ಕೊಡಗು: ರಸ್ತೆ ಬದಿ ಸೋಲಾರ್ ಲೈಟ್ ಅಳಡಿಸೋದು ಕಾಮನ್ ಅಂತಾ ನೀವೇನಾದ್ರೂ ಇದನ್ನ ನಿರ್ಲಕ್ಷಿಸಿದ್ರೆ ನಿಮ್ಗೇ ಲಾಸ್. ಇದೇನು ಸಾಮಾನ್ಯ ಸೋಲಾರ್ ಲೈಟ್ ಅಲ್ಲ. ನಿಮ್ಮ ಪ್ರಾಣ ಉಳಿಸಬಹುದು. ಅಷ್ಟಕ್ಕೂ ಈ ಗ್ರೀನ್ ಸೋಲಾರ್ ಲೈಟ್ (Green Solar Lights) ಕಂಡುಬರೋದು ಎಲ್ಲಿ? ಇದ್ರಿಂದ ಆಗೋ ಉಪಕಾರ ಏನು? ಹೇಳ್ತೀವಿ ನೋಡಿ.
ಯೆಸ್, ಕೊಡಗು ಜಿಲ್ಲೆಯ ವಿವಿಧೆಡೆ ಹೋಗಬೇಕಾದರೆ ಇಂತಹ ಹಸಿರು ಬಣ್ಣದ ಈ ದೀಪವನ್ನ ನೋಡಿದ್ರೆ ಅದು ನೀಡುವ ಸೂಚನೆಯನ್ನ ಪಾಲಿಸೋದು ಬೆಟರ್. ಅದ್ರಲ್ಲಿ ಕಾಣೋ ಲೈಟ್ ಅನ್ನ ಗಮನಿಸಿದ್ರೆ ನಿಮ್ಗೊಂದು ಸೂಚನೆಯೂ ಸಿಗುತ್ತೆ.
ಆನೆಯ ಸಿಗ್ನಲ್ ಬೋರ್ಡ್!
ಇತ್ತೀಚಿನ ದಿನಗಳಲ್ಲಿ ಕೊಡಗಿನ ಹಲವೆಡೆ ಮಾನವ ಹಾಗೂ ಕಾಡಾನೆಗಳ ನಡುವಿನ ಸಂಘರ್ಷ ಜೋರಾಗಿದೆ. ಹೀಗಾಗಿ ಕುಶಾಲನಗರ ತಾಲೂಕಿನ ವಿವಿಧೆಡೆ ಇಲಾಖೆಯ ಬೆಂಬಲದೊಂದಿಗೆ ಎ ರೋಚಾ ಇಂಡಿಯಾ ಸಂರಕ್ಷಣಾ ಸಂಶೋಧನಾ ಸಂಸ್ಥೆಯಿಂದ ಇಂತಹ ಗ್ರೀನ್ ಸಿಗ್ನಲ್ ಪಾಯಿಂಟ್ಗಳನ್ನ ನಿರ್ಮಿಸಲಾಗಿದೆ. ರಸ್ತೆ ಬದಿ ಸೋಲಾರ್ ಚಾಲಿತ ದೀಪಗಳನ್ನ ಅಳವಡಿಸಲಾಗಿದ್ದು, ಇದನ್ನ ಆನೆಯ ಸಿಗ್ನಲ್ ಬೋರ್ಡ್ ಎಂದೇ ಕರೆಯಲಾಗುತ್ತೆ.
ಸಾರ್ವಜನಿಕರಿಗೆ ಕೊಡುತ್ತೆ ಎಚ್ಚರಿಕೆ
ಇವುಗಳು ಸ್ವಯಂ ಚಾಲಿತವಾಗಿ ಕೆಲಸ ನಿರ್ವಹಿಸುವ ಸಿಗ್ನಲ್ ಕೂಡಾ ಆಗಿದ್ದು, ಕಾಡಾನೆಗಳ ಬಗ್ಗೆ ವಾಹನ ಸವಾರರಿಗೆ ಹಾಗೂ ಈ ಭಾಗದಲ್ಲಿ ಸಂಚರಿಸುವ ಸಾರ್ವಜನಿಕರಿಗೆ ನಿಖರ ಮಾಹಿತಿ ನೀಡಿ ಎಚ್ಚರಿಸಲಿದೆ.
ಆನೆ ಚಲನವಲನ ಕಂಡ್ರೆ ರೆಡ್ ಲೈಟ್!
ಸದ್ಯ ಮೀನುಕೊಲ್ಲಿ ಮತ್ತು ಆನೆಕಾಡು ಅರಣ್ಯ ವ್ಯಾಪ್ತಿಯಲ್ಲಿರುವ ಐದು ಸಂಘರ್ಷ ವಲಯಗಳಲ್ಲಿ ಆನೆ ಫಲಕಗಳನ್ನು ಹಾಕಲಾಗಿದೆ. ಈ ಸೈನ್ ಬೋರ್ಡ್ಗಳು ಕಾಡು ಆನೆಗಳ ಚಲನವಲನ ಅಥವಾ ಉಪಸ್ಥಿತಿಯ ಬಗ್ಗೆ ಪ್ರಯಾಣಿಕರನ್ನು ಎಚ್ಚರಿಸುತ್ತವೆ. ಕಾಡಾನೆಗಳ ಚಲನವಲನ ಪತ್ತೆಯಾದಾಗ ಈ ಬೋರ್ಡ್ನಲ್ಲಿ ರೆಡ್ ಲೈಟ್ ಬೆಳಗುತ್ತವೆ. ಅಷ್ಟೇ ಅಲ್ದೇ, ಪ್ರಯಾಣಿಕರನ್ನು ಅಲರ್ಟ್ ಇರುವಂತೆ ಮಾಡುತ್ತವೆ.
ಅಲರ್ಟ್ ಮೆಸೇಜ್ ಹೋಗುತ್ತೆ!
ಈ ಸಿಗ್ನಲ್ ಬೋರ್ಡ್ ಆನೆಯ ಚಲನೆಯನ್ನು ಪತ್ತೆಹಚ್ಚಿದ ನಂತರ SMS ಅನ್ನು ಸರ್ವರ್ ವ್ಯವಸ್ಥೆಗೆ ರವಾನಿಸುತ್ತವೆ. ಸ್ಥಳೀಯ DRFO ಗಳು ಕಾಡು ಆನೆಗಳ ಚಲನವಲನವನ್ನು ಟ್ರ್ಯಾಕ್ ಮಾಡುತ್ತಾರೆ. ಹೀಗೆ ಒಂದು ಕಡೆ ಪ್ರಯಾಣಿಕರಿಗೆ ಅಲರ್ಟ್ ಮೆಸೇಜ್ ಹೋದರೆ, ಇನ್ನೊಂದೆಡೆ ಅರಣ್ಯ ಇಲಾಖೆಯನ್ನೂ ಎಚ್ಚರಿಸುತ್ತವೆ. ಇನ್ನು ಈ ಸಿಗ್ನಲ್ ಬೋರ್ಡ್ ಸೌರ ಚಾಲಿತ ವ್ಯವಸ್ಥೆಯಾಗಿದ್ದು, ಈ ಫಲಕಗಳು ಮತ್ತು ಸಿಗ್ನಲ್ ಬೋರ್ಡ್ಗಳನ್ನು ಸೂರ್ಯನ ಬೆಳಕು ಇಲ್ಲದ ಸಂದರ್ಭದಲ್ಲಿಯೂ ಸಂಪರ್ಕಿಸಬಹುದು.
ಇದನ್ನೂ ಓದಿ: Madikeri: ಪ್ರತಿಭೆ ಯಾರಪ್ಪನ ಸ್ವತ್ತಲ್ಲ! ಕೇಶ ವಿನ್ಯಾಸದಲ್ಲಿ ಅರಳಿದ ಅಂಬೇಡ್ಕರ್
ಒಟ್ಟಾರೆ ಹಲವು ವರ್ಷಗಳ ಆನೆ-ಮಾನವ ಸಂಘರ್ಷದಿಂದ ಕಾಡಾನೆ ನಿಯಂತ್ರಣಕ್ಕೆ ವಿದ್ಯುತ್ ಬೇಲಿ, ರೈಲ್ವೇ ಬ್ಯಾರಿಕೇಡ್ ಅಳವಡಿಕೆ, ಆನೆಗೇಟ್, ಕಾಡಾನೆಗಳಿಗೆ ರೇಡಿಯೋ ಕಾಲರ್ ಹೀಗೆ ಹತ್ತು ಹಲವು ಯೋಜನೆಗಳನ್ನ ಹಾಕಿಕೊಳ್ಳಲಾಗಿತ್ತು.
ಇದನ್ನೂ ಓದಿ: Kodagu Tiger: ಈ ಹುಲಿ ಹಿಡಿಯೋಕೆ ಬೇಕಾಯ್ತು 5 ಕಾಡಾನೆ, 20 ಬಗೆಯ ಆಯುಧ,150 ಸಿಬ್ಬಂದಿ!
ಇದೀಗ ಅದಕ್ಕೊಂದು ಸೇರ್ಪಡೆ ಅನ್ನೋ ಹಾಗೆ ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಂಡಿದ್ದು ಇನ್ನಾದ್ರೂ ಆನೆಗಳ ಹಾಗೂ ಮಾನವನ ನಡುವಿನ ಸಂಘರ್ಷ ಕೊನೆಯಾಗಲಿ ಅನ್ನೋ ಆಶಯ ಎಲ್ಲರದ್ದು.
ವರದಿ: ಸ್ಟಾನ್ಲಿ ಡಿ.ಕೊಡಗು
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ