Kanile: ಅಲಲೆ! ಇದು ಕಣಿಲೆ! ತಿಂದ್ರೆ ದೇಹ ಇರುತ್ತೆ ಬೆಚ್ಚಗೆ; ನೋಡಿ ವಿಡಿಯೋ

ಕೊಡಗು ಪ್ರವಾಸೋದ್ಯಮಕ್ಕೆ ಎಷ್ಟು ಹೆಸರುವಾಸಿಯೋ ಅಂತೆಯೇ ಆಹಾರ ಪದ್ಧತಿಗೂ ಅಷ್ಟೇ ಪ್ರಸಿದ್ಧಿ. ಅದರಲ್ಲೂ, ಮಳೆಗಾಲದಲ್ಲಂತೂ ಶೀತ ವಾತಾವರಣಕ್ಕೆ ಮೈಯೊಡ್ಡಲೆಂದೇ ಕೆಲವು ಬಗೆಯ ಆಹಾರಗಳನ್ನು ಕೊಡವರು ಸವಿಯುತ್ತಾರೆ.

ಅಲಲೆ..ಕಣಿಲೆ!

"ಅಲಲೆ..ಕಣಿಲೆ!"

  • Share this:
    ಕೊಡಗು: ಮಳೆಗಾಲ ಬಂತಂದ್ರೆ ಸಾಕು ಮಡಿಕೇರಿಯ ಮಾರುಕಟ್ಟೆಯಲ್ಲಿ ಅದೇನು ಬದಲಾವಣೆ ನೋಡಿ.. ಮಳೆಗಾಲದ ಸ್ಪೆಷಲ್ ಅಂತಾನೇ ಆಹಾರಗಳು ಮಾರುಕಟ್ಟೆಯಲ್ಲಿ ಸಿಗ್ತವೆ.. ಅದ್ರಲ್ಲಿ ಕಣಿಲೆಯೂ ಒಂದು. ಪ್ಲಾಸ್ಟಿಕ್ ಕವರಲ್ಲಿ ಜೋಪಾನವಾಗಿರಿಸೋ ಈ ಕಣಿಲೆಗೆ ಮಳೆಗಾಲದಲ್ಲಿ ಭಾರಿ ಡಿಮ್ಯಾಂಡ್.ಬೀದಿ ಬೀದಿಗಳಲ್ಲಿ ಇದನ್ನ ಮಾರೋದ್ರಿಂದ ಕೊಳ್ಳುವವರ ಸಂಖ್ಯೆಯೂ ಹೆಚ್ಚು. ಅಷ್ಟಕ್ಕೂ ಈ ಕಣಿಲೆ ಮಳೆಗಾಲದಲ್ಲಿ ಇಷ್ಟೊಂದು ಡಿಮ್ಯಾಂಡ್ ಪಡ್ಕೊಳ್ಳೋದಕ್ಕೆ ಕಾರಣನೂ ಇದೇ.

    ಬೆಚ್ಚಗಿರಿಸೋ ಕಣಿಲೆ
    ಕೊಡಗು ಜಿಲ್ಲೆ ಸದಾ ಕಾಲ ತಂಪಾಗಿರೋ ಕಾಶ್ಮೀರದ ಅನುಭವ ನೀಡೋ ತಾಣ. ಮಳೆಗಾಲದಲ್ಲಿ ಆ ಶೀತ ಇನ್ನಷ್ಟು ಏರಿಕೆ ಆಗೋದ್ರಿಂದ ಮಳೆ ಗಾಳಿಗೆ ಹೊಂದಿಕೆ ಆಗೋ ಆಹಾರವೂ ಮುಖ್ಯ. ಹೀಗಾಗಿ, ಕೊಡವರು ಮಾನ್ಸೂನ್ ನಲ್ಲಿ ದೇಹವನ್ನ ಬೆಚ್ಚಗಿರಿಸೋ ಆಹಾರದ ಮೊರೆ ಹೋಗ್ತಾರೆ. ಅದ್ರಲ್ಲಿ ಈ ಕಣಿಲೆಯೂ ಒಂದು.



    ಮಾರುಕಟ್ಟೆಯಲ್ಲಿ ಕಣಿಲೆ ವ್ಯಾಪಾರ
    ಮಳೆ ಆರಂಭವಾಗ್ತಿದ್ದಂತೆ ಬಿದಿರುಗಳಿಂದ ಹೊರಬರುವ ಮೆಳೆಗಳಿಂದ ಹುಟ್ಟಿಕೊಳ್ಳುವುದೇ ಈ ಕಣಿಲೆಗಳು. ಆದರೆ ಮಡಿಕೇರಿ ಬಹುತೇಕ ಬಿದಿರು ಸಂಪತ್ತು ನಾಶವಾಗ್ತಾ ಬಂದಿರೋದ್ರಿಂದ ಕಣಿಲೆಗೂ ಕಷ್ಟಪಡುವ ಸ್ಥಿತಿ ಇದೆ. ಆದ್ದರಿಂದ ಕಣಿಲೆ ಪ್ರಿಯರು ನೇರವಾಗಿ ಮಾರುಕಟ್ಟೆಯಿಂದಲೇ ಖರೀದಿಸುವಂತಾಗಿದೆ.

    ಆರೋಗ್ಯಕ್ಕೂ ಒಳ್ಳೆಯದು ಈ ಕಣಿಲೆ
    ಸಾಮಾನ್ಯವಾಗಿ ಕಣಿಲೆ ಉಷ್ಣಾಂಶವನ್ನು ಹೊಂದಿರೋದ್ರಿಂದ ಮಳೆಗಾಲದಲ್ಲಿ ಮನುಷ್ಯನ ದೇಹವನ್ನು ಶೀತದಿಂದ ರಕ್ಷಿಸಲು ನೆರವಾಗುತ್ತೆ. ಜೊತೆಗೆ ಸಖತ್ ಟೇಸ್ಟಿ ಫುಡ್ ಕೂಡ. ಬೆಳಗ್ಗಿನ ಉಪಹಾರಕ್ಕೆ ಅಕ್ಕಿ ರೊಟ್ಟಿಯೊಂದಿಗೆ ಕಣಿಲೆ ಪಲ್ಯವನ್ನು ಸೇವಿಸಿದ್ರೆ ಅದರ ಮಜಾನೇ ಬೇರೆ. ಇನ್ನು ಕಣಿಲೆಯಿಂದ ಉಪ್ಪಿನಕಾಯಿ, ಪತ್ರೊಡೆ ಇನ್ನಿತರ ಖಾದ್ಯಗಳನ್ನೂ ತಯಾರಿಸಲಾಗುತ್ತೆ. ಇತ್ತೀಚಿನ ವರ್ಷಗಳಲ್ಲಿ ಗ್ರಾಮೀಣ ಭಾಗದ ಕೆಲವೆಡೆ ಕಣಿಲೆಗಳು ಸಿಗ್ತಿದ್ದು, ಮಾರುಕಟ್ಟೆಯಲ್ಲಿ ಒಳ್ಳೆಯ ಬೆಲೆಗೆ ಮಾರಾಟವಾಗುತ್ತದೆ.



    ಇದನ್ನೂ ಓದಿ: Kodagu Success Story: ಕೊಡಗಿನ ಮಹಿಳೆಯರಿಗೆ ಭೇಷ್ ಎನ್ನಿ! ಇದು ಸ್ತ್ರೀಯರೇ ರೂಪಿಸಿದ ನರ್ಸರಿ!

    ಈಗ ಮಳೆಗಾಲವಾದ್ರಿಂದ ಪ್ರತಿ ದಿನ ರಸ್ತೆ ಬದಿಗಳಲ್ಲಿ ಕಣಿಲೆ ಮಾರಾಟವಾಗ್ತಿದೆ. ಎಷ್ಟೇ ಬೆಲೆ ತೆತ್ತರೂ ಪರ್ವಾಗಿಲ್ಲ ಅಂತಾ ಗ್ರಾಹಕರು ಕಣಿಲೆ ಕೊಂಡುಕೊಳ್ತಿದ್ರೆ, ವ್ಯಾಪಾರಿಗಳು ವರ್ಷಕ್ಕೊಮ್ಮೆ ಭರ್ಜರಿ ವ್ಯಾಪಾರ ಗಿಟ್ಟಿಸಿಕೊಳ್ತಿದ್ದಾರೆ. ಜೊತೆಗೆ ಆರೋಗ್ಯದ ದೃಷ್ಟಿಯಿಂದಲೂ ಇದನ್ನು ಖರೀದಿಸುವವರಿದ್ದಾರೆ.

    ಇದನ್ನೂ ಓದಿ: Kodagu Recipe: ಕೊಡವರ ಆರೋಗ್ಯದ ಗುಟ್ಟು ಆಟಿ ಪಾಯಸ! ಇಲ್ಲಿದೆ ನೋಡಿ ರೆಸಿಪಿ

    ಹೀಗೆ ಮಾಡ್ತಾರೆ ಕಣಿಲೆ ಕರಿ
    ಕಣಿಲೆಯನ್ನು ಕತ್ತರಿಸಿ ಮನೆಗೆ ತಂದು ಅದರ ಎಳೆಯ ಭಾಗವನ್ನು ಚಿಕ್ಕದಾಗಿ ಕತ್ತರಿಸಿ ಬಳಿಕ ಅದನ್ನು ನೀರಿನಲ್ಲಿ ನೆನೆಯಲು ಹಾಕಲಾಗುತ್ತದೆ. ಮೂರು ದಿನಗಳು ಕಳೆದ ಬಳಿಕ ತೆಗೆದು ಶುದ್ಧ ನೀರಿನಿಂದ ತೊಳೆದು ಸಾರು, ಪಲ್ಯಕ್ಕೆ ಬಳಸಿಕೊಳ್ಳಲಾಗುತ್ತದೆ. ಹೀಗೆ ಕೊಡವರು ತಮ್ಮ ಆರೋಗ್ಯದ ಬಗ್ಗೆ ಎಷ್ಟು ಕಾಳಜಿ ವಹಿಸುವರು ಅನ್ನೋದಕ್ಕೆ ಈ ಕಣಿಲೆಯೂ ಸಾಕ್ಷಿ.

    ವರದಿ: ಸ್ಟ್ಯಾನ್ಲಿ. ಡಿ, ಕೊಡಗು
    Published by:guruganesh bhat
    First published: