ಕಲಬುರಗಿ: ಭಕ್ತರ ಜೈಕಾರದ ನಡುವೆ ಗ್ರಾಮದಲ್ಲಿ ಹಾದು ಹೋದ ಪಲ್ಲಕ್ಕಿ ಮೆರವಣಿಗೆ. ಸಡಗರ, ಸಂಭ್ರಮಕ್ಕೆ ಸಾಕ್ಷಿಯಾಯಿತು ಯಲ್ಲಮ್ಮ ತಾಯಿಯ ಜಾತ್ರೆ. ಭಕ್ತಿಯ ಕಡಲಲ್ಲಿ ಮಿಂದೆದ್ದು ಭಕ್ತರು, ದೇವರ ದರ್ಶನದಿಂದ ಪುನೀತರಾದರು. ಹೌದು, ಈ ಎಲ್ಲ ದೃಶ್ಯ ಕಂಡು ಬಂದಿದ್ದು ಕಲಬುರಗಿಯ (Kalaburagi News) ಚಿತ್ತಾಪುರ ತಾಲೂಕಿನ ವಾಡಿಯಲ್ಲಿ. ಇಲ್ಲಿನ ಪ್ರಸಿದ್ದ ಶ್ರೀ ರೇಣುಕಾ ಯಲ್ಲಮ್ಮ ದೇವಿಯ (Sri Renuka Yellamma Devi) 11ನೇ ಜಾತ್ರಾ ಮಹೋತ್ಸವ ಅದ್ದೂರಿಯಾಗಿ ಜರುಗಿತು. ಭಕ್ತರೆಲ್ಲರೂ ಒಟ್ಟಾಗಿ ವಿಜೃಂಭಣೆಯಿಂದ ಪಲ್ಲಕ್ಕಿ ಮೆರವಣಿಗೆ ನಡೆಸಿ ಭಂಡಾರದ ಓಕುಳಿಯಲ್ಲಿ ಮಿಂದೆದ್ದರು.
ಜಾಂಬವೀರ್ ಕಾಲೋನಿಯಲ್ಲಿರುವ ಮಾತಂಗ ಸಮುದಾಯದ ಆರಾಧ್ಯ ದೇವಿ ಶ್ರೀ ರೇಣುಕಾ ಯಲ್ಲಮ್ಮ ದೇವಿಯ ಜಾತ್ರೆ ಇಡೀ ಗ್ರಾಮದಲ್ಲಿ ಹಬ್ಬದ ವಾತಾವರಣ ನಿರ್ಮಿಸಿತು. ಎರಡು ದಿನಗಳ ಕಾಲ ನಡೆಯುವ ಜಾತ್ರಾ ಮಹೋತ್ಸವದಲ್ಲಿ ವಿವಿಧ ಸಾಂಸ್ಕೃತಿಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳ ಜೊತೆಗೆ ಭಕ್ತರ ಸಂಭ್ರಮವೂ ಮುಗಿಲು ಮುಟ್ಟಿತ್ತು.
ಪಲ್ಲಕ್ಕಿ ಮೆರವಣಿಗೆ
ಜಾತ್ರೆ ಹಿನ್ನೆಲೆ ಯಲ್ಲಮ್ಮದೇವಿಗೆ ರುದ್ರಾಭಿಷೇಕ, ಮಹಾಪೂಜೆ, ಉಡಿ ತುಂಬುವ ಕಾರ್ಯಕ್ರಮ ಜರುಗಿದವು. ಬಳಿಕ ಪಟ್ಟಣದಿಂದ ಎಂಟು ಕಿ.ಮೀ. ದೂರದಲ್ಲಿರುವ ಚಾಮನೂರು ಗ್ರಾಮಕ್ಕೆ ತೆರಳಿ ಭೀಮಾನದಿಯಲ್ಲಿ ಗಂಗಾಸ್ನಾನ ಕಾರ್ಯಕ್ರಮ ನೆರವೇರಿಸಲಾಯಿತು. ನಂತರ ಚಾಮನೂರು ಗ್ರಾಮದಿಂದ ದೇವಸ್ಥಾನದ ವರೆಗೆ ಪಲ್ಲಕ್ಕಿ ಮೆರವಣಿಗೆ ನಡೆಸಲಾಯಿತು. ಈ ಸಂದರ್ಭ ಗ್ರಾಮದುದ್ದಕ್ಕೂ ಜನರು ನೆರೆದು ಜೈಕಾರ ಮೊಳಗಿಸಿದರು.
ಅನ್ನದಾಸೋಹ
ಪಲ್ಲಕ್ಕಿ ಆಗಮನದ ಬಳಿಕ ವಿವಿಧ ಕಡೆಗಳಿಂದ ಆಗಮಿಸಿದ ಭಕ್ತರು ಪರಶುರಾಮ ಮತ್ತು ಮಾತಂಗಿ ದೇವಿಯ ದರ್ಶನ ಪಡೆದು ದೀರ್ಘದಂಡ ನಮಸ್ಕಾರ ಹಾಕಿ ಹರಕೆ ತೀರಿಸಿ ಪುನೀತರಾದರು. ಜಾತ್ರಾ ಮಹೋತ್ಸವ ಹಿನ್ನೆಲೆ ಶ್ರೀ ರೇಣುಕಾ ಯಲ್ಲಮ್ಮ ದೇವಿ ಸೇವಾ ಸಮಿತಿ ವತಿಯಿಂದ ಅನ್ನದಾಸೋಹವೂ ಏರ್ಪಡಿಸಲಾಗಿತ್ತು. ದೇವಸ್ಥಾನಕ್ಕೆ ಆಗಮಿಸಿದ ಭಕ್ತರು ಪ್ರಸಾದವನ್ನು ಸೇವಿಸಿ ದೇವಿಯ ಕೃಪೆಗೆ ಪಾತ್ರರಾದರು.
ವರದಿ: ಶ್ರೀಕಾಂತ್ ಬಿರಾಳ, ನ್ಯೂಸ್18 ಕನ್ನಡ ಕಲಬುರಗಿ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ