ಕಲಬುರಗಿ: ರಾಜ್ಯ ಬಜೆಟ್ ನಲ್ಲಿ (State Budget) ಈ ಬಾರಿ ಹಲವು ಹೊಸ ಯೋಜನೆ ಕಲಬುರಗಿ ಜಿಲ್ಲೆಯಲ್ಲಿ (Kalburgi District) ಜಾರಿ ಮಾಡಲಾಗಿದೆ. ಕೆಲ ಹಳೆಯ ಯೋಜನೆ ಪುನಾರಾವರ್ತನೆ ಮಾಡಲಾಗಿದೆ. ಮೆಗಾ ಜವಳಿ ಪಾರ್ಕ್ ಮತ್ತೊಮ್ಮೆ ಬಜೆಟ್ನಲ್ಲಿ (Budget) ಘೋಷಣೆ ಮಾಡಲಾಗಿದ್ದು, ಪ್ರವಾಸೋದ್ಯಮ ದೃಷ್ಟಿಯಿಂದ ಗಾಣಗಾಪುರ, ಸನ್ನತಿ, ಮಳಖೇಡ ಕೋಟೆ ಅಭಿವೃದ್ಧಿಗೆ ಒತ್ತು ನೀಡುವ ಕೆಲಸ ರಾಜ್ಯ ಸರ್ಕಾರ (State Government) ಮಾಡಿದೆ.
ರಸ್ತೆ ಅಭಿವೃದ್ಧಿ ಒತ್ತು
ಕಲ್ಯಾಣ ಕರ್ನಾಟಕದ ಬೀದರ್ನಿಂದ ಬಳ್ಳಾರಿವರೆಗೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿಯನ್ನು ಮೇಲ್ದರ್ಜೆಗೆ ಏರಿಸುವ ಕೆಲಸಕ್ಕೆ ಮುಖ್ಯಮಂತ್ರಿ ಬೊಮ್ಮಾಯಿ ಕೈ ಹಾಕಿದ್ದಾರೆ. ಈಗಾಗಲೇ ರಾಜ್ಯ ಹೆದ್ದಾರಿಯಲ್ಲಿ ವಾಹನ ದಟ್ಟಣೆ ಹೆಚ್ಚಳವಾಗಿದೆ. ಆದ್ದರಿಂದ ಸುಮಾರು 7,650 ಕೋಟಿ ರೂ. ಅನುದಾನದಲ್ಲಿ ಚತುಷ್ಪಥ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಬಜೆಟ್ನಲ್ಲಿ ಘೋಷಣೆ ಮಾಡಲಾಗಿದೆ. ಇದರಿಂದ ರಾಜಧಾನಿ ಬೆಂಗಳೂರಿಗೆ ಶೀಘ್ರ ತಲುಪಲು ಸಹಾಯವಾಗಲಿದೆ.
ರೈತರಿಗೆ ಅಸಮಾಧಾನ
ನೆಟೆ ರೋಗದಿಂದ ಜಿಲ್ಲೆಯಲ್ಲಿ ಸುಮಾರು 1.90 ಲಕ್ಷ ಹೆಕ್ಟೇರ್ ತೊಗರಿ ಈ ಬಾರಿ ಹಾಳಾಗಿತ್ತು. ಹಾಳಾದ ತೊಗರಿ ಬೆಳೆಗೆ ಈ ಹಿಂದೆ ಹೆಕ್ಟೇರ್ಗೆ 10 ಸಾವಿರ ರೂ. ಪರಿಹಾರ ಘೋಷಣೆ ಮಾಡಲಾಗಿತ್ತು. ಅದನ್ನು ಈ ಬಾರಿಯ ಬಜೆಟ್ನಲ್ಲಿ ಸೇರಿಸುವ ಮೂಲಕ ಯಾದಗಿರಿ, ವಿಜಯಪುರ, ಯಾದಗಿರಿ ಜಿಲ್ಲೆಗಳಿಗೂ ಪರಿಹಾರ ವಿಸ್ತರಣೆ ಮಾಡಲಾಗಿದೆ. ಘೋಷಣೆ ಮಾಡಿ ತಿಂಗಳು ಕಳೆದರೂ ರೈತರಿಗೆ ಪರಿಹಾರ ಸಿಕ್ಕಿಲ್ಲ. ಆದರೆ ಇನ್ನಷ್ಟು ಪರಿಹಾರ ಹೆಚ್ಚಳ ಮಾಡುವ ಆಶಾ ಭಾವನೆಯನ್ನು ಇಲ್ಲಿನ ರೈತರು ಹೊಂದಿದ್ದರು. ಅದಕ್ಕೆ ಸಿಎಂ ಸ್ಪಂದನೆ ನೀಡಿಲ್ಲ. ಇದು ರೈತರಲ್ಲಿ ಅಸಮಾಧಾನ ಹುಟ್ಟು ಹಾಕುವಂತೆ ಮಾಡಿದೆ.
ತೊಗರಿ ಮಂಡಳಿ ಬಲವರ್ಧನೆಗೂ ನಿರಾಸಕ್ತಿ
ರಾಜ್ಯದ ಇತರ ಮಂಡಳಿಗಳಾದ ಕೆಎಂಎ, ಕಾಫಿ ಬೋರ್ಡ್ ಮಾದರಿಯಲ್ಲಿ ತೊಗರಿ ಮಂಡಳಿ ಬಲವರ್ಧನೆ ಮಾಡಬೇಕು ಎಂಬುದು ಇಲ್ಲಿನವರ ಹಲವು ದಿನಗಳ ಬೇಡಿಕೆಯಾಗಿತ್ತು. ಈ ಬಗ್ಗೆ ಮುಖ್ಯಮಂತ್ರಿಗಳಿಗೆ ಹಲವು ಮುಖಂಡರು ಮನವಿ ಮಾಡಿದ್ದರು. ಆದರೆ ಸಿಎಂ ಬೊಮ್ಮಾಯಿ ಆ ನಿಟ್ಟಿನಲ್ಲಿ ಯಾವುದೇ ಉತ್ಸಾಹ ತೋರದಿರುವುದು ಜನರಿಗೆ ನಿರಾಸೆ ಮೂಡಿಸಿದೆ.
ಕೆಕೆಆರ್ ಡಿ ಬಿಗೆ ಅನುದಾನ ಹೆಚ್ಚಳ
ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಗೆ ಕಳೆದ ಬಾರಿ 3000 ಕೋಟಿ ರೂ. ನೀಡಲಾಗಿತ್ತು. ಆದರೆ ಈ ಬಾರಿ ಅದನ್ನು 5000 ಕೋಟಿ ಹೆಚ್ಚಳ ಮಾಡುವ ಮೂಲಕ ತಮ್ಮ ಮಾತನ್ನು ಉಳಿಸಿಕೊಳ್ಳುವಲ್ಲಿ ಸಿಎಂ ಬೊಮ್ಮಾಯಿ ಯಶಸ್ವಿಯಾಗಿದ್ದಾರೆ. ಕಳೆದ ಬಾರಿ ಕಲ್ಯಾಣ ಕರ್ನಾಟಕ ಉತ್ಸವಕ್ಕಾಗಿ ಕಲಬುರಗಿಗೆ ಆಗಮಿಸಿದಾಗ ಮುಂದಿನ ಬಾರಿ ಅನುದಾನ 5000 ಕೋಟಿ ರೂ. ನೀಡಲಾಗುವುದು ಎಂದು ಭರವಸೆ ನೀಡಿದ್ದರು.
ಅದರ ನಂತರ ನಡೆದ ಬಿಜೆಪಿ ಸಮಾವೇಶಗಳಲ್ಲೂ ಈ ಭರವಸೆ ಹೇಳುತ್ತಲೆ ಬಂದಿದ್ದರು. ಇದೀಗ ಬಜೆಟ್ನಲ್ಲಿ ಘೋಷಣೆ ಮಾಡಿದ್ದಾರೆ. ಜೊತೆಗೆ ಕಲ್ಯಾಣ ಕರ್ನಾಟಕದಲ್ಲಿ ಎಲ್ಲ ಇಲಾಖೆಗಳಲ್ಲಿ ಹಲವು ಹುದ್ದೆಗಳು ಖಾಲಿ ಇವೆ. ಅವುಗಳ ಭರ್ತಿಗೆ ಶೀಘ್ರ ಕ್ರಮ ಕೈಗೊಳ್ಳಲಾಗುವುದು ಎಂಬ ಮಾತನ್ನು ಸಿಎಂ ಬಸವರಾಜ ಬೊಮ್ಮಾಯಿ ಬಜೆಟ್ನಲ್ಲಿ ಘೋಷಣೆ ಮಾಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ