ಕೊಡಗು: ಈ ಜಿಲ್ಲೆಯ ಪ್ರತೀ ಕುಟುಂಬದಲ್ಲಿಯೂ ಸೈನಿಕರಿದ್ದಾರೆ. ಇಲ್ಲಿನವರ ರಕ್ತದ ಕಣಕಣದಲ್ಲಿಯೂ ದೇಶಪ್ರೇಮವಿದೆ. ಶೂರ, ವೀರ ಗುಣಗಳನ್ನು ಹುಟ್ಟಿನಿಂದಲೇ ಹೊಂದಿರುವ ಕೊಡವರ (Kodava's) ಪಾಲಿಗಂತೂ ಕೆ.ಎಂ ಕಾರ್ಯಪ್ಪ (KM Cariappa), ಜನರಲ್ ತಿಮ್ಮಯ್ಯ (General Thimayya) ನಿತ್ಯ ಪೂಜನೀಯರು. ನಿಮ್ಮ ಮಕ್ಕಳು ದೊಡ್ಡವರಾದ ಮೇಲೆ ಏನಾಗ್ತಾರೆ ಎಂದು ಕೊಡಗಿನ ಹಳ್ಳಿ ಜನತೆಯನ್ನು, ಮಕ್ಕಳನ್ನು ಪ್ರಶ್ನಿಸಿದರೆ ಡಾಕ್ಟರ್, ಇಂಜಿನಿಯರ್ ಎಂಬ ಉತ್ತರ ಬಹಳ ಅಪರೂಪ. ಬದಲಿಗೆ ಮಕ್ಕಳು ಸೈನ್ಯ (Indian Army) ಸೇರಬೇಕು. ಸೈನಿಕ, ಆಫೀಸರ್ ಆಗಬೇಕು, ಸೇನೆಯ ಉನ್ನತ ಅಧಿಕಾರಿ ಆಗಬೇಕೆಂಬ ಉತ್ತರ ಶತಃಸಿದ್ಧ.
ಹೆಮ್ಮೆಯ ನಾಡು ಕೊಡಗಿನಲ್ಲಿ ಇದೀಗ ಸೇನಾ ಪರಂಪರೆಯ ಕಿರೀಟಕ್ಕೆ ಮತ್ತೊಂದು ಮುಕುಟ ಮಣಿಯಂತೆ ಸೈನಿಕರ ಸಾಹಸ ಬಿಂಬಿಸುವ ಮ್ಯೂಸಿಯಂ ಮಡಿಕೇರಿಯಲ್ಲೇ ಇದೆ.
ಜನರಲ್ ಕೆ.ಎಸ್ ತಿಮ್ಮಯ್ಯ ಅವರ ಮನೆಯೇ ಈ ಮ್ಯೂಸಿಯಂ!
ವೀರರ ನಾಡು ಕೊಡಗಿನಲ್ಲಿ ಹುಟ್ಟಿ ದೇಶದ ಸೇನೆಯ ಮೊದಲ ಮಹಾದಂಡನಾಯಕರಾಗಿದ್ದ ಜನರಲ್ ಕೆ.ಎಸ್ ತಿಮ್ಮಯ್ಯ ಇಡೀ ದೇಶಕ್ಕೆ ಮಾದರಿಯಾಗಿದ್ದಾರೆ. ಅವರು ಹುಟ್ಟಿ ಬೆಳೆದಿದ್ದ ಮನೆ ಈಗ ದೇಶದ ಸೇನೆಯ ಮಹತ್ವ ಸಾರುವ ಮ್ಯೂಸಿಯಂ ಆಗಿ ಮಾರ್ಪಟ್ಟಿದೆ. ಇಂತಹ ಮಹತ್ವದ ಮ್ಯೂಸಿಯಂ ಅನ್ನು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರೇ ಲೋಕಾರ್ಪಣೆ ಮಾಡಿದ್ದಾರೆ.
ಎಲ್ಲಿದೆ ಈ ಮ್ಯೂಸಿಯಂ?
ಮಡಿಕೇರಿ ಮೈಸೂರು ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲೇ ಇರುವ ಸನ್ನಿಸೈಡ್ ಇದೀಗ ದೇಶದ ಗಮನ ಸೆಳೆಯುವ ಸ್ಥಳವಾಗಿ ನಿರ್ಮಾಣಗೊಂಡಿದೆ. ಈ ಸ್ಥಳದ ಮಹಾದ್ವಾರವನ್ನು ಪ್ರವೇಶಿಸುತ್ತಿದ್ದಂತೆ ಬಲಬದಿಗೆ ಕಾಣುವ ಯೋಧರ ಸ್ಮಾರಕ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತದೆ. ಇದರ ಜೊತೆಗೆ ಯುದ್ಧ ಟ್ಯಾಂಕರ್, ಸುಕೋಯ್ ಯುದ್ಧ ವಿಮಾನಗಳು ದೇಶದ ಸೇನಾ ಶಕ್ತಿಯನ್ನು ಸಾರಿ ಹೇಳುತ್ತಾ ಸೈನ್ಯದ ಅದ್ಬುತ ದೃಶ್ಯಗಳನ್ನು ಕಣ್ಣಿಗೆ ಕಟ್ಟಿಕೊಡುತ್ತದೆ.
ಈ ಮ್ಯೂಸಿಯಂಗೆ ಹೀಗೆ ಬನ್ನಿ (ಚಿತ್ರಕೃಪೆ: ಗೂಗಲ್ ಮ್ಯಾಪ್ಸ್)
ಆ ಕಾಲದ ಎಲ್ಲ ಸಾಮಾಗ್ರಿಗಳೂ ಇವೆ!
ಅಲ್ಲಿಂದ ಮುಂದೆ ನಡೆದರೆ ಹುತಾತ್ಮ ಯೋಧರನ್ನು ಗೌರವಿಸಿ ಸ್ಮರಿಸಲು ಯುದ್ಧ ಸ್ಮಾರಕ ಜನರಲ್ ತಿಮ್ಮಯ್ಯ ಮ್ಯೂಸಿಯಂ ತಲೆಯೆತ್ತಿ ನಿಂತಿದೆ. ಕೊಡಗಿನ ಶೈಲಿಯಲ್ಲಿರುವ ಸನ್ನಿಸೈಡ್ ಮನೆಯ ಗೋಡೆಗಳಲ್ಲಿ ತೂಗು ಹಾಕಿರುವ ಅವರು ಬಳಸುತ್ತಿದ್ದ ಅಂದಿನ ಸ್ಕೂಟರ್, ಅವರ ಕುಟುಂಬದವರೊಂದಿಗೆ ಇರುವ ಜನರನ್ ತಿಮ್ಮಯ್ಯ ಅವರ ಭಾವಚಿತ್ರಗಳು ಪ್ರವಾಸಿಗರ ಮನಸನ್ನು ಮನಸೂರೆಗೊಳ್ಳುತ್ತೆ.
ಇದನ್ನೂ ಓದಿ: Nehru Mantap Madikeri: ಮಡಿಕೇರಿಯ ನೆಹರು ಮಂಟಪ ಹೀಗಿದೆ ನೋಡಿ
ಈ ಮನೆ ಒಳಹೊಕ್ಕು ನೋಡುತ್ತಾ ಸಾಗಿದಂತೆ ಭಾರತವು ವಿವಿಧ ದೇಶಗಳ ಮೇಲೆ ನಡೆಸಿದ ಯುದ್ಧಗಳಲ್ಲಿ ಬಳಕೆಯಾದ ವಿವಿಧ ಗನ್ಗಳು, ಯುದ್ಧ ಡೈರಿ ನಿಮ್ಮನ್ನು ಸೆಳೆಯುತ್ತೆ. ಒಟ್ಟಿನಲ್ಲಿ ದೇಶದ ಸೇನೆಯ ಮೊದಲ ದಂಡಾನಾಯಕರಾಗಿದ್ದ ಜನರಲ್ ಕೆ.ಎಸ್ ತಿಮ್ಮಯ್ಯ ಅವರ ಮನೆ ಈಗ ಭಾರತೀಯ ಸೇನೆಯ ಶಕ್ತಿ, ಶೌರ್ಯ ತ್ಯಾಗ ಎಲ್ಲವನ್ನೂ ಸಾರುವ ಮ್ಯೂಸಿಯಂ ಆಗಿದೆ.
ಇದನ್ನೂ ಓದಿ: Success Story: ಹಲವು ಸಮಸ್ಯೆಗಳ ಮಧ್ಯೆಯೇ ಗೆದ್ದರು ಮಡಿಕೇರಿಯ ಈ ಕಾಫಿ ಕೃಷಿಕ! ಇಲ್ಲಿದೆ ನೋಡಿ ಸಕ್ಸಸ್ ಗುಟ್ಟು
ನೋಡಿದ್ರಲ್ಲಾ, ಈ ಮ್ಯೂಸಿಯಂ ಒಳಹೊಕ್ಕ ಪ್ರತಿಯೊಬ್ಬರಿಗೂ ರೋಮಾಂಚನದ ಅನುಭವವಾಗುತ್ತೆ. ಸನ್ನಿ ಸೈಡ್ನಿಂದ ಹೊರ ಬರುವಷ್ಟರಲ್ಲಿ ಈ ದೇಶಕ್ಕಾಗಿ ತನ್ನಿಂದಾಗುವ ಸೇವೆ ಮಾಡಬೇಕೆಂಬ ಛಲ ಮೂಡುತ್ತೆ. ಇನ್ನು ಪಾಕ್ ಸೈನಿಕರನ್ನು ಅಟ್ಟಾಡಿಸಿ ಚೆಂಡಾಡಲು ನೆರವಾದ ಯುದ್ಧ ಟ್ಯಾಂಕರ್ ನಮ್ಮ ರಿಯಲ್ ಹೀರೋ. ಸೇನೆಯ ಶಕ್ತಿ, ತ್ಯಾಗದ ಕಂಪ್ಲೀಟ್ ಚಿತ್ರಣ ಸಿಗುವ ಜನರಲ್ ತಿಮ್ಮಯ್ಯ ಮ್ಯೂಸಿಯಂಗೆ ಪ್ರತಿಯೊಬ್ಬ ದೇಶಭಕ್ತರೂ ಒಮ್ಮೆ ಭೇಟಿ ಕೊಟ್ರೆ ಸಾಕು, ಧನ್ಯತಾ ಭಾವ ಮೂಡೋದು ಖಚಿತ.
ವರದಿ: ಸ್ಟ್ಯಾನ್ಲಿ. ಡಿ, ಕೊಡಗು
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ