ತಮಟೆ ಸದ್ದು, ತಾಳಕ್ಕೆ ತಕ್ಕ ಕುಣಿತ.. ಸುತ್ತಲಿರೋ ಮಕ್ಕಳಿಗೆ ಖುಷಿ. ಜೊತೆಗೆ ಕೊಂಚ ಆತಂಕ. ಕುಣಿಯುತ್ತಾ ಅಟ್ಟಾಡಿಸೋ ವೇಷಧಾರಿ ಮನುಷ್ಯ. ಅಷ್ಟಕ್ಕೂ ಈ ಕಲೆ ಯಾವುದು ಅಂತೀರಾ? ಅದುವೇ ಪೋತರಾಜ ಕುಣಿತ. ಈ ವಿಶಿಷ್ಟ ಜಾನಪದ ಕಲೆ (Potraj Art) ಬಗ್ಗೆ ಅದೆಷ್ಟೋ ಜನರಿಗೆ ತಿಳಿದೇ ಇಲ್ಲ. ಪೋತರಾಜ ಅನ್ನೋ ಕಲೆಗೆ ಅದರದ್ದೇ ಆದ ಭವ್ಯ ಇತಿಹಾಸವಿದೆ. ಪೋತರಾಜ ವೇಷಭೂಷಣ ಧರಿಸೋ ವ್ಯಕ್ತಿ ಹೀಗೆ ಮೈಮೇಲೆ ದೇವರು ಆವಾಹಿಸಿಕೊಂಡಂತೆ ಕುಣಿಯುತ್ತಾ ಮನರಂಜನೆ ನೀಡ್ತಾರೆ. ತಮಟೆ ಸದ್ದು ಕುಣಿತಕ್ಕೆ (Potraj Dance) ಸಾಥ್ ನೀಡಿದ್ರೆ, ವಿಶಿಷ್ಟ ವೇಷಭೂಷಣ ಮುದ ನೀಡುತ್ತೆ. ಈ ಪೋತರಾಜ ಕುಣಿತವನ್ನ ಮುಂದಿನ ಜನಾಂಗಕ್ಕೂ ಪರಿಚಯಿಸೋಕೆ ಚಿತ್ರ ಕಲಾವಿದನೋರ್ವ (Kalaburagi Artist) ಪೋತರಾಜ ವೇಷಭೂಷಣ ತೊಟ್ಟು ಕುಣಿಯುತ್ತಾ ಹಳ್ಳಿಗಳಿಗೆ, ಶಾಲಾ ಕಾಲೇಜುಗಳಿಗೆ ತೆರಳಿ ಈ ಕಲೆಯನ್ನ ಪರಿಚಯಿಸ್ತಿದ್ದಾರೆ.
ಯೆಸ್.. ಇವರ ಹೆಸರು ವಿಶ್ವನಾಥ ತೋಟ್ನಳ್ಳಿ ಅಂತ. ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ತೋಟ್ನಳ್ಳಿ ಗ್ರಾಮದ ನಿವಾಸಿ. ಮೂಲತ: ಚಿತ್ರಕಲಾವಿದನಾಗಿರುವ ವಿಶ್ವನಾಥ, ಕಲಬುರಗಿಯ ವಿಜುವಲ್ ಆಫ್ ಫೈನ್ ಆರ್ಟ್ ಕಾಲೇಜಿನಲ್ಲಿ ಮಾಸ್ಟರ್ ಆಫ್ ಫೈನ್ ಆರ್ಟ್ ಪದವಿ ಪಡೆದಿದ್ದಾರೆ.
ಇದನ್ನೂ ಓದಿ: Kalaburagi: ಬಡಮಕ್ಕಳ ದ್ರೋಣಾಚಾರ್ಯ ಕಲಬುರಗಿಯ ಈ ಡಾನ್ಸ್ ಮಾಸ್ಟರ್!
ಪೋತರಾಜ ಕುಣಿತವೇ ಇವರ ಬದುಕು!
ಆದರೆ ಜಾನಪದ ಕಲೆ ಮೇಲಿನ ಆಸಕ್ತಿ ಅವರಲ್ಲಿ ಇಂತಹ ವಿಶಿಷ್ಟ ಪ್ರವೃತ್ತಿಗೆ ನಾಂದಿ ಹಾಡಿದೆ. ಹೀಗಾಗಿ, ನಶಿಸಿ ಹೋಗುತ್ತಿರುವ ಬುಡಕಟ್ಟು ಜನಾಂಗದ ಪೋತರಾಜ ಕುಣಿತವನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಸ್ವತ: ತಾವೇ ಪೋತರಾಜ ಕುಣಿತದ ವೇಷಭೂಷಣಗಳನ್ನು ತೊಟ್ಟು ರಂಜಿಸ್ತಿದ್ದಾರೆ. ಇವರ ಪೋತರಾಜ ಕುಣಿತಕ್ಕೆ ಹಲವು ಪ್ರಶಸ್ತಿಗಳೂ ಹುಡುಕಿ ಬಂದಿವೆ.
ಸಾಕಷ್ಟು ಜನಪದ ಕಲೆಯಲ್ಲಿ ಪ್ರವೀಣ
ಇನ್ನು ಕೇವಲ ಪೋತರಾಜ ಕುಣಿತವನ್ನಲ್ಲದೇ ಹಲಿಗೆ ವಾದನದಲ್ಲಿ ವಿಶ್ವನಾಥ ಹೆಸರು ಮಾಡಿದ್ದಾರೆ. ಜಾನಪದ ಕಲೆಗಳಲ್ಲಿ ಒಂದಾಗಿರುವ ನಂದಿಕೋಲು ಕುಣಿತ ಸೇರಿದಂತೆ ಸಾಕಷ್ಟು ಜಾನಪದ ಕಲೆಗಳು ಕರಗತ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ: Viral News: ಮರದಲ್ಲಿ ಮೂಡಿದ ನಂದಿ, ಕಡಿಯೋಕೆ ಬಂದ JCB ಹಾಳಾಯ್ತು!
ಇವರ ಕಲಾಸಕ್ತಿಗೆ ಗುಲಬರ್ಗಾ ವಿಶ್ವವಿದ್ಯಾಲಯ ರಾಜ್ಯೋತ್ಸವ ಪ್ರಶಸ್ತಿ, ಮೈಸೂರು ವಿವಿಯಿಂದ ಪ್ರಶಸ್ತಿ ಸೇರಿದಂತೆ ಸಾಕಷ್ಟು ಸಂಘ-ಸಂಸ್ಥೆಗಳಿಂದಲೂ ಪ್ರಶಸ್ತಿಗಳು ಸಂದಿವೆ. ಒಟ್ಟಿನಲ್ಲಿ ಅಳಿವಿನಂಚಿನಲ್ಲಿರುವ ಜಾನಪದ ಕಲೆಯನ್ನ ಉಳಿಸಿ ಬೆಳೆಸಲು ವಿಶ್ವನಾಥ ಅವರು ಮಾಡುತ್ತಿರುವ ಪ್ರಯತ್ನಕ್ಕೆ ಶಹಬ್ಬಾಷ್ ಎನ್ನಲೇಬೇಕು.
ವರದಿ: ಶ್ರೀಕಾಂತ ಬಿರಾಳ, ನ್ಯೂಸ್18 ಕನ್ನಡ ಕಲಬುರಗಿ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ