• Home
  • »
  • News
  • »
  • kalburgi
  • »
  • Kalaburagi: ಮೈಲಾರಲಿಂಗೇಶ್ವರನಿಗೆ ಭಂಡಾರ ಓಕುಳಿ ಸಂಭ್ರಮ!

Kalaburagi: ಮೈಲಾರಲಿಂಗೇಶ್ವರನಿಗೆ ಭಂಡಾರ ಓಕುಳಿ ಸಂಭ್ರಮ!

X
ಇಲ್ಲಿ ವಿಡಿಯೋ ನೋಡಿ

"ಇಲ್ಲಿ ವಿಡಿಯೋ ನೋಡಿ"

ದೇವಸ್ಥಾನದ ಪೂಜಾರಿ ಮಲ್ಲಪ್ಪ ಬೋಳಿ ಪ್ರತಿವರ್ಷದ ಸಂಪ್ರದಾಯದಂತೆ ಈ ವರ್ಷವೂ ಕೂಡ ಸರಪಳಿ ಹರಿಯುವ ದೃಶ್ಯವನ್ನು ಭಕ್ತರು ಕಣ್ತುಂಬಿಕೊಂಡು ಪುನೀತರಾದರು.

  • News18 Kannada
  • Last Updated :
  • Gulbarga, India
  • Share this:

    ಕಲಬುರಗಿ: ಹಳದಿ ಬಣ್ಣ ಎರಚುತ್ತಾ, ಜೈ ಘೋಷ ಮೊಳಗಿಸುತ್ತಾ, ಸಾಲು ಸಾಲಾಗಿ ಹೊರಟಿಹರು ಸಾವಿರಾರು ಮಂದಿ. ಊರ ಹೊರಗಿನ ಕೆರೆಯಲ್ಲಿ ಪುಣ್ಯ ಸ್ನಾನ, ವಾದ್ಯ ಮೇಳಗಳ ಮೆರವಣಿಗೆ ಹೀಗೆ ಸಂಭ್ರಮವೋ ಸಂಭ್ರಮ. ಇದೆಲ್ಲವೂ ಕಂಡು ಬಂದಿದ್ದು ಕಲಬುರಗಿಯ (Hindu Temple's In Kalaburagi) ಮೈಲಾರಲಿಂಗೇಶ್ವರನ (Mailara Lingeshwar Temple) ಸಾನಿಧ್ಯದಲ್ಲಿ.


    ಚಿತ್ತಾಪುರ ತಾಲೂಕಿನ ಅಲ್ಲೂರ್ ಗ್ರಾಮದ ಮೈಲಾರಲಿಂಗೇಶ್ವರ ದೇವಸ್ಥಾನದಲ್ಲಿ ಸಂಭ್ರಮದ ಭಂಡಾರದ ಓಕಳಿ ಜಾತ್ರೆ ನಡೆಯಿತು. ಸಾವಿರಾರು ಮಂದಿ ಭಂಡಾರದಲ್ಲಿ ಮಿಂದು ಸಂಭ್ರಮದಲ್ಲಿ ಕೇಕೆ ಹಾಕಿದರು.


    ಬೆಳ್ಳಿ ಕುದುರೆಗೆ ಕೆರೆಯಲ್ಲಿ ಸ್ನಾನ
    ಮೈಲಾರಲಿಂಗೇಶ್ವರನ ಕುದುರೆಗಳಿಗೆ ರುದ್ರಾಭಿಷೇಕ ಮಾಡಿ ಕರಿಬಸವೇಶ್ವರ ಮಂದಿರದಿಂದ ಮೈಲಾರಲಿಂಗೇಶ್ವರ ಮಂದಿರವರೆಗೆ ವಾದ್ಯ-ಮೇಳದೊಂದಿಗೆ ಮೆರವಣಿಗೆ ಮಾಡಲಾಯ್ತು. ಭಕ್ತರು ದೇವರ ಪಲ್ಲಕ್ಕಿ ಮತ್ತು ಬೆಳ್ಳಿ ಕುದುರೆಗಳನ್ನು ಗಂಗಾಸ್ನಾನಕ್ಕೆ ಕೊಂಡೊಯ್ದರು. ಬಳಿಕ ಬೆಳ್ಳಿ ಕುದುರೆಗಳನ್ನು ಊರ ಹೊರಗಿನ ಕೆರೆ ನೀರಲ್ಲಿ ಸ್ನಾನ ಮಾಡಿಸಲಾಯ್ತು. ನಂತರ ಭಕ್ತರೆಲ್ಲರು ಕೆರೆಯಲ್ಲಿ ಪುಣ್ಯ ಸ್ನಾನ ಮಾಡಿ ಮಲ್ಲಯ್ಯನಿಗೆ ವಿಶೇಷ ಪೂಜೆ ಸಲ್ಲಿಸಿ ಭಕ್ತಿ ಮೆರೆದರು.


    ಇದನ್ನೂ ಓದಿ: Kalaburagi Goshala: 200 ಕ್ಕೂ ಹೆಚ್ಚು ಗೋವುಗಳಿಗೆ 'ಪುಣ್ಯಕೋಟಿ'ಯ ಆಶ್ರಯ, ಕೃಷಿಕರಿಗೂ ಲಾಭ!


    ಮೆರವಣಿಗೆಯುದ್ದಕ್ಕೂ ಭಂಡಾರ ಎರಚಿದ ಭಕ್ತರು
    ಪಲ್ಲಕ್ಕಿ ಮತ್ತು ಮೈಲಾರಲಿಂಗೇಶ್ವರ ದೇವರ ಬೆಳ್ಳಿ ಕುದುರೆಗಳನ್ನು ಮಲ್ಲಣ್ಣ ಕೊರಬಾ ಎಂಬವರು ಹೊತ್ತುಕೊಂಡು ಮೆರವಣಿಗೆಯಲ್ಲಿ ಸಾಗಿದರು. ಡೊಳ್ಳು ಕುಣಿತದೊಂದಿಗೆ ಮೆರವಣಿಗೆ ಯುದ್ಧಕ್ಕೂ ಭಂಡಾರವನ್ನು ಎರಚುತ್ತ ಜಾತ್ರೆಗೆ ಬಂದ ಭಕ್ತರು ಜೈ ಘೋಷಗಳನ್ನು ಕೂಗುತ್ತಾ ಪಲ್ಲಕ್ಕಿ ಸೇವೆ ಸಲ್ಲಿಸಿದರು.


    ಸರಪಳಿ ಹರಿಯುವ ದೃಶ್ಯವೇ ರೋಚಕ
    ದೇವಸ್ಥಾನದ ಪೂಜಾರಿ ಮಲ್ಲಪ್ಪ ಬೋಳಿ ಪ್ರತಿವರ್ಷದ ಸಂಪ್ರದಾಯದಂತೆ ಈ ವರ್ಷವೂ ಕೂಡ ಸರಪಳಿ ಹರಿಯುವ ದೃಶ್ಯವನ್ನು ಭಕ್ತರು ಕಣ್ತುಂಬಿಕೊಂಡು ಪುನೀತರಾದರು. ಸರಪಳಿ ಹರಿಯುವ ಕಾರ್ಯ ಮುಗಿಯುತ್ತಿದ್ದಂತೆ ಪಲ್ಲಕ್ಕಿ ಮತ್ತು ದೇವರ ಕುದುರೆಗಳನ್ನು ಮೈಲಾರಲಿಂಗೇಶ್ವರ ದೇವಸ್ಥಾನದ ಗರ್ಭಗುಡಿ ಪ್ರವೇಶಿಸಿದವು.


    ಇದನ್ನೂ ಓದಿ: Kalaburagi: ಶ್ರೀಕೃಷ್ಣನಿಗೆ 56 ಬಗೆಯ ನೈವೇದ್ಯ! ವಿಶೇಷ ಸೇವೆ ಕಣ್ತುಂಬಿಸಿಕೊಳ್ಳಿ


    ಒಟ್ಟಿನಲ್ಲಿ ಭಂಡಾರದ ಒಡೆಯ ಶ್ರೀ ಮೈಲಾರಲಿಂಗನ ಜಾತ್ರೆಯ ಸಂಭ್ರಮ ಇಡೀ ಊರಿಗೆ ಊರನ್ನೇ ಒಂದುಗೂಡಿಸಿತ್ತು. ಜನರೆಲ್ಲ ಭಕ್ತಿ ಭಾವದಿಂದ ಮಲ್ಲಯ್ಯನಿಗೆ ಪೂಜೆ ಸಲ್ಲಿಸುವ ಮೂಲಕ ಭಕ್ತಿ ಪರಕಾಷ್ಠೆ ಮೆರೆದರು.


    ವರದಿ: ಶ್ರೀಕಾಂತ್ ಬಿರಾಳ, ಕಲಬುರಗಿ

    Published by:ಗುರುಗಣೇಶ ಡಬ್ಗುಳಿ
    First published: