Abbi Falls Kodagu: ಅಬ್ಬಬ್ಬಾ 'ಅಬ್ಬಿ'! ಮಿಸ್ ಮಾಡ್ದೇ ಈ ಅದ್ಭುತ ವಿಡಿಯೋ ನೋಡಿ

ಮಳೆಗಾಲದಲ್ಲಿ ಫಾಲ್ಸ್ ಗಳನ್ನು ಕಣ್ತುಂಬಿಕೊಳ್ಳುವುದೇ ಒಂದು ಖುಷಿ. ಅದರಲ್ಲೂ ಕೊಡಗಿನ ಅಬ್ಬಿ ಫಾಲ್ಸ್ ಅಂತೂ ಫೆವರಿಟ್ ಸ್ಪಾಟ್ ಅಂದ್ರೆ ತಪ್ಪಾಗದು. ಸದ್ಯ ಹೇಗಿದ್ದಾನೆ ‘ಅಬ್ಬಿ‘ ಅನ್ನೋದನ್ನ ನೀವೇ ನೋಡಿ.

ಅಬ್ಬಿ ಜಲಪಾತ

"ಅಬ್ಬಿ ಜಲಪಾತ"

 • Share this:
  ಕೊಡಗು: ಕೊಡಗು ಎಂದ ತಕ್ಷಣ ನೆನಪಿಗೆ ಬರೋದು ಇಲ್ಲಿನ ಪ್ರಕೃತಿ ಸೌಂದರ್ಯ.. ಎಂಥವರನ್ನೂ ಒಂದು ಕ್ಷಣ ನಿಬ್ಬರಗಾಗುವಂತೆ ಮಾಡುವ ಪವರ್ ಇಲ್ಲಿನ ಹವಾಗುಣ, ವಾತಾವರಣಕ್ಕಿದೆ. ಹಚ್ಚ ಹಸಿರ ಪ್ರಕೃತಿ ಸಿರಿಯ ನಡುವೆ ಅದೆಷ್ಟೋ ಜಲಪಾತಗಳು ಕೊಡಗಿನ ಉದ್ದಕ್ಕೂ ಕಾಣಸಿಗುತ್ತೆ. ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣಗಳಲ್ಲಿ ಒಂದಾದ ಈ ಜಲಪಾತದ ಅದ್ಭುತ ದೃಶ್ಯಗಳನ್ನು ಕಣ್ತುಂಬಿಕೊಳ್ಳೋದಕ್ಕೆ ಪ್ರವಾಸಿಗರು ಸಾಗರೋಪಾದಿಯಲ್ಲಿ ಹರಿದು ಬರ್ತಾರೆ. ಮಳೆಗಾಲದಲ್ಲಿ ಜಲಪಾತಗಳಿಗೆ (Kodagu Tourist Places) ಜೀವಕಳೆ ಬಂದು ಅತ್ಯಂತ ಸುಂದರ ರೂಪ ತಾಳುತ್ತವೆ.ಎಲ್ಲಾ ಸೀಸನ್​ನಲ್ಲೂ ಸದಾ ತಂಪಾಗಿರುವ ಕೊಡಗಿನಲ್ಲಿ ಮಳೆಗಾಲ (Rain In Kodagu)  ಅಂದ್ರೆ ಇನ್ನೂ ವಿಶೇಷ. ಈ ಸಮಯದಲ್ಲಿ ಕೊಡಗು ಅಕ್ಷರಶಃ ಮಳೆನಾಡಾಗಿ ಮಾರ್ಪಾಡುತ್ತೆ. ನೋಡಿದಲ್ಲೆಲ್ಲಾ ಸಣ್ಣ ಪುಟ್ಟ ಜಲಪಾತಗಳು (Water Falls In Kodagu) ಕಾಣುತ್ತವೆ. 

  ಅಬ್ಬಿ ಫಾಲ್ಸ್ ಅನ್ನೋ ಪ್ರಕೃತಿಯ ಅದ್ಭುತ!
  ಹೀಗಿದ್ರೂ ಎಲ್ಲರನ್ನೂ ತನ್ನತ್ತ ಸೆಳೆಯುವಷ್ಟು ಮನಮೋಹಕ ದೃಶ್ಯ ಕಾಣ ಸಿಗೋದು ಕೊಡಗು ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣಗಳಲ್ಲಿ ಒಂದಾದ ಅಬ್ಬಿ ಜಲಪಾತದಲ್ಲಿ. ವರ್ಷಪೂರ್ತಿ ಅಬ್ಬಿಯ ರೌದ್ರ ನರ್ತನವನ್ನು ಕಣ್ತುಂಬಿಸಿಕೊಳ್ಳಬಹುದು. ಅದರಲ್ಲೂ ಮಳೆಗಾಲದಲ್ಲಿ ಅಬ್ಬಿಫಾಲ್ಸ್ ಭೋರ್ಗರೆಯುತ್ತದೆ. ನೀರು ಎತ್ತರದಿಂದ ಕೆಳಗೆ ಬೀಳುವದನ್ನು ನೋಡಲು ಹೊರ ಜಿಲ್ಲೆ, ರಾಜ್ಯ ಸೇರಿದಂತೆ ವಿದೇಶಗಳಿಂದಲೂ ಜನರು ಬರ್ತಾರೆ.

  ಭೋರ್ಗರೆವ ಬೆಳ್ನೊರೆಯ ನಾಟ್ಯ ವೈಯಾರ
  ಹಸಿರ ಕಾನನದಿಂದ ಹರಿದುಬಂದು ಕಾಫಿ ತೋಟದ ಸೆರಗಿನಿಂದ ಜಾರಿ ಧುಮ್ಮಿಕ್ಕುತ್ತಿರುವ ಅಬ್ಬಿ, ನೋಡುಗರ ಕಣ್ಮನ ಸೆಳೆಯುತ್ತಿದೆ. ಬೆಳ್ನೊರೆಯ ನಾಟ್ಯ ವೈಯ್ಯಾರಕ್ಕೆ ಪ್ರವಾಸಿಗರು ಮನಸೋಲ್ತಿದ್ದಾರೆ. ಕುಶಾಲನಗರ ಮಡಿಕೇರಿಗಳಲ್ಲಿ ವಿಹಾರ ಮುಗಿಸುವ ಪ್ರವಾಸಿಗರು, ಅಂತಿಮವಾಗಿ ಅಬ್ಬಿ ಎಂಬ ಕನ್ಯೆಯ ದರ್ಶನ ಮಾಡದೆ ಹಿಂದಿರುಗುವುದಿಲ್ಲ. ಮಡಿಕೇರಿಯಿಂದ ಸುಮಾರು 8 ಕಿ.ಮೀ. ಸಾಗಿ, ಹಸಿರ ಸಿರಿಯ ಮಧ್ಯೆ ಹಾಲ್ನೊರೆ ಚಿಮ್ಮುತ್ತಾ ಬಳುಕುವ ಈ ಜಲ ಕನ್ನಿಕೆಯ ದರ್ಶನ ಮಾಡಿದ ಬಳಿಕವೇ ಪ್ರವಾಸಿಗರು, ತಮ್ಮ ಪ್ರಯಾಣಕ್ಕೆ ವಿದಾಯ ಹೇಳ್ತಾರೆ.

  ಇದನ್ನೂ ಓದಿ: Mangaluru Solo Strike: ನನ್ನ ಗೆಳೆಯನಂತೆ ಮತ್ಯಾರೂ ಸಾಯ್ಬಾರ್ದು; ಒಳ್ಳೆ ರಸ್ತೆಗಾಗಿ ಮಂಗಳೂರಲ್ಲಿ ಯುವಕನ ಒಂಟಿ ಪ್ರತಿಭಟನೆ

  ಅಬ್ಬಿ ನೋಡಲು ಹೀಗೆ ಬನ್ನಿ
  ಬೇಸಿಗೆ, ಚಳಿಗಾಲದಲ್ಲಿ ಅಪ್ಪಟ ಸ್ಫಟಿಕದಂತೆ ಕಾಣುವ ಮತ್ತು ಮಳೆಗಾಲದಲ್ಲಿ ಮೈದುಂಬಿ ರುದ್ರನಂತೆ ತೋರುವ ಈ ಜಲಪಾತದ ನೋಟ ಎಂಥವರನ್ನೂ ತನ್ನತ್ತ ಸೆಳೆಯುತ್ತದೆ. ಜಲಪಾತದ ರಮ್ಯ ಸೌಂದರ್ಯಕ್ಕೆ ಸುತ್ತಲಿರುವ ಹಸಿರಿನಿಂದ ಕಂಗೊಳಿಸುತ್ತಿರುವ ಹಚ್ಚಹಸಿರ ಪರಿಸರ ಮತ್ತಷ್ಟು ಮೆರಗು ನೀಡುತ್ತವೆ. ಇನ್ನು ಜಲಪಾತವನ್ನು ನೋಡಲು ತೆರಳುವವರಿಗೆ ಮಡಿಕೇರಿಯಿಂದ ಜಲಪಾತದವರೆಗೆ ಯಾವುದೇ ಬಸ್ ಸೌಕರ್ಯವಿಲ್ಲ. ಹಾಗಾಗಿ ಮಡಿಕೇರಿಯಿಂದ ಬಾಡಿಗೆಗೆ ಆಟೋ, ಜೀಪು ಅಥವಾ ಸ್ವಂತ ವಾಹನಗಳಲ್ಲಿ ತೆರಳಬಹುದು. ನಡೆದೇ ಹೋಗುವುದಾದರೆ ಅದರ ಮಜಾವೇ ಬೇರೆ...

  abbi falls ಅಬ್ಬಿ ಜಲಪಾತಕ್ಕೆ ಹೀಗೆ ಬನ್ನಿ (ಚಿತ್ರಕೃಪೆ: ಗೂಗಲ್ ಮ್ಯಾಪ್)[/caption]

  ಸ್ಟೇ ಆಗ್ತೀರಾದ್ರೆ ಇದೆ ಹೋಂ ಸ್ಟೇ..
  ವಾಹನ ನಿಲುಗಡೆಯ ಸ್ಥಳದಿಂದ ಎಡಕ್ಕೆ ಕಾಫಿ ತೋಟದ ಮಧ್ಯೆ ನಡೆಯುತ್ತಾ ಹೋದರೆ ಜಲಪಾತದ ಭೋರ್ಗರೆತ ಕಿವಿಗೆ ಬಡಿಯುತ್ತದೆ. ಅಲ್ಲಿಂದ ಕೆಳಕ್ಕೆ ಮೆಟ್ಟಿಲುಗಳನ್ನು ಇಳಿಯುತ್ತಾ ಹೋದರೆ ಅಬ್ಬಿ ಜಲಪಾತದ ಸನಿಹಕ್ಕೆ ಹೋಗಬಹುದು. ಇನ್ನು ಅಬ್ಬಿಫಾಲ್ಸ್ ವ್ಯಾಪ್ತಿಯಲ್ಲೇ 3-4 ಹೋಂಸ್ಟೇಗಳಿದ್ದು, ಅಲ್ಲಿ ಉಳಿದುಕೊಳ್ಳಲು ಉತ್ತಮ ವ್ಯವಸ್ಥೆಯೂ ಇದೆ.

  ಇದನ್ನೂ ಓದಿ: Uttara Kannada: ಗೋಕರ್ಣದಲ್ಲಿ ಹೆಣ್ಣು ಹೆಣ್ಣಿಗೆ ಮದುವೆ! ಅದ್ದೂರಿ ವಿಡಿಯೋ ನೋಡಿ

  ಮಿಸ್ ಮಾಡದಿರಿ ಅಬ್ಬಿ ನೋಡಲು
  ಮಳೆಗಾಲದಲ್ಲಿ ಕಾಣುವ ಅಬ್ಬಿ ಜಲಪಾತದ ದೃಶ್ಯವನ್ನು ವರ್ಣಿಸೋಕೆ ಪದಗಳೇ ಸಾಕಾಗಲ್ಲ. ಅದರ ರೌದ್ರಾವತಾರವನ್ನು ಹತ್ತಿರದಿಂದ ನೋಡಿದ್ರೆ ಆ ಸುಂದರ ಕ್ಷಣವನ್ನು ಖಂಡಿತಾ ಮರೆಯಲು ಸಾಧ್ಯವಿಲ್ಲ. ಜಲಪಾತದ ಸೊಬಗನ್ನು ಸವಿಯಬೇಕಾದ್ರೆ ನೀವು ಒಮ್ಮೆ ಅಬ್ಬಿಫಾಲ್ಸ್ ಗೆ ಭೇಟಿ ನೀಡಿ. ಅಲ್ಲಿನ ಸೌಂದರ್ಯವನ್ನು ಕಣ್ತುಂಬಿಕೊಳ್ಳಿ.

  ವರದಿ: ಸ್ಟಾನ್ಲಿ.ಡಿ, ಕೊಡಗು
  Published by:guruganesh bhat
  First published: