ಕೊಪ್ಪಳ: ಮುದಿಮುದಿ ಜೀವ, ಬೊಚ್ಚುಬಾಯಿಯ ನಗು. ಇಡೀ ದಿನ ಮನೆಯಲ್ಲೇ ಕುಳಿತುಕೊಂಡು ತಮ್ಮ ಯೌವನದ ದಿನಗಳನ್ನು ನೆನಸಿಕೊಳ್ಳುವ ಇವರ ಜೀವನೋತ್ಸಾಹ (Koppal Voters) ನೋಡಿದ್ರೆ ಅಬ್ಬಾ ಅನಿಸುತ್ತೆ! ದೇಹ ಮುಪ್ಪಾಗಿದೆಯೇ ಹೊರತು ಮನಸಲ್ಲ ಅನ್ನೋ ಈ ಶತಾಯುಷಿ ಅಜ್ಜಿಯರು ಈ ಚುನಾವಣೆಯಲ್ಲಿ (Karnataka Assembly Elections 2023) ಸಖತ್ ಸುದ್ದಿಮಾಡೋಕೆ ಹೊರಟಿದ್ದಾರೆ.
ಇನ್ನೇನು ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿದೆ. ಒಂದು ಕಡೆ ರಾಜಕೀಯ ಪಕ್ಷಗಳು ಚುನಾವಣೆ ತಯಾರಿ ನಡೆಸಿದ್ದಾರೆ, ಇತ್ತ ಮತದಾನ ಮಾಡಲು ಮತದಾರರು ಸಜ್ಜಾಗುತ್ತಿದ್ದಾರೆ. ಅನೇಕರು ಮತದಾನದಿಂದ ದೂರ ಉಳಿಯುವ ಸನ್ನಿವೇಶದ ನಡುವೆ ಕೊಪ್ಪಳ ಜಿಲ್ಲೆಯಲ್ಲಿರುವ ಈ ಶತಾಯುಷಿಗಳು ಮತದಾನಕ್ಕೆ ಸ್ಪೂರ್ತಿಯ ಚಿಲುಮೆಯಾಗಿದ್ದಾರೆ.
ಒಂದು ಬಾರಿಯೂ ಮತದಾನ ಮಾಡೇ ಉಳಿದಿಲ್ಲ!
ಕೊಪ್ಪಳ ತಾಲೂಕಿನ ಅಗಳಕೇರಿ ಗ್ರಾಮದ ಬಸಮ್ಮ ಮಡಿವಾಳಯ್ಯ ಭೂಸನೂರ ಮಠ ಎಂಬ ಶತಾಯುಷಿ ಒಂದೇ ಒಂದು ಬಾರಿಯೂ ಮತದಾನದಿಂದ ದೂರ ಉಳಿದಿಲ್ಲ. ಅದೇ ಗ್ರಾಮದ ಕಲ್ಲಮ್ಮ ಕಾರಡಗಿಮಠ ಎಂಬ 105 ವರ್ಷದ ವೃದ್ಧೆಯೂ ಸಹ ಒಮ್ಮೆಯೂ ಮತದಾನ ತಪ್ಪಿಸಿಲ್ಲ. ತಮ್ಮ ಈ ಇಳಿವಯಸ್ಸಿನಲ್ಲಿಯೂ ಲವಲವಿಕೆಯಿಂದ ಇರುವ ಬಸಮ್ಮ ಭೂಸನೂರಮಠ ಅವರು 1952 ರಿಂದ ಆರಂಭವಾದ ಚುನಾವಣೆ ಪ್ರಕ್ರಿಯೆಯಲ್ಲಿ ನಿರಂತರವಾಗಿ ಮತದಾನ ಮಾಡುತ್ತಾ ಬಂದಿದ್ದಾರೆ.
ಮತದಾನದ ಹಕ್ಕನ್ನು ತಪ್ಪಿಸೋ ಚಾನ್ಸೇ ಇಲ್ಲ!
ಯಾವುದೇ ಚುನಾವಣೆ ಇರಲಿ ತಮ್ಮ ಹಕ್ಕನ್ನು ಚಲಾಯಿಸುವುದನ್ನು ಮಿಸ್ ಮಾಡಿಲ್ಲ. ವಿಶೇಷ ಅಂದ್ರೆ ಕೊಪ್ಪಳ ಕ್ಷೇತ್ರದಲ್ಲಿ ಒಂದು ಉಪ ಚುನಾವಣೆ ಸೇರಿ ಈವರೆಗೆ ಒಟ್ಟು 16 ವಿಧಾನಸಭಾ ಚುನಾವಣೆಯಲ್ಲಿ ಮತದಾನ ಮಾಡಿದ್ದಾರೆ. ಈ ಶತಾಯುಷಿ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುತ್ತಿರುವುದನ್ನು ಗುರುತಿಸಿ ಕೇಂದ್ರ ಚುನಾವಣಾ ಆಯೋಗವು ಅವರಿಗೆ ಗೌರವ ಸನ್ಮಾನ ಪತ್ರ ನೀಡಿದೆ.
ಒಂದೇ ಜಿಲ್ಲೆಯಲ್ಲಿ 212 ಶತಾಯುಷಿಗಳು!
ಲಭ್ಯ ಮಾಹಿತಿಯ ಪ್ರಕಾರ ಕೊಪ್ಪಳ ಜಿಲ್ಲೆಯಲ್ಲಿ 100 ವರ್ಷಕ್ಕಿಂತ ಅಧಿಕ ವಯಸ್ಸಿನ ಒಟ್ಟು 212 ಜನ ಮತದಾರರು ಇದ್ದಾರೆ. ಕೊಪ್ಪಳ ವಿಧಾನಸಭಾ ಕ್ಷೇತ್ರದಲ್ಲಿ 67, ಯಲಬುರ್ಗಾ ಕ್ಷೇತ್ರದಲ್ಲಿ 48, ಗಂಗಾವತಿ ಕ್ಷೇತ್ರದಲ್ಲಿ 29, ಕುಷ್ಟಗಿ ಕ್ಷೇತ್ರದಲ್ಲಿ 35, ಕನಕಗಿರಿ ಕ್ಷೇತ್ರದಲ್ಲಿ 33 ಜನ, ಕೊಪ್ಪಳ ತಾಲೂಕಿನಲ್ಲಿ 33 ಶತಾಯುಷಿ ಮತದಾರರು ಇದ್ದಾರೆ.
ಇದನ್ನೂ ಓದಿ: Koppal: 48 ಲಕ್ಷ ವಿದ್ಯಾರ್ಥಿಗಳಿಗಾಗಿ ಕೊಪ್ಪಳದ 6ನೇ ಕ್ಲಾಸ್ ಬಾಲಕನಿಂದ ಹೈಕೋರ್ಟ್ ಹೋರಾಟ!
ಈವರೆಗೆ 16 ವಿಧಾನಸಭಾ ಚುನಾವಣೆಯಲ್ಲಿ ಮತ ಹಾಕಿರುವ ಬಸಮ್ಮ ಭೂಸನೂರಮಠ ಅವರ ಕುಟುಂಬಸ್ಥರು ಸಂತಸ ವ್ಯಕ್ತಪಡಿಸುತ್ತಾರೆ. "ಈಗ ಐದಾರು ವರ್ಷದ ಮುಂಚೆ ಯಾರ ಸಹಾಯವಿಲ್ಲದೆ ಮತಗಟ್ಟೆಗೆ ಹೋಗಿ ಮತ ಚಲಾಯಿಸುತ್ತಿದ್ದರು. ಈಗ ಮನೆಯವರ ಸಹಾಯದಿಂದ ಮತ ಚಲಾಯಿಸಲು ಮತಗಟ್ಟೆಗೆ ಹೋಗುತ್ತಾರೆ. ಆದರೆ ಮತ ಚಲಾಯಿಸುವುದರಿಂದ ಅವರು ದೂರ ಉಳಿದೇ ಇಲ್ಲ" ಎನ್ನುತ್ತಾರೆ ಬಸಮ್ಮ ಭೂಸನೂರಮಠ ಅವರ ಮಗ ಶಂಕ್ರಯ್ಯ ಭೂಸನೂರಮಠ.
ಇದನ್ನೂ ಓದಿ: Koppal Toll Problem: ಒಂದೇ ರಾಷ್ಟ್ರೀಯ ಹೆದ್ದಾರಿಗೆ ಮೂರು ಕಡೆ ಟೋಲ್ ಹಣ ಪಾವತಿ!
ಸಂವಿಧಾನ ನಮಗೆ ನೀಡಿರುವ ಮತದಾನ ಎಂಬ ಮಹತ್ವದ ಹಕ್ಕನ್ನು ಚಲಾಯಿಸದೇ ದೂರ ಉಳಿಯುವವರು ಈ ಶತಾಯುಷಿಗಳ ಜೀವನೋತ್ಸಾಹ ನೋಡಿ ಕಲಿಯಬೇಕಿದೆ.
ವರದಿ: ಶರಣಪ್ಪ ಬಾಚಲಾಪುರ, ನ್ಯೂಸ್ 18 ಕೊಪ್ಪಳ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ