ಕೊಪ್ಪಳ: ಇನ್ನು ಮುಂದೆ ನಾವು ಒಟ್ಟಾಗಿರಲು ಆಗುವುದಿಲ್ಲ. ನಾನ್ಯಾರೋ ನೀನ್ಯಾರೋ..ಎಂದು ಕಾನೂನು ಬದ್ದವಾಗಿ ವಿಚ್ಛೇದನ ಪಡೆಯಲು ಮುಂದಾಗಿದ್ದ ನಾಲ್ಕು ದಂಪತಿ ಮತ್ತೆ ಒಂದಾದ ವಿಶೇಷ ಘಟನೆಯೊಂದು ಕೊಪ್ಪಳದಲ್ಲಿ (Koppal News) ನಡೆದಿದೆ. ಗಂಡ-ಹೆಂಡತಿ (Wife Husband) ಜಗಳ ಉಂಡು ಮಲಗೋವರೆಗೆ ಎಂಬ ಮಾತಿದೆ. ಸಣ್ಣ-ಪುಟ್ಟ ಮನಃಸ್ತಾಪಗಳನ್ನ ಮನೆಯಲ್ಲೇ ಮುಗಿಸಿಕೊಳ್ಳುವ ಬದಲಿಗೆ ಈ ನಾಲ್ಕು ಜೋಡಿ, ಕೋರ್ಟ್ ಮೆಟ್ಟಿಲೇರಿ ವಿಚ್ಛೇದನಕ್ಕೆ (Divorce Petition) ಅರ್ಜಿ ಸಲ್ಲಿಸಿದ್ರು. ವಿಚ್ಚೇದನ ಕೇಳಿದ್ದ ನಾಲ್ಕು ಜೋಡಿ ಕೋರ್ಟ್ ಆವರಣದಲ್ಲೇ ಮತ್ತೇ ಒಂದಾಗಿದ್ದಾರೆ.
ಹೀಗೆ ಹೂ ಮಾಲೆ ಹಾಕಿಕೊಂಡು, ಫೋಸು ಕೊಟ್ಟ ಇವರು ನವ ವಿವಾಹಿತರಲ್ಲ, ವಿಚ್ಚೇದನಕ್ಕೆ ಅರ್ಜಿ ಸಲ್ಲಿಸಿ ಮತ್ತೆ ಒಂದಾಗಿರೋ ದಂಪತಿ! ನಾಲ್ಕು ಜೋಡಿಯ ವಿವಾಹ ವಿಚ್ಚೇದನ ಅರ್ಜಿ ಏಕಕಾಲಕ್ಕೆ ಸುಖಾಂತ್ಯ ಕಂಡಿರೋ ಅಪರೂಪದ ಪ್ರಕರಣ ಗಂಗಾವತಿಯ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯದಲ್ಲಿ ನಡೆದಿದೆ.
ಎರಡು ವರ್ಷ ವಿಚಾರಣೆ
ಸಣ್ಣಪುಟ್ಟ ಜಗಳ ಮತ್ತು ಮನಸ್ತಾಪದ ಕಾರಣ ನೀಡಿ, ಗಂಗಾವತಿ ತಾಲೂಕಿನ ವಿವಿಧ ಗ್ರಾಮದ ದಂಪತಿಗಳಾದ ದ್ಯಾವಣ್ಣ ನಾಯಕ- ಅನಸೂಯ, ವೀರೇಶ- ಜಾನಕಮ್ಮ, ಶ್ರೀನಿವಾಸ - ತುಳಸಿದೇವಿ, ನಿಂಗಪ್ಪ- ಮಮತಾ ಕೋರ್ಟ್ ಗಂಗಾವತಿ ಕೋರ್ಟ್ ನಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. ಸುಮಾರು ಎರಡು ವರ್ಷಗಳ ವಿಚಾರಣೆ ನಂತರ ನಡೆದ ರಾಷ್ಟ್ರೀಯ ಲೋಕ್ ಅದಾಲತ್ ನಲ್ಲಿ ನಾಲ್ಕು ಜೋಡಿ ಮತ್ತೆ ಒಂದಾಗಿದ್ದಾರೆ.
ಕೋರ್ಟ್ ಹಾಲ್ನಲ್ಲೇ ಹಾರ ವಿನಿಮಯ
ವಿಚ್ಚೇದನಕ್ಕೆ ಅರ್ಜಿ ಸಲ್ಲಿಸಿ ಮತ್ತೆ ಒಂದಾಗಿರುವ ನಾಲ್ಕು ಜೋಡಿ ಕೋರ್ಟ್ ಹಾಲ್ನಲ್ಲೇ ಮತ್ತೊಮ್ಮೆ ಹಾರ ಬದಲಾಯಿಸಿಕೊಂಡರು. ಸ್ವತಃ ನ್ಯಾಯಾಧೀಶರು ಮತ್ತು ವಕೀಲರು ಮುಂದೆ ನಿಂತು ಮುಂದಿನ ದಿನದಲ್ಲಿ ಯಾವುದೇ ಮನಸ್ತಾಪ ಇಲ್ಲದಂತೆ ಬದುಕಿ ಎಂದು ಹಾರೈಸಿ, ಒಬ್ಬರಿಗೊಬ್ಬರಿಗೆ ಸಿಹಿ ತಿನ್ನಿಸಿ ಹಾರೈಸಿದರು.
ನ್ಯಾಯಾಧೀಶರು, ವಕೀಲರಿಂದ ಶುಭ ಹಾರೈಕೆ
ಒಂದೇ ಬಾರಿಗೆ ನಾಲ್ಕು ಜೋಡಿ ಒಂದಾದ ಅಪರೂಪದ ಘಟನೆಗೆ ಗಂಗಾವತಿಯ ಒಟ್ಟು ನಾಲ್ವರು ನ್ಯಾಯಾಧೀಶರು ಮತ್ತು ವಕೀಲರು ಸಾಕ್ಷಿಯಾದರು. ನ್ಯಾಯಾಧೀಶರಾದ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಧೀಶ ಎಂ.ಜಿ.ಶಿವಳ್ಳಿ, ಹಿರಿಯ ಸಿವಿಲ್ ನ್ಯಾಯಾಧೀಶರಾದ ರಮೇಶ ಎಸ್ ಗಾಣಿಗೇರ, ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಶ್ರೀಮತಿ ಶ್ರೀದೇವಿ ಧರಬಾರೆ ಹಾಗೂ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಾದ ಗೌರಮ್ಮ ಪಾಟೀಲ್ ಕಾರ್ಯಕ್ರಮದಲ್ಲಿ ಭಾಗವಹಿಸಿ ವಿಚ್ಚೇದನಕ್ಕೆ ಮುಂದಾಗಿದ್ದ ದಂಪತಿಗಳಿಗೆ ಬುದ್ಧಿಮಾತು ಹೇಳುವ ಮೂಲಕ ಶುಭ ಹಾರೈಸಿದರು.
ಇದನ್ನೂ ಓದಿ: Koppal: 48 ಲಕ್ಷ ವಿದ್ಯಾರ್ಥಿಗಳಿಗಾಗಿ ಕೊಪ್ಪಳದ 6ನೇ ಕ್ಲಾಸ್ ಬಾಲಕನಿಂದ ಹೈಕೋರ್ಟ್ ಹೋರಾಟ!
ದಂಪತಿ ಹೇಳೋದೇನು?
“ಕೆಲವು ಸಂದರ್ಭದಲ್ಲಿ ಸಿಟ್ಟಿನ ಭರದಲ್ಲಿ ದೂರವಾಗಬೇಕೆಂದಿದ್ದವು. ಆದರೆ ಮುಂದಿನ ಜೀವನಕ್ಕಾಗಿ ಗಂಡ ಹೆಂಡತಿ ಹೊಂದಾಣಿಕೆ ಮಾಡಿಕೊಂಡ ಹೋಗಬೇಕು. ಈಗ ಒಂದಾಗಿದ್ದೇವೆ. ಮುಂದೆಯೂ ಒಂದಾಗಿರುತ್ತೇವೆ” ಎಂದು ವಿಚ್ಛೇದನದಿಂದ ಹಿಂದೆ ಸರಿದ ದಂಪತಿ ಅಭಿಪ್ರಾಯಪಟ್ಟರು.
ಇದನ್ನೂ ಓದಿ: Gavisiddeshwara Jatre Rathotsava: ದಕ್ಷಿಣ ಭಾರತದ ಮಹಾ ಕುಂಭಮೇಳದ ವೈಭವ!
ಕೋರ್ಟ್ ಮೆಟ್ಟಿಲೇರಿದ್ದ ಪ್ರಕರಣದಲ್ಲಿ ಗೆದ್ದವ ಸೋತ, ಸೋತವ ಸತ್ತ ಎಂಬ ಗಾದೆ ಜನಜನಿತ. ಆದ್ರೆ, ಈ ಲೋಕ್ ಅದಾಲತ್ನಲ್ಲಿ ಒಂದಾದ ಈ ಜೋಡಿ ಜೀವನದಲ್ಲಿ ಮತ್ತೆ ಗೆದ್ದಿದ್ದಾರೆ ಎಂದರೂ ತಪ್ಪಾಗದು.
ವರದಿ: ಶರಣಪ್ಪ ಬಾಚಲಾಪುರ, ನ್ಯೂಸ್ 18 ಕೊಪ್ಪಳ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ