ಕಲಬುರಗಿ: ಎಲ್ಲಿ ನೋಡಿದ್ರು ಗೋವುಗಳ ಹಿಂಡು, ಗೋಪಾಲನಂತೆ ಆರೈಕೆ ಮಾಡೋ ಶ್ವೇತಧಾರಿ ಸ್ವಾಮೀಜಿ. ಧಾರ್ಮಿಕ, ಆಧ್ಯಾತ್ಮಿಕ ಮಾತ್ರವಲ್ಲ ಗೋಸೇವೆಗೂ (Go Seva) ಈ ಆಶ್ರಮ ಹೆಸರುವಾಸಿ. ಗೋವು ನೀಡೋ ಹಾಲಿನ ಸಮರ್ಪಕ ಬಳಕೆ, ಬಡ ರೈತರಿಗೆ ಎತ್ತುಗಳ ಕೊಡುಗೆ ಮೂಲಕ ಕೃಷಿಗೂ (Farmer's) ಪ್ರೋತ್ಸಾಹ. ಇಂತಹ ಗೋಶಾಲೆ (Goshala In Kalaburagi) ಇರೋದಾದರೂ ಎಲ್ಲಿ ಅಂತೀರಾ? ಹೇಳ್ತೀವಿ ನೋಡಿ.
ಇದು ಕಲಬುರಗಿ ಜಿಲ್ಲೆಯ ಕಮಲಾಪುರ ತಾಲೂಕಿನ ಸೊಂತ ಗ್ರಾಮದಲ್ಲಿರುವ ಶಂಕರಲಿಂಗ ಮಹಾರಾಜರ ಆಶ್ರಮದ ಗೋಶಾಲೆ. ಇಲ್ಲಿನ ಪೀಠಾಧ್ಯಕ್ಷರಾದ ಅಭಿನವ ಶರಣ ಶಂಕರಲಿಂಗ ಮಹಾರಾಜರು ಪಕ್ಕಾ ಗೋಪ್ರೇಮಿ. ಇವರು ಧಾರ್ಮಿಕ, ಆಧ್ಯಾತ್ಮಿಕ ಹಾಗೂ ಇತರೆ ಸಾಮಾಜಿಕ ಚಟುವಟಿಗಳ ಜೊತೆಗೆ ಗೋ ಸೇವೆಯಲಿಯೂ ಸಕ್ರಿಯವಾಗಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.
ಅತೀ ಕಡಿಮೆ ಸಮಯದಲ್ಲಿ ಮಾದರಿ ಗೋಶಾಲೆ
ಗೋವುಗಳ ಸಂರಕ್ಷಣೆಯ ಉದ್ದೇಶದಿಂದ ಆಶ್ರಮದ ಬಳಿ ಜಮೀನು ಖರೀದಿಸಿ ಪುಣ್ಯಕೋಟಿ ಡಿಎಂಎಸ್ ಎಂಬ ಗೋಶಾಲೆಯನ್ನು ಸ್ಥಾಪಿಸಿದ್ದಾರೆ. ಈ ಗೋಶಾಲೆಯಲ್ಲಿ ವಿವಿಧ ದೇಶಿ ತಳಿಯ ಗೋವುಗಳಿವೆ. ಪ್ರತಿನಿತ್ಯವೂ ಅತಿ ಹೆಚ್ಚು ಸಮಯವನ್ನು ಸ್ವಾಮೀಜಿ ಗೋಶಾಲೆಯಲ್ಲಿ ಕಳೆಯುತ್ತಾರೆ. ಕಳೆದ ಐದು ವರ್ಷಗಳ ಹಿಂದಷ್ಟೇ ಗೋ ಶಾಲೆಯನ್ನು ಆರಂಭಿಸಿದ್ದು, ತಮಗೆ ಸಿಕ್ಕ ಅಲ್ಪ ಸಮಯದಲ್ಲಿಯೇ ಮಾದರಿ ಗೋಶಾಲೆಯನ್ನಾಗಿಸಿದ್ದಾರೆ.
ಕಮರ್ಷಿಯಲ್ ಉದ್ದೇಶಕ್ಕೆ ಹಾಲು ಬಳಸಲ್ಲ
ಪ್ರಸ್ತುತ ಪುಣ್ಯಕೋಟಿ ಗೋಶಾಲೆಯಲ್ಲಿ 200ಕ್ಕೂ ಅಧಿಕ ಗೋವುಗಳಿವೆ. ವಿಶೇಷ ಅಂದ್ರೆ ಗೋವುಗಳ ಹಾಲನ್ನ ಸ್ವಾಮೀಜಿ ಯಾವುದೇ ಕಮರ್ಷಿಯಲ್ ಉದ್ದೇಶಕ್ಕೆ ಬಳಸಿಲ್ಲ. ಬದಲಿಗೆ ಹಾಲನ್ನು ದಾಸೋಹಕ್ಕೆ, ಆಶ್ರಮದ ಶಾಲಾ ಮಕ್ಕಳಿಗೆ ಹಾಗೂ ಆಶ್ರಮಕ್ಕೆ ಆಗಮಿಸುವ ಭಕ್ತರಿಗೆ ನೀಡುತ್ತಾರೆ. ಮುಂಬರುವ ದಿನಗಳಲ್ಲಿ ಗೋವಿನ ಗೊಬ್ಬರವನ್ನು ಸಾವಯವ ಕೃಷಿಗೆ ಬಳಸುವ ಆಲೋಚನೆಯನ್ನು ಸ್ವಾಮೀಜಿ ಹೊಂದಿದ್ದಾರೆ.
ಬಡ ರೈತರಿಗೆ ಸಹಾಯಹಸ್ತ
ಅಷ್ಟೇ ಅಲ್ಲ, ಸುತ್ತ ಮುತ್ತಲಿನ ಹಳ್ಳಿಯ ಬಡ ರೈತರು ತಮ್ಮ ಬಳಿ ಉಳುಮೆಗೆ ಎತ್ತು ಕೊಳ್ಳಲು ಸಾಧ್ಯವಾಗದಿದ್ದಾಗ ಪುಣ್ಯಕೋಟಿ ಗೋಶಾಲೆಯಿಂದ ರೈತರಿಗೆ ಉಳುಮೆಗಾಗಿ ಉಚಿತವಾಗಿ ನೀಡುತ್ತಾರೆ. ಹೀಗೆ ರೈತಾಪಿ ವರ್ಗಕ್ಕೂ ಈ ಗೋಶಾಲೆ ಸಹಕಾರಿಯಾಗಿದೆ.
ಇದನ್ನೂ ಓದಿ: Hirodeshwar Temple: ಮಿನಿ ಕುಕ್ಕೆ ಕಲ್ಯಾಣ ಕರ್ನಾಟಕದ ಈ ಕ್ಷೇತ್ರ, ಇಲ್ಲೇ ಬೀಬಿ ಫಾತಿಮಾ ಗದ್ದುಗೆಗೂ ಪೂಜೆ!
ಅನಾಥ, ಗಾಯಾಳು ಗೋವುಗಳಿಗೆ ಆಶ್ರಯ
ಈ ಸ್ವಾಮೀಜಿ ಎಷ್ಟೇ ಬ್ಯುಸಿ ಇದ್ದರೂ ಗೋವುಗಳ ಜೊತೆ ಬೆರೆಯದೇ ಇರಲ್ಲ. ಕರುಗಳನ್ನು ಮುದ್ದು ಮಾಡದೇ ಇರೋದೇ ಇಲ್ಲ. ಹೀಗೆ ಧಾರ್ಮಿಕ ಚಟುವಟಿಕೆ ಜೊತೆಗೆ ಗೋವುಗಳ ಜೊತೆಗೆ ಸ್ವಾಮೀಜಿಗೆ ವಿಶೇಷ ಪ್ರೀತಿ. ಆದರೆ ಇದುವರೆಗೂ ಸರ್ಕಾರದಿಂದ ನಯಾ ಪೈಸಾ ಸಹಾಯವನ್ನು ಪಡೆಯದೆಯೇ ಸ್ವಾಮೀಜಿಗಳು ಈ ಗೋಶಾಲೆಯನ್ನು ಮಾದರಿ ಗೋಶಾಲೆಯನ್ನಾಗಿ ಕಟ್ಟಿ ಬೆಳೆಸಿದ್ದಾರೆ. ಅದೆಷ್ಟೋ ಅನಾಥ, ಗಾಯಾಳು ಗೋವುಗಳಿಗೆ ಆಶ್ರಯದಾತರಾಗಿದ್ದಾರೆ.
ಇದನ್ನೂ ಓದಿ: Shiva Temple: ಎಲ್ಲೆಡೆ ಬರಗಾಲ ಬಂದ್ರೂ ಇಲ್ಲಿ ಮಾತ್ರ ನೀರು ಬತ್ತಲ್ಲ! ಶಿವಲಿಂಗದ ಅಡಿಯಿಂದಲೇ ಒಸರುತ್ತಂತೆ ಜೀವಜಲ!
ಇಂತಹ ಗೋಶಾಲೆಗಳಿಗೆ ಸರ್ಕಾರದಿಂದ ಏನಾದರೂ ನೆರವು ಸಿಕ್ಕಲ್ಲಿ ಇನ್ನಷ್ಟು ಗೋಮಾತೆ ಸೇವೆ ಸಾಧ್ಯವಾಗಬಹುದು ಅನ್ನೋ ಅಂಬೋಣ ಸ್ವಾಮೀಜಿಗಳದ್ದಾಗಿದೆ.
ವರದಿ: ಶ್ರೀಕಾಂತ್ ಬಿರಾಳ, ಕಲಬುರಗಿ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ