ಕಲಬುರಗಿ: ಸಾವಿರಾರು ಭಕ್ತರ ಜಯಘೋಷ. ಅದ್ಧೂರಿಯಾಗಿ ಸಾಗಿ ಬಂದ ಪಲ್ಲಕ್ಕಿ (Kalaburagi Veerabhadreshwar Temple) ಮೆರವಣಿಗೆ. ಮಹಿಳೆಯರು ಸೇರಿದಂತೆ ಸಾರ್ವಜನಿಕರಿಂದ ನಡೆಯಿತು ನೋಡಿ ಕೆಂಡ ಸೇವೆ. ಈ ಎಲ್ಲ ದೃಶ್ಯ ಕಂಡುಬಂದಿದ್ದು ಬಿಸಿಲನಗರಿ ಕಲಬುರಗಿಯಲ್ಲಿ.
ಯೆಸ್, ಕಲಬುರಗಿಯ ಪ್ರಮುಖ ಆರಾಧ್ಯ ದೇವರಲ್ಲಿ ಸಂತ್ರಸವಾಡಿಯ ಶ್ರೀ ವೀರಭದ್ರೇಶ್ವರನಿಗೆ ಮಹತ್ವದ ಸ್ಥಾನವಿದೆ. ವೀರಭದ್ರೇಶ್ವರನ ಜಾತ್ರೆ ಅಂದ್ರಂತೂ ಸಡಗರ ಸಂಭ್ರಮವನ್ನ ಕೇಳಬೇಕಿಲ್ಲ. ಜನವರಿ ತಿಂಗಳ ಕೊನೆಯ ವಾರದಲ್ಲಿ ಪ್ರಾರಂಭಗೊಳ್ಳುವ ಈ ಜಾತ್ರೆಗೆ ಊರು ಪರವೂರ ಸಾವಿರಾರು ಭಕ್ತರು ಸಾಕ್ಷಿಯಾಗುತ್ತಾರೆ. ಅದರಲ್ಲೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಈ ಜಾತ್ರಾ ಸಂಭ್ರಮಕ್ಕೆ ಇನ್ನಷ್ಟು ಮೆರುಗು ನೀಡುತ್ತೆ.
ಮೈ ಜುಮ್ ಅನಿಸುವ ಕೆಂಡ ಸೇವೆ
ಅದ್ರಲ್ಲೂ ಕೊನೆಯ ದಿನದಂದು ನಡೆಯುವ ಕೆಂಡಸೇವೆಯಂತೂ ಮೈ ಜುಮ್ ಎನ್ನಿಸುವಂತಿರುತ್ತದೆ. ಕೆಂಡ ಹಾಯುವ ಮೂಲಕ ಮಹಿಳೆಯರು ಕೂಡಾ ತಮ್ಮ ಭಕ್ತಿ ಪರಾಕಾಷ್ಠೆ ಮೆರೆಯುತ್ತಾರೆ.
ವಿವಿಧ ಅದ್ದೂರಿ ಕಾರ್ಯಕ್ರಮ
ಜಾತ್ರೆಯುದ್ದಕ್ಕೂ ವೀರಭದ್ರ ದೇವರಿಗೆ ಮಹಾರುದ್ರಾಭಿಷೇಕ, ಪುರಾಣ ಪ್ರವಚನ, ವೀರಭದ್ರೇಶ್ವರ ತೊಟ್ಟಿಲು, ಕನ್ಯೆ ಮುತ್ತೈದೆಯರಿಂದ ಪೂಜೆ, ದೇವರ ಮದುವೆ, ಪಲ್ಲಕ್ಕಿ ಉತ್ಸವಗಳು ನಡೆಯುತ್ತವೆ. ಅಗ್ಗಿ ಪೂಜೆಗೂ ಹಿಂದಿನ ದಿನ ಕಲಬುರಗಿಯ ಪ್ರಮುಖ ಬೀದಿಗಳಲ್ಲಿ ಕುಂಭ ಹೊತ್ತು ಮೆರವಣಿಗೆ ಮೂಲಕ ಆಗಮಿಸಿದ ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ ಅದ್ದೂರಿಯಾಗಿ ನಡೆಯುತ್ತದೆ.
ಇದನ್ನೂ ಓದಿ: Kalaburagi: ಊರು ಕಾಯುವ ಆಂಜನೇಯನಿಗೆ ಇಲ್ಲಿ ವೃದ್ಧರೊಬ್ಬರೇ ಆಸರೆ!
ಇನ್ನು ಜಾತ್ರೆಯ ಕೊನೆಯ ದಿನ ಮಧ್ಯರಾತ್ರಿ ಪಲ್ಲಕ್ಕಿ ದೇವಸ್ಥಾನ ತಲುಪಿದ ಮೇಲೆ ಅಗ್ಗಿ ಪ್ರವೇಶ ಮಾಡಲಾಯಿತು. ಪಲ್ಲಕ್ಕಿ ಹೊತ್ತವರು ನಂತರ ಪುರವಂತರು ಕೆಂಡ ಹಾಯ್ದರು. ಬಳಿಕ ಜನ ಸಾರ್ವಜನಿಕರು ಕೆಂಡ ಹಾಯ್ದು ವೀರಭದ್ರ ದೇವರಿಗೆ ತಮ್ಮ ಭಕ್ತಿ ಅರ್ಪಿಸಿದರು.
ಇನ್ನು ಪುರವಂತರ ವೀರಾವೇಶದ ಉಡುಪುಗಳು, ಭಕ್ತರ ಜೈಘೋಷದ ಸದ್ದು ನೆರೆದವರ ಮೈನವಿರೇಳಿಸುವಂತಿತ್ತು. ಈ ಭಾಗದಲ್ಲಿ ಮುಸ್ಲಿಂ ಜನಾಂಗದ ಮಂದಿ ಅತ್ಯಧಿಕವಾಗಿ ವಾಸವಿರುವ ಜಾಗವಾದ್ರೂ, ದೇವಸ್ಥಾನದ ವಿಚಾರದಲ್ಲಿ ಎಲ್ಲರೂ ಒಟ್ಟಾಗಿ ಹಿಂದೂ ಮುಸ್ಲಿಂ ಎಂಬ ಬೇಧವಿಲ್ಲದೇ ಇಲ್ಲದೇ ದೇವರಿಗೆ ನಡೆದುಕೊಳ್ಳುವ ರೂಢಿಯಿದೆ.
ಇದನ್ನೂ ಓದಿ: Kalaburagi: ಮನೆಯೊಂದು 101 ಬಾಗಿಲು! ಕಲಬುರಗಿಯಲ್ಲೊಂದು ವಿಶಿಷ್ಟ ಮನೆ
ಒಟ್ಟಾರೆ ಒಂದು ವಾರ ಕಾಲ ಹಲವು ಧಾರ್ಮಿಕ ಕಾರ್ಯಗಳ ಜೊತೆಗೆ ಸಂಭ್ರಮದಿಂದ ಜರುಗಿದ ವೀರಭದ್ರ ದೇವರ ಜಾತ್ರೆಸಂಪನ್ನಗೊಂಡಿದೆ.
ವರದಿ: ಶ್ರೀಕಾಂತ್ ಬಿರಾಳ, ನ್ಯೂಸ್ 18 ಕನ್ನಡ ಕಲಬುರಗಿ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ