ಕಲಬುರಗಿ: ಪ್ರತೀ ಗಿಡದ ಬುಡಕ್ಕೂ ತಂಪೆರೆಯುವ ನೀರು. ಜಮೀನಿನಲ್ಲೇ ಅಳವಡಿಸಲಾಗಿದೆ ಸೋಲಾರ್ ಪ್ಯಾನೆಲ್. ಇಲ್ಲಿ ಕಾಣೋ ತಂತಿ ಟಚ್ ಮಾಡಿದ್ರೆ ಮೊಳಗುತ್ತೆ ಸೈರನ್ ಸೌಂಡ್. ಬಿಸಿಲನಾಡಿನಲ್ಲೂ (Kalaburagi News) ಕೃಷಿ ಕ್ರಾಂತಿ (Success Story) ಮೂಲಕ ಗಮನಸೆಳೆಯುತ್ತಿದ್ದಾರೆ ಈ ರೈತ.
ವಿವಿಧ ಬಗೆಯ ಸಂಶೋಧನೆ
ಯೆಸ್, ಕಲಬುರಗಿ ಹೇಳಿ ಕೇಳಿ ಬಿಸಿಲನಾಡು. ನೀರಿನ ಪ್ರಮಾಣವೇ ಕಡಿಮೆ ಇರುವ ಈ ಊರಲ್ಲಿ ರೈತರೊಬ್ರು ಕೃಷಿ ಕ್ರಾಂತಿಯನ್ನೇ ನಡೆಸಿದ್ದಾರೆ. ಹಾಲ ಸುಲ್ತಾನಪೂರ ಗ್ರಾಮದ ರೈತ ಶರಣಬಸಪ್ಪ ಪಾಟೀಲ ಎಂಬುವವರೇ ಈ ರೀತಿಯಲ್ಲಿ ಕೃಷಿಯಲ್ಲಿ ವಿವಿಧ ಬಗೆಯ ಸಂಶೋಧನೆ ನಡೆಸಿ ಸಕ್ಸಸ್ ಆದವರು. ಮೊದಲು ಪ್ರಯೋಗ ಆನಂತರ ಕೃಷಿ ಬೆಳೆ ಅನ್ನೋ ಇವರ ನಿಲುವೇ ಈ ಬಗೆಯ ಯಶಸ್ವಿ ಹಿಂದಿನ ಗುಟ್ಟು.
ನೀರಾವರಿಗೆ ಆದ್ಯತೆ
ಮೊದಲು ಬೆಳೆಗೆ ಬೇಕಾದ ನೀರಾವರಿ ವ್ಯವಸ್ಥೆ ಕಲ್ಪಿಸಿ, ಆ ಬೆಳೆಯನ್ನ ಬೆಳೆಸುತ್ತಾ ಬಂದಿದ್ದಾರೆ. ಹೀಗಾಗಿ ಉತ್ತಮ ಫಸಲು ಸಿಗುತ್ತಿದೆ. ವೃಥಾ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಬೆಳೆ ಬೆಳೆದು ಉತ್ತಮ ಇಳುವರಿ ಬಾರದೆ ಸಂಕಷ್ಟ ಎದುರಿಸುತ್ತಿರುವವರ ನಡುವೆ ಶರಣಬಸಪ್ಪ ಪಾಟೀಲ ಸಫಲತೆ ಕಂಡಿದ್ದಾರೆ. ಶರಣಬಸಪ್ಪ ಅವರು ಓದಿದ್ದು ಪಿಯುಸಿ ಆದ್ರು, ಕೃಷಿಯಲ್ಲಿ ಇವ್ರದ್ದು ವಿಶಿಷ್ಟ ಸಂಶೋಧನೆ. 24 ವರ್ಷಗಳ ಹಿಂದೆ ಕೃಷಿ ರಂಗಕ್ಕೆ ಕಾಲಿಟ್ಟ ಅವರು ಇಲ್ಲಿವರೆಗೂ 20ಕ್ಕೂ ಹೆಚ್ಚು ಹೊಸ ಆವಿಷ್ಕಾರದ ಮೂಲಕ ಕೃಷಿ ಬದುಕಿನಲ್ಲಿ ಯಶೋಗಾಥೆಯನ್ನೇ ನಿರ್ಮಿಸಿದ್ದಾರೆ.
ನಳ ನೀರಾವರಿ ಪದ್ಧತಿ!
ಹನಿ ನೀರಾವರಿ ಬದಲಾಗಿ ತಾವೇ ಸ್ವತಃ ನಳ ನೀರಾವರಿ ಪದ್ಧತಿಯನ್ನು ಅಳವಡಿಸಿಕೊಂಡಿದ್ದುಈ ಪದ್ಧತಿಯಿಂದ ಒಂದು ಗಂಟೆಯಲ್ಲಿ 60-120 ಗಿಡಗಳಿಗೆ ನೀರು ಒದಗಿಸಬಹುದು. ಇದರಿಂದ ವಿದ್ಯುತ್, ಸಮಯ ಉಳಿತಾಯದ ಜೊತೆಗೆ ಯಂತ್ರವೂ ಹಾಳಾಗದು. ಇನ್ನು ಪ್ರಾಣಿಗಳ ಕಾಟ ತಪ್ಪಿಸಲು ಪ್ರಾಣಿಗಳಿಗೆ ಜೀವಹಾನಿಯಾಗದಂತೆ ಜಮೀನು ಸುತ್ತ ವಿದ್ಯುತ್ ತಂತಿ ಬೇಲಿ ಹಾಕಿದ್ದಾರೆ.
ಇದನ್ನೂ ಓದಿ: Success Story: ಗುಲಾಬಿ ಬೆಳೆದು ಸಕ್ಸಸ್ ಕಂಡ ಕಲಬುರಗಿ ಕೃಷಿಕ!
ಉತ್ತಮ ಆದಾಯ
ಮಾರುಕಟ್ಟೆಯಲ್ಲಿ ಲಭ್ಯವಿರುವ ಎಲೆಕ್ಟ್ರಾನಿಕ್ ಬಿಡಿಭಾಗಗಳನ್ನು ತಂದು ಈ ವಿದ್ಯುತ್ ತಂತಿ ಬೇಲಿ ಅವಿಷ್ಕರಿಸಿದ್ದಾರೆ. ಇದನ್ನು ಪ್ರಾಣಿಗಳು ತಗುಲಿಸಿಕೊಂಡರೆ ಸಾಕು, ಸುಮಾರು ಒಂದು ಕಿ.ಮೀ. ವರೆಗೂ ಸೈರನ್ ಕೇಳಿಸುತ್ತದೆ. ಸುಮಾರು 20 ಎಕರೆ ಪೈಕಿ 10 ಎಕರೆಯಲ್ಲಿ 320 ಟನ್ ಕಬ್ಬು ಫಸಲು ತೆಗೆದಿದ್ದಾರೆ. 10 ಎಕರೆಯಲ್ಲಿ ತೊಗರಿ, ನಿಂಬೆ, ಗೋಧಿ, ಉದ್ದು ಸೇರಿದಂತೆ ಇನ್ನಿತರ ಬೆಳೆಗಳನ್ನು ಬೆಳೆದು ವಾರ್ಷಿಕವಾಗಿ ಸುಮಾರು ₹15 ಲಕ್ಷ ಆದಾಯ ಗಳಿಸುತ್ತಿದ್ದಾರೆ.
ಇದನ್ನೂ ಓದಿ: Kalaburagi: ಈ ಶಾಲೆಯಲ್ಲಿ ಪ್ರತಿನಿತ್ಯ ಎರಡು ಗಂಟೆಯಷ್ಟೇ ಪಾಠ!
ನೀರಾವರಿ ಕ್ರಾಂತಿ
ಹೀಗೆ ಬಿಸಿಲನಾಡು ಕಲಬುರಗಿಯಲ್ಲೂ ಶರಣಬಸಪ್ಪ ನೀರಾವರಿ ಕ್ರಾಂತಿಯನ್ನೇ ಮಾಡಿದ್ದಾರೆ. ಅಲ್ಲದೇ, ಇವರು ಆವಿಷ್ಕರಿಸಿರುವ ಯಂತ್ರಗಳನ್ನು ಕಡಿಮೆ ಬೆಲೆಗೆ ಬೇರೆ ರೈತರಿಗೂ ಮಾರಾಟ ಮಾಡುತ್ತಾ ಲಕ್ಷಾಂತರ ರೂಪಾಯಿ ಲಾಭ ಪಡೆಯುತ್ತಿದ್ದಾರೆ. ಒಟ್ಟಿನಲ್ಲಿ ಶರಣಬಸಪ್ಪ ಅವರು ತೋರಿದ ಪ್ರಯೋಗಶೀಲತೆ ಅವರನ್ನು ಓರ್ವ ಯಶಸ್ವಿ ಕೃಷಿಕನನ್ನಾಗಿಸಿದೆ ಅಂದ್ರೆ ಸುಳ್ಳಾಗದು.
ವರದಿ: ಶ್ರೀಕಾಂತ ಬಿರಾಳ, ನ್ಯೂಸ್ 18 ಕನ್ನಡ ಡಿಜಿಟಲ್, ಕಲಬುರಗಿ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ