ಕಲಬುರಗಿ: ಮೂಟೆ ಮೂಟೆ ತೊಗರಿ ಹೊತ್ತು ಸಾಗ್ತಿರೋ ಕಾರ್ಮಿಕರು. ಅಧಿಕ ಬೆಲೆ ಬಂದ ಖುಷಿಯಲ್ಲಿ ರೈತರು. ಹೌದು, ಸದ್ಯ ತೊಗರಿನಾಡಿನಲ್ಲಿ ಬೆಳೆ ಕಡಿಮೆಯಾದರೂ ಬಂದ ಫಸಲಿಗೆ ಮಾತ್ರ ಬಂಗಾರದ ಬೆಲೆ ಬಂದಿದೆ. ಏಕಾಏಕಿ ಬಂಪರ್ ಬೆಲೆಯಿಂದಾಗಿ ರೈತರೊಬ್ಬರ ಲಕ್ (Farmers Success Story) ಕೂಡಾ ಖುಲಾಯಿಸಿದೆ.
ಅತಿವೃಷ್ಟಿ ನಡುವೆ ಸಕ್ಸಸ್!
ಹೌದು, ಕಲಬುರಗಿಯ ಚಿತ್ತಾಪುರ ತಾಲೂಕಿನ ಭಂಕಲಗಾ ಗ್ರಾಮದ ರೈತ ರಾಮಲಿಂಗ ರೆಡ್ಡಿ ಪೊಲೀಸ್ ಪಾಟೀಲ್ ಅವರು 4.5 ಎಕರೆಯಲ್ಲಿ 45 ಕ್ವಿಂಟಾಲ್ ತೊಗರಿ ಬೆಳೆಯುವ ಮೂಲಕ ಎಲ್ಲರ ಗಮನಸೆಳೆದಿದ್ದಾರೆ. ಕಲಬುರಗಿಯ ರೈತರು ಬೆಳೆದ ತೊಗರಿ ಬೆಳೆ ಅತಿವೃಷ್ಟಿಯಿಂದ ನಾಶವಾಗಿದೆ. ಜೊತೆಗೆ ರೈತರು ನೆಟೆ ರೋಗದಿಂದ ಕಂಗಾಲಾಗಿದ್ದರೆ ರಾಮಲಿಂಗ ರೆಡ್ಡಿ ಮಾತ್ರ ಉತ್ತಮ ಫಸಲು ಪಡೆದು ಉತ್ತಮ ದರವನ್ನೂ ಪಡೆಯುತ್ತಿದ್ದಾರೆ.
ಕೃಷಿ ಇಲಾಖೆ ಮಾರ್ಗದರ್ಶನ
ಆರಂಭದಲ್ಲಿ ರೆಡ್ಡಿ ಅವರಿಗೂ ಬೆಳೆ ನಾಶವಾಗುವ ಆತಂಕವಿತ್ತು. ಆದರೆ, ಕೃಷಿ ಇಲಾಖೆಯಲ್ಲಿನ ಕೆಲ ಅಧಿಕಾರಿಗಳ ಸೂಚನೆಯಂತೆ ಜಿಆರ್ ಜಿ- 152 ಎಂಬ ಬೀಜ ತಂದು ಉಳುಮೆ ಮಾಡಿದ್ದರು. ನಿರೀಕ್ಷೆಯಂತೆ ಉತ್ತಮ ಫಸಲೂ ಬಂದಿದೆ. ಅದೂ ಬೇರೆ ಕಡಿಮೆ ಖರ್ಚಿನಲ್ಲಿ. ಭಂಕಲಗಾದಲ್ಲಿ ರಾಮಲಿಂಗರೆಡ್ಡಿ ಅವರು ಭರ್ಜರಿ ತೊಗರಿ ಬೆಳೆ ತೆಗೆದಿದ್ದಾರೆ ಎಂಬುದು ಗೊತ್ತಾಗುತ್ತಿದ್ದಂತೆ ಸುತ್ತಮುತ್ತಲಿನ ರೈತರು ಇವರ ಜಮೀನಿಗೆ ಭೇಟಿ ನೀಡುತ್ತಿದ್ದಾರೆ. ಕೆಲವರಂತೂ ಬೀಜವನ್ನು ಕೊಡಿ ಎಂದು ದುಂಬಾಲು ಬಿದ್ದಿದ್ದಾರೆ.
ಇದನ್ನೂ ಓದಿ: Kalaburagi: 2 ಎಕರೆಯಲ್ಲಿರೋ ಈ ಮನೆಗೆ 48 ಕೋಣೆ, 108 ಬಾಗಿಲು!
ಉತ್ತಮ ರೇಟು
ರಾಮಲಿಂಗ ರೆಡ್ಡಿ ಅವರು ಬೆಳೆದ 45 ಕ್ವಿಂಟಾಲ್ನಲ್ಲಿ ಈಗಾಗಲೇ 20 ಕ್ವಿಂಟಲ್ ಬೀಜಕ್ಕಾಗಿ ಬೇಡಿಕೆಯೂ ಬಂದಿದೆಯಂತೆ. ಸದ್ಯ ಮಾರುಕಟ್ಟೆಯಲ್ಲಿ ಕ್ವಿಂಟಲ್ಗೆ 7 ರಿಂದ 8 ಸಾವಿರ ರೂ. ಧಾರಣೆ ಇದೆ. ಜೊತೆಗೆ ಇನ್ನೂ ಹೆಚ್ಚಾಗುವ ಸಾಧ್ಯತೆಯೇ ಜಾಸ್ತಿಯಾಗಿದೆ.
ಇದನ್ನೂ ಓದಿ: Firozabad Fort: ವಿಶ್ರಾಂತಿಗೆಂದು ಕೋಟೆಯನ್ನೇ ಕಟ್ಟಿಸಿದ್ದ ಸುಲ್ತಾನ!
ಒಟ್ಟಿನಲ್ಲಿ ಸ್ಥಳೀಯ ತೊಗರಿ ಬೀಜ ತಳಿಯೊಂದು ರೈತರೊಬ್ಬರ ಕೈ ಹಿಡಿದಿದ್ದು ರೈತನ ಮೊಗದಲ್ಲಿ ಹರ್ಷ ಮೂಡುವಂತೆ ಮಾಡಿದೆ.
ವರದಿ: ಶ್ರೀಕಾಂತ್ ಬಿರಾಳ, ಕಲಬುರಗಿ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ