ಕಲಬುರಗಿ: ಕೆಂಡ ಹಾಯುತ್ತಿರೋ ಭಕ್ತರು. ಎಲ್ಲೆಲ್ಲಿ ನೋಡಿದ್ರೂ ಜೈಕಾರ ಮೊಳಗಿಸುತ್ತಿರೋ ಭಕ್ತಗಣ. ಮೆರವಣಿಗೆಯಲ್ಲಿ ಕಂಗೊಳಿಸಿದ ಪ್ರಭಾವಳಿಯ ನೋಟ. ಹೀಗೆ ಸಂಭ್ರಮ ಸಡಗರದಿಂದ ನಡೆಯಿತು ನೋಡಿ ಕಲಬುರಗಿಯ ಚಿಂಚೋಳಿ (Chincholi) ತಾಲೂಕಿನ ಸುಲೇಪೇಟ ಗ್ರಾಮದ ಆರಾಧ್ಯ ದೈವ ಐತಿಹಾಸಿಕ ಪ್ರಸಿದ್ಧ ಶ್ರೀ ವೀರಭದ್ರೇಶ್ವರ ಜಾತ್ರೆ (Kalaburagi Jatra).
ವೀರಭದ್ರೇಶ್ವರ ಜಾತ್ರೆ
ವೀರಭದ್ರೇಶ್ವರ ಜಾತ್ರೆ ನಿಮಿತ್ತ ನಡೆದ ರಥೋತ್ಸವದಲ್ಲಿ ವಿವಿಧ ಹಳ್ಳಿಗಳಿಂದ ಆಗಮಿಸಿದ ಭಕ್ತರು ರಥದ ಮೇಲೆ ನಾಣ್ಯ, ಉತ್ತುತ್ತಿ, ಕಾರಿಕ, ಬಾಳೆ ಹಣ್ಣು, ಹೂವು ಎಸೆದು ಕೈಮುಗಿದು ನಮಸ್ಕರಿಸಿ ತಮ್ಮ ಭಕ್ತಿ ಅರ್ಪಿಸಿದರು. ಜೊತೆಗೆ ವೀರಭದ್ರೇಶ್ವರ ಪಲ್ಲಕ್ಕಿ ಉತ್ಸವ ನಡೆಯಿತು. ಪ್ರಭಾವಳಿ ಮತ್ತು ಉಚ್ಚಾಯಿ ಮೆರವಣಿಗೆಯಂತೂ ಸಡಗರ ಸಂಭ್ರಮಕ್ಕೆ ಸಾಕ್ಷಿಯಾಯಿತು.
ಧಾರ್ಮಿಕ ಕಾರ್ಯಕ್ರಮ
ದೇವಾಲಯದಲ್ಲಿ ವಿಶೇಷ ಪೂಜೆ, ಅಭಿಷೇಕ, ಭಜನೆಗಳು ನಡೆದವು. ರಂಗುರಂಗಿನ ಹೂವುಗಳಿಂದ ಅಲಂಕರಿಸಿದ ರಥವನ್ನು ಸಾವಿರಾರು ಭಕ್ತರು ವೀರಭದ್ರೇಶ್ವರ ಮಹಾರಾಜ ಕೀ ಜೈ ಎಂಬ ಜಯಘೋಷದೊಂದಿಗೆ ಸಡಗರ ಸಂಭ್ರಮದಿಂದ ಎಳೆದರು. ಜಾತ್ರಾ ಮಹೋತ್ಸವದ ಹಿನ್ನಲೆ ವಿಶೇಷವಾಗಿ ಆಚರಿಸಲಾಗುವ ಪ್ರಭಾವಳಿ ಉತ್ಸವವನ್ನು ಅತ್ಯಂತ ಅದ್ದೂರಿಯಾಗಿ ಸಹಸ್ರಾರು ಭಕ್ತರ ಜಯಘೋಷದ ನಡುವೆ ಆಚರಣೆ ಮಾಡಲಾಯಿತು.
ಇದನ್ನೂ ಓದಿ: Kalaburagi News: ಕಲ್ಯಾಣ ಕರ್ನಾಟಕದ ವಿದ್ಯಾರ್ಥಿಗಳಿಗೆ ಸುವರ್ಣಾವಕಾಶ!
ಎರಡು ತಂಡಗಳ ಪೈಪೋಟಿ
ಸಾಂಪ್ರದಾಯಿಕವಾಗಿ ಶ್ರೀ ವೀರಭದ್ರೇಶ್ವರ ಮೂರ್ತಿಯನ್ನು ಹೊತ್ತೊಯ್ಯುವ ಪ್ರಭಾವಳಿ ಉತ್ಸವಕ್ಕೆ ವಿಶೇಷ ಪೂಜೆ ಸಲ್ಲಿಸಲಾಯಿತು. ನಂತರ ಅಲ್ಲಿಂದ ಹೊರಾಟ ಉತ್ಸವ ಮೂರ್ತಿ ಮೆರವಣಿಗೆಯು ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ಈ ವೇಳೆ ಪ್ರಭಾವಳಿ ಹಿಡಿದ ಭಕ್ತರು ಬಿಳಿ ಬಣ್ಣದ ಉಡುಪುಗಳನ್ನು ಧರಿಸಿದ್ರು. ಪ್ರಭಾವಳಿಯ ಬಲಭಾಗ ಹಳೇಕೇರಿ ಹಾಗೂ ಎಡಭಾಗ ಹೊಸಕೇರೆ ಗ್ರಾಮದ ತಂಡಗಳು ಬಿರುಸಿನ ಪೈಪೋಟಿಗಿಳಿದವು.
ಕೆಂಡ ಸೇವೆ
ಪರಸ್ಪರ ಟನ್ಗಟ್ಟಲೆ ಭಾರವಾದ ಆ ಎರಡು ಬೃಹತ್ ಗಾತ್ರದ ಮರದ ದಿಮ್ಮಿಗಳಿಂದ ಕೂಡಿದ ಪ್ರಭಾವಳಿ, ಉತ್ಸವ ಮೂರ್ತಿಯೂ ಗ್ರಾಮದ ಸಂಗಮೇಶ್ವರ ದೇವಸ್ಥಾನದಿಂದ ಅಗ್ನಿಕುಂಡಕ್ಕೆ ತೆರಳಿ, ನಂತರ ಮರಳಿ ದೇವಸ್ಥಾನ ತಲುಪಿತು.
ಇದನ್ನೂ ಓದಿ: Free Hostel: ವಿದ್ಯಾರ್ಥಿಗಳಿಗೆ ಉಚಿತ ಹಾಸ್ಟೆಲ್ ಸೌಲಭ್ಯ, ಈಗಲೇ ಹೀಗೆ ಅರ್ಜಿ ಸಲ್ಲಿಸಿ
ಇದೇ ವೇಳೆ ಭಕ್ತರಿಂದ ಕೆಂಡ ಸೇವೆಯೂ ನಡೆಯಿತು. ಹಲಗೆ ಸದ್ದು, ಭಕ್ತರ ಜೈಕಾರ ಮುಗಿಲು ಮುಟ್ಟಿತ್ತು. ಒಟ್ಟಿನಲ್ಲಿ ಐತಿಹಾಸಿಕ ವೀರಭದ್ರೇಶ್ವರ ದೇವರ ಜಾತ್ರೆಯು ಅದ್ಧೂರಿಯಾಗಿ ಜರುಗಿತು. ನಾನಾ ಕಡೆಗಳಿಂದ ಆಗಮಿಸಿದ ಭಕ್ತರು ದೇವರ ದರ್ಶನವನ್ನು ಪಡೆದು ಪುನೀತರಾದರು.
ವರದಿ: ಶ್ರೀಕಾಂತ ಬಿರಾಳ, ನ್ಯೂಸ್ 18 ಕನ್ನಡ ಡಿಜಿಟಲ್, ಕಲಬುರಗಿ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ