾಗುತ್ತಿದೆ. ಅಂಜನಾದ್ರಿಯನ್ನು ವಿಶ್ವಮಟ್ಟದಲ್ಲಿ ಅಭಿವೃದ್ದಿಪಡಿಸುವುದಾಗಿ ರಾಜ್ಯ ಸರ್ಕಾರ ಘೋಷಣೆ ಮಾಡಿದೆ.
ಅಯೋಧ್ಯೆ ಮಾದರಿಯಲ್ಲಿ ಅಭಿವೃದ್ಧಿ
ಅಯೋಧ್ಯೆ ಮಾದರಿಯಲ್ಲಿ ಶ್ರೀರಾಮಚಂದ್ರನ ಭಕ್ತ ಹನುಮನ ಜನ್ಮಸ್ಥಳವನ್ನು ಅಭಿವೃದ್ದಿಪಡಿಸುವುದಾಗಿ ಈಗಾಗಲೇ ಹಲವು ಬಾರಿ ಘೋಷಣೆ ಮಾಡಲಾಗಿದೆ. ಈ ಮಧ್ಯೆ ಅಂಜನಾದ್ರಿ ಅಭಿವೃದ್ದಿಗಾಗಿ ಮಾಜಿ ಸಿಎಂ ಯಡಿಯೂರಪ್ಪ ಮಂಡಿಸಿದ ಬಜೆಟ್ನಲ್ಲಿ 20 ಕೋಟಿ ರೂಪಾಯಿ ಘೋಷಣೆ ಮಾಡಲಾಗಿತ್ತು. ಆದರೆ ಆಗ ಅಭಿವೃದ್ದಿ ಕಾರ್ಯಗಳು ಆರಂಭವಾಗಿರಲಿಲ್ಲ. ಈ ಮಧ್ಯೆ ಬಸವರಾಜ ಬೊಮ್ಮಾಯಿ ಕಳೆದ ವರ್ಷ ಮಂಡಿಸಿದ ಬಜೆಟ್ನಲ್ಲಿ 100 ಕೋಟಿ ರೂಪಾಯಿ ನೀಡುವುದಾಗಿ ಘೋಷಣೆ ಮಾಡಿದ್ದರು. ಆದರೆ ಎರಡು ವರ್ಷವಾದರೂ ಅಂಜನಾದ್ರಿ ಅಭಿವೃದ್ದಿಗೆ ರಾಜ್ಯ ಸರ್ಕಾರದಿಂದ ನಯಾಪೈಸೆ ಬಿಡುಗಡೆಯಾಗಿಲ್ಲ.
ಕೇವಲ ಅಡಿಗಲ್ಲು ಶಂಕುಸ್ಥಾಪನೆ ಕಾರ್ಯಗಳು ಮಾತ್ರ ನಡೆದಿವೆ. ಈಗಲೂ 63 ಎಕರೆ ಭೂ ಸ್ವಾಧೀನ ಕಾರ್ಯ ಪೂರ್ಣಗೊಂಡಿಲ್ಲ. ಈಗ ಇದೇ ಯೋಜನೆಯ ಟೆಂಡರ್ ಕರೆದು ಕಾಮಗಾರಿ ಆರಂಭಿಸುವುದಾಗಿ ಈ ಬಾರಿಯ ಬಜೆಟ್ನಲ್ಲಿ ಹೇಳಲಾಗಿದೆ.
ನವಲಿ ಜಲಾಶಯ
ರೈತರ ಜೀವನಾಡಿ ತುಂಗಭದ್ರಾ ಜಲಾಶಯದಲ್ಲಿ ಹೂಳು ತುಂಬಿರುವ ಹಿನ್ನೆಲೆಯಲ್ಲಿ ಎಡದಂಡೆ ನಾಲೆ ವ್ಯಾಪ್ತಿಯಲ್ಲಿಯ ಕೊನೆಯ ಭಾಗದ ಕೃಷಿ ಭೂಮಿಗೆ ನೀರು ತಲುಪುತ್ತಿಲ್ಲ. ಇದೇ ಕಾರಣಕ್ಕೆ ನವಲಿ ಬಳಿಯಲ್ಲಿ 34 ಟಿಎಂಸಿ ಸಾಮರ್ಥ್ಯದ ಸಮನಾಂತರ ಜಲಾಶಯ ನಿರ್ಮಿಸಲು ಘೋಷಣೆಯನ್ನು ಎರಡು ವರ್ಷಗಳಿಂದ ಮಾಡಲಾಗುತ್ತಿದೆ. ಹಿಂದಿನ ಯಡಿಯೂರಪ್ಪ ಸರ್ಕಾರದಲ್ಲಿ ನವಲಿ ಸಮನಾಂತರ ಜಲಾಶಯದ ವಿಸ್ತೃತ ಯೋಜನಾ ವರದಿ ಸಲ್ಲಿಸಲು ಹಣ ನೀಡಲಾಗಿತ್ತು. ಸರಕಾರಕ್ಕೆ ವಿಸ್ತೃತ ವರದಿ ಸಲ್ಲಿಕೆಯಾಗಿದೆ. ಕಳೆದ ವರ್ಷ ಬಸವರಾಜ ಬೊಮ್ಮಾಯಿ ಮಂಡಿಸಿದ ಬಜೆಟ್ನಲ್ಲಿ 1 ಸಾವಿರ ಕೋಟಿ ರೂಪಾಯಿ ಘೋಷಣೆ ಮಾಡಿದ್ದರು. ಆದರೆ ಇಲ್ಲಿಯವರೆಗೂ ಕಾಮಗಾರಿ ಆರಂಭವಾಗಿಲ್ಲ.
ಇದನ್ನೂ ಓದಿ: Koppal: 48 ಲಕ್ಷ ವಿದ್ಯಾರ್ಥಿಗಳಿಗಾಗಿ ಕೊಪ್ಪಳದ 6ನೇ ಕ್ಲಾಸ್ ಬಾಲಕನಿಂದ ಹೈಕೋರ್ಟ್ ಹೋರಾಟ!
ಈ ಮಧ್ಯೆ ಈ ಬಾರಿಯ ಬಜೆಟ್ನಲ್ಲಿ ನವಲಿ ಸಮನಾಂತರ ಜಲಾಶಯ ನಿರ್ಮಾಣಕ್ಕಾಗಿ ಆಂಧ್ರ ಹಾಗೂ ತೆಲಂಗಾಣ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಸಭೆ ನಡೆಸಲಾಗಿದೆ. ಈ ಯೋಜನೆಯನ್ನು ಶೀಘ್ರ ಆರಂಭಿಸುವುದಾಗಿ ಹೇಳಲಾಗಿದೆ.
ಕೊಪ್ಪಳದಲ್ಲಿ ವಿಮಾನ ನಿಲ್ದಾಣ
ಹನುಮನ ಜನ್ಮಸ್ಥಳ, ಭತ್ತದ ನಾಡಿನ ಜೊತೆ ಉಕ್ಕು ಕಾರ್ಖಾನೆಗಳನ್ನು ಹೊಂದಿರುವ ಹಿನ್ನೆಲೆಯಲ್ಲಿ ಕೊಪ್ಪಳಕ್ಕೆ ವಿಮಾನ ನಿಲ್ದಾಣ ನಿರ್ಮಿಸಲು ಕಳೆದ ಬಾರಿಯ ಬಜೆಟ್ನಲ್ಲಿ ಒಪ್ಪಿಗೆ ನೀಡಲಾಗಿತ್ತು. ಒಪ್ಪಿಗೆ ನಂತರ ಸ್ಥಳ ಗುರುತಿಸುವಿಕೆಗೆ ಮಾತ್ರ ಸೀಮಿತವಾಗಿದೆ. ಈ ಬಾರಿ ಬಜೆಟ್ನಲ್ಲಿ ಮತ್ತೆ ಕೊಪ್ಪಳ ವಿಮಾನ ನಿಲ್ದಾಣ ನಿರ್ಮಿಸಲಾಗುವುದು ಎಂದು ಘೋಷಿಸಲಾಗಿದೆ.
ವಿಶ್ವವಿದ್ಯಾಲಯ
ಕೊಪ್ಪಳ ಜಿಲ್ಲೆಯಲ್ಲಿ ಶೈಕ್ಷಣಿಕ ಪ್ರಗತಿಗಾಗಿ ವಿಶ್ವವಿದ್ಯಾಲಯ ನಿರ್ಮಿಸುವುದಾಗಿ ಕಳೆದ ಬಾರಿಯ ಬಜೆಟ್ನಲ್ಲಿ ಹೇಳಲಾಗಿತ್ತು. ಕೊಪ್ಪಳ ವಿವಿಗೆ ಈಗಾಗಲೇ ಅಧಿಸೂಚನೆ ಹೊರಡಿಸಲಾಗಿದೆ. ಆದರೆ ಅಧಿಸೂಚನೆಯಲ್ಲಿ ಒಂದಿಷ್ಟು ಗೊಂದಲ. ವಿವಿಯ ಸ್ಥಳದ ಬಗ್ಗೆ ಗೊಂದಲವಿದೆ. ಇದರಿಂದಾಗಿ ಈ ಶೈಕ್ಷಣಿಕ ವರ್ಷದಿಂದಲೂ ವಿವಿ ಆರಂಭವಾಗುವುದು ಅನುಮಾನ. ಆದರೆ ಬಜೆಟ್ನಲ್ಲಿ ಮತ್ತೆ ಕೊಪ್ಪಳ ವಿವಿ ಆರಂಭಿಸುವುದಾಗಿ ಹೇಳಲಾಗಿದೆ.
ಇದೇ ವೇಳೆ ಕಳೆದ ಬಾರಿ ಕಿನ್ನಾಳ ಕಲೆ, ಜಿಲ್ಲೆಯಲ್ಲಿ ಕೌದಿ ತಯಾರಿಕೆ ಅಭಿವೃದ್ದಿಗಾಗಿ ಯೋಜನೆ ರೂಪಿಸುವುದಾಗಿ ಹೇಳಲಾಗಿತ್ತು. ಇದು ಘೋಷಣೆ ಮಾತ್ರವಾಗಿದೆಯೇ ಹೊರತು ಯಾವುದೇ ಪ್ರಕ್ರಿಯೆ ನಡೆದಿಲ್ಲ. ಈ ಬಾರಿಯ ಬಜೆಟ್ನಲ್ಲಿ ಈ ಬಗ್ಗೆ ಪ್ರಸ್ತಾಪವೇ ಇಲ್ಲ.
ಇದನ್ನೂ ಓದಿ: Koppal: ಡಿವೋರ್ಸ್ ಅರ್ಜಿ ವಿಚಾರಣೆಗೆ ಬಂದು ಕೋರ್ಟ್ನಲ್ಲೇ ಮದುವೆಯಾದ ನಾಲ್ಕು ದಂಪತಿ!
ಮಾಜಿ ಸಿಎಂ ಯಡಿಯೂರಪ್ಪ ಸರಕಾರದಲ್ಲಿ ಕನಕಗಿರಿ ಬಳಿ ತೋಟಗಾರಿಕಾ ಪಾರ್ಕ್ ಮಾಡುವುದಾಗಿ ಘೋಷಣೆ ಮಾಡಲಾಗಿತ್ತು. ಅದೂ ಸಹ ಆರಂಭವಾಗಿಲ್ಲ.ಈ ಬಾರಿಯ ಬಜೆಟ್ನಲ್ಲಿ ಆನೆಗೊಂದಿಯ ಗಗನ ಮಹಲ್ ಅಭಿವೃದ್ದಿ ಹೊರತುಪಡಿಸಿ ಉಳಿದ ಯಾವುದೇ ಘೋಷಣೆಗಳಿಲ್ಲ. ಇದರಿಂದಾಗಿ ಕೊಪ್ಪಳ ಜಿಲ್ಲೆಗೆ ಈ ಬಾರಿ ಬಜೆಟ್ ನಿರಾಶಾದಾಯಕವಾಗಿದೆ ಎಂಬ ಅಭಿಪ್ರಾಯ ಕೇಳಿ ಬಂದಿದೆ.
ವರದಿ: ಶರಣಪ್ಪ ಬಾಚಲಾಪುರ, ಕೊಪ್ಪಳ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ