ಕಲಬುರಗಿ: ಜೋರಾದ ಸದ್ದಿನೊಂದಿಗೆ ತಮಟೆ (Tamate) ಬಾರಿಸುತ್ತಿರೋ ವ್ಯಕ್ತಿ, ಭಯ ಭಕ್ತಿಯಿಂದ ದೇವರ ದರ್ಶನ ಪಡೆಯುತ್ತಿರೋ ಭಕ್ತರು (Devotees) . ಇಲ್ಲಿ ದೇವರ (God) ಅಪ್ಪಣೆ ಇಲ್ಲದೆ ಏನೂ ನಡೆಯದು, ಎಲ್ಲಿ ತನಕ ಅಂದ್ರೆ ಮದ್ವೆ (Wedding) ಆಗ್ಬೇಕೂಂದ್ರು ಈ ದೇವಿಯ ಅಪ್ಪಣೆ ಕಡ್ಡಾಯ.. ಅದಿಲ್ಲದೇ ಹೋದ್ರೆ ಏನಾಗುತ್ತೆ ಅಂತೀರಾ? ಅದಕ್ಕೆ ಉತ್ತರ ಇಲ್ಲಿದೆ ನೋಡಿ..
ದೇವರ ಅಪ್ಪಣೆ ಕಡ್ಡಾಯ
ಯೆಸ್, ಇದು ಕಲಬುರಗಿಯ ಜಿಲ್ಲೆಯ ಕೆಸರಟಗಿ ಗ್ರಾಮ. ಇಲ್ಲಿನ ಗ್ರಾಮ ದೇವತೆ, ಆರಾಧ್ಯ ದೇವತೆ ಶ್ರೀಸಮಗಂಗಮ್ಮ ಆಜ್ಞೆ ಇಲ್ಲದೇ ಏನೂ ನಡೆಯದು. ಯಾವುದೇ ಶುಭ ಕಾರ್ಯ ನಡೆಯಬೇಕಿದ್ದರೆ, ಈ ದೇವಿಯ ಅಪ್ಪಣೆ ಬೇಕೇ ಬೇಕು. ಈ ಸಂಪ್ರದಾಯವನ್ನ ಕೆಸರಟಗಿ ಗ್ರಾಮದ ಜನ ಇಂದಿಗೂ ಪಾಲಿಸಿಕೊಂಡು ಬಂದಿದ್ದಾರೆ. ಇಲ್ಲಿ ಯುವಕ, ಯುವತಿಯರ ಮದುವೆಗೂ ದೇವರ ಅಪ್ಪಣೆ ಪಡೆಯಲೇಬೇಕು. ಒಂದು ವೇಳೆ ದೇವರು ಮದುವೆಗೆ ಅಪ್ಪಣೆ ಕೊಡದೇ ಹೋದ್ರೇ ಮದುವೆ ಆಗದೇ ಹಾಗೇ ಇರಬೇಕು.
ದೇವಿ ಮಾತೇ ಫೈನಲ್!
ಕಲಬುರಗಿ ನಗರದಿಂದ ಕೇವಲ ಏಳು ಕಿಲೋಮೀಟರ್ ದೂರದಲ್ಲಿ ಇರೋ ಕೆಸರಟಗಿ ಗ್ರಾಮದಲ್ಲಿ ಇಂತಹದ್ದೊಂದು ವಿಶೇಷ ಪದ್ದತಿ ಇದ್ದು ಅದು ಬಹು ಕಾಲದಿಂದಲೂ ನಡೆದುಕೊಂಡು ಬಂದಿದೆ. ಇಲ್ಲಿಯ ಜನರಿಗೆ ದೇವಿಯ ಮಾತೇ ವೇದವಾಕ್ಯ. ಯಾರೊಬ್ಬರು ತಾಯಿಯ ಆಜ್ಞೆ ಮೀರೋದಿಲ್ಲ.
ದೇವಿ ಹೇಳಿದ ದಿಕ್ಕಲ್ಲೇ ಅನ್ವೇಷಣೆ
ಸಮಗಂಗಮ್ಮ ದೇವಿಯ ಬಳಿ ಹೋಗಿ ಹಿರಿಯರು ತಮ್ಮ ಮಕ್ಕಳ ಮದುವೆ ಬಗ್ಗೆ ಕೇಳ್ತಾರೆ. ಅವಳು ಯಾವ ದಿಕ್ಕಿಗೆ ಹೋಗಿ ಹೆಣ್ಣು ಅಥವಾ ಗಂಡನ್ನು ನೋಡು ಅಂತ ಹೇಳ್ತಾಳೆಯೋ ಅದೇ ದಿಕ್ಕಿಗೆ ಹೋಗಿ ಹುಡುಕಬೇಕು. ಒಂದು ವೇಳೆ ಆ ದಿಕ್ಕಿಗೆ ಹೆಣ್ಣು, ಗಂಡು ಸಿಗದೇ ಹೋದ್ರೆ ಮತ್ತೊಂದು ಬಾರಿ ದೇವಿ ಹತ್ತಿರ ಬಂದು ಹೇಳಿಕೆ ಕೇಳ್ತಾರೆ. ಮತ್ತೆ ಆಕೆ ಹೇಳಿದ ದಿಕ್ಕಿಗೆ ಹೋಗಬೇಕು. ಒಂದು ವೇಳೆ ಆಕೆ ಮದುವೆಗೆ ಅಪ್ಪಣೆ ಕೊಡದೇ ಹೋದ್ರೆ ಕಾಯಲೇಬೇಕು. ಇದು ಬಹು ಕಾಲದಿಂದಲೂ ನಡೆದುಕೊಂಡು ಬಂದ ಪದ್ದತಿ.
ಏನೇ ಇದ್ರೂ ದೇವಿಯ ಆಜ್ಞೆ
ಇನ್ನೂ ಮದುವೆಗಷ್ಟೇ ಸೀಮಿತವಲ್ಲದೇ ಪ್ರತಿಯೊಂದನ್ನೂ ಕೂಡ ಗ್ರಾಮಸ್ಥರು ಈ ಸಮಗಂಗಮ್ಮ ದೇವಿಗೆ ಕೇಳಿಯೇ ಕೆಲಸ ಮಾಡ್ತಾರೆ. ಮನೆಯಲ್ಲಿ ಯಾವುದೇ ಒಳ್ಳೆಯ ಕಾರ್ಯಗಳು ಆಗ್ಬೇಕಾದ್ರೆ ಮೊದಲು ದೇವಿ ಅಪ್ಪಣೆ ಪಡೆದು ಇಲ್ಲಿಯ ಜನರು ಕೆಲಸ ಮಾಡ್ತಾರೆ. ಇನ್ನೂ ಮುಂಗಾರು ಮತ್ತು ಹಿಂಗಾರು ಬೆಳೆಗಳನ್ನು ಬಿತ್ತಬೇಕಾದ್ರೂ ದೇವಿ ಹೇಳಿದ ದಿನದಂದೇ ಬಿತ್ತುವ ಕಾರ್ಯ ಶುರು ಮಾಡ್ತಾರೆ.
ಕೆಸರಟಿಗಿ ಗ್ರಾಮದಲ್ಲಿ ದೇವಿ ಅಪ್ಪಣೆ ಇಲ್ಲದೇ ಯಾರೂ ಯಾವದೂ ಕೆಲಸಕ್ಕೆ ಕೈ ಹಾಕಲ್ಲ. ಒಂದು ವೇಳೆ ಅಪ್ಪಿತಪ್ಪಿ ಆಕೆಯನ್ನು ಕೇಳದೇ ಕೆಲಸ ಮಾಡಿದ್ರೆ ಕೆಡಕಾಗುತ್ತೇ ಎನ್ನೋ ನಂಬಿಕೆ ಗ್ರಾಮಸ್ಥರದ್ದು. ಒಟ್ಟಿನಲ್ಲಿ ಈ ನಂಬಿಕೆ ವಿಚಿತ್ರವೆನೆಸಿದರೂ ಈ ಭಾಗದ ಜನ ಅದನ್ನ ಪಾಲಿಸಿಕೊಂಡು ಬಂದಿರುವುದು ಇಲ್ಲಿನ ವಿಶೇಷ.
ವರದಿ: ಶ್ರೀಕಾಂತ್ ಬಿರಾಳ, ನ್ಯೂಸ್18 ಕನ್ನಡ ಡಿಜಿಟಲ್, ಕಲಬುರಗಿ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ