Anjanadri Hill: ಹನುಮ ಜನ್ಮಭೂಮಿ ಅಂಜನಾದ್ರಿ ಪರ್ವತದ ದರ್ಶನ ಮಾಡಿಬನ್ನಿ! ಬಸ್, ರೈಲು, ವಸತಿ ವ್ಯವಸ್ಥೆಯ ಮಾಹಿತಿ ಇಲ್ಲಿದೆ

ಹನುಮ ಜನ್ಮಭೂಮಿ ಅಂಜನಾದ್ರಿಗೆ ಹೋಗೋದು ಹೇಗೆ? ರೈಲು ಪ್ರಯಾಣ ಬೆಸ್ಟಾ? ಬಸ್​ನಲ್ಲಿ ಹೋಗೋದು ಒಳ್ಳೆಯದಾ? ಎಷ್ಟು ಖರ್ಚಾಗಬಹುದು? ಅಲ್ಲಿ ವಸತಿಗೆ ಅವಕಾಶವಿದೆಯಾ? ಬೆಂಗಳೂರಿನಿಂದ ಅಂಜನಾದ್ರಿಗೆ ಪ್ರಯಾಣಿಸಲು ಏನೆಲ್ಲ ಸೌಕರ್ಯಗಳಿವೆ?

ಆಂಜನಾದ್ರಿಯ ಏರಿ ಆಂಜನೇಯಗೆ ಕೈಮುಗಿದು!

ಆಂಜನಾದ್ರಿಯ ಏರಿ ಆಂಜನೇಯಗೆ ಕೈಮುಗಿದು!

  • Share this:
ಕೊಪ್ಪಳ: ಅಂಜನಾದ್ರಿ ಪರ್ವತ  ದೇಶ-ವಿದೇಶ ಸೇರಿದಂತೆ ಅಂತರರಾಷ್ಟ್ರೀಯ ಪ್ರವಾಸಿ ಸ್ಥಳವಾಗಿ ಪ್ರಸಿದ್ಧಿಯಾಗಿದೆ. ಇದರ ಅಭಿವೃದ್ಧಿಗೆ ಸರ್ಕಾರ ಕೋಟ್ಯಂತರ ಹಣ ವಿನಿಯೋಗಿಸಲು ಸಜ್ಜಾಗಿದೆ. ನಿತ್ಯ ಸಾವಿರಾರು ಭಕ್ತರು ಇಲ್ಲಿಗೆ ಭೇಟಿ ನೀಡುತ್ತಾರೆ. ಉತ್ತರ ಭಾರತದ ಭಕ್ತರು ದಕ್ಷಿಣ ಭಾರತದ ಪ್ರವಾಸಿ ಸ್ಥಳಗಳಲ್ಲಿ ಅಂಜನಾದ್ರಿಗೆ ಮೊದಲ ಪ್ರಾಶಸ್ತ್ಯ ನೀಡುತ್ತಾರೆ. ಕೊಪ್ಪಳ ಜಿಲ್ಲೆಯಲ್ಲಿರುವ (Koppal) ಅಂಜನಾದ್ರಿ ಪರ್ವತದ (Anjanadri Hill)  ಮೇಲಿರುವ ಆಂಜನೇಯ ದೇವಸ್ಥಾನವು ಪೌರಾಣಿಕ ಮಹತ್ವ ಪಡೆದಿದ್ದು, ವಿಶ್ವವಿಖ್ಯಾತವಾಗಿದೆ. ಹಾಗಾದರೆ ಅಂಜನಾದ್ರಿಗೆ ಹೋಗೋದು ಹೇಗೆ? (How To Travel Anjanadri Hill) ರೈಲು ಪ್ರಯಾಣ ಬೆಸ್ಟಾ? ಬಸ್​ನಲ್ಲಿ ಹೋಗೋದು ಒಳ್ಳೆಯದಾ? ಎಷ್ಟು ಖರ್ಚಾಗಬಹುದು? ಅಲ್ಲಿ ವಸತಿಗೆ ಅವಕಾಶವಿದೆಯಾ? 

ಅಂಜನಾದ್ರಿ ರಾಮಭಕ್ತ ಹನುಮಂತ ಜನಿಸಿದ ನಾಡು ಎಂದು ರಾಮಾಯಣದ ಕಾಲದಿಂದಲೂ ಇಲ್ಲಿಯವರೆಗೆ ನಂಬಿಕೊಂಡು ಬರಲಾಗಿದೆ. ಭಾರತದಲ್ಲಿ ಹನುಮ ಮಂದಿರ ಇರದ ಊರೇ ಇಲ್ಲ. ಅಷ್ಟೊಂದು ಪ್ರಸಿದ್ಧಿ, ಪ್ರಚಾರ ಪಡೆದ ಈ ದೇವರಿಗೆ ಪೂಜೆಯಲ್ಲಿ ಅಗ್ರಸ್ಥಾನ. ಸ್ವಾಮಿ ಭಕ್ತಿ, ಶಕ್ತಿ, ವೀರತ್ವ, ನೈತಿಕ ನಿಷ್ಠೆಗೆ ಹನುಮ ಆದರ್ಶ.

ಅಂಜನಾದ್ರಿ ಎಂಬ ಹೆಸರಿನ ಹಿನ್ನೆಲೆಯೇನು?
ನಮ್ಮ ಪುರಾಣಗಳಲ್ಲಿ ಅಂಜನಾದ್ರಿ ಪರ್ವತವು ಪವಿತ್ರ ಸ್ಥಾನವೆಂದೇ ನಾಮಾಂಕಿತವಾಗಿದೆ. ತುಂಗಭದ್ರಾ ನದಿಯ ದಡದ ಈ ದೇವಸ್ಥಾನವು ಉತ್ತರ ಭಾರತದ ಕಾಶಿ ಎಂದೇ ಪ್ರಸಿದ್ಧಿ ಹೊಂದಿದೆ. ಅಂಜನಾದೇವಿಯು ಆಂಜನೇಯನಿಗೆ ಇಲ್ಲಿಯೇ ಜನ್ಮ ನೀಡಿದ್ದರಿಂದ ಈ ಬೆಟ್ಟಕ್ಕೆ ಅಂಜನಾದ್ರಿ ಪರ್ವತ ಎಂದು ಕರೆಯಲಾಗುತ್ತಿದೆ ಎಂಬ ಪ್ರತೀತಿಯಿದೆ. ಅಂದಹಾಗೆ ರಾಮಾಯಣ ಕಾಲದಿಂದಲೂ ಪ್ರಸಿದ್ಧಿ ಪಡೆದುಕೊಂಡಿರುವ ಈ ಅಂಜನಾದ್ರಿ ಪರ್ವತವು ಹಲವಾರು ವಿಶೇಷತೆಯನ್ನು ಹೊಂದಿದೆ.

570 ಮೆಟ್ಟಿಲು ಹತ್ತಬೇಕು!
ಅಂಜನಾದ್ರಿ ಬೆಟ್ಟದ ಮೇಲಿರುವ ಹನುಮನ ದೇವಾಲಯವನ್ನು ತಲುಪಬೇಕಾದರೆ 570 ಮೆಟ್ಟಿಲುಗಳನ್ನು ಹತ್ತಬೇಕು. ಈ ದೇವಾಲಯ ಪಿರಮಿಡ್ ಆಕಾರದಲ್ಲಿದ್ದು ಮೇಲ್ಭಾಗದಲ್ಲಿ ಸಣ್ಣ ಕೆಂಪು ಗುಮ್ಮಟವನ್ನು ಹೊಂದಿದೆ. ಗುಮ್ಮಟದ ಮೇಲೆ ಕೆಂಪು ಧ್ವಜವನ್ನು ಹಾರಿಸಲಾಗಿದೆ. ಬೆಟ್ಟದ ಒಂದು ಭಾಗವನ್ನು ನೋಡಿದಾಗ ಬಂಡೆಗಳು ಆಂಜನೇಯನ ಮುಖದ ಆಕಾರದಲ್ಲಿರುವುದು ಗಮನಕ್ಕೆ ಬರುತ್ತದೆ! ಈ ದೃಶ್ಯ ಭಕ್ತರ ಮೈನವಿರೇಳಿಸುತ್ತದೆ.

ಬೆಟ್ಟದ ಮೇಲಿಂದ ವೀಕ್ಷಿಸಲು ಎರಡು ಕಣ್ಣು ಸಾಲದು!
ತುಂಗಭದ್ರಾ ನದಿಯ ತಟದಲ್ಲಿ ನಿಂತಿರುವ, ಅಂಜನಾದ್ರಿ ಪರ್ವತದಲ್ಲಿರುವ ಆಂಜನೇಯನ ವಿಗ್ರಹವನ್ನು ಕಲ್ಲಿನಿಂದ ಕೆತ್ತಲಾಗಿದ್ದು, ಇಲ್ಲಿಯೇ ಶ್ರೀರಾಮ, ಸೀತೆಯರ ದೇವಾಲಯವೂ ಇರುವುದು ಮತ್ತೊಂದು ವಿಶೇಷತೆ. ಇನ್ನು ಬೆಟ್ಟದಲ್ಲಿಯೇ ಹಲವು ಸನ್ಯಾಸಿಗಳು ಮನೆ ಮಾಡಿಕೊಂಡಿದ್ದಾರೆ. ಪ್ರಮುಖವಾಗಿ ಉತ್ತರ ಭಾರತೀಯರು ಇಲ್ಲಿಗೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಇನ್ನು ಈ ಪರ್ವತದಲ್ಲಿ ಅನೇಕ ಔಷಧೀಯ ಗುಣಗಳುಳ್ಳ ಗಿಡಮೂಲಿಕೆಗಳಿವೆ. ಬೆಟ್ಟದ ಮೇಲಿನಿಂದ ಒಮ್ಮೆ ಸುತ್ತಲೂ ವೀಕ್ಷಿಸಿದರೆ ಹಂಪಿಯ ದೇವಾಲಯಗಳು ಕಣ್ಣಿಗೆ ಬೀಳುತ್ತವೆ. ಇನ್ನೂ ಈ ಬೆಟ್ಟದಿಂದ ಸೂರ್ಯೋದಯ ಹಾಗೂ ಸೂರ್ಯಾಸ್ತದ ಸೌಂದರ್ಯವನ್ನು ಸವಿಯಬಹುದು. ಮೆಟ್ಟಿಲು ಹತ್ತುವ ಭಕ್ತರನ್ನು ಸ್ವಾಗತ ಕೋರಲು ಕೋತಿಗಳು ಸಾಲು ಸಾಲಾಗಿಯೆ ಕೂತಿರುತ್ತವೆ!

Anjanadri Hill, Koppal, Karnataka ಅಂಜನಾದ್ರಿ ಪರ್ವತಕ್ಕೆ ಹೀಗೆ ತೆರಳಿ!

ರಾಮ ನಡೆದ ದಾರಿಯಲ್ಲಿ ನಡೆಯುವ ಭಾಗ್ಯ!
ಅಂಜನಾದ್ರಿ ಪರ್ವತದ ಮೇಲಿನ ಆಂಜನೇಯ ದೇವಸ್ಥಾನವನ್ನು ತಲುಪಲು ಎರಡು ದಾರಿಗಳಿವೆ. ಒಂದು ಮುಖ್ಯ ರಸ್ತೆಯಿಂದ ಮೆಟ್ಟಿಲುಗಳ ಮೂಲಕ, ಇನ್ನೊಂದು ಜಂಗ್ಲಿ ಕ್ರಾಸ್‌ ಮೂಲಕ ಬೆಟ್ಟದ ಹಿಂಬದಿಯಿಂದ ದೇವಸ್ಥಾನ ತಲುಪಬಹುದು. ಬೆಟ್ಟದ ಹಿಂಬದಿಯಿಂದ ಇರುವ ದಾರಿಯನ್ನೇ ಮೂಲ ದಾರಿ ಎಂದು ಕರೆಯಲಾಗುತ್ತದೆ. ರಾಮ, ಲಕ್ಷ್ಮಣರು ಆಂಜನೇಯನನ್ನು ಭೇಟಿಯಾಗಲು ಬಂದಾಗ ಈ ಮೂಲ ದಾರಿಯಲ್ಲೇ ಬಂದಿದ್ದರು ಎಂದು ಉಲ್ಲೇಖಗಳು ಇವೆ. ಹಾಗಾಗಿ ಆಂಜನೇಯ ದೇವರ ದರ್ಶನ ಪಡೆದುಕೊಳ್ಳಲು ಬರುವ ಭಕ್ತರು ಮೂಲ ದಾರಿಯ ಮೂಲಕ ಪರ್ವತವೇರಿ ಬರುತ್ತಾರೆ.

ಐದು ಪರ್ವತಗಳ ಆಕರ್ಷಕ ಪ್ರದೇಶ!
ರಾಮಾಯಣದಲ್ಲಿ ಬರುವ 5 ಪರ್ವತಗಳನ್ನು ನಾವು ಈ ಭಾಗದಲ್ಲಿಯೇ ಕಾಣಬಹುದು. ಮೊದಲ ಪರ್ವತ ನವಬೃಂದಾವನ ಗಡ್ಡೆಯ ಎಡಭಾಗದಲ್ಲಿ ಕಂಡುಬರುವ ತಾರಾ ಪರ್ವತ, ಎರಡನೇ ಪರ್ವತ ಹನುಮನಹಳ್ಳಿಯಲ್ಲಿರುವ ಋಷಿಮುಖ ಪರ್ವತ, ಮೂರನೇ ಪರ್ವತ ಪಂಪಾಸರೋವರದ ಬಳಿ ಬರುವ ವಾಲಿ ಪರ್ವತ, ನಾಲ್ಕನೇ ಪರ್ವತ ಅಂಜನಾದ್ರಿ ಪರ್ವತ, ಐದನೇಯ ಪರ್ವತ ಹಂಪಿಯಲ್ಲಿರುವ ಮಾತಂಗ ಪರ್ವತ.

ಇದನ್ನೂ ಓದಿ: Wonder Mango: ವರ್ಷಕ್ಕೆ ಎರಡು ಸಲ ಫಸಲು ನೀಡುವ ಮಾವಿನ ಮರ! ಬೆಳಗಾವಿಯಲ್ಲಿದೆ ಅಚ್ಚರಿಯ ಮಾವು

ಇವುಗಳು ರಾಮಾಯಣ ಕಾಲ ಪೂರ್ವದಿಂದಲೂ ಧರ್ಮ ರಕ್ಷಣೆಗಾಗಿ ಉಗಮವಾಗಿರುವ ಪರ್ವತಗಳು ಎಂದು ಹೇಳಲಾಗುತ್ತಿದೆ. ಅಷ್ಟೇ ಅಲ್ಲ ಆಂಜನೇಯ ತನ್ನ ಬಾಲ್ಯವನ್ನು ಈ ಪರ್ವತಗಳಲ್ಲಿಯೇ ಕಳೆದಿದ್ದಎಂಬ ಉಲ್ಲೇಖಗಳು ಸಹ ಇವೆ.

ಬೆಂಗಳೂರಿನಿಂದ 360ಕಿ.ಮೀ ಮಾತ್ರ
ಅಂಜನಾದ್ರಿಯು ಗಂಗಾವತಿಯಿಂದ ಸುಮಾರು 12 ಕಿ.ಮೀ ದೂರದಲ್ಲಿದೆ. ಜಿಲ್ಲಾ ಕೇಂದ್ರವಾದ ಕೊಪ್ಪಳದಿಂದ 44 ಕಿ.ಮೀ ದೂರದಲ್ಲಿದೆ. ಹುಬ್ಬಳ್ಳಿ ಧಾರವಾಡದಿಂದ 182 ಕಿ.ಮೀ ದೂರದಲ್ಲಿ ಇದ್ದರೆ, ರಾಜ್ಯದ ರಾಜಧಾನಿ ಬೆಂಗಳೂರಿನಿಂದ ಸುಮಾರು 360ಕಿ.ಮೀ ದೂರದಲ್ಲಿದೆ. ಅಂಜನಾದ್ರಿಗೆ ರೈಲಿನಲ್ಲಿ ಹೋಗಬೇಕು ಅಂದರೆ ನೀವು ನಿಮ್ಮೂರಿನಿಂದ ಹೊಸಪೇಟೆ ರೈಲ್ವೆ ಸ್ಟೇಶನ್ ತಲುಪಬೇಕು. ಹತ್ತಿರದ ವಿಮಾನ ನಿಲ್ದಾಣ ಹುಬ್ಬಳ್ಳಿಯ ವಿಮಾನ ನಿಲ್ದಾಣ ಆಗಿದೆ. ಅಂಜನಾದ್ರಿಗೆ ಭೇಟಿ ನೀಡಲು ಉತ್ತಮ ಸಮಯ ಎಂದರೆ, ಆಕ್ಟೊಬರ್​ನಿಂದ ಮಾರ್ಚ್ ತಿಂಗಳು.

ಬಸ್ ಸೌಕರ್ಯ ಇದೆಯೇ?
ಬೆಂಗಳೂರಿನಿಂದ ವಿಆರ್​ಎಲ್, ಎಸ್​ಆರ್​ಎಸ್​ನಂತಹ ಅನೇಕ ಖಾಸಗಿ ಬಸ್​ಗಳು ಅಂಜನಾದ್ರಿಗೆ ನಿಮ್ಮನ್ನು ತಲುಪಿಸುತ್ತವೆ. ಅಲ್ಲದೆ ಕೆಎಸ್​ಆರ್​ಟಿಸಿ ಬಸ್​ಗಳಲ್ಲಿಯೂ 400 ರೂಪಾಯಿಗೆಲ್ಲ ನೀವು ಅಂಜನಾದ್ರಿ ತಲುಪಬಹುದು. ರೈಲಿನ ಮೂಲಕ ಪ್ರಯಾಣಿಸುವವರು ಬೆಂಗಳೂರಿನಿಂದ ನೇರವಾಗಿ ಹೊಸಪೇಟೆಗೆ ಬಂದು ಅಲ್ಲಿಂದ ಹುಲಗಿ ಮಾರ್ಗವಾಗಿ ಅಂಜನಾದ್ರಿಗೆ ಬರಬಹುದು.

ಇದನ್ನೂ ಓದಿ: World's Cheapest Water Filter: ಈ ವಾಟರ್ ಫಿಲ್ಟರ್ ಬೆಲೆ 30 ರೂ ಮಾತ್ರ! ಜಗತ್ತಿನ ಅತಿ ಕಡಿಮೆ ಬೆಲೆಯ ಫಿಲ್ಟರ್ ತಯಾರಿಸಿದ ಬೆಳಗಾವಿಯ ಸಂಶೋಧಕ

320 ರೂಪಾಯಿಗೆ ಸ್ಲೀಪರ್ ಕೋಚ್​ನಲ್ಲಿ ಪ್ರಯಾಣಿಸಿ!
ಗಂಗಾವತಿ-ಹುಲಗಿ ಮಾರ್ಗವಾಗಿ ಮುಖ್ಯ ರಸ್ತೆಯಲ್ಲಿಯೆ ಅಂಜನಾದ್ರಿ ಇರುವುದರಿಂದ ಭಕ್ತರಿಗೆ ದೇವಸ್ಥಾನಕ್ಕೆ ತಲುಪಲು ಯಾವುದೇ ಗೊಂದಲವಾಗದು. ಬೆಂಗಳೂರಿನಿಂದ ಹತ್ತಿರದ ರೈಲು ನಿಲ್ದಾಣವಾದ ಹೊಸಪೇಟೆಗೆ 320 ರೂಪಾಯಿಗೆ ರೈಲಿನ ಸ್ಲೀಪರ್ ಕೋಚ್​ನಲ್ಲಿ ಪ್ರವಾಸ ಬರಬಹುದು. ನಾನ್ ಸ್ಲೀಪರ್ ಆದರೆ ಇನ್ನೂ ಕಡಿಮೆ! ಕೇವಲ 150 ರೂಪಾಯಿಗೆ ಬೆಂಗಳೂರಿನಿಂದ ಹೊಸಪೇಟೆ ತಲುಪಬಹುದು.

ವಸತಿ ವ್ಯವಸ್ಥೆ ಹೇಗೆ?
ಸದ್ಯ ಅಂಜನಾದ್ರಿ ಪರ್ವತದ ಬಳಿ ವಸತಿಗೆ ಅವಕಾಶವಿಲ್ಲ. ಆದರೆ ಪ್ರವಾಸಿಗರು ಹತ್ತಿರದ ಕೊಪ್ಪಳ, ಹೊಸಪೇಟೆ ಅಥವಾ ಹಂಪಿಯಲ್ಲಿ ಖಾಸಗಿ ಲಾಡ್ಜ್​ಗಳಲ್ಲಿ ವಸತಿ ಮಾಡಬಹುದು.

ವರದಿ: ರಾಘವೇಂದ್ರ ಜಂಗ್ಲಿ
Published by:guruganesh bhat
First published: