ಕಲಬುರಗಿ: ಅಳಿದುಳಿದ ಕಟ್ಟಡ, ಅದೇನೋ ಇತಿಹಾಸ ಸಾರುವ ಅವಶೇಷ. ಅಲ್ಲೇ ಹತ್ತಿರದಲ್ಲಿ ನಾಗಾವಿ ಯಲ್ಲಮ್ಮ (Nagavi Yellamma Temple) ದೇಗುಲ. ಹೌದು, ಈ ಪಾಳು ಬಿದ್ದ ಕಟ್ಟಡ ಒಂದು ಕಾಲದ ವಿದ್ಯಾಕೇಂದ್ರ. ಸಾವಿರಾರು ಮಕ್ಕಳಿಗೆ ಶಿಕ್ಷಣ ಧಾರೆಯೆರೆದ (Education Centre) ಪುಣ್ಯತಾಣ. ಹಾಗಿದ್ರೆ ಏನಿದು ಕುರುಹುಗಳು? ಏನಿದರ ವಿಶೇಷ? ಎಲ್ಲವನ್ನೂ ಹೇಳ್ತೀವಿ ನೋಡಿ.
ಪ್ರಾಚೀನ ವಿಶ್ವವಿದ್ಯಾಲಯ
ಯೆಸ್, ಹೀಗೆ ಅಳಿದುಳಿದು ಅವಶೇಷಗಳಾಗಿರೋ ಈ ಕಟ್ಟಡ ಒಂದು ಕಾಲದ ವಿಶ್ವವಿದ್ಯಾಲಯ ಅಂದ್ರೆ ನೀವ್ ನಂಬ್ಲೇಬೇಕು. ಅದೆಷ್ಟೋ ಮಕ್ಕಳಿಗೆ ವಿದ್ಯಾದಾನ ಮಾಡಿದ ಈ ಕಟ್ಟಡ ಈಗ ಮಾತ್ರ ಬರೇ ಪಾಳುಬಿದ್ದ ಕೊಂಪೆಯಂತಿದೆ!
ಹೌದು, ಇದು ರಾಷ್ಟ್ರಕೂಟರ ಕಾಲದ ಪ್ರಸಿದ್ದ ಶೈಕ್ಷಣಿಕ ಕೇಂದ್ರ ನಾಗಾವಿ ವಿಶ್ವವಿದ್ಯಾಲಯ. ಕರ್ನಾಟಕದ ಪ್ರಾಚೀನ ವಿದ್ಯಾ ಕೇಂದ್ರಗಳಲ್ಲಿ ಒಂದು ಅನ್ನೋ ಉಲ್ಲೇಖವಿದೆ.
ನಾಮಾವಶೇಷದ ಆತಂಕದಲ್ಲಿ ನಾಗಾವಿ
ಇಂದಿಗೂ ಇದರ ಕುರುಹುಗಳು ಕಲಬುರಗಿ ಜಿಲ್ಲೆಯ ಚಿತ್ತಾಪೂರ ತಾಲೂಕಿನ ನಾಗಾವಿಯಲ್ಲಿದೆ. ತಕ್ಷಶಿಲೆ, ನಳಂದ ರೀತಿಯಲ್ಲಿಯೇ ಈ ವಿಶ್ವವಿದ್ಯಾಲಯವೂ ಇತ್ತು ಅನ್ನೋದು ವಿಶೇಷ.
ಚಾಲುಕ್ಯರ 6ನೇ ವಿಕ್ರಮಾದಿತ್ಯನ ಕಾಲದಲ್ಲಿ ಮಹಾಮಂಡಳೇಶ್ವರನಾಗಿದ್ದ ಹೈಹಯ ವಂಶದ ಲೋಕರಸನು ಚಿತ್ತಾಪೂರದಲ್ಲಿ ಆಡಳಿತವನ್ನು ನಡೆಸುತ್ತಿದ್ದ ಎಂಬ ಕುರಿತು ಶಾಸನಗಳಲ್ಲಿ ಉಲ್ಲೇಖವಾಗಿದೆ. ಅಂತಹ ಚಿತ್ತಾಪುರದಲ್ಲಿದ್ದ ನಾಗಾವಿ ವಿಶ್ವವಿದ್ಯಾಲಯ ಅಳಿದು ಹೋಗಿರೋ ಕುರಹುಗಳು ಬಿಟ್ಟರೇ ಅಲ್ಲಿ ಮತ್ತೇನೂ ಕಾಣಿಸಲ್ಲ.
ಆ ಕಾಲದಲ್ಲಿ ಹೀಗಿತ್ತು ಈ ವಿಶ್ವವಿದ್ಯಾಲಯ!
ಅಂದು ನಾಗಾವಿಯ ಒಂದು ಆವರಣದಲ್ಲಿ 257 ವಿದ್ಯಾರ್ಥಿಗಳು, ಮತ್ತೊಂದರಲ್ಲಿ 400 ವಿದ್ಯಾರ್ಥಿಗಳು ವಿದ್ಯಾಭ್ಯಾಸ ಪಡೆಯುತ್ತಿದ್ರು. 52 ಜನ ವಿದ್ವಾಂಸರಿದ್ದರು. ಮೂವರು ವಿದ್ವಾಂಸರು ವೇದಗಳನ್ನು, ಮೂವರು ಶಾಸನಗಳನ್ನು ಹೇಳಿಕೊಡುತ್ತಿದ್ರು. ಅವರು ಭಟ್ಟದರ್ಶನ, ವ್ಯಾಕರಣ ಮತ್ತು ಪ್ರಭಾಕರಗಳನ್ನು ಬೋಧಿಸುತ್ತಿದ್ರು. ಇನ್ನು 6 ಜನರು ಗ್ರಂಥ ಭಂಡಾರಿಕರೂ ಒಬ್ಬ. ಇವರಿಗೆ ಭೂಮಿ ರೂಪದಲ್ಲಿ ವೇತನ ಪಾವತಿ ಆಗ್ತಿತ್ತಂತೆ.
ಇದನ್ನೂ ಓದಿ: Kalaburagi: ಕ್ರಾಂತಿ ಗೀತೆಯೇ ಗಟ್ಟಿಮೇಳ! ಕಲಬುರಗಿಯಲ್ಲಿ ವಿಶಿಷ್ಟ ಮಂತ್ರ ಮಾಂಗಲ್ಯ
ಪ್ರಸಿದ್ಧಿ ಪಡೆದಿದ್ದ ನಾಗಾವಿ
ಇಡೀ ವಿಶ್ವದಲ್ಲಿಯೇ ನಾಗಾವಿ ವಿಶ್ವವಿದ್ಯಾಲಯ ಪ್ರಸಿದ್ದಿಯಾಗಿತ್ತು. ಬೇರೆ ಬೇರೆ ಕಡೆಯಿಂದ ಇಲ್ಲಿ ವಿದ್ಯೆ ಪಡೆಯಲು ಬರ್ತಿದ್ರು ಅನ್ನೋ ಇತಿಹಾಸವಿದೆ. ಅಲ್ಲೇ ಇರುವ ನಾಗಾವಿ ಯಲ್ಲಮ್ಮ ದೇವಸ್ಥಾನ ಜನರ ನೆಚ್ಚಿನ ಆರಾಧ್ಯ ದೇವತೆಯಾಗಿದ್ದಾಳೆ.
ಇದನ್ನೂ ಓದಿ: Kalaburagi: ಕಿಡ್ನಿ ರೋಗಿಗಳಿಗೆ ಆಸರೆಯಾದ ಕಲಬುರಗಿಯ ಉದ್ಯಮಿ, ಇಲ್ಲಿ ಸಿಗುತ್ತೆ ಉಚಿತ ಡಯಾಲಿಸಿಸ್
ಇಲ್ಲಿಗೆ ಹೀಗೆ ಬನ್ನಿ (ಚಿತ್ರಕೃಪೆ: ಗೂಗಲ್ ಮ್ಯಾಪ್ಸ್)
ಇಲ್ಲಿ ಪ್ರತಿದಿನ ನೂರಾರು ಭಕ್ತರು ಆಗಮಿಸಿ ಪೂಜೆ ಸಲ್ಲಿಸುತ್ತಾರೆ. ಆದರೆ ಇಲ್ಲೊಂದು ನಾಗಾವಿ ಹೆಸರಿನ ವಿಶ್ವವಿದ್ಯಾಲಯ ಇತ್ತು ಅನ್ನೋದು ಹೆಚ್ಚಿನವರಿಗೆ ತಿಳಿದಿಲ್ಲ. ರಾಜ್ಯದಲ್ಲಿದ್ದ ಪ್ರಾಚೀನ ವಿಶ್ವವಿದ್ಯಾಲಯ ಹೀಗೆ ಅಳಿದು ಹೋಗುತ್ತಿರೋದು ನಿಜಕ್ಕೂ ವಿಷಾದದ ಸಂಗತಿಯೇ ಸರಿ.
ವರದಿ: ಶ್ರೀಕಾಂತ್ ಬಿರಾಳ, ನ್ಯೂಸ್ 18 ಕನ್ನಡ ಡಿಜಿಟಲ್, ಕಲಬುರಗಿ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ