ಕಲಬುರಗಿ: ಸರತಿ ಸಾಲಿನಲ್ಲಿ ನಿಂತು ದೇವರ (God) ದರ್ಶನಕ್ಕಾಗಿ ಭಕ್ತರ ಕಾತರ.. ಭಕ್ತಿಯಿಂದ ಕೈ ಮುಗಿದು ನಮಸ್ಕರಿಸುತ್ತಾ ಮುಂದೆ ಸಾಗ್ತಿರೋ ಶಿವಭಕ್ತರು (Shiva). ನೆರೆದ ಭಕ್ತರಿಗೆ ಹಣ್ಣು (fruits) ಹಂಪಲನ್ನ ಪ್ರಸಾದದ ರೂಪದಲ್ಲಿ ಹಂಚುತ್ತಿರೋ ಸ್ವಯಂ ಸೇವಕರು. ಹೌದು, ಶಿವರಾತ್ರಿ ಸಂಭ್ರಮ ಕಲಬುರಗಿ (Kalburgi) ಜಿಲ್ಲೆಯಲ್ಲಿ ಸಂಭ್ರಮದ ವಾತಾವರಣ ಮೂಡಿಸಿದೆ. ಶಿವಭಕ್ತರೆಲ್ಲರೂ ಓಂ ನಮಃ ಶಿವಾಯ ಎಂದು ಭಕ್ತಿ ಪರಾಕಾಷ್ಠೆ ಮೆರೆದು ಪುನೀತರಾದರು.
ರಾಮತೀರ್ಥ ಮಂದಿರ
ಯೆಸ್, ಕಲಬುರಗಿ ಜಿಲ್ಲೆಯಾದ್ಯಂತ ಶಿವರಾತ್ರಿ ಹಿನ್ನೆಲೆ ಶಿವನ ಆರಾಧನೆ ಜೋರಾಗಿ ನಡೆದಿದ್ದು, ಬೆಳಗಿನಿಂದಲೇ ಭಕ್ತರು ಶಿವಮಂದಿರಕ್ಕೆ ಬಂದು ದರ್ಶನಕ್ಕೆ ಪಡೆಯುತ್ತಿದ್ದ ದೃಶ್ಯಗಳು ಸಾಮಾನ್ಯವಾಗಿದ್ದವು. ಇಡೀ ಶಿವಮಂದಿರಗಳು ಭಕ್ತರಿಂದ ತುಂಬಿ ತುಳುಕಿದವು. ಭಕ್ತರು ಕಾಯಿ ಕರ್ಪೂರ ಅರ್ಪಿಸಿ ಪೂಜೆ ಸಲ್ಲಿಸಿ ತೀರ್ಥ ಪ್ರಸಾದ ಸೇವಿಸಿ ಶಿವನ ಕೃಪೆಗೆ ಪಾತ್ರರಾದರು. ಅದರಂತೆ ಕಲಬುರಗಿ ಆಳಂದ ರಸ್ತೆಯಲ್ಲಿರುವ ರಾಮತೀರ್ಥ ಬಡಾವಣೆಯಲ್ಲಿ ಶಿವರಾತ್ರಿ ಸಂಭ್ರಮ ಕಳೆಗಟ್ಟಿತ್ತು.
ವಿವಿಧ ಬಗೆಯ ಪೂಜೆ
ದೇಶದಲ್ಲಿಯೇ ಹೆಸರುವಾಸಿಯಾದ ಆಳಂದ ರಸ್ತೆಯ ರಾಮತೀರ್ಥ ಮಂದಿರದಲ್ಲಿ ಬೆಳಗಿನ ಜಾವದಿಂದಲೇ ಶಿವಲಿಂಗಕ್ಕೆ ರುದ್ರಾಭಿಷೇಕ ಪೂಜೆ, ಆರತಿ ಬೆಳಗುವಿಕೆ ಹಾಗೂ ವಿವಿಧ ರೀತಿಯ ಹೂಗಳಿಂದ ಸಿಂಗಾರ ಮಾಡಿರುವುದು ಕಂಡುಬಂತು. ಇನ್ನು ಬಹುತೇಕ ಶಿವಭಕ್ತರು ಉಪವಾಸ ವೃತಾಚರಣೆ ಮಾಡಿ ಶಿವಧ್ಯಾನ ನಡೆಸಿದರು. ಸೂರ್ಯಾಸ್ತದವರೆಗೂ ಉಪವಾಸ ಆಚರಣೆ ಮಾಡಿ ಸಂಜೆ ಮತ್ತೆ ದೇವರಿಗೆ ಪೂಜೆ ಸಲ್ಲಿಸಿ ದರ್ಶನ ಪಡೆದು ಹಣ್ಣು ಹಂಪಲು ಸೇವಿಸಿ ಉಪವಾಸ ಕೊನೆಗೊಳಿಸಿದರು.
ಶಿವಭಕ್ತರ ದಂಡು
ಬೆಳಗ್ಗೆಯಿಂದಲೇ ಭಕ್ತರು ರಾಮತೀರ್ಥದ ಶಿವನ ದೇವಾಲಯಕ್ಕೆ ಆಗಮಿಸಿ ಸಾಲುಗಟ್ಟಿ ನಿಂತು ದರ್ಶನ ಪಡೆದರು. ಮಧ್ಯಾಹ್ನ 12ರಿಂದ ಆರಂಭವಾದ ದೇವರ ದರ್ಶನವು ದಿನವಿಡೀ ನಡೆಯಿತು. ಸಂಜೆ ನಡೆದ ವಿಶೇಷ ಪೂಜೆಯಲ್ಲೂ ಅನೇಕರು ಭಾಗವಹಿಸಿದ್ದರು. ಜಾಗರಣೆ ನಿಮಿತ್ತ ಭಜನಾ ಕಾರ್ಯಕ್ರಮ ನಡೆದವು. ಒಟ್ಟಿನಲ್ಲಿ ರಾಮತೀರ್ಥ ದೇವಾಲಯವು ಶಿವರಾತ್ರಿ ಹಿನ್ನೆಲೆ ಶಿವ ಕೈಲಾಸದಂತೆ ಕಂಗೊಳಿಸಿದವು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ