ಕಲಬುರಗಿ: ಬಯಲಲ್ಲಿ ಚಾಪೆ ಹಾಸಿ, ಪೆನ್ನು ಪುಸ್ತಕ ಹಿಡಿದು ಕೂತಿರೋ ಮಕ್ಕಳು. ಮುಂದೆ ನಿಂತು ಪಾಠ ಹೇಳಿಕೊಡ್ತಿರೋ ಟೀಚರ್ಸು. ಇದೇನು ಬಯಲುಪಾಠ ಶಾಲೆನಾ ಅಂತಾ ಕೇಳ್ತೀರ? ಒಂಥರಾ ಹಾಗೇನೆ. ಆದ್ರೆ ಈ ಬಯಲು ಪಾಠಶಾಲೆ (School) ಮಾತ್ರ ನಡೆಯೋದು ಬರೇ ಎರಡು ಗಂಟೆ. ಅದು ಬೇರೆ ಆರು ಸಬ್ಜೆಕ್ಟ್ ಅಲ್ಲ, ಎರಡು ತಪ್ಪಿದ್ರೆ ಮೂರಷ್ಟೇ. ಅರೇ! ಇದ್ಯಾವ ಪರಿ ಶಾಲೆ ಅಂತೀರ? ನಿಜ, ಈ ಶಾಲೆಯ (Positive Story) ನಿಜ ಕಥೆ ಕೇಳಿದ್ರೆ ಭೇಷ್ ಅಂತೀರ.
ಯೆಸ್, ಹೀಗೆ ಬಯಲು ಶಾಲೆಯಲ್ಲಿ ಪಾಠ ಹೇಳಿಕೊಡ್ತಿರೋ ಇವರಿಬ್ಬರು ಗಂಡ, ಹೆಂಡತಿ. ಇವರು ಹೆಸರು ಮಹೇಶ್ ಬಡಿಗೇರ್ ಹಾಗೂ ಸುಮಿತ್ರ ಬಡಿಗೇರ್. ಕಲಬುರಗಿ ನಗರದ ವೀರೇಂದ್ರ ಪಾಟೀಲ್ ಬಡಾವಣೆಯ ನಿವಾಸಿಗಳಾಗಿರುವ ಇವರಲ್ಲಿರುವ ಶಿಕ್ಷಣ ಪ್ರೇಮ, ಮಕ್ಕಳಿಗೆ ಬಯಲು ಪಾಠ ಮಾಡಲು ಸ್ಫೂರ್ತಿ ನೀಡಿದೆ. ಹೇಳಿಕೇಳಿ ಮಹೇಶ್ ಬಡಿಗೇರ್ ಕಾಳಗಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗಣಿತ ಶಿಕ್ಷಕರಾದರೆ, ಬಿಎಡ್ ಮಾಡಿರೋ ಸುಮಿತ್ರ ಗೃಹಿಣಿಯಾಗಿದ್ದಾರೆ.
ಉಚಿತ ತರಗತಿ ನೀಡುವ ದಂಪತಿ
ಎಂಟು ಗಂಟೆಗಳ ಕಾಲ ಶಾಲೆಯಲ್ಲಿ ಮಕ್ಕಳಿಗೆ ಪಾಠ ಹೇಳುವ ಮಹೇಶ್ ಬಡಿಗೇರ್, ಸಾಯಂಕಾಲ ಮನೆಗೆ ಬಂದ್ಮೇಲೆ ಈ ಬಯಲು ಪಾಠ ಶಾಲೆಯಲ್ಲಿ ಮಕ್ಕಳಿಗೆ ಉಚಿತ ಟ್ಯೂಶನ್ ಕೊಡ್ತಾರೆ. ಇದಕ್ಕೆ ಇವರ ಪತ್ನಿ ಸುಮಿತ್ರಾ ಜೋಡಿಯಾಗಿದ್ದಾರೆ. ದಿನಂಪ್ರತಿ ಮಕ್ಕಳ ಶಿಕ್ಷಣಕ್ಕೆ ಬೇಕಾಗಿ ಎರಡು ಗಂಟೆ ಕಾಲ ಮೀಸಲಿಡ್ತಾರೆ. ಮಹೇಶ್ ಅವರು ಶಾಲೆ ಬಿಟ್ಟವರು ಮನೆಗೂ ಹೋಗದೆ, ನೇರವಾಗಿ ವೀರೇಂದ್ರ ಬಡಾವಣೆಯಲ್ಲಿರುವ ಡಾ. ಬಿಆರ್ ಅಂಬೇಡ್ಕರ್ ಗಾರ್ಡನ್ಗೆ ತೆರಳುತ್ತಾರೆ.
ಕಠಿಣ ವಿಷಯಗಳ ಪಾಠ
ಗಾರ್ಡನ್ಗೆ ಬರುವ ಬಡ ಹಾಗೂ ಕೂಲಿ ಕಾರ್ಮಿಕರ ಮಕ್ಕಳಿಗೆ ಉಚಿತವಾಗಿ ಪಾಠ ಹೇಳಿಕೊಡ್ತಾರೆ ಈ ದಂಪತಿ. ಒಂದರಿಂದ ಹತ್ತನೆ ತರಗತಿ ಓದುವ ಸುಮಾರು ನೂರಕ್ಕೂ ಅಧಿಕ ಮಕ್ಕಳು ಇವರ ಪಾಠ ಕೇಳಲು ಬರುತ್ತಾರೆ. ಮೂಲತಃ ಗಣಿತ ಶಿಕ್ಷಕರಾದ ಮಹೇಶ್ ಅವರು ಬಡವಾಣೆಯಲಿ ಕಠಿಣ ವಿಷಯಗಳಾದ ಗಣಿತ ಸೇರಿದಂತೆ ಇಂಗ್ಲಿಷ್ ಹಾಗೂ ವಿಜ್ಞಾನ ವಿಷಯದ ಕುರಿತು ಮಕ್ಕಳಿಗೆ ಪಾಠ ಮಾಡ್ತಾರೆ.
ಉದ್ಯಾನವನದಲ್ಲೇ ನಡೆಯುತ್ತೆ ಶಾಲೆ!
ಮಹೇಶ ಬಡಿಗೇರ ಅವರ ಈ ಕಾರ್ಯಕ್ಕೆ ಬಡಾವಣೆಯ ಜನರೆಲ್ಲ ಸಹಕಾರ ನೀಡುತ್ತಾ ಬಂದಿದ್ದಾರೆ. ಉದ್ಯಾನವನದಲ್ಲಿ ನಡೆಸುವ ಈ ಶಾಲೆಗೆ ಬೇಕಾದ ಎಲ್ಲಾ ಸಾಮಗ್ರಿಗಳನ್ನು ನೀಡುವ ಮೂಲಕ ನೆರವಾಗಿದ್ದಾರೆ.
ಇದನ್ನೂ ಓದಿ: Qawwali Family: ಮನೆಯವರೆಲ್ರೂ ಕಲಾವಿದರು, ಕವಾಲಿ ಲೋಕದಲ್ಲಿ ತೇಲಾಡಿಸುವ ಕುಟುಂಬವಿದು!
ಇದೀಗ ಎರಡು ತಿಂಗಳ ಹಿಂದೆ ಕ್ಲಾಸ್ ಪ್ರಾರಂಭಿಸಲಾಗಿದ್ದು, ಬಡ ಮಕ್ಕಳ ಜೊತೆಗೆ ಇದೀಗ ಮಹೇಶ ಅವರ ಅಧ್ಯಯನ ಶೈಲಿಗೆ ಮೆಚ್ಚಿ ಕೆಲ ಶ್ರೀಮಂತ ಕುಟುಂಬದ ಮಕ್ಕಳು ಕೂಡಾ ಇವರ ತರಗತಿಗೆ ಹಾಜರಾಗ್ತಾರೆ. ಜೊತೆಗೆ ಮಹೇಶ್ ಅವರು ತಮ್ಮ ಶಿಕ್ಷಕ ಸ್ನೇಹಿತರು, ಶಿಕ್ಷಣ ತಜ್ಞರನ್ನು ಬಿಡುವಿನ ಸಮಯದಲ್ಲಿ ಕರೆಸಿ ಮಕ್ಕಳಿಗೆ ಹೆಚ್ಚಿನ ಶಿಕ್ಷಣವನ್ನು ಕೊಡಿಸುವಲ್ಲಿಯೂ ಮುತುವರ್ಜಿ ವಹಿಸುತ್ತಾರೆ.
ಇದನ್ನೂ ಓದಿ: Kalaburagi: ಪಕ್ಷಿಗಳ ದಾಹ ಇಂಗಿಸಲು ಕಲಬುರಗಿ ಯುವಕರ ಹೊಸ ಉಪಾಯ!
ಒಟ್ಟಿನಲ್ಲಿ ಮಹೇಶ್ ಬಿಡಗೇರ್ ಅವರು ಸರ್ಕಾರಿ ಶಾಲೆ ಶಿಕ್ಷಕನಾಗಿ, ದುಡಿಯೋ ವೇತನಕ್ಕೆ ಆರಾಮವಾಗಿ ಜೀವನ ನಡೆಸಬಹುದಾಗಿತ್ತು. ಆದರೆ, ತನ್ನಂತೆಯೇ ತಮ್ಮ ಬಡಾವಣೆಯ ಮಕ್ಕಳು ಕೂಡಾ ಶಿಕ್ಷಿತರಾಗಬೇಕೆನ್ನುವ ಇವರ ಕನಸಿಗೆ ನಿಜಕ್ಕೂ ಹ್ಯಾಟ್ಸಾಪ್ ಹೇಳಲೇಬೇಕು.
ಮಹೇಶ್ ಬಿಡಗೇರ್ ಅವರ ಸಂಪರ್ಕ ಸಂಖ್ಯೆ: 99010 33979
ವರದಿ: ಶ್ರೀಕಾಂತ ಬಿರಾಳ, ನ್ಯೂಸ್ 18 ಕನ್ನಡ ಡಿಜಿಟಲ್, ಕಲಬುರಗಿ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ