Kodagu Success Story: ಕೊಡಗಿನ ಮಹಿಳೆಯರಿಗೆ ಭೇಷ್ ಎನ್ನಿ! ಇದು ಸ್ತ್ರೀಯರೇ ರೂಪಿಸಿದ ನರ್ಸರಿ!

ಸಂಘದಿಂದ ಅಗತ್ಯ ಸಾಲ ಸೌಲಭ್ಯವೂ ದೊರೆಯುತ್ತದೆ. ಮನಸ್ಸು ಮಾಡಿದ್ರೆ ಎಂಥದ್ದೇ ಸಾಧನೆಗೂ ಸಿದ್ದ ಅನ್ನೋದನ್ನ ಗ್ರಾಮೀಣ ಮಹಿಳೆಯರು ತೋರಿಸಿಕೊಟ್ಟಿದ್ದಾರೆ.

ಪವಿತ್ರ ಸ್ತ್ರೀ ಶಕ್ತಿ ಸಂಘ

"ಪವಿತ್ರ ಸ್ತ್ರೀ ಶಕ್ತಿ ಸಂಘ"

 • Share this:
  ಕೊಡಗು: ನಮ್ಮಲ್ಲಿ ಛಲವೊಂದಿದ್ದರೆ ಏನನ್ನು ಬೇಕಾದ್ರೂ ಸಾಧಿಸಬಹುದು, ನಮ್ಮ ಬೆಳವಣಿಗೆಗೆ ಯಾವುದೂ ಅಡ್ಡಿಯಾಗಲು ಸಾಧ್ಯವೇ ಇಲ್ಲ ಅನ್ನೋ ಮಾತಿದೆ. ಹಾಗಂತ ಸಾಧನೆ ಮಾಡಲು ಎಲ್ಲೋ ಹೋಗಬೇಕಾಗಿಲ್ಲ, ಡಿಗ್ರಿ ಓದಲೇಬೇಕು ಅಂತಿಲ್ಲ. ಹಣಬಲವೂ ಬೇಕಿಲ್ಲ. ಹೀಗಿದ್ರೂ ಸಾಧನೆ (Success Story) ಮಾಡಬಹುದು ಅನ್ನೋದನ್ನ ತೋರಿಸಿಕೊಟ್ಟಿದ್ದಾರೆ  ಕೊಡಗು ಜಿಲ್ಲೆಯ (Kodagu) ಮಕ್ಕಂದೂರು ಗ್ರಾಮದ ಮಹಿಳೆಯರು! ಅಷ್ಟೇ ಅಲ್ಲ. ಕೊಡಗು ಜಿಲ್ಲಾ ಪಂಚಾಯತ್ ಸಿಇಒ ಕೂಡ ಹುಬ್ಬೇರಿಸುವಂತೆ ಮಾಡಿದ್ದಾರೆ. ಪ್ರಚಾರದ ಕನಸನ್ನೂ ಕಾಣದಿದ್ದ ಗ್ರಾಮೀಣ ಮಹಿಳೆಯರು (Kodagu Success Story) ದಿಢೀರನೆ ಫೇಮಸ್ ಆದ ಕಥೆ ಇದು!

  ಪವಿತ್ರ ಸ್ತ್ರೀ ಶಕ್ತಿ ಸಂಘ
  ಹೌದು, ತಾವಾಯ್ತು, ತಮ್ಮ ಮನೆ ಕೆಲಸ, ತೋಟ ಕೆಲಸ ಅಂತಾ ಇದ್ದ ಮಹಿಳೆಯರು ಕೆಲ ವರ್ಷಗಳ ಹಿಂದೆ ಪವಿತ್ರ ಸ್ತ್ರೀ ಶಕ್ತಿ ಸಂಘ ರಚಿಸಿಕೊಂಡಿದ್ದರು. ಅದೇ ಸಂಘದ ಸದಸ್ಯರಾಗಿದ್ದ ಲೀಲಾವತಿ ಎಂಬವರು ಮಕ್ಕಂದೂರು ಸಂಜೀವಿನಿ ಒಕ್ಕೂಟದ ಕೃಷಿ ಸಖಿಯಾಗಿ ಆಯ್ಕೆಯಾದ್ರು.  ಕಾರ್ಯಾಗಾರದಲ್ಲಿ ಸಿಕ್ತು ತರಬೇತಿ
  ಆಯ್ದ ಗ್ರಾ.ಪಂ ಸಂಜೀವಿನಿ ಒಕ್ಕೂಟಗಳಿಗೆ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಡಿ, ತೋಟಗಾರಿಕೆ ಹಾಗೂ ಅರಣ್ಯ ಇಲಾಖೆ ಸಹಯೋಗದೊಂದಿಗೆ ಹೊದ್ದೂರು ಗ್ರಾ.ಪಂ ವ್ಯಾಪ್ತಿಯ ವಾಟೆಕಾಡು ಇಲಾಖಾ ಸಸ್ಯ ಕ್ಷೇತ್ರ ಸಾಮಾಜಿಕ ಅರಣ್ಯ ವಲಯದಲ್ಲಿ ತರಬೇತಿ ಕಾರ್ಯಾಗಾರ ನೀಡಲಾಗಿತ್ತು. ಮಕ್ಕಂದೂರು ಸಂಜೀವಿನಿ ಒಕ್ಕೂಟದ ಕೃಷಿ ಸಖಿ ಲೀಲಾವತಿ ಅವರೂ ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದರು. ಪ್ರಾಯೋಗಿಕವಾಗಿ ನರ್ಸರಿ ಮಾಡುವ ಕುರಿತು ಮಾಹಿತಿ ಪಡೆದುಕೊಂಡ್ರು.

  ನರ್ಸರಿ ಪ್ಲ್ಯಾನಿಂಗ್
  ಬಳಿಕ ಮಕ್ಕಂದೂರು ಗ್ರಾಮ ಪಂಚಾಯತ್​ನಿಂದ ಪ್ರಕೃತಿ ಉತ್ಪಾದಕರ ಗುಂಪು ರಚಿಸಲಾಯ್ತು. ಅದರಲ್ಲಿ ಪವಿತ್ರ ಸ್ತ್ರೀ ಶಕ್ತಿ ಸಂಘದಿಂದ 8 ಮಂದಿ ಸದಸ್ಯರು ಹಾಗೂ ಇತರೆ ಸಂಘದಿಂದ 4 ಮಂದಿ ಸದಸ್ಯರನ್ನು ಸೇರಿಸಿಕೊಂಡು ಒಟ್ಟು 12 ಮಂದಿಯ ತಂಡ ನರ್ಸರಿ ಕಾರ್ಯಕ್ಕೆ ಮುಂದಾಯ್ತು.

  ಮಹಿಳೆಯರ ಸಾಧನೆಗೆ ಮೆಚ್ಚುಗೆ
  ಆ ಮೂಲಕ ಮಹಿಳಾ ಸಬಲೀಕರಣಕ್ಕೆ ಉತ್ತೇಜನ ನೀಡಿ ಆರ್ಥಿಕವಾಗಿ ಸದೃಢಗೊಳಿಸುವ ಕೇಂದ್ರ ಸರ್ಕಾರದ NRML ಯೋಜನೆಯು ಕೊಡಗಿನಲ್ಲಿ ಯಶಸ್ವಿಯಾಗಿ ಮುನ್ನಡೆಯುತ್ತಿದೆ. ಸ್ಥಳಕ್ಕೆ ಖುದ್ದು ಭೇಟಿ ನೀಡಿದ ಜಿ.ಪಂ ಸಿಇಒ ಭಂವರ್ ಸಿಂಗ್ ಮೀನಾ, ಮಹಿಳೆಯರ ಸಾಧನೆ ಕಂಡು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಭರವಸೆ ನೀಡಿದ್ದು, ಜಿಲ್ಲೆಯ ಮೊದಲ ನರ್ಸರಿ ಅಭಿವೃದ್ದಿಗೆ ಬೆಂಬಲವಾಗಿ ನಿಂತಿದ್ದಾರೆ.

  ಪವಿತ್ರ ಸ್ತ್ರೀಶಕ್ತಿ ಸಂಘದ ಲೀಲಾವತಿ ಅವರ ಸಂಪರ್ಕ ಸಂಖ್ಯೆ: 9483242533 

  ವೆರೈಟಿ ಗಿಡಗಳ‌ ನರ್ಸರಿ
  ನರ್ಸರಿಯಲ್ಲಿ ಅಡಿಕೆ, 3 ವಿಧದ ಕಾಫಿ, ಕಾಚಂಪುಳಿ, ನಿಂಬೆ, ಬಟರ್ ಫ್ರೂಟ್, ಕರಿಮೆಣಸು ಗಿಡಗಳನ್ನು ಮಾಡಿದ್ದಾರೆ. ಈಗಾಗಲೇ ಸುಮಾರು 15 ಸಾವಿರ ಗಿಡಗಳಿದ್ದು, ಮುಂದಿನ ದಿನಗಳಲ್ಲಿ ಏಲಕ್ಕಿ, ವಿವಿಧ ಹಣ್ಣಿನ ಗಿಡಗಳ ನರ್ಸರಿ ಮಾಡುವ ಚಿಂತನೆ ಇದೆ.

  ಉತ್ತಮ ತಳಿಯ ಗಿಡ
  ಇನ್ನು ಲೀಲಾವತಿ ಅವರ ಅರ್ಧ ಎಕರೆ ಜಮೀನನ್ನು ಉತ್ಪಾದಕರ ಗುಂಪಿನ ಮೂಲಕ ಲೀಸ್​ಗೆ ಪಡೆದುಕೊಂಡು ಆ ಜಾಗದಲ್ಲಿ ನರ್ಸರಿ ಮಾಡಲಾಗಿದೆ. ಉತ್ತಮ ಗುಣಮಟ್ಟದ ಮಣ್ಣು, ಮರಳು, ಸಾವಯವ ಗೊಬ್ಬರವನ್ನು ಮಿಶ್ರಣ ಮಾಡಿ ಉತ್ತಮ ತಳಿಯ ಬೀಜ ಬಿತ್ತನೆ ಮಾಡಿ, ಬಳ್ಳಿಗಳನ್ನು ನೆಟ್ಟು, ನೀರು ಒದಗಿಸಿ, ಔಷಧಿ ಸಿಂಪಡಿಸುವ ಮೂಲಕ ಗಿಡಗಳ ಪೋಷಣೆ ಮಾಡಲಾಗ್ತಿದೆ.

  ಇದುವರೆಗೆ 70 ಸಾವಿರ ಖರ್ಚು
  ಆರಂಭದಲ್ಲಿ ಮಹಿಳೆಯರೇ ತಮ್ಮ ಸ್ವಂತ ಖರ್ಚಿನಲ್ಲಿ ನರ್ಸರಿಗೆ ಬೇಕಾದ ಸವಲತ್ತುಗಳನ್ನು ಪೂರೈಸಿಕೊಂಡಿದ್ದು, ಇತ್ತೀಚಿಗೆ ಒಂದು ಕಂತಿನ ಹಣ ಬಂದಿದೆ. ವೇತನ ಸೇರಿ ಇದುವರೆಗೆ ಸುಮಾರು 70 ಸಾವಿರ ಖರ್ಚಾಗಿದೆ.

  ಇದನ್ನೂ ಓದಿ: Gandhi Bhavan Kodagu: ಕೊಡಗಿಗೂ ಮಹಾತ್ಮಾ ಗಾಂಧೀಜಿಗೂ ಇದೆ ಸಂಬಂಧ!

  ಮಹಿಳೆಯರ ಈ ಕಾರ್ಯಕ್ಕೆ ಪ್ರತಿಯೊಬ್ಬರೂ ಸಹಕಾರ ನೀಡಿದ್ದು, ನರ್ಸರಿಯನ್ನು ಮತ್ತಷ್ಟು ಅಭಿವೃದ್ದಿಪಡಿಸುವ ಛಲ ಹೊತ್ತಿದ್ದಾರೆ. ಶೀಘ್ರದಲ್ಲೇ ಮಕ್ಕಂದೂರು ಗ್ರಾಮ ಪಂಚಾಯತ್​ನಲ್ಲಿ ಗಿಡಗಳನ್ನು ರಿಯಾಯಿತಿ ದರದಲ್ಲಿ ಮಾರಾಟ ಮಾಡಲು ಸಿದ್ದತೆ ನಡೆದಿದೆ.
  ಗುಂಪಿನಲ್ಲಿರುವ ಮಹಿಳೆಯರಿಗೆ ಸರ್ಕಾರದಿಂದ ವೇತನವೂ ದೊರೆಯಲಿದೆ.

  ಸ್ವಾವಲಂಬನೆಯ ಹಾದಿ
  ಸದಸ್ಯರೆಲ್ಲರೂ ಸಕ್ರಿಯವಾಗಿ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಂಡು ಸಂಘದ ಸಾಧನೆಗೆ ಕೊಡುಗೆ ನೀಡಿದ್ದಾರೆ. ಗ್ರಾಮದ ಮಹಿಳೆಯರಿಗೆ ಸ್ವಾವಲಂಬನೆಯ ಹಾದಿ ತೋರಿಸುವ ಸಲುವಾಗಿ ಸಂಜೀವಿನಿ ಒಕ್ಕೂಟ ಆರಂಭವಾಗಿದ್ದು, ಮಕ್ಕಂದೂರು ಗ್ರಾಮದ ಮಹಿಳೆಯರು ಇದರ ಸದುಪಯೋಗ ಪಡೆದುಕೊಂಡಿದ್ದಾರೆ.

  ಇದನ್ನೂ ಓದಿ: Abbi Falls Kodagu: ಅಬ್ಬಬ್ಬಾ 'ಅಬ್ಬಿ'! ಮಿಸ್ ಮಾಡ್ದೇ ಈ ಅದ್ಭುತ ವಿಡಿಯೋ ನೋಡಿ

  ಸಂಘದಿಂದ ಅಗತ್ಯ ಸಾಲ ಸೌಲಭ್ಯವೂ ದೊರೆಯುತ್ತದೆ. ಮನಸ್ಸು ಮಾಡಿದ್ರೆ ಎಂಥದ್ದೇ ಸಾಧನೆಗೂ ಸಿದ್ದ ಅನ್ನೋದನ್ನ ಗ್ರಾಮೀಣ ಮಹಿಳೆಯರು ತೋರಿಸಿಕೊಟ್ಟಿದ್ದಾರೆ. ಕೊಡಗು ಜಿಲ್ಲೆಯ ಮೊದಲ ನರ್ಸರಿ ಇದಾಗಿದ್ದು, ರಾಜ್ಯ ಮಟ್ಟದಲ್ಲೂ ಗುರುತಿಸಿಕೊಂಡಿದೆ. ಕೇಂದ್ರ ಸರ್ಕಾರದ ಯೋಜನೆಯ ಸದುಪಯೋಗ ಪಡೆದುಕೊಳ್ಳುವ ಜೊತೆಗೆ ಇತರೆ ಮಹಿಳೆಯರಿಗೂ ಮಾದರಿಯಾಗಿದ್ದಾರೆ.

  ವರದಿ: ಸ್ಟ್ಯಾನ್ಲಿ. ಡಿ. ಕೊಡಗು
  Published by:guruganesh bhat
  First published: