ಮಡಿಕೇರಿ: ಮಂಜಿನ ನಗರಿಯ ಹಸಿರೋದ್ಯಾನ ರಾಜಾಸೀಟಿನಲ್ಲಿ ಋತುಗಳ ರಾಜ ವಸಂತ ಆಗಮನವಾಗಿದೆ. ಪ್ರಕೃತಿಯ ಸ್ವರ್ಗಸದೃಶ ದೃಶ್ಯ ಮೈದುಂಬಿದೆ. ವಾರ್ಷಿಕ ಫಲಪುಷ್ಪ ಪ್ರದರ್ಶನದ ಅಂಗವಾಗಿ ರಾಜಾಸೀಟಿನಲ್ಲಿ (Raja Seat) ಹೂವಿನ ಲೋಕ (Flowers Show In Madikeri) ಅನಾವರಣಗೊಂಡಿದೆ. ಬೆಡಗು ಬಿನ್ನಾಣದಿಂದ ಬಾಗಿ ಬಳುಕುವ ಪುಷ್ಪ ರಾಣಿಯರೊಂದಿಗೆ ಕಾಯಿಪಲ್ಲೆಗಳ ದರ್ಶನ, ಪುಷ್ಪ ಸ್ಪರ್ಶಗೊಂಡ ಕಲಾಕೃತಿಗಳ ನರ್ತನ ಕಂಡು ಪ್ರವಾಸಿಗರು ಚಕಿತರಾಗ್ತಿದ್ದಾರೆ.
ಉದ್ಯಾನವನದ ಪ್ರವೇಶದಲ್ಲೇ ನಾಲ್ಕುದಿಕ್ಕುಗಳಿಗೂ ಶೋಭಿಸುವಂತೆ ಕಂಗೊಳಿಸುತ್ತಿದೆ. ನಾಲ್ಕುನಾಡು ಅರಮನೆಯ ಪ್ರತಿಕೃತಿ. 38 ಅಡಿ ಉದ್ದ, 32 ಅಡಿಗಳೆತ್ತರದ ಅರಮನೆ ಪುಷ್ಪಗಳಿಂದ ಮೈದುಂಬಿದೆ.
ಹೂಗಳಿಂದ ಮೈದಳೆದ ನಾಲ್ಕುನಾಡು ಅರಮನೆ
ಗುಲಾಬಿ, ಮಿರಾಬೆಲ್ ರೋಸ್, ಕೈತಂತಿಮಮ್, ಸೇವಂತಿಗೆ ಮತ್ತಿತರ ಹೂಗಳಿಂದ ಮೈದಳೆದ ನಾಲ್ಕುನಾಡು ಅರಮನೆ ಆಕರ್ಷಿಸುತ್ತಿದೆ. ಮೈಸೂರಿನ ಉಮಾಶಂಕರ್ ತಂಡವು ಈ ಪುಷ್ಪ ಕಲಾಕೃತಿಗೆ ಜೀವ ತುಂಬಿದ್ದಾರೆ.
ಇದನ್ನೂ ಓದಿ: Madikeri: ಪ್ರತಿಭೆ ಯಾರಪ್ಪನ ಸ್ವತ್ತಲ್ಲ! ಕೇಶ ವಿನ್ಯಾಸದಲ್ಲಿ ಅರಳಿದ ಅಂಬೇಡ್ಕರ್
ಹೂಗಳಲ್ಲಿ ಗೊಂಬೆಗಳು ಸೃಷ್ಟಿ!
ಇದಿಷ್ಟೇ ಅಲ್ಲ, ಅಂದದ ಚಂದದ ಎಂದೆಂದೂ ಕುಂದದ ಪುಷ್ಪಗಳ ವಿಹಂಗಮ ನೋಟಕ್ಕೆ ವೀಕ್ಷಸರು ಬೆಕ್ಕಸಬೆರಗಾಗಿದ್ದಾರೆ. ಹೂಗಳಲ್ಲೇ ರೂಪುತಳೆದ ಬಟರ್ ಫ್ಲೈ, ದುಂಬಿ, ಟ್ರೋಫಿ, ಕರ್ನಾಟಕದ ಭೂಪಟ, ಕಾಫಿ ಕಪ್, ಸೆಲ್ಫಿ ಕಾರ್ನರ್, ಚೋಟಾಭೀಮ್, ಮಿಕ್ಕಿ ಮೌಸ್ ಮತ್ತಿತರ ಗೊಂಬೆಗಳು ಅಚ್ಚರಿ ಮೂಡಿಸಿದೆ.
ಇದನ್ನೂ ಓದಿ: Nehru Mantap Madikeri: ಮಡಿಕೇರಿಯ ನೆಹರು ಮಂಟಪ ಹೀಗಿದೆ ನೋಡಿ
ಗಾಂಧಿ ಮೈದಾನದಲ್ಲಿ ವೈನ್ ಮೇಳ
ಇನ್ನೊಂದೆಡೆ ತರಕಾರಿ ಕೆತ್ತನೆ, ಜೋಡಣೆ, ಇಕೆಬಾನ, ಬೋನ್ಸಾಯ್‌ಗಳ ಪ್ರದರ್ಶನವೂ ಗಮನ ಸೆಳೆಯುತ್ತಿದೆ. ಇವೆಲ್ಲ ರಾಜಾಸೀಟಿನ ಆಕರ್ಷಣೆಯಾದರೆ, ಪಕ್ಕದ ಗಾಂಧಿ ಮೈದಾನದಲ್ಲಿ ವೈನ್ ಮೇಳದ ಆಕರ್ಷಣೆ. ಬಗೆಬಗೆಯ ವೈನ್‌ಗಳು, ಹೂವಿನ ಗಿಡಗಳು, ಬೀಜಗಳು, ಕಸಿ ಗಿಡಗಳು ಸೇರಿದಂತೆ ಪ್ರದರ್ಶನ ಮತ್ತು ಮಾರಾಟದ ಮಳಿಗೆಗಳು ಕೈಬೀಸಿ ಕರೆಯುತ್ತಿವೆ.
ವರದಿ: ಸ್ಟಾನ್ಲಿ ಡಿ, ಕೊಡಗು
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ