ಕಲಬುರಗಿ: ಇದೇನಪ್ಪ ತಲೆ (Head) ಮೇಲೆ ಬೆಂಕಿ (Fire) ಹೊತ್ತು ನಡೆಯುತ್ತಿದ್ದಾರಲ್ಲ. ಅದೂ ಬೇರೆ ಒಬ್ರೋ, ಇಬ್ರೋ ಅಲ್ಲ, ಸಾವಿರಾರು ಮಂದಿ. ಆ ಬೆಂಕಿಯ ಬೆಳಕಿಗೆ (Light) ಇಡೀ ಅಂಗಣವೇ ಮಿಂಚು ಹುಳದಂತೆ ಕಂಗೊಳಿಸುತ್ತಿದೆ. ಇನ್ನೊಂದೆಡೆ ಸಂಭ್ರಮವೋ ಸಂಭ್ರಮ, ಜೈಕಾರದ ಘೋಷಣೆ, ಹಾಗಿದ್ರೆ ಏನ್ ವಿಶೇಷ ಅಂತೀರಾ? ಹೇಳ್ತೀವಿ ನೋಡಿ.
ಕೋರಿಸಿದ್ಧೇಶ್ವರ ಜಾತ್ರೆ
ಹೌದು, ಹೀಗೆ ಅನಲವನ್ನ ತಲೆ ಮೇಲೆ ಹೊತ್ತು ಸಾಗ್ತಿರೋ ಈ ದೃಶ್ಯ ಕಂಡು ಬಂದಿದ್ದು ಕಲ್ಯಾಣ ಕರ್ನಾಟಕ ಭಾಗದ ಪ್ರಸಿದ್ಧ ಶ್ರೀ ಕೋರಿಸಿದ್ಧೇಶ್ವರ ಸಂಸ್ಥಾನ ಮಠದ ಜಾತ್ರಾ ಮಹೋತ್ಸವದಲ್ಲಿ. ಈ ಜಾತ್ರೆ ಕಲಬುರಗಿ ಮಾತ್ರವಲ್ಲ ನೆರೆಯ ಮಹಾರಾಷ್ಟ್ರ, ತೆಲಂಗಾಣ, ಆಂಧ್ರಪ್ರದೇಶ ಸೇರಿದಂತೆ ಬೇರೆ ಬೇರೆ ರಾಜ್ಯಗಳಿಂದಲೂ ಸಹಸ್ರಾರು ಭಕ್ತರು ಆಗಮಿಸಿದ್ದರು.
ತನಾರತಿ ಉತ್ಸವ
ಈ ಜಾತ್ರಾ ಮಹೋತ್ಸವ ವಿಶೇಷತೆಯೇ ಈ ತನಾರತಿ ಉತ್ಸವ. ರಥೋತ್ಸವ ಮುನ್ನ ಬೆಳಗಿನ ಜಾವ ಐತಿಹಾಸಿಕ ತನಾರತಿ ಕಾರ್ಯಕ್ರಮವು ಅದ್ದೂರಿಯಾಗಿ ನಡೆಯಿತು. ಸಹಸ್ರಾರು ಭಕ್ತರು ತಲೆಯ ಮೇಲೆ ತನಾರತಿಯನ್ನು ಹೊತ್ತು ಹರಕೆ ಸಮರ್ಪಿಸಿದರು. ಅಲ್ಲದೇ, ಅಪಾರ ಭಕ್ತ ಸಾಗರದ ನಡುವೆಯೇ ಭವ್ಯ ರಥೋತ್ಸವವೂ ನಡೆಯಿತು.
ವಿವಿಧ ಧಾರ್ಮಿಕ ಕಾರ್ಯಕ್ರಮ
ಇನ್ನು ರಥೋತ್ಸವ ನಿಮಿತ್ತ ಮಠದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ಶ್ರೀ ಕೋರಿಸಿದ್ಧೇಶ್ವರರ ಗದ್ದುಗೆಗೆ ವಿಶೇಷ ಪೂಜೆ, ಮಹಾ ಮಂಗಳಾರತಿ, ಕ್ಷೀರಾಭಿಷೇಕ, ಗಂಧಾಭಿಷೇಕ, ಸಹಸ್ರ ಬಿಲ್ವಾರ್ಚನೆ ಹಾಗೂ ವೇದ ಮಂತ್ರಗಳ ಪಠಣದೊಂದಿಗೆ ಸಕಲ ಧಾರ್ಮಿಕ ಪೂಜಾ ವಿಧಿ ವಿಧಾನಗಳು ನೆರವೇರಿಸಲಾಯಿತು. ರಾಜ್ಯ ಹೊರ ರಾಜ್ಯಗಳಿಂದ ಅಪಾರ ಸಂಖ್ಯೆಯಲ್ಲಿ ಬಂದ ಭಕ್ತರು ಬೆಳಗ್ಗೆಯಿಂದ ಕೋರಿಸಿದ್ದೇಶ್ವರ ಮೂರ್ತಿ ಹಾಗೂ ಡಾ. ಸಿದ್ಧತೋಟೇಂದ್ರ ಶಿವಾಚಾರ್ಯರ ದರ್ಶನ ಪಡೆದರು.
ಸಂಭ್ರಮದ ರಥೋತ್ಸವ
ಪುಷ್ಪಗಳಿಂದ ಶೃಂಗಾರಗೊಂಡ ರಥಕ್ಕೆ ರಾತ್ರಿ 9 ಗಂಟೆಗೆ ನಡೆದ ರಥೋತ್ಸವವಂತೂ ಭಕ್ತ ಸಾಗರದ ‘‘ಶ್ರೀ ಕೋರಿಸಿದ್ದೇಶ್ವರ ಮಹಾರಾಜಕೀ ಜೈ‘‘ ಎಂಬ ಜೈಕಾರದ ಘೋಷಣೆಗೆ ಸಾಕ್ಷಿಯಾಯಿತು. ಭಕ್ತರು ಬಾಳೆಹಣ್ಣು, ಹೂವುಗಳನ್ನು ರಥದೆಡೆಗೆ ಎಸೆದು ತಮ್ಮ ಭಕ್ತಿ ಸಮರ್ಪಿಸಿದರು.
ರಥೋತ್ಸವಕ್ಕೂ ಮುನ್ನ ವಿವಿಧ ರೀತಿಯ ಸಿಡಿ ಮದ್ದುಗಳು, ವೇಷಭೂಷಣ, ಡೊಳ್ಳು ಕುಣಿತಗಳು ಮೆರುಗು ತುಂಬಿದ್ದವು. ಒಟ್ಟಿನಲ್ಲಿ ಶ್ರೀಕೋರಿಸಿದ್ಧೇಶ್ವರ ಮಠದ ಜಾತ್ರಾ ಮಹೋತ್ಸವ ಭಕ್ತ ಸಾಗರದ ನಡುವೆ ಮಿಂಚುಹುಳಗಳಂತೆ ಮಿನುಗುವ ತಾನಾರತಿ ಉತ್ಸವಕ್ಕೂ ಸಾಕ್ಷಿಯಾಯಿತು.
ವರದಿ:ಶ್ರೀಕಾಂತ್ ಬಿರಾಳ, ನ್ಯೂಸ್18 ಕನ್ನಡ ಕಲಬುರಗಿ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ