ಕಲಬುರಗಿ: ಹೀಗೆ ಮನೆ ಮನೆಗೆ ತೆರಳಿ ಕಾರ್ಡ್ ಮೇಲೆ ಸಹಿ ಹಾಕ್ತಿರೋದು ಯಾವುದೋ ವಾಟರ್ ಬಿಲ್ಗೋ, ಕೇಬಲ್ ಬಿಲ್ಗೋ ಅಲ್ಲ, ಬದಲಾಗಿ ಸ್ವಚ್ಛತಾ ಕಾರ್ಡ್ಗೆ. ಹೌದು, ತೊಗರಿ ನಾಡಲ್ಲಿ ಸ್ವಚ್ಛತೆಗಾಗಿ (Swatchata Card) ಪಾಲಿಕೆ ಹಾಕಿಕೊಂಡ ವಿಶಿಷ್ಟ ಕಾರ್ಯಕ್ರಮವಿದು. ಸ್ವಚ್ಛತಾ ವಾಹನದಲ್ಲಿ ಬರೋ ಪೌರ ಕಾರ್ಮಿಕರು ಮನೆಗಳನ್ನು ತಲುಪಿದ್ದೇವೆ ಎನ್ನುವುದನ್ನು ಕನ್ಫರ್ಮ್ ಮಾಡಿಕೊಳ್ಳುತ್ತಾರೆ. ಜೊತೆಗೆ ಜನರು ಬೇರೆಡೆ ಕಸ (Waste Management) ಎಸೆಯದಂತೆ ಈ ಮೂಲಕ ಲಗಾಮು ಹಾಕ್ತಿದ್ದಾರೆ. ಇಂತಹ ವಿಶಿಷ್ಟ ಪ್ರಯೋಗವನ್ನು ಕಲಬುರಗಿ (Kalaburagi News) ಮಹಾನಗರ ಪಾಲಿಕೆ ಹಮ್ಮಿಕೊಂಡಿದೆ.
ಈ ಹಿಂದೆ ಕಸ ಬಿಸಾಡುವ ಸ್ಥಳಗಳಲ್ಲಿ ರಂಗೋಲಿ ಬಿಡಿಸುವುದು, ಸಾರ್ವಜನಿಕರು ಮೂತ್ರ ವಿಸರ್ಜಿಸುತ್ತಿದ್ದ ಗೋಡೆಗಳ ಮೇಲೆ ಅಂದವಾದ ಚಿತ್ರಗಳನ್ನು ಬಿಡಿಸುವ ಮೂಲಕ ಕಲಬುರಗಿ ನಗರವನ್ನು ಸುಂದರವಾಗಿಸಲು ಶ್ರಮಿಸಿತ್ತು. ಇದೀಗ ಮತ್ತೊಂದು ಪ್ಲ್ಯಾನ್ ಗೆ ಮುಂದಾದ ಪಾಲಿಕೆ ಸ್ವಚ್ಛತಾ ಮಿತ್ರ ಕಾರ್ಡ್ ಮೂಲಕ ಜನರಲ್ಲಿ ಸ್ವಚ್ಛತೆಯ ಕುರಿತು ಅರಿವು ಮೂಡಿಸುತ್ತಿದೆ.
ಹಾಲು, ವಾಟರ್ ಬಿಲ್ನಂತೆ ಕಸಕ್ಕೂ ಕಾರ್ಡ್!
ಹಾಗಾಗಿ ಇಲ್ಲಿ ಹಾಲು, ಕೇಬಲ್, ವಾಟರ್ ಬಿಲ್ಗಳಿಗೆ ನೀಡುವಂತೆ ಕಾರ್ಡ್ಗಳನ್ನು ನೀಡುತ್ತಾರೆ. ಪಾಲಿಕೆಯೇ ಈ ಸ್ವಚ್ಛತಾ ಮಿತ್ರ ಕಾರ್ಡ್ ವಿತರಿಸುತ್ತಾ ಬಂದಿದೆ. ಪ್ರತಿನಿತ್ಯವೂ ಬಡಾವಣೆಗೆ ಪೌರಕಾರ್ಮಿಕರು ಹೋಗ್ತಾರಾ, ಜನ ಪ್ರತಿನಿತ್ಯವೂ ತಮ್ಮ ಮನೆಯಲ್ಲಿ ಶೇಖರಣೆಯಾದ ಕಸವನ್ನು ವಿಲೇವಾರಿ ಮಾಡುತ್ತಿದ್ದಾರೆಯೇ ಅನ್ನೋದರ ಮಾಹಿತಿ ಸಂಗ್ರಹಿಸುವುದೇ ಈ ಸ್ವಚ್ಛತಾ ಮಿತ್ರ ಕಾರ್ಡ್ ವಿತರಣೆಯ ಉದ್ದೇಶ.
ಇದನ್ನೂ ಓದಿ: Kalaburagi: ತೊಗರಿ ಕಣಜದಲ್ಲಿ ಹತ್ತಿ ಹಿರಿಮೆ, ಎಲ್ಲೆಲ್ಲೂ 'ಬಿಳಿ ಬಂಗಾರ'ದ್ದೇ ಹವಾ!
ಕಸ ಕೊಟ್ಟು ಸಹಿ ಹಾಕ್ಬೇಕು!
ಪ್ರತಿದಿನವೂ ವಸತಿ ಬಡಾವಣೆಗಳಿಗೆ ಆಗಮಿಸುವ ಪೌರಕಾರ್ಮಿಕರು ಪ್ರತಿ ಮನೆಯಿಂದ ಕಸವನ್ನು ಸಂಗ್ರಹಿಸುವ ಜೊತೆಗೆ ಕಾರ್ಡ್ನ್ನು ಕೇಳಿ ಪಡೆದು ಸಹಿ ಹಾಕುತ್ತಾರೆ. ಪಾಲಿಕೆ ಅಧಿಕಾರಿಗಳ ಈ ವಿನೂತನ ಕಾರ್ಯಕ್ಕೆ ಸಾರ್ವಜನಿಕರು ಕೈಜೋಡಿಸಿದ್ದು, ಜನರು ಉತ್ತಮ ರೀತಿಯಲ್ಲಿ ಸ್ಪಂದಿಸುತ್ತಿದ್ದಾರೆ. ಪ್ರತಿನಿತ್ಯವು ಮನೆಗೆ ಬರುವ ಪೌರಕಾರ್ಮಿಕರಿಗೆ ತಮ್ಮ ಮನೆಯಲ್ಲಿ ಶೇಖರಣೆಯಾದ ಒಣ ಕಸ ಮತ್ತು ಹಸಿ ಕಸವನ್ನು ಬೇರ್ಪಡಿಸಿ ಪೌರಕಾರ್ಮಿಕರಿಗೆ ನೀಡುವ ಮೂಲಕ ಕಾರ್ಡ್ ಮೇಲೆ ಸಹಿ ಪಡೆದುಕೊಳ್ಳುತ್ತಿದ್ದಾರೆ.
ಇದನ್ನೂ ಓದಿ: Positive Story: ಕಾಲುಗಳಿಲ್ಲದ ಕೃಷಿ ಸಾಧಕರಿಗೆ ಸಿಕ್ತು ನೆರವಿನ ಭರವಸೆ; ಇದು ನ್ಯೂಸ್ 18 ಕನ್ನಡ ಡಿಜಿಟಲ್ ವರದಿ ಪರಿಣಾಮ
ಒಟ್ಟಾರೆ ಕಲಬುರಗಿ ಮಹಾನಗರ ಪಾಲಿಕೆ ಅಧಿಕಾರಿಗಳ ಈ ವಿನೂತನ ಕಾರ್ಯ ಜನ ಮೆಚ್ಚುಗೆಗೆ ಪಾತ್ರವಾಗಿದೆ. ಜನರು ಕೂಡಾ ಎಲ್ಲೆಂದರಲ್ಲಿ ಕಸ ಎಸೆಯುವುದನ್ನು ನಿಲ್ಲಿಸಿದ್ದು, ಮಹಾನಗರ ಪಾಲಿಕೆಯ ಕನಸಿನ ನಗರಿಯ ಜೊತೆ ಕೈ ಜೋಡಿಸಿದ್ದಾರೆ.
ವರದಿ: ಶ್ರೀಕಾಂತ್ ಬಿರಾಳ, ಕಲಬುರಗಿ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ