ಕೊಡಗು: ದಟ್ಟಾರಣ್ಯದ ಮಧ್ಯೆ ಶ್ವೇತ ಸುಂದರಿಯ ಕಲರವ. ನಾಲ್ಕು ದಿಕ್ಕುಗಳಲ್ಲೂ ಪ್ರತಿಧ್ವನಿಸುತ್ತೆ ಜಲಕನ್ಯೆಯ ನಿನಾದ.. ಅದೇನು ಸೌಂದರ್ಯ, ಅದೇನು ಪಾರಮ್ಯ. ಅಬ್ಬಬ್ಬಾ! ನೋಡ್ತಿದ್ರೆ ಕಣ್ಣುಗಳೇ ಸಾಲದು.ಬೆಳ್ನೊರೆಯ ಈ ಕುಣಿದಾಟಕ್ಕೆ ಮನಸೋಲದೇ ವಿಧಿಯಿಲ್ಲ. ಓ.. ಜಲಪಾತವೇ (Waterfalls) ನೀ ಮಾಯೆಯೋ ನಿನ್ನಳೊ ಮಾಯೆಯೋ ಎಂದು ಕೇಳದೇ ಇರಲಾದೀತೆ. ಈ ಜಲಕನ್ಯೆಯ ಮನಮೋಹಕ ಸೆಳೆತಕ್ಕೆ ಸಿಕ್ಕವರು ಮತ್ತೆ ಮತ್ತೆ ಇಲ್ಲಿಗೆ ಬರ್ತಲೇ ಇರುವವರು.
ಇದು ಮಡಿಕೇರಿ ಸಮೀಪದ (Madikeri Tourist Places) ಮುಕ್ಕೋಡ್ಲು ಗ್ರಾಮದ ಕೋಟೆ ಅಬ್ಬಿ (Kote Abbi Waterfalls) ಜಲಧಾರೆ. ಪ್ರವಾಸಿಗರ ನೆಚ್ಚಿನ ತಾಣವಾಗಿ ಬದಲಾಗಿರುವ ಕೋಟೆ ಅಬ್ಬಿ, ಮೈದುಂಬಿ ಹರೀತಿದೆ. ಹಮ್ಮಿಯಾಲ ವ್ಯಾಪ್ತಿಯಿಂದ ಸಣ್ಣ ಸಣ್ಣ ನೀರ ಝರಿಗಳು ಒಗ್ಗೂಡಿ ರೂಪುಗೊಂಡಿರುವುದೇ ಈ ಕೋಟೆ ಅಬ್ಬಿ ಅನ್ನೋ ಅದ್ಭುತ.
ಕೋಟೆ ಅಬ್ಬಿ ಫಾಲ್ಸ್
ಎತ್ತರದಲ್ಲಿ ಕೊಡಗಿನ ಎರಡನೇ ಬೆಟ್ಟವಾದ, ಕೋಟೆ ಬೆಟ್ಟದ ತಪ್ಪಲಿನಲ್ಲಿ ನಲಿದಾಡ್ತಿರುವ ಅಬ್ಬಿಯ ಮೈಮಾಟ ಎಂಥವರ ಮನಸನ್ನೂ ಸೂರೆಗೊಳ್ಳದಿರದು. ಕಲ್ಲು ಬಂಡೆಗಳ ನಡುವಿನಿಂದ ನುಸುಳಿ ನಗುವ ಜಲಕನ್ಯೆಯನ್ನು ನೋಡಲು ಪ್ರವಾಸಿಗರ ದಂಡೇ ಬರ್ತಿದೆ.
ಕೋಟೆ ಅಬ್ಬಿಗೆ ಹೀಗೆ ಬನ್ನಿ
ಮಡಿಕೇರಿಯಿಂದ ಸುಮಾರು 15 ಕಿ.ಮೀ ದೂರದಲ್ಲಿರುವ ಕೋಟೆ ಅಬ್ಬಿ ಜಲಪಾತ ನಿಜಕ್ಕೂ ಒಂದು ಮೋಹಕ ಜಲಪಾತವೇ ಸರಿ. ನೋಡಲು ತೆರಳುವವರಿಗೆ ಮಡಿಕೇರಿಯಿಂದ ಜಲಪಾತದವರೆಗೆ ಯಾವುದೇ ಬಸ್ ಸೌಕರ್ಯವಿಲ್ಲ. ಹಾಗಾಗಿ ಮಡಿಕೇರಿಯಿಂದ ಬಾಡಿಗೆಗೆ ಜೀಪ್ ಅಥವಾ ಸ್ವಂತ ವಾಹನದಲ್ಲಿ ತೆರಳಬಹುದು. ಗುಡ್ಡದಲ್ಲಿ ತೋಟದ ನಡುವೆ ರಭಸದಿಂದ ಭೋರ್ಗರೆಯುವ ಜಲಪಾತ ರಸ್ತೆಯಿಂದಲೇ ಕಾಣಸಿಗುತ್ತೆ.
ಕೋಟೆ ಅಬ್ಬಿ ಜಲಪಾತಕ್ಕೆ ಹೀಗೆ ಬನ್ನಿ ( ಚಿತ್ರಕೃಪೆ: ಗೂಗಲ್ ಮ್ಯಾಪ್ಸ್)
ಇದನ್ನೂ ಓದಿ: Kanile: ಅಲಲೆ! ಇದು ಕಣಿಲೆ! ತಿಂದ್ರೆ ದೇಹ ಇರುತ್ತೆ ಬೆಚ್ಚಗೆ; ನೋಡಿ ವಿಡಿಯೋ
ಕಣ್ಣು ಕೋರೈಸುವ ಜಲಪಾತ
ವಿಶಾಲ ಬಂಡೆಗಳ ನಡುವೆ ಸುಮಾರು 40 ಅಡಿಗಳಷ್ಟು ಎತ್ತರದಿಂದ ಧುಮುಕುತ್ತಾ ತನ್ನ ವೈಭವವನ್ನು ಪ್ರದರ್ಶಿಸುತ್ತಿರುವ ಜಲಪಾತವನ್ನು ನೋಡುವುದೇ ಕಣ್ಣಿಗೆ ಹಬ್ಬ. ಅದರಲ್ಲೂ ಮಳೆಗಾಲದಲ್ಲಿ ಮನಸ್ಸಿಗೆ ಮುದ ನೀಡುವ ಪರಿಸರ ಪ್ರವಾಸಿಗರನ್ನು ಮಂತ್ರಮುಗ್ಧಗೊಳಿಸುತ್ತೆ.
ಇದನ್ನೂ ಓದಿ: Kodagu Recipe: ಕೊಡವರ ಆರೋಗ್ಯದ ಗುಟ್ಟು ಆಟಿ ಪಾಯಸ! ಇಲ್ಲಿದೆ ನೋಡಿ ರೆಸಿಪಿ
ಪ್ರವಾಸಿಗರ ಹಾಟ್ ಸ್ಪಾಟ್
ಹಾಲ್ನೊರೆಯಂತೆ ಧುಮ್ಮಿಕ್ಕುವ ಕೋಟೆ ಅಬ್ಬಿ ಜಲಪಾತ ವೀಕ್ಷಣೆ ಮಾಡುವುದೇ ಪ್ರವಾಸಿಗರ ಪಾಲಿನ ಸ್ವರ್ಗ ಎನ್ನಬಹುದು. ಈವರೆಗೂ ಪ್ರವಾಸಿಗರಿಂದ ದೂರವೇ ಉಳಿದಿದ್ದ ಸುಂದರ ಕೋಟೆ ಅಬ್ಬಿ, ಇತ್ತೀಚೆಗಷ್ಟೇ ಪ್ರವಾಸೋದ್ಯಮಕ್ಕೆ ತೆರೆದುಕೊಂಡಿದೆ. ಪ್ರಶಾಂತ ಪರಿಸರದಲ್ಲಿರುವ ಈ ತಾಣ ಪ್ರವಾಸಿಗರ ನೆಚ್ಚಿನ ತಾಣವಾಗಿ ಬದಲಾಗಿದೆ.
ವರದಿ: ಸ್ಟ್ಯಾನ್ಲಿ. ಡಿ, ಕೊಡಗು
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ