ಕಲಬುರಗಿ: ಚಾದರ್, ರೋಸ್ ಹೊತ್ತು ಸಾಗ್ತಿರೋ ಜನರು, ಇಷ್ಟಾರ್ಥಗಳ ಈಡೇರಿಕೆಗಾಗಿ ಬೇಡಿಕೊಳ್ಳುತ್ತಿರುವ ಭಕ್ತರು. ದೂರದ ಅಜ್ಮೀರ್ನಂತಿದೆ ಕರುನಾಡಿನ ಈ ದರ್ಗಾ. ಅಂದ ಹಾಗೆ ಇದು ತೊಗರಿ ನಾಡಿನ ಭಾವೈಕ್ಯತೆಯ ತಾಣವೂ ಹೌದು. ಹಾಗಿದ್ರೆ ಇದ್ಯಾವುದು ಈ ಕ್ಷೇತ್ರ (Khwaja Bande Nawaz Dargah) ಅಂತೀರಾ? ಹೇಳ್ತೀವಿ ನೋಡಿ.
ಸೂಫಿ ಸಂತರ ನೆಲೆಬೀಡು
ಯೆಸ್, ಭಾರತದಲ್ಲೇ ಅಜ್ಮೀರ್ ಖ್ವಾಜಾ ಗರೀಬ್ ನವಾಜ್ಗೆ ಇನ್ನೊಂದು ಹೆಸರೇ ಭಾವೈಕ್ಯತೆ! ಇದು ದಿನಂಪ್ರತಿ ಲಕ್ಷಾಂತರ ಭಕ್ತರ ಆಗಮನಕ್ಕೆ ಸಾಕ್ಷಿಯಾಗುವ ಪುಣ್ಯ ಕ್ಷೇತ್ರ. ಅದೇ ಮಾದರಿಯ ಕ್ಷೇತ್ರವೊಂದು ತೊಗರಿನಾಡು, ಸೂಫಿ ಸಂತರ ನೆಲೆಬೀಡಾದ ಕಲಬುರಗಿಯಲ್ಲೂ ಇದೆ. ಇದುವೇ ಖ್ವಾಜಾ ಬಂದೇ ನವಾಜ್ ದರ್ಗಾ.
ಶರಣ ಬಸವರ ಸಮಕಾಲೀನರು
ಶ್ರೀ ಶರಣಬಸವೇಶ್ವರ ಸಮಕಾಲೀನರಾದ ಬಂದೇ ನವಾಜ್ ಅವರು ಇಂದಿಗೂ ಸಮಾಜದ ಭಾವೈಕ್ಯತೆಯ ದ್ಯೋತಕವಾಗಿ ನೆಲೆಯಾಗಿದ್ದಾರೆ. ಇಲ್ಲಿರುವ ಶರಣ ಬಸವೇಶ್ವರ ದೇವಸ್ಥಾನ ಹಾಗೂ ಖ್ವಾಜಾ ಬಂದೇ ನವಾಜ್ ಅವರ ದರ್ಗಾಗಳು ಕೂಡ ಭಾವೈಕ್ಯತೆಯನ್ನು ಸಾರುತ್ತವೆ.
ಭಾವೈಕ್ಯತೆಯ ತಾಣ
ಇಲ್ಲಿರುವ ದರ್ಗಾಕ್ಕಂತೂ ಮುಸಲ್ಮಾನರಷ್ಟೆಯಲ್ಲ ಹಿಂದೂಗಳು ಕೂಡ ಅಷ್ಟೇ ಶ್ರದ್ಧಾ ಭಕ್ತಿಯಿಂದ ನಡೆದುಕೊಳ್ಳುತ್ತಾರೆ. ಕಲ್ಯಾಣ ಕರ್ನಾಟಕ ಭಾಗದ ಜನರ ಆರಾಧ್ಯ ದೈವ ಹಾಗೂ ಭಾವೈಕ್ಯತೆಯ ಹರಿಕಾರ ಖ್ವಾಜಾ ಬಂದೇ ನವಾಜ್ ಜನರನ್ನ ಹರಸುತ್ತಿದ್ದಾರೆ.
ಚಾದರ್ ಹರಕೆ ಫೇಮಸ್
ಪ್ರತಿ ವರ್ಷ ಇಲ್ಲಿ ಅಕ್ಟೋಬರ್ ತಿಂಗಳಲ್ಲಿ ಉರೂಸ್ ನಡೆಯುತ್ತದೆ. ಇದೇ ಸಮಯದಲ್ಲಿ ಚಿರಾಗ್ ಹರಕೆ ಅನ್ನೋ ತೀರಿಸುವ ವಿಶಿಷ್ಟ ಸಂಪ್ರದಾಯ ದರ್ಗಾದ ಆವರಣದಲ್ಲಿ ನಡೆಯುತ್ತದೆ. ಇಲ್ಲಿಗೆ ಬರುವ ಭಕ್ತರು 5ರಿಂದ 21 ದೀಪಗಳನ್ನು ಹಚ್ಚಿ ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸುತ್ತಾರೆ.
ಇನ್ನು ಹಲವಾರು ಜನ ಭಕ್ತರು ಬಂದೇ ನವಾಜರ ಸಮಾಧಿಗೆ ಚಾದರ್ ಅಥವಾ ಹೂವಿನ ಚಾದರಗಳನ್ನು ಹೊದಿಸಿ ಭಕ್ತಿ ಸಮರ್ಪಿಸುವರು. ಗೋಧಿ ಕಣಜದಿಂದ ಮಾಡಿದ ಮಾದಲಿಯನ್ನ ನೈವೇದ್ಯವಾಗಿ ಖ್ವಾಜಾ ಬಂದೇ ನವಾಜ್ ಗೆ ಅರ್ಪಿಸಿ, ಪ್ರಸಾದದ ರೂಪದಲ್ಲಿ ಅದನ್ನು ಸೇವಿಸುತ್ತಾರೆ. ಹೀಗೆ ಈ ದರ್ಗಾಕ್ಕೆ 600 ಕ್ಕೂ ಅಧಿಕ ವರ್ಷಗಳ ಇತಿಹಾಸವೂ ಇದೆ.
ಇದನ್ನೂ ಓದಿ: Kalaburagi: ಬೆಳೆ ರಕ್ಷಣೆಗೆ ಕಲಬುರಗಿ ರೈತರ ಹೊಸ ಉಪಾಯ!
ಭಕ್ತರ ಪಾಲಿನ ಆರಾಧ್ಯ ದೈವ
ಒಟ್ಟಿನಲ್ಲಿ ಜಾತಿ-ಮತಗಳ ಭೇದವಿಲ್ಲದೇ ಭಕ್ತರು ಈ ದರ್ಗಾದಲ್ಲಿ ನಡೆದುಕೊಳ್ಳುತ್ತಾರೆ. ದೂರದೂರದಿಂದ ಆಗಮಿಸಿ ತಮ್ಮ ಹರಕೆ ತೀರಿಸುತ್ತಾರೆ. ನೆರೆಯ ಮಹಾರಾಷ್ಟ್ರ, ಆಂದ್ರಪ್ರದೇಶ, ತಮಿಳುನಾಡಿನ ಭಕ್ತರು ಆಗಮಿಸಿ ಹರಕೆ ತೀರಿಸುತ್ತಾರೆ. ಏನೇ ಕಷ್ಟ ಬಂದ್ರೂ ಈ ಭಾಗದ ಮಂದಿಗೆ ಮೊದಲಿಗೆ ನೆನಪಾಗೋದೆ ಖ್ವಾಜಾ ಬಂದೇ ನವಾಜ್.
ಇದನ್ನೂ ಓದಿ: Kalaburagi: 60 ಕಂಬಗಳ ದೇಗುಲದಲ್ಲಿ ಬ್ರಹ್ಮನ ಹೆಸರು! ವಿಷ್ಣು ಮಹೇಶ್ವರರ ಸಾನಿಧ್ಯ!
ನಂಬಿಕೆಗಳು ಏನೇ ಇರಲಿ, ಸೂಫಿ ಸಂತರ ನೆಲೆಬೀಡಿನಲ್ಲಿ ಇಂದಿಗೂ ಶರಣಬಸವೇಶ್ವರರು, ಖ್ವಾಜಾ ಬಂದೇ ನವಾಜರು ಜನರನ್ನ ಪ್ರೀತಿ, ಸೌಹಾರ್ದತೆಯಿಂದ ಆಳುತ್ತಿರುವುದು ಖುಷಿಯ ಸಂಗತಿಯೇ ಸರಿ.
ವರದಿ: ಶ್ರೀಕಾಂತ್ ಬಿರಾಳ, ನ್ಯೂಸ್18 ಕನ್ನಡ ಡಿಜಿಟಲ್, ಕಲಬುರಗಿ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ