ಕಲಬುರಗಿ: ಒಂದು ಕಡೆ ಇತಿಹಾಸ ಹೇಳುವ ಪಳಿಯುಳಿಕೆಗಳು. ಇನ್ನೊಂದೆಡೆ ಅದ್ಭುತವೆನಿಸುವ ಕಲಾಕೃತಿಗಳು, ಮತ್ತೊಂದೆಡೆ ಸದಾ ನೆನಪಿಡಬಹುದಾದ ಹಳೆ ವಸ್ತುಗಳು. ಹೌದು, ಹೀಗೊಂದು ಮ್ಯೂಸಿಯಂ (Museum) ಇರೋದು ಯಾವುದೋ ಸರಕಾರಿನೋ, ಖಾಸಗಿ ಸಂಗ್ರಹಾಲಯದಲ್ಲಿ ಅಲ್ಲ, ಬದಲಿಗೆ ಓರ್ವ ಕಲಾವಿದನ ಮನೆಯಲ್ಲಿ. ನಿಜ, ಕಲಾವಿದನೋರ್ವನ ಕಲಾಕುಂಚದ ಪ್ರೇಮ ಹಳೆ ವಸ್ತುಗಳಿಗೆ ಆಶ್ರಯ (Museum In Home) ನೀಡಿದೆ. ಈ ಮೂಲಕ ಮನೆಯನ್ನೇ ಮ್ಯೂಸಿಯಂ ಆಗಿಸಿ ವಿಶಿಷ್ಟ ಲೋಕವನ್ನೇ ಸೃಷ್ಟಿಸಿದ್ದಾರೆ.
ಕಲಾವಿದನ ಕಲಾಪ್ರೇಮ
ಯೆಸ್, ಹೀಗೊಂದು, ಮ್ಯೂಸಿಯಂ ಇರೋದು ಕಲಬುರಗಿಯ ರೋಜಾ ಬಡಾವಣೆಯಲ್ಲಿ ಮಹ್ಮದ್ ಆಯಾಜುದ್ದೀನ್ ಎನ್ನುವವರ ಮನೆಯಲ್ಲಿ. ಮೂಲತ: ಮಹ್ಮದ್ ಆಯಾಜುದ್ದೀನ್ ಅದ್ಬುತ ಕಲಾವಿದರು. ಜೊತೆಗೆ ಐತಿಹಾಸಿಕ ಪುರಾತನ ಕಾಲದ ವಸ್ತುಗಳನ್ನು ಸಂಗ್ರಹಿಸುವ ಹವ್ಯಾಸವನ್ನು ಹೊಂದಿದವರು. ಹೀಗೆ ಇವರ ಹವ್ಯಾಸ ಮನೆಯನ್ನೇ ಮ್ಯೂಸಿಯಂ ಮಾಡಿಸಿ ಹಾಕಿದೆ. ಇಲ್ಲಿ ಸಂಗ್ರಹವಾಗಿರುವ ಅದೆಷ್ಟೋ ವಸ್ತುಗಳು ರಾಜ, ಮಹಾರಾಜರ ಕಾಲದಲ್ಲಿ ಬಳಸುತ್ತಿದ್ದ ವಸ್ತುಗಳಾಗಿವೆ.
ಸಚಿನ್ ಸಿಕ್ಸರ್ ಬಾರಿಸಿದ ಬಾಲ್!
ಜೊತೆಗೆ ದಶಕಗಳ ಹಿಂದೆ ಬಳಸುತ್ತಿದ್ದ ಹಳೆಯ ರೇಡಿಯೋ, ಗ್ರಾಮಪೋನ್, ಕ್ಯಾಮೆರಾ, ಮಣ್ಣಿನ ಗಡಿಗೆ ಹಾಗೂ ವಿಶಿಷ್ಟ ಕಲಾಕೃತಿಗಳು ಇಲ್ಲಿವೆ. ಅಷ್ಟೇ ಅಲ್ಲದೇ, ಸಚಿನ್ ತೆಂಡೂಲ್ಕರ್ ಸಿಕ್ಸರ್ ಬಾರಿಸಿದ ಚೆಂಡನ್ನು ಕೂಡಾ ಸಂಗ್ರಹಿಸಿಟ್ಟಿದ್ಧಾರೆ. ಇನ್ನು ಟೀ ಟೇಬಲನ್ನು ಮುಳ್ಳುಗಳಿಂದ ಸುಂದರವಾಗಿ ಜೋಡಿಸಿದ್ದಾರೆ. ಜೊತೆಗೆ ಬಹುಮನಿ ಸುಲ್ತಾನರು, ಚಾಲುಕ್ಯರು, ರಾಷ್ಟ್ರಕೂಟರು, ಆದಿಲ್ ಶಾಹಿ ಕಾಲದ ಪಳಿಯುಳಿಕೆಗಳನ್ನೂ ಇಲ್ಲಿ ಕಾಣಬಹುದಾಗಿದೆ.
ಕಲ್ಯಾಣ ಕರ್ನಾಟಕದ ಬಗ್ಗೆ ಮಾಹಿತಿ
ಮಹ್ಮದ್ ಆಯಾಜುದ್ದೀನ್, ತಮ್ಮ ಮನೆಯ ಮೇಲ್ಗಡೆ ಇರುವ ಕೋಣೆಯಲ್ಲಿ ಈ ಮ್ಯೂಸಿಯಂ ಸ್ಥಾಪಿಸಿದ್ದಾರೆ. ಹೈದರಾಬಾದ್ ಕರ್ನಾಟಕದ (ಕಲ್ಯಾಣ ಕರ್ನಾಟಕ) ಇತಿಹಾಸ ಉಳಿಸುವ ನಿಟ್ಟಿನಲ್ಲಿ ಇವರ ಪಾತ್ರ ಮಹತ್ವದ್ದು. ಇಲ್ಲಿನ ಐತಿಹಾಸಿಕ ಸ್ಥಳಗಳ ಮಾಹಿತಿಯನ್ನು ಪುಸ್ತಕ ರೂಪದಲ್ಲಿ ಸಿದ್ದಪಡಿಸಿ ಉಚಿತವಾಗಿ ಹಂಚುತ್ತಿದ್ದಾರೆ.
ಇದನ್ನೂ ಓದಿ: Kalaburagi: 60 ಕಂಬಗಳ ದೇಗುಲದಲ್ಲಿ ಬ್ರಹ್ಮನ ಹೆಸರು! ವಿಷ್ಣು ಮಹೇಶ್ವರರ ಸಾನಿಧ್ಯ!
ಹಣ ಕೊಟ್ಟು ಖರೀದಿ
ಜೊತೆಗೆ ತಮ್ಮ ಕಲಾಕೃತಿಗಳ ಮೂಲಕವೂ ಸಾಕಷ್ಟು ಪ್ರಸಿದ್ಧಿ ಪಡೆದಿದ್ದಾರೆ. ಕಲಾವಿದನಾಗಿ ರಾಷ್ಟ್ರ ಪ್ರಶಸ್ತಿಯನ್ನೂ ಪಡೆದಿದ್ದಾರೆ. ಇವರು ಎಲ್ಲೇ ಹೋದರೂ ಅಲ್ಲಿ ಪಳಿಯುಳಿಕೆ ವಸ್ತುಗಳು ಸಿಕ್ಕರೆ ಅದಕ್ಕೆ ಡಬಲ್ ದುಡ್ಡು ಕೊಟ್ಟಾದರೂ ಖರೀದಿ ಮಾಡಿ ತಂದು ತಮ್ಮ ಮ್ಯೂಸಿಯಂನಲ್ಲಿ ಇಡುತ್ತಾರೆ.
ಇದನ್ನೂ ಓದಿ: Kalaburagi: 2 ಎಕರೆಯಲ್ಲಿರೋ ಈ ಮನೆಗೆ 48 ಕೋಣೆ, 108 ಬಾಗಿಲು!
ಒಟ್ಟಾರೆಯಾಗಿ ಆಯಾಜುದ್ದೀನ್, ತನ್ನ ಸ್ವಇಚ್ಛೆಯಿಂದ ಮನೆಯಲ್ಲೇ ಮ್ಯೂಸಿಯಂ ಮಾಡಿಕೊಂಡಿರೋದು ಕಲಬುರಗಿಯ ಸಾರ್ವಜನಿಕರ ಕುತೂಹಲದ ಕೇಂದ್ರಬಿಂದುವಾಗಿದ್ದಾರೆ.
ಕಲಾವಿದ ಆಯಾಜುದ್ದೀನ್ ಅವರ ಸಂಪರ್ಕ ಸಂಖ್ಯೆ ಹೀಗಿದೆ: 94489 02617
ವರದಿ: ಶ್ರೀಕಾಂತ್ ಬಿರಾಳ, ನ್ಯೂಸ್ 18 ಕನ್ನಡ ಡಿಜಿಟಲ್, ಕಲಬುರಗಿ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ