ಕಲಬುರಗಿ: ಫೋನ್ ಕಾಲ್ ರಿಸೀವ್ ಮಾಡುತ್ತಲೇ ಆ್ಯಂಬುಲೆನ್ಸ್ (Ambulance) ಹತ್ತಿ ಹೊರಡೋ ಯುವಕರು. ಅದೆಲ್ಲೇ ಇರಲಿ ನಿರ್ಗತಿಕರ ಕಷ್ಟಕ್ಕೆ ಸ್ಪಂದಿಸೋ ಸಹೃದಯಿಗಳು. ಅನಾಥ ಶವಕ್ಕೆ ಹೆಗಲಾಗೋ ಇವರದ್ದು ಅಂತಿಂತ ಸಮಾಜ ಸೇವೆಯಲ್ಲ, (Social Service) ಧರ್ಮ, ಪಂಗಡ ಮರೆತು ಅನಾಥ ಶವಗಳಿಗೆ (Orphan Corpse) ಸದ್ಗತಿ ಕಲ್ಪಿಸೋ ಇವರ ಕಥೆಯನ್ನ ನೀವೆಲ್ಲ ಕೇಳಲೇಬೇಕು.
ಸಮಾಜಮುಖಿ ಚಟುವಟಿಕೆ
ಯೆಸ್, ಇವರೆಲ್ಲರೂ ಕಲಬುರಗಿಯ ಸಫರೆ ಎ ಅಖಿರಾಥ್ ಚಾರಿಟೇಬಲ್ ಟ್ರಸ್ಟ್ನ ಸದಸ್ಯರು. ಅಂದಹಾಗೆ ಈ ಸಂಸ್ಥೆಯು ಕಳೆದ 30ಕ್ಕೂ ಅಧಿಕ ವರ್ಷಗಳಿಂದ ಸಮಾಜ ಸೇವೆಯಲ್ಲಿ ತೊಡಗಿಕೊಂಡಿದೆ. ಅಲ್-ಹಾಜ್ ಮಹಮ್ಮದ್ ಜೈನೊದ್ದಿನ್ ಸಾಹೇಬ್ ಎಂಬುವವರು ಸ್ಥಾಪನೆ ಮಾಡಿದ್ದ ಈ ಸಂಸ್ಥೆಯು, ಇತ್ತೀಚೆಗೆ ಅವರ ನಿಧನದ ಬಳಿಕವೂ ಮುಂದುವರೆದಿದೆ. ಅವರ 12 ಜನ ಶಿಷ್ಯಂದಿರು ಈ ಸಮಾಜಮುಖಿ ಕಾರ್ಯವನ್ನು ಮುಂದುವರೆಸಿಕೊಂಡು ಹೋಗುತ್ತಿದ್ದಾರೆ.
ಆ ಘಟನೆಯೇ ಕಾರಣವಾಯಿತು
ಕೆಲವು ವರ್ಷಗಳ ಹಿಂದೆ ಮಹಮ್ಮದ್ ಜೈನೊದ್ದಿನ್ ಅವರು ಅನಾಥವಾಗಿ ದುರ್ವಾಸನೆ ಬೀರುತ್ತಿದ್ದ ಶವವನ್ನು ಕಂಡು, ಅದರ ಅಂತ್ಯಕ್ರಿಯೆ ತಾವೇ ಮಾಡಿದ್ದರು. ಅನಾಥ ಶವಗಳ ಅಂತ್ಯಸಂಸ್ಕಾರ ಪುಣ್ಯದ ಕಾರ್ಯ ಎಂದು ಗೊತ್ತಾಗುತ್ತಲೇ ಅದಕ್ಕಾಗಿ ತಮ್ಮ ಟ್ರಸ್ಟ್ನ ಸದಸ್ಯರಲ್ಲಿ ಚರ್ಚಿಸಿ ನೇರವಾಗಿ ಕಾರ್ಯೋನ್ಮುಖರಾದರು.
ನೂರಾರು ಮೃತದೇಹಗಳಿಗೆ ಮುಕ್ತಿ
ಜೈನೊದ್ದಿನ್ ಮೃತಪಟ್ಟ ಬಳಿಕವೂ ಅವರ ಜೊತೆಗಿದ್ದವರು ಈ ಕೆಲಸವನ್ನು ಮುಂದುವರೆಸಿಕೊಂಡು ಬಂದಿದ್ದಾರೆ. ಎರಡು ಆ್ಯಂಬುಲೆನ್ಸ್, ಒಂದು ಆಟೋ ಇಟ್ಟುಕೊಂಡು ಹಗಲು ರಾತ್ರಿ ಎನ್ನದೇ ಫೋನ್ ಕರೆ ಬಂದ್ರೆ ಸಾಕು, ಕೆಲವೆ ನಿಮಿಷಗಳಲ್ಲಿ ಇಂದಿಗೂ ಅಖಿರಾಥ್ ಟ್ರಸ್ಟ್ ಸದಸ್ಯರು ಸ್ಥಳಕ್ಕೆ ತಲುಪುತ್ತಾರೆ.
ಜಾತಿ, ಧರ್ಮ ನೋಡಲಾರರು
ಸ್ವತ ಸದಸ್ಯರು ತಾವೇ ಆ್ಯಂಬುಲೆನ್ಸ್ನಲ್ಲಿ ಹಾಕಿಕೊಂಡು ಅಂತ್ಯಕ್ರಿಯೆ ಕೂಡ ಮಾಡಿ ಮುಗಿಸುತ್ತಾರೆ. ಈ ಸೇವೆಗೆ ಯಾರಿಂದಲು ನಯಾ ಪೈಸೆಯನ್ನು ಈ ತಂಡವು ಪಡೆಯದು. ಹೀಗಾಗಿ ಇವರ ಈ ಉಚಿತ ಸೇವೆ ಕಲಬುರಗಿಯಲ್ಲಿ ಭಾರೀ ಮನೆ ಮಾತಾಗಿದೆ.
ಇದನ್ನೂ ಓದಿ: Kalaburagi: ಟ್ರಾಫಿಕ್ ಸಮಸ್ಯೆ ಟಾಟಾ ಹೇಳಲು ಕಲಬುರಗಿ ರೆಡಿ!
ಕೊರೊನಾ ಸಮಯದಲ್ಲೂ ಅದ್ಭುತ ಸೇವೆ
ಅದೆಷ್ಟೋ ಹಿಂದೂ ಧರ್ಮೀಯ ಬಡ, ನಿರ್ಗತಿಕರ ಹಾಗೂ ಅನಾಥರ ಕರೆಗೂ ಸ್ಪಂದಿಸೋ ಇವರು, ಮೃತಪಟ್ಟಿದ್ದಲ್ಲಿ ಅಂತಹ ಮೃತದೇಹಗಳನ್ನ ಸ್ಮಶಾನದವರೆಗೂ ಉಚಿತವಾಗಿ ತಲುಪಿಸುತ್ತಾರೆ. ಆದ್ರೆ ಹಿಂದೂಗಳ ಸಂಪ್ರದಾಯ ಬೇರೆಯದ್ದೇ ಆಗಿದ್ರಿಂದ ಅಂತ್ಯ ಸಂಸ್ಕಾರ ನಡೆಸಲಾರರು. ಕೊರೊನಾ ಸಮಯದಲ್ಲಿ ಮನೆಯವರೆ ಮುಟ್ಟಲು ಹೆದರುತ್ತಿದ್ದ ಸಮಯದಲ್ಲೂ ಈ ತಂಡ ಯಾವುದೇ ಹಿಂಜರಿಕೆ ಇಲ್ಲದೆ ನೂರಾರು ಶವಗಳ ಅಂತ್ಯಕ್ರಿಯೆ ಮಾಡುವ ಮೂಲಕ ದಿಟ್ಟತನ ಮೆರೆದಿತ್ತು.
ಇದನ್ನೂ ಓದಿ: Kalaburagi: ಪಿಯುಸಿ ಮಾತ್ರ ಓದಿರೋ ಈ ಮಹಿಳೆ ಭಾರತದ ಮೊದಲ ಮಹಿಳಾ ಸೂಪರ್ ಬಜಾರ್ ಆರಂಭಿಸಿದ್ರು!
ಪೊಲೀಸ್ ಸ್ನೇಹಿ ತಂಡ
ಅಷ್ಟೆ ಅಲ್ಲದೇ, ಕಲಬುರಗಿಯ ಯಾವುದೇ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಅನಾಥ ಶವ, ಅಪರಿಚಿತ ಶವಗಳು ಕಂಡು ಬಂದರೆ ಪೋಲಿಸರು ಮೊದಲು ಕರೆ ಮಾಡೋದೆ ಸಫರೆ ಎ ಅಖಿರಾಥ್ ತಂಡಕ್ಕೆ. ಈ ಮೂಲಕ ಜನಸ್ನೇಹಿಯಾಗಿ ಮಾತ್ರವಲ್ಲ ಪೋಲಿಸ್ ಸ್ನೇಹಿಯಾಗಿಯೂ ಈ ತಂಡ ಕಾರ್ಯ ನಿರ್ವಹಿಸುತ್ತಿದೆ. ಒಟ್ಟಿನಲ್ಲಿ ಅನಾಥ ಶವಗಳಿಗೆ ಸದ್ಗತಿ ಕಲ್ಪಿಸೋ ಈ ತಂಡದ ನಿಸ್ವಾರ್ಥ ಸೇವೆಗೆ ಹ್ಯಾಟ್ಸಾಪ್ ಹೇಳಲೇಬೇಕು.
ವರದಿ: ಶ್ರೀಕಾಂತ್ ಬಿರಾಳ, ನ್ಯೂಸ್ 18 ಕನ್ನಡ ಡಿಜಿಟಲ್, ಕಲಬುರಗಿ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ