ಕಲಬುರಗಿ: ಕ್ವಾರೆಂಟೈನ್ ಅನ್ನೋ ಹೆಸರು ನಾವೆಲ್ಲ ಕೊರೊನಾ ನಂತರ ಕೇಳಿದ್ದೇ ಜಾಸ್ತಿ. ಆದ್ರೆ ಈ ಊರ ಮಂದಿಗೆ ಆ ಹೆಸರು ಮೊದ್ಲೇ ಗೊತ್ತಿತ್ತು ಕಣ್ರೀ, ಅರೆ! ಭಜರಂಗಿಯ ದೇಗುಲ ತೋರಿಸಿ ಕ್ವಾರೆಂಟೈನ್ ಬಗ್ಗೆ ಹೇಳ್ತಿದ್ದಾರಲ್ಲ? ಅಷ್ಟಕ್ಕೂ ಈ ಹನುಮಾನ್ಗೂ, ಆ ಕ್ವಾರೆಂಟೈನ್ಗೂ ಏನ್ ಕಣ್ರೀ ಸಂಬಂಧ ಅಂತೀರಾ? ನಾವ್ ಹೇಳ್ತೀವಿ ಕೇಳಿ. ನಿಜ, ಆಂಜನೇಯ ಅಂದ್ರೇನೆ ಭಕ್ತರ ಪಾಲಿನ ಪಾಸಿಟಿವ್ ಎನರ್ಜಿ. ಅದರಲ್ಲೂ ಕಲಬುರಗಿಯ (Temple's In Kalabuargi) ಈ ಕೋರಂಟಿ ಹನುಮಾನ್ ದೇವಸ್ಥಾನ (Koranti Hanuman Temple) ಅಪಾರ ಮಹಿಮೆಯ ತಾಣ. ಪ್ರತಿದಿನ ಸಾವಿರಾರು ಭಕ್ತರು ಆಗಮಿಸಿ ತಮ್ಮ ಇಷ್ಟಾರ್ಥಗಳ ಬೇಡಿಕೆ ಈಡೇರಿಕೆಗೆ ಪ್ರಾರ್ಥಿಸ್ತಾರೆ.
ವಿಶೇಷ ಅಂದ್ರೆ, ನಮ್ಗೆಲ್ಲ ಕೊರೊನಾ ಬಂದ್ಮೇಲೆ ಕ್ವಾರೆಂಟೈನ್ ಅನ್ನೋ ಪದ ಹೆಚ್ಚು ಗೊತ್ತಾದ್ರೆ, ಈ ಗ್ರಾಮದ ಮಂದಿಗೆ ಆ ಹೆಸರು ಮೊದ್ಲೇ ಗೊತ್ತಿತ್ತು. ಯಾಕೆಂದ್ರೆ ಈ ದೇಗುಲ ಕೋರಂಟಿ ಹನುಮಾನ್ ಎಂದೇ ಫೇಮಸ್ ಆಗಿತ್ತು.
ಕೋರಂಟಿ ಹೆಸರು ಬಂದಿದ್ದು ಹೀಗೆ!
ಈ ದೇವಸ್ಥಾನಕ್ಕೆ ಕೋರಂಟಿ ಎಂಬ ಹೆಸರು ಬರಲು ಕಾರಣ ಹಿಂಬಾಲಿಸಿ ಹೋದ್ರೆ ಹಲವು ವರ್ಷಗಳ ಹಿಂದೆ ಹೋಗ್ಬಿಡ್ತೀವಿ. ಕಾಲರಾ, ಪ್ಲೇಗ್, ಸಿಡುಬಿನಂತಹ ಮಾರಣಾಂತಿಕ ಕಾಯಿಲೆಗಳು ಆವರಿಸಿದಾಗ ಈ ದೇವಸ್ಥಾನದಲ್ಲೇ ಕ್ವಾರಂಟೈನ್ ಕ್ಯಾಂಪ್ ನಿರ್ಮಿಸಲಾಗಿತ್ತಂತೆ. ಮಾರಣಾಂತಿಕ ಕಾಯಿಲೆಗಳು ಜನರನ್ನ ಬಾಧಿಸಬಾರದು ಎಂಬ ಉದ್ದೇಶದಿಂದ ಬ್ರಿಟಿಷ್ ಸರ್ಕಾರವು ಊರ ಹೊರಗಡೆ ಇರುವ ಹನುಮಾನ್ ದೇವಸ್ಥಾನದಲ್ಲಿ ಕ್ವಾರಂಟೈನ್ ಕ್ಯಾಂಪ್ಗಳನ್ನ ಸ್ಥಾಪಿಸಿತ್ತು.
ಮಹಾಮಾರಿ ರೋಗದಿಂದ ಬಳಲಿದವರು ಗುಣವಾಗ್ತಿದ್ರಂತೆ
ವಿವಿಧ ಸೋಂಕಿನಿಂದ ಬಳಲುತ್ತಿದ್ದ ರೋಗಿಗಳು ಇಲ್ಲಿಗೆ ಬಂದು ಗುಣಮುಖರಾಗಿ ಹೋಗ್ತಿದ್ರಂತೆ. ಇದರಿಂದ ಈ ದೇವಸ್ಥಾನವನ್ನು ಕ್ವಾರಂಟೈನ್ ದೇವಸ್ಥಾನ ಎಂದು ಕರೆಯಲಾಯಿತು ಅಂತಾರೆ ಭಕ್ತರು. ನಂತರ ದಿನಗಳಲ್ಲಿ ಇದೇ ಹೆಸರು ಕೋರಂಟಿಯಾಗಿ ಬದಲಾಯಿತು.
ಗ್ಯಾರಂಟಿ ಕೋರಂಟಿ ಅಂತಾನೂ ಫೇಮಸ್!
ಈ ದೇವಸ್ಥಾನದ ಗರ್ಭಗುಡಿಯಲ್ಲಿರುವ ಆಂಜನೇಯನ ವಿಗ್ರಹವು ಉದ್ಭವ ಮೂರ್ತಿ ಎಂದು ಹೇಳಲಾಗುತ್ತೆ. ಕೋರಂಟಿ ಹನುಮಾನ್ ದೇವಸ್ಥಾನವು ಗ್ಯಾರಂಟಿ ಕೋರಂಟಿ ಅನ್ನೋ ಹೆಸರನ್ನೂ ಪಡೆದಿದೆ. ಭಕ್ತರು ಇಲ್ಲಿಗೆ ಆಗಮಿಸಿ ಏನು ಬೇಡಿಕೊಂಡರು ಅದು ಗ್ಯಾರಂಟಿಯಾಗಿ ಸಿದ್ದಿಯಾಗುತ್ತದೆ ಎಂಬುದು ಇಲ್ಲಿನ ಭಕ್ತರ ನಂಬಿಕೆಯಾಗಿದೆ.
ಇದನ್ನೂ ಓದಿ: Kalaburagi: ಯೂಟ್ಯೂಬ್ ನೋಡಿ ಹಾವು ಹಿಡಿಯಲು ಕಲಿತ ಯುವಕ!
ಕೋರಂಟಿ ಹನುಮಾನ್ ದೇವಸ್ಥಾನಕ್ಕೆ ಹೀಗೆ ಬನ್ನಿ (ಚಿತ್ರಕೃಪೆ: ಗೂಗಲ್ ಮ್ಯಾಪ್ಸ್)
ಒಟ್ಟಿನಲ್ಲಿ ಕೊರೊನಾ ಸಮಯದಲ್ಲಂತೂ ಇಲ್ಲಿನ ಕ್ವಾರೆಂಟೈನ್ ಮಹಿಮೆ ಅರಿತವರು ಭಜರಂಗಿಯ ಮೊರೆ ಹೋಗಿ ಬೇಡಿಕೊಂಡಿದ್ರು. ನೀವೂ ಕಲಬುರಗಿಗೆ ಆಗಮಿಸಿದ್ರೆ ನಂಬಿದವರ ಪಾಲಿನ ಮಹಾ ಮಹಿಮನಾಗಿರೋ ಹನುಮಂತನ ದರ್ಶನ ಮಿಸ್ ಮಾಡ್ಬೇಡಿ.
ವರದಿ: ಶ್ರೀಕಾಂತ್ ಬಿರಾಳ, ನ್ಯೂಸ್18 ಕನ್ನಡ ಕಲಬುರಗಿ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ